ಚುನಾವಣಾ ಆಯೋಗ ಅನುಮತಿ ನೀಡದಿರುವುದು ಬರ ಪರಿಹಾರ ವಿಳಂಬಕ್ಕೆ ಕಾರಣ: ನಿರ್ಮಲಾ ಸೀತಾರಾಮನ್

ಕರ್ನಾಟಕಕ್ಕೆ ಬರ ಪರಿಹಾರ ವಿಳಂಬವಾಗಲು ಕೇಂದ್ರ ಸರ್ಕಾರ ಕಾರಣವಲ್ಲ. ಉನ್ನತಾಧಿಕಾರ ಸಮಿತಿ ಸಭೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅನುಮತಿ ನೀಡದಿರುವುದು ಬರ ಪರಿಹಾರ ವಿಳಂಬಕ್ಕೆ ಕಾರಣ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ಬೆಂಗಳೂರು: ಕರ್ನಾಟಕಕ್ಕೆ ಬರ ಪರಿಹಾರ ವಿಳಂಬವಾಗಲು ಕೇಂದ್ರ ಸರ್ಕಾರ ಕಾರಣವಲ್ಲ. ಉನ್ನತಾಧಿಕಾರ ಸಮಿತಿ ಸಭೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅನುಮತಿ ನೀಡದಿರುವುದು ಬರ ಪರಿಹಾರ ವಿಳಂಬಕ್ಕೆ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವೆ, ಕರ್ನಾಟಕ ಸರ್ಕಾರ ಅಕ್ಟೋಬರ್‌ನಲ್ಲಿ ಬರ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅಂತರ ಸಚಿವಾಲಯದ ಕೇಂದ್ರ ತಂಡವು ಇಲ್ಲಿಗೆ ಬಂದು ಸ್ಥಳ ಪರಿಶೀಲನೆ ನಡೆಸಿದೆ ಎಂದು ವಿವರಿಸಿದರು.

ರಾಜ್ಯಕ್ಕೆ ಬರ ಪರಿಹಾರ ನೀಡದ ಕೇಂದ್ರವನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ ಸೀತಾರಾಮನ್, ಬರ ಪರಿಹಾರ ಬಿಡುಗಡೆಗೆ ಕೆಲವು ಕಾರ್ಯವಿಧಾನಗಳ ಮೂಲಕ ಹೋಗಬೇಕಾಗಿದೆ ಮತ್ತು ಇದಕ್ಕೆ ಸಮಯ ತೆಗೆದುಕೊಂಡಿದೆ ಎಂದು ಹೇಳಿದರು.

ನಿರ್ಮಲಾ ಸೀತಾರಾಮನ್
ಬರ ಪರಿಹಾರ ಕುರಿತು ಅಮಿತ್ ಶಾ ಹೇಳಿಕೆ "ಸಾಕ್ಷಾತ್ ಸುಳ್ಳು": ಕೇಂದ್ರಕ್ಕೆ ಕಾಂಗ್ರೆಸ್ ತರಾಟೆ

ಅಂತರ ಸಚಿವಾಲಯದ ಅಧಿಕಾರಿಗಳ ತಂಡ ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿ ಸಲ್ಲಿಸಿದ ವರದಿಯನ್ನು ಕೃಷಿ ಮತ್ತು ಗೃಹ ಸಚಿವಾಲಯ ಪರಿಶೀಲನೆ ನಡೆಸಿದ್ದವು. ಆದರೆ ಅಷ್ಟರಲ್ಲೇ ಚುನಾವಣೆ ಘಷೋಣೆಯಾಯಿತು. ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಮಾರ್ಚ್ 28 ರಂದು ಉನ್ನತ ಮಟ್ಟದ ಸಮಿತಿ ಸಭೆ ನಡೆಸಲು ಪೂರ್ವಾನುಮತಿ ಪಡೆಯಲು ಕೇಂದ್ರದ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಬರ ಪರಿಹಾರ ಮಂಜೂರಾತಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅನುಮೋದನೆಗೆ ಕಾಯಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಕರ್ನಾಟಕ ಮಾತ್ರವಲ್ಲ, ತೆಲಂಗಾಣ, ತಮಿಳುನಾಡು ಹಾಗೂ ಸಿಕ್ಕಿಂ ಸೇರಿದಂತೆ ಹಲವು ರಾಜ್ಯಗಳಿಗೆ ವಿಪತ್ತು ಪರಿಹಾರ ನಿಧಿಯಡಿ ನೆರವು ನೀಡುವ ಪ್ರಸ್ತಾವನೆಗಳು ಉನ್ನತಾಧಿಕಾರ ಸಮಿತಿ ಮುಂದೆ ಬಾಕಿ ಇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಪ್ರಸ್ತಾಪಿಸಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಿರ್ಮಲಾ ಸೀತಾರಾಮನ್, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನೀರಾವರಿ ಮತ್ತು ನೀರಿಗೆ ಸಂಬಂಧಿಸಿದ ಅನೇಕ ಯೋಜನೆಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.

ನಿರ್ಮಲಾ ಸೀತಾರಾಮನ್
ತಿಂಗಳು ತಡ ಮಾಡಿ ಕೇಳಿದ್ದಕ್ಕೆ ಬರ ಪರಿಹಾರ ಸಿಕ್ಕಿಲ್ಲ: ಅಮಿತ್ ಶಾ ಹೇಳಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗು!

ಬೆಂಗಳೂರು ನೀರಿನ ಸಮಸ್ಯೆಯಿಂದ ಬಳಲುತ್ತಿರುವುದು ತುಂಬಾ ಕಳವಳಕಾರಿ ಮತ್ತು ದುಃಖಕರ ವಿಚಾರ. 20 ಸಾವಿರ ಕೋಟಿ ಮೊತ್ತದ ನೀರಾವರಿ ಯೋಜನೆಗಳು ಸ್ಥಗಿತವಾಗಿವೆ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ರಾಜ್ಯಾದ್ಯಂತ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಕಾಲರಾ ಸೇರಿದಂತೆ ಕೆಲ ಕಾಯಿಲೆಗಳು ಹಬ್ಬುವ ಆತಂಕ ಇದೆ ಅಂತ ಆತಂಕ ವ್ಯಕ್ತಪಡಿಸಿದರು. ಅಲ್ಲದೆ ಕೇಂದ್ರ ಸರ್ಕಾರದ 'ಜಲ್ ಜೀವನ್ ಮಿಷನ್'ಗೆ ರಾಜ್ಯದಲ್ಲಿ ಏಕೆ ಪ್ರೋತ್ಸಾಹ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕೇಂದ್ರ ಸಚಿವೆ, ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.

ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಘಟನೆ ದುರದೃಷ್ಟಕರ ಎಂದ ಅವರು, ವಿಧಾನಸೌಧಲ್ಲಿ ಪಾಕ್ ಪರ ಘೋಷಣೆ ಪ್ರಕರಣ ನಡೆಯಬಾರದಾಗಿತ್ತು. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿರಲಿಲ್ಲ ಅಂತ ರಾಜ್ಯ ಸರ್ಕಾರದ ವಿರುದ್ಧ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದರು.

ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವೆ, "ಹಿಂದೂ ಭಯೋತ್ಪಾದನೆ" ಎಂಬ ಪದವನ್ನು ಸೃಷ್ಟಿಸಿದ ಅದೇ ಪಕ್ಷಕ್ಕೆ ಸೇರಿದ ಜವಾಬ್ದಾರಿಯುತ ಸಚಿವರು ಈಗ ಸಾಕ್ಷಿಯ ಗುರುತನ್ನು ಬಹಿರಂಗಪಡಿಸಿದ್ದಾರೆ. ಇಲ್ಲಿನ ಆರೋಗ್ಯ ಸಚಿವರು ಪ್ರಕರಣದ ಸಾಕ್ಷಿಯೊಬ್ಬರ ಮಾಹಿತಿ ಬಹಿರಂಗಪಡಿಸಿದ್ದು ಸರಿಯಲ್ಲ. ಸಾಕ್ಷಿಗಳ ರಕ್ಷಣೆ ಮಾಡಬೇಕೆಂಬ ಕನಿಷ್ಟ ಜ್ಞಾನ ಇಲ್ಲವಾ ಇವರಿಗೆ? ಜವಾಬ್ದಾರಿ ಇಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com