ಗದಗ: ಬಾಂಗ್ಲಾದೇಶದಲ್ಲಿ ಜನ ಯಾವರೀತಿ ಆ ದೇಶದ ಪ್ರಧಾನಿ ಮನೆ ಹೊಕ್ಕರೋ ಅದೇ ರೀತಿ ನಮ್ಮ ದೇಶದಲ್ಲೂ ಪ್ರಧಾನಿ ಮನೆಗೆ ನುಗ್ಗುವ ದಿನ ದೂರವಿಲ್ಲ ಎಂದು ರೋಣ ಕಾಂಗ್ರೆಸ್ ಶಾಸಕ ಜಿಎಸ್ ಪಾಟೀಲ್ ಅವರು ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ಗಜೇಂದ್ರಗಡದಲ್ಲಿ ನಡೆದ ಅಹಿಂದ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹುನ್ನಾರ ಮಾಡುತ್ತಿದ್ದಾರೆ. ಅವರು ಮೊದಲಿನಿಂದಲೂ ಇದೇ ರೀತಿ ಮಾಡುತ್ತಾ ಬಂದಿದ್ದಾರೆ. ಇದೇ ರೀತಿ ಮುಂದುವರಿದರೆ ಬಾಂಗ್ಲಾದಂತೆ ಭಾರತದಲ್ಲೂ ಪ್ರಧಾನಿ ಮೋದಿ ಮನೆಗೆ ಜನ ನುಗ್ಗುವ ದಿನ ದೂರವಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾವೆಲ್ಲರೂ ಒಂದಾಗಬೇಕು, ಗಟ್ಟಿಯಾಗಬೇಕು. ಧ್ವನಿಗಟ್ಟಿಗೊಳಿಸಬೇಕು. ನಮ್ಮ ಹೋರಾಟ ಮುಂದುವರೆಯಬೇಕು. ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ಬಿಜೆಪಿ ಹುನ್ನಾರ ಮಾಡಿದೆ. ಸಿದ್ದರಾಮಯ್ಯಗೆ ಈ ಸ್ಥಿತಿ ಬರಲು ಅಮಿತ್ ಶಾ ಕಾರಣ ಎಂದು ಆರೋಪಿಸಿದರು.
ಅವರು ರಾಜಕೀಯ ಜೀವನದ ಉದ್ದಕ್ಕೂ ಅಂಥದ್ದನ್ನೇ ಮಾಡಿಕೊಂಡು ಬಂದವರು. ಅಂಥವರ ಕೈಗೆ ನಾವು ದೇಶ ಕೊಟ್ಟಿದ್ದೇವೆ. ಈ ದೇಶ ಯಾವ ರೀತಿ ಮುನ್ನಡೆಯಬೇಕು ಎಂಬ ಬಗ್ಗೆ ನಾವು ಯೋಚಿಸಬೇಕು. ಬಾಂಗ್ಲಾದೇಶದಲ್ಲಿ ಜನ ಪ್ರಧಾನಿ ಮನೆಗೆ ಹೊಕ್ಕಂತೆ ಈ ದೇಶದಲ್ಲಿಯೂ ನುಗ್ಗುವ ದಿನ ಬಹಳ ದೂರ ಇಲ್ಲ. ಅದಕ್ಕೇ ಹೇಳುತ್ತಿದ್ದೇನೆ, ನಾವೆಲ್ಲ ಒಂದಾಗಬೇಕು. ಗಟ್ಟಿಯಾಗಬೇಕು. ನಮ್ಮ ಧ್ವನಿ ಗಟ್ಟಿಯಾಗಬೇಕು, ನಮ್ಮ ಹೋರಾಟ ಮುಂದುವರಿಯಬೇಕು ಎಂದು ಜಿಎಸ್ ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರ ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ನಾಯಕರ ಹಾಗೂ ಶಾಸಕರ ಬುದ್ಧಿಯೇ ಅಷ್ಟೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿರುಗೇಟು ನೀಡಿದ್ದಾರೆ.
Advertisement