ಫಾಕ್ಸ್‌ ಕಾನ್‌ ಹೂಡಿಕೆ ಬಂದಿದೆ ಎಂದು ಪುಕ್ಕಟೆ ಪ್ರಚಾರ ಪಡೆದ ಬೊಮ್ಮಾಯಿ ಸರ್ಕಾರ: ಎಚ್ ಡಿ ಕುಮಾರಸ್ವಾಮಿ ಕಿಡಿ

ಫಾಕ್ಸ್‌ ಕಾನ್‌ ಹೂಡಿಕೆ ವಿಚಾರವಾಗಿ ಸಿಎಂ ಬೊಮ್ಮಾಯಿ ಅವರ ಟ್ವೀಟ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಬೊಮ್ಮಾಯಿ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಫಾಕ್ಸ್‌ ಕಾನ್‌ ಹೂಡಿಕೆ ವಿಚಾರವಾಗಿ ಸಿಎಂ ಬೊಮ್ಮಾಯಿ ಅವರ ಟ್ವೀಟ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಬೊಮ್ಮಾಯಿ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.

ಪ್ರಸ್ತುತ ರಾಜ್ಯ ಸರ್ಕಾರದ್ದು ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ಎನ್ನುವ ನೀತಿ. ಜಾಹೀರಾತುಗಳಲ್ಲಿಯೇ ಜಳಕ ಮಾಡುತ್ತಿರುವ ಈ ಸರ್ಕಾರಕ್ಕೆ ಜನರ ಕ್ಷೇಮ, ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಫಾಕ್ಸ್‌ ಕಾನ್‌ ಹೂಡಿಕೆ ಕುರಿತು ಸರಣಿ ಟ್ವೀಟ್‌ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ, 'ಐಫೋನ್ ತಯಾರಿಸುವ ತೈವಾನ್‌ ದೇಶದ ಫಾಕ್ಸ್‌ ಕಾನ್‌ ಕಂಪನಿ ರಾಜ್ಯದಲ್ಲಿ ಹೂಡಿಕೆ ಮಾಡಲು ಬಂದಿದೆ ಎಂದು ಶುಕ್ರವಾರ ಮುಖ್ಯಮಂತ್ರಿಗಳು ಹಾಗೂ ಇಬ್ಬರು ಸಚಿವರು ಪುಕ್ಕಟ್ಟೆ ಪ್ರಚಾರ ಗಿಟ್ಟಿಸಿಕೊಂಡರು. ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಕೈಯ್ಯಲ್ಲಿ ಸಹಿಪತ್ರಗಳನ್ನು ಹಿಡಿದು ಮಾಧ್ಯಮಗಳಿಗೆ ಪೋಸು ಕೊಟ್ಟರು ಎಂದು ಕಿಡಿಕಾರಿದ್ದಾರೆ.

ತೈವಾನಿನ ತೈಪೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕಂಪನಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವ ಯಾವುದೇ ನಿರ್ಣಾಯಕ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾದರೆ, ಶುಕ್ರವಾರ ಮಾನ್ಯ ಮುಖ್ಯಮಂತ್ರಿಗಳ ಸಮಕ್ಷಮದಲ್ಲಿ ಆಗಿದ್ದೇನು? ಅದೇನು ಒಪ್ಪಂದವೋ ಅಥವಾ ಪ್ರಚಾರದ ಗಿಮಿಕ್ಕೋ?  ಜನರಿಗೆ ತಿಳಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಕೋವಿಡ್‌ ನಂತರದ ಕಾಲದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆಗೆ ಬಹಳ ಮಹತ್ವವಿದೆ. ಸರಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಎಡವಟ್ಟು ಮಾಡಿಕೊಂಡ ಕಾರಣಕ್ಕೆ ಓಲಾ ಕಂಪನಿ ಕರ್ನಾಟಕದ ಕೈ ಜಾರಿತು. ₹7,614 ಕೋಟಿ ಹೂಡಿಕೆ ತಮಿಳುನಾಡು ರಾಜ್ಯದ ಪಾಲಾಯಿತು.  ಚುನಾವಣೆ, ಪ್ರಚಾರಕ್ಕಿಂತ ಜನರ ಬದುಕು ಮುಖ್ಯ. ಈ ಸರ್ಕಾರಕ್ಕೆ ಅಧಿಕಾರವೇ ಮುಖ್ಯ. ಉಳಿದಿದ್ದೆಲ್ಲ ಬೇಕಿಲ್ಲ. ಕನ್ನಡಿಗರ ಕಷ್ಟಗಳಿಗೆ ಕೊನೆ ಇಲ್ಲ ಎನ್ನುವಂತಾಗಿದೆ ಎಂದು ಟ್ವೀಟ್‌ನಲ್ಲಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com