ಹಿಂದಿನ ಸರ್ಕಾರದ ಭ್ರಷ್ಟಾಚಾರಗಳ ಬಯಲಿಗೆಳೆಯುವೆ ಎಂದ ಡಿಕೆಶಿ; ನಿಮ್ಮ ಆದಾಯದ ರಹಸ್ಯ ಬಹಿರಂಗಪಡಿಸಿ ಎಂದು ಬಿಜೆಪಿ ಸವಾಲು

ಭ್ರಷ್ಟಾಚಾರ ಮತ್ತು ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಕ್ಕು ಬಿಜೆಪಿ ನಾಯಕರ ನಡುವಿನ ಮಾತಿನ ಸಮರ ಸೋಮವಾರವೂ ಮುಂದುವರೆದಿತ್ತು.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಂಗಳೂರು: ಭ್ರಷ್ಟಾಚಾರ ಮತ್ತು ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಕ್ಕು ಬಿಜೆಪಿ ನಾಯಕರ ನಡುವಿನ ಮಾತಿನ ಸಮರ ಸೋಮವಾರವೂ ಮುಂದುವರೆದಿತ್ತು.

ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ. ನಿಮ್ಮ ಆದಾಯದ ರಹಸ್ಯಗಳ ಬಹರಂಪಡಿಸಿ ಎಂದು ಬಿಜೆಪಿ ಸವಾಲು ಹಾಕಿದೆ.

ಇತರರನ್ನು ಬೆದರಿಸಿದಂತೆ ನನ್ನನ್ನು ಬೆದರಿಸಲು ಬಿಜೆಪಿಗೆ ಸಾಧ್ಯವಿಲ್ಲ. ಬಿಬಿಎಂಪಿಯಲ್ಲಿ ಒಳ್ಳೆಯ ಕೆಲಸ ಮಾಡಿದ ಗುತ್ತಿಗೆದಾರರಿದ್ದಾರೆ. ಅದೇ ರೀತಿ ಬಿಜೆಪಿ ಬೆಂಬಲಕ್ಕೆ ನಿಂತ ದೊಡ್ಡ ದೊಡ್ಡ ಮೀನುಗಳೂ ಇವೆ. ಅವರ ಕ್ಷೇತ್ರಗಳಲ್ಲಿ ಕಾಮಗಾರಿ ಕೊಟ್ಟರೂ ಕಾಮಗಾರಿ ನಡೆಸದೇ ಬಿಲ್‌ ಕ್ಲಿಯರ್‌ ಮಾಡಿದ್ದಾರೆ. ಈಗ ನಾನು ಯಾವುದೇ ಶಾಸಕರ ಹೆಸರನ್ನು ಹೇಳಲು ಬಯಸುವುದಿಲ್ಲ. ನಮ್ಮ ಬಳಿ ದಾಖಲೆಗಳಿವೆ. ಕಾಮಗಾರಿ ಮಾಡಿರುವ ನಿಜವಾದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಬಿಜೆಪಿ ನಾಯಕರಿಗೆ ಸರ್ಕಾರ ಯೋಜನೆಗಳು ಮತ್ತು ಜನಪ್ರಿಯತೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಹತಾಶರಾಗಿ, ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಯಾರೂ ಕಮಿಷನ್ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ ಗುತ್ತಿಗೆದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಬಿಜೆಪಿ ಆಡಳಿತಾವಧಿಯಲ್ಲಿ ಒಂದು ಕ್ಷೇತ್ರದಲ್ಲಿ ಕಾಮಗಾರಿ ನಡೆಯದೆ 117 ಕೋಟಿ ರೂ.ಗಳ ಬಿಲ್ ಕ್ಲಿಯರ್ ಆಗಿದೆ ಎಂದು ಲೋಕಾಯುಕ್ತ ವರದಿ ನೀಡಿದ್ದು, ಕಾಮಗಾರಿಗಳ ತನಿಖೆಗೆ ಆದೇಶಿಸಿದ ನಂತರ ಅವರ ವಿರುದ್ಧ ಆರೋಪ ಮಾಡಲಾಗಿದೆ. ನಾನು ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಕೆಲಸ ಮಾಡುವುದಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳ ಸತ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವುದು ಕಾಂಗ್ರೆಸ್ ಸರ್ಕಾರದ ಕರ್ತವ್ಯವಾಗಿದ್ದು, ಅವರು ಕೆಲಸ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದೆ ತಿಳಿಸಿದರು.

ಏತನ್ಮಧ್ಯೆ, ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಡಿಸಿಎಂ ಆರ್ ಅಶೋಕ ಮಾತನಾಡಿ, ಇತರ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್, ಬೆಂಗಳೂರು ಮತ್ತು ಕರ್ನಾಟಕವನ್ನು ಎಟಿಎಂ ಆಗಿ ಪರಿವರ್ತಿಸಿಕೊಂಡಿದೆ. "ಮೊದಲ ದಿನದಿಂದಲೇ ಅವರು ಭ್ರಷ್ಟಾಚಾರವನ್ನು ಪ್ರಾರಂಭಿಸಿದ್ದರು. ಪಕ್ಷದ ನಾಯಕರಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಕೂಡ ಇತ್ತೀಚೆಗೆ ಸಭೆ ಕರೆದಿದ್ದಾರೆ. ಭ್ರಷ್ಟ ಸರ್ಕಾರವು ಹೆಚ್ಚು ಕಾಲ ಇರುವುದಿಲ್ಲ. ಜನರು ಅವರಿಗೆ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಇದೇ ವೇಳೆ ಮತಾನಾಡಿದ ಮಾಜಿ ಡಿಸಿಎಂ ಹಾಗೂ ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು, ಶಿವಕುಮಾರ್ ಅವರು ಇಷ್ಟೊಂದು ಸಂಪತ್ತು ಗಳಿಸಿದ್ದು ಹೇಗೆ ಎಂಬುದನ್ನು ಬಹಿರಂಪಡಿಸಬೇಕು. ಶ್ರೀಮಂತರಾಗುವ ರಹಸ್ಯವನ್ನು ಬಹಿರಂಗಪಡಿಸಬೇಕೆಂದು ತಿಳಿಸಿದರು.

ಬಳಿಕ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಶೀಘ್ರದಲ್ಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ನಾಯಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com