ಕೆಂಪಣ್ಣ ಆಯೋಗ ರಚಿಸಿ ವರದಿ ಪಡೆದರೂ ವಿಧಾನಮಂಡಲದಲ್ಲೇಕೆ ಮಂಡಿಸಲಿಲ್ಲ: ಸಿದ್ದರಾಮಯ್ಯಗೆ ಜಗದೀಶ್ ಶೆಟ್ಟರ್ ತಿರುಗೇಟು

ಅರ್ಕಾವತಿ ಡಿನೋಟಿಫಿಕೇಷನ್‌ ವಿಚಾರ ಸೋಮವಾರ ವಿಧಾನಸಭೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿ ಕೈಸಿದ್ದರೂ ಅದನ್ನು ವಿಧಾನಮಂಡಲದಲ್ಲಿ ಏಕೆ ಮಂಡಿಸಲಿಲ್ಲ...
ಜಗದೀಶ್ ಶೆಟ್ಟರ್.
ಜಗದೀಶ್ ಶೆಟ್ಟರ್.

ಬೆಂಗಳೂರು: ಅರ್ಕಾವತಿ ಡಿನೋಟಿಫಿಕೇಷನ್‌ ವಿಚಾರ ಸೋಮವಾರ ವಿಧಾನಸಭೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿ ಕೈಸಿದ್ದರೂ ಅದನ್ನು ವಿಧಾನಮಂಡಲದಲ್ಲಿ ಏಕೆ ಮಂಡಿಸಲಿಲ್ಲ ಎಂದು ಪ್ರಶ್ನಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು, ತಿರುಗೇಟು ನೀಡಿದರು.

ಅನಾರೋಗ್ಯದ ಕಾರಣದಿಂದ ಸಿದ್ದರಾಮಯ್ಯ ಅವರು, ಅಧಿವೇಶನದ ಬೆಳಗಿನ ಚರ್ಚೆಯಲ್ಲಿ ಗೈರು ಹಾಜರಾಗಿದ್ದರು. ಚರ್ಚೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಕಾಂಗ್ರೆಸ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು.

ಮಧ್ಯಾಹ್ನದ ವೇಳೆಗೆ ಸದನಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದರು.

ಬಿಜೆಪಿ 2018ರಲ್ಲಿ ನೀಡಿದ್ದ 600 ಭರವಸೆಗಳ ಪೈಕಿ ಶೇ.10ರಷ್ಟೂ ಭರವಸೆ ಈಡೇರಿಸಲ್ಲ ಬೇಕಿದ್ದರೆ ಚರ್ಚೆಗೆ ಬನ್ನಿ ಎಂದು ಸವಾಲೆಸೆದರು.

ಹಿಂದೆ ಕಾಂಗ್ರೆಸ್‌ ನೀಡಿದ್ದ 165 ಭರವಸೆ ಪೈಕಿ 157 ಈಡೇರಿಸಿದ್ದೆವು. ಆದರೆ, ಬಿಜೆಪಿ 2018-19ರಲ್ಲಿನೀಡಿದ್ದ 600 ಭರವಸೆಯಲ್ಲಿಶೇ. 10ರಷ್ಟನ್ನೂ ಈಡೇರಿಸಿಲ್ಲ. ಈ ಬಗ್ಗೆ ಸದನದಲ್ಲೇ ಚರ್ಚೆಗೆ ಬರುವಂತೆ ಸವಾಲು ಹಾಕುತ್ತೇನೆ. ನುಡಿದಂತೆ ಯಾರು ನಡೆದರು, ಯಾರು ನಡೆದಿಲ್ಲಎಂಬುದು ಜನತೆಗೆ ಗೊತ್ತಾಗಲಿ ಎಂದರು.

'ನಾವು ಹಿಂದೆ ನೀಡಿದ್ದ 165 ಭರವಸೆಗಳಲ್ಲಿ157 ಈಡೇರಿಸಿದ್ದು, 30 ಹೊಸ ಕಾರ್ಯಕ್ರಮಗಳನ್ನು ನೀಡಿದ್ದೆವು. ಆ ಬಗ್ಗೆ 2018-19ನೇ ಸಾಲಿನ ಬಜೆಟ್‌ನಲ್ಲಿಪ್ರಸ್ತಾಪಿಸಿದ್ದು, ದಾಖಲೆಗಳಲ್ಲಿದೆ. ನಾನು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಾಗಲೇ ಬಸವಾದಿ ಶರಣರು ಕೊಟ್ಟ ಮಾತಿನಂತೆ ನಡೆದುಕೊಂಡಂತೆ ನಾವು ಕೊಟ್ಟ ಭರವಸೆ ಈಡೇರಿಸುವುದಾಗಿ ಪ್ರಮಾಣ ಮಾಡಿದ್ದೆ. ಆದರೆ, ಬಿಜೆಪಿ ನೀಡಿದ್ದ 600 ಭರವಸೆಯಲ್ಲಿ ಶೇ.10ರಷ್ಟು ಕೂಡ ಈಡೇರಿಸಿಲ್ಲ. ಕಳೆದ ಬಜೆಟ್‌ನಲ್ಲಿ206 ಹೊಸ ಕಾರ್ಯಕ್ರಮ ಘೋಷಿಸಿದ್ದ ಸರಕಾರ ಈವರೆಗೆ ಸುಮಾರು 57 ಕಾರ್ಯಕ್ರಮಗಳನ್ನೂ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಹಾಗಾಗಿ ಬಿಜೆಪಿಯ ಪ್ರಣಾಳಿಕೆ ಭರವಸೆ ಹಾಗೂ ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ ಎಂದು ಹೇಳಿದ್ದೆ,'' ಎಂದು ಸಮರ್ಥನೆ ನೀಡಿದರು.

'ಸರಕಾರದ ಚಾಳಿ ಎಂದರೆ ನಾವು ಏನೇ ಆರೋಪ ಮಾಡಿದರೂ ಹಿಂದಿನ ಸರಕಾರದಲ್ಲೂ ನಡೆದಿತ್ತು ಎನ್ನುತ್ತಾರೆ. ನಾನು ಸಿಎಂ ಆಗಿದ್ದ 5 ವರ್ಷದಲ್ಲಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರತಿಪಕ್ಷದಲ್ಲಿದ್ದವರು ಅಂದು ಒಂದೂ ಆರೋಪ ಮಾಡಿರಲಿಲ್ಲ. ಆಗೇನು ಬಾಯಿಗೆ ಕಡುಬು ಸಿಕ್ಕಿಕೊಂಡಿತ್ತೇ ಅಥವಾ ಕಡಲೇಪುರಿ ತಿನ್ನುತ್ತಿದ್ದರೋ. ಆಗಲೇ ಆರೋಪ ಮಾಡಿ ತನಿಖೆಗೆ ಆಗ್ರಹಿಸಬಹುದಿತ್ತಲ್ಲ? ಇಲ್ಲವೇ 4 ವರ್ಷದಿಂದ ಅಧಿಕಾರದಲ್ಲಿಇರುವಾಗಲಾದರೂ ತನಿಖೆಗೆ ಆದೇಶಿಸಬಹುದಾಗಿತ್ತಲ್ಲವೇ'' ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿ ಮಾತನಾಡಿದ ಮಾಜಿ ಸಿಎಂ ಜಗದೀಶ ಶೆಟ್ಟರ್‌, ಆಗ ಪ್ರತಿಪಕ್ಷ ನಾಯಕನಾಗಿದ್ದ ನಾನು ಅರ್ಕಾವತಿ ಹಗರಣದ ಬಗ್ಗೆ ಪ್ರಸ್ತಾಪಿಸಿದ್ದೆ. ನೀವು ಕೆಂಪಣ್ಣ ಆಯೋಗ ರಚಿಸಿ ವರದಿ ಪಡೆದರೂ ಅದನ್ನು ವಿಧಾನಮಂಡಲದಲ್ಲಿ ನೀವು ಮಂಡಿಸಲಿಲ್ಲ. ಹಗರಣದಲ್ಲಿ ನಿಮ್ಮ ಪಾತ್ರವಿರದಿದ್ದರೆ ಏಕೆ ಮಂಡಿಸಲಿಲ್ಲ. ನಾವು ಆಗಲೂ ಆರೋಪಿಸಿದ್ದೆವು. ಈಗ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರ ಶೇ.40 ಕಮಿಷನ್ ಆರೋಪದ ಮೇಲೆ ಸರಕಾರದಲ್ಲಿ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದೀರಿ ಎಂದು ತಿರುಗೇಟು ನೀಡಿದರು.

ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ''ನ್ಯಾಯಾಲಯವೇ 'ರೀ ಡೂ' ಮಾಡುವಂತೆ ಸೂಚಿಸಿತ್ತು. ನ್ಯಾಯಾಂಗ ನಿಂದನೆ ಅರ್ಜಿ ಇತ್ತು. ಆಗ ನ್ಯಾಯಾಲಯವೇ 'ರೀ ಡೂ' ಪದ ಬಳಸಿತ್ತು. ಆದರೆ, ಡಿನೋಟಿಫಿಕೇಷನ್‌ ಮಾಡಲಾಗಿದೆ ಎಂದು ಆರೋಪಿಸಿದರು. ನಂತರ ಅಂದಿನ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಅಧ್ಯಕ್ಷತೆ ಸಮಿತಿ ರಚಿಸಿ ವರದಿ ಸಲ್ಲಿಕೆಗೆ ಸೂಚಿಸಲಾಗಿತ್ತು. ಬಳಿಕ ಅಧಿಕಾರ ಕಳೆದುಕೊಂಡೆವು. ನಾಲ್ಕು ವರ್ಷದಿಂದ ಅಧಿಕಾರದಲ್ಲಿರುವ ನೀವು ಏಕೆ ವರದಿ ಮಂಡಿಸಿಲ್ಲ'' ಎಂದು ಪ್ರಶ್ನೆ ಮಾಡಿದರು.

''ನಾನು ನುಣುಚಿಕೊಳ್ಳುವ ಪ್ರಶ್ನೆಯೇ ಇಲ್ಲ. ಆ ವರದಿಯನ್ನು ಸದನಕ್ಕೆ ಮಂಡಿಸಲಿ. ನಾನು ಒಂದು ಗುಂಟೆ ಭೂಮಿಯನ್ನೂ ಡಿನೋಟಿಫೈ ಮಾಡಿಲ್ಲ ಎಂದು ವರದಿಯಲ್ಲಿದೆ. ಹಾಗೆಯೇ ಜಗದೀಶ್‌ ಶೆಟ್ಟರ್‌ ಕೂಡ ಡಿನೋಟಿಫೈ ಮಾಡಿಲ್ಲ ಎಂದಿದೆ. ನನ್ನ ಅಧಿಕಾರಾವಧಿಯಲ್ಲಿ ಬಿಜೆಪಿಯವರು ಸುಳ್ಳು ಆರೋಪ ಮಾಡಿದರೂ 8 ಪ್ರಕರಣ ಸಿಬಿಐಗೆ ವಹಿಸಿದ್ದೆ. ಎಲ್ಲ ಪ್ರಕರಣಗಳಲ್ಲೂ 'ಬಿ ವರದಿ' ಸಲ್ಲಿಕೆಯಾಗಿದೆ'' ಎಂದು ಹೇಳಿದರು.

ಬಳಿಕ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ ಎಸಿಬಿ ಸ್ಥಾಪಿಸಲಾಗಿದೆ ಎಂಬ ಬಿಜೆಪಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಂದಿನ ಲೋಕಾಯುಕ್ತ ಭಾಸ್ಕರ್ ರಾವ್ ಅವರ ಪುತ್ರ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಇದು ಅಗತ್ಯವಾಗಿತ್ತು ಎಂದರು.

‘‘ಬಿಜೆಪಿ ಆಡಳಿತವಿರುವ ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಗೋವಾ, ಹರಿಯಾಣ ರಾಜ್ಯಗಳಲ್ಲಿ ಲೋಕಾಯುಕ್ತ ಇಲ್ಲ, ಆದರೆ ಎಸಿಬಿ ಇದೆ, ಕರ್ನಾಟಕದಲ್ಲಿಯೂ ಸರಕಾರ ಸ್ವಂತವಾಗಿ ಲೋಕಾಯುಕ್ತ ಸ್ಥಾಪಿಸಲಿಲ್ಲ, ಹೈಕೋರ್ಟ್‌ ಆದೇಶದ ಮೇರೆಗೆ ರಚಿಸಿತ್ತು ಎಂದು ತಿಳಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದರೂ, ಡಿವೈಎಸ್ಪಿ ಗಣೇಶ್, ಐಎಎಸ್ ಅಧಿಕಾರಿ ಡಿ.ಕೆ.ರವಿ ಅನುಮಾನಾಸ್ಪದ ಸಾವು, ಪರೇಶ್ ಮೇಸ್ತಾ ಹತ್ಯೆ ಸೇರಿದಂತೆ ಒಂಬತ್ತು ಪ್ರಕರಣಗಳನ್ನು ಸಿಎಂ ಆಗಿ ಸಿಬಿಐಗೆ ವಹಿಸಿದ್ದೆ ಎಂದರು.

ಈ ವೇಳೆ ಮಾತನಾಡಿದ ಬಿಜೆಪಿಯ ರೂಪಾಲಿ ನಾಯ್ಕ್, ಸಿಬಿಐಗೆ ವಹಿಸುವುದಕ್ಕೂ ಮುನ್ನವೇ ಸಾಕ್ಷ್ಯ ನಾಶಪಡಿಸಲಾಗಿತ್ತು ಎಂದು ಆರೋಪಿಸಿದರು. ಈ ಹೇಳಿಗೆ ಸದನದಲ್ಲಿ ತೀವ್ರ ಗದ್ದಲವನ್ನುಂಟು ಮಾಡಿತು.

ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಬಜೆಟ್ ಮೇಲೆ ಚರ್ಚೆ ನಡೆಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧು ಸ್ವಾಮಿ ಅವರಿಗೆ ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com