
ಮಂಗಳೂರು: ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೌಡಿ ಶೀಟರ್ ಬಂಧನವಾದಾಗ ಅವರನ್ನು ಬಿಡಿಸುವುದಕ್ಕಾಗಿ ಪೊಲೀಸರನ್ನು ನಿಂದಿಸಿರುವ ಹರೀಶ್ ಪೂಂಜ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮತ್ತು ದಕ್ಷಿಣ ಕನ್ನಡ ಡಿಸಿಸಿ ಅಧ್ಯಕ್ಷ ಕೆ ಹರೀಶ್ ಕುಮಾರ್ ಅವರು, ಹರೀಶ್ ಪೂಂಜ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಜನಪ್ರತಿನಿಧಿಯಾಗಿ ತಮಗಿರುವ ಕೆಲವು ನೀತಿ, ನಿಯಮಗಳನ್ನು ಗಾಳಿಗೆ ತೂರಿ ರೌಡಿಯಂತೆ ವರ್ತಿಸಿಸುವ ಮೂಲಕ ಬೆಳ್ತಂಗಡಿ ತಾಲೂಕಿಗೆ ಅಪಮಾನ ಮಾಡಿದ್ದಾರೆ. ಬೆಳ್ತಂಗಡಿಗೆ ಕಳಂಕ ತಂದಿರುವ ಶಾಸಕ ಪೂಂಜಾ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ತಾಕತ್ತಿದ್ದರೆ ಅವರು ಮತ್ತೆ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.
ಹರೀಶ ಪೂಂಜರಿಗೆ ಸಣ್ಣ ವಯಸ್ಸಿನಲ್ಲಿ ಅಧಿಕಾರ ಸಿಕ್ಕಿದೆ. ಆದರೆ, ಶಾಸಕರು ಸಾರ್ವಜನಿಕ ಜೀವನದಲ್ಲಿ ರೋಲ್ ಮಾಡೆಲ್ ಆಗುವಂತೆ ಇರಬೇಕು. ವೈಕುಂಠ ಬಾಳಿಗಾರಂತಹ ಶಾಸಕರಿದ್ದ ಕ್ಷೇತ್ರವನ್ನು ತುಂಬಿದ್ದವರು ಶಾಸಕನಾಗಿ ಯಾವ ರೀತಿ ಇರಬೇಕು ಎಂದು ತಿಳಿದುಕೊಂಡಿರಬೇಕು. ಆದರೆ, ಬಾಯಿಗೆ ಬಂದ ರೀತಿ ಮಾತನಾಡಿ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಂಡಿದ್ದಾರೆ. ಕಾಗೆಯನ್ನು ನೀಚ ಪಕ್ಷಿಯಂತೆ ಬಿಂಬಿಸಿ ಹಿಂದು ಧರ್ಮಕ್ಕೂ ಅವಮಾನಿಸಿದ್ದಾರೆ.
ಹಿಂದು ಧರ್ಮದಲ್ಲಿ ಕಾಗೆಯ ಮಹತ್ವ ಏನು ಅನ್ನುವುದು ಹರೀಶ್ ಪೂಂಜಗೆ ಗೊತ್ತಿಲ್ಲ. ಹಿಂದು ಧರ್ಮವನ್ನು ಗುತ್ತಿಗೆ ತೆಗೆದುಕೊಂಡವರ ರೀತಿ ವರ್ತಿಸುವ ಬಿಜೆಪಿ ನಾಯಕರೇ ಹಿಂದು ಧರ್ಮವನ್ನು ನಿಂದನೆ ಮಾಡಿದ್ದಾರೆ. ಶನಿ ದೇವರು ಕಾಗೆಯ ಜೊತೆಗಿರುವುದಲ್ಲವೇ.. ಶ್ರಾದ್ಧ ಮಾಡುವುದಕ್ಕೂ ತುಳುವರು ಕಾಗೆಗೆ ಮೊದಲು ಅನ್ನ ಕೊಟ್ಟು ಪೂಜೆ ಸಲ್ಲಿಸುವ ಸಂಪ್ರದಾಯ ಇದೆ. ಕಾಗೆಗೂ ಮಹತ್ವದ ಸ್ಥಾನ ಇದೆ, ಆದರೆ, ಹರೀಶ್ ಪೂಂಜ ಅವರು ರಕ್ಷಿತ್ ಶಿವರಾಂ ಅವರನ್ನು ಕಾಗೆಗೆ ಹೋಲಿಸಿದ್ದಾರೆ.
ಪೊಲೀಸರು ನೋಟೀಸ್ ಕೊಡಲು ಹರೀಶ್ ಪೂಂಜ ಮನೆಗೆ ತೆರಳಿದ್ದರು. ಬಂಧಿಸಲು ಹೋಗಿರಲಿಲ್ಲ. ಜನ ಸೇರಿಸಿ ಗೊಂದಲ ಏರ್ಪಟ್ಟಾಗ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡಿದ್ದರು. ಸಂಸದರು ಬಳಿಕ ವಿಚಾರಣೆಗೆ ಕಳಿಸುತ್ತೇನೆ ಎಂದು ಹೇಳಿದ್ದಕ್ಕೆ ಪೊಲೀಸರು ಹಿಂತಿರುಗಿ ಹೋಗಿದ್ದರು. ಠಾಣೆಯಲ್ಲೇ ಜಾಮೀನು ನೀಡಬಲ್ಲ ಸೆಕ್ಷನ್ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಅಷ್ಟಕ್ಕೇ ಬೃಹನ್ನಾಟಕ ಮಾಡುವ ಅಗತ್ಯವಿತ್ತೇ.. ಪೊಲೀಸರು ಬಂಧಿಸಲು ಬಂದಿದ್ದಾರೆ ಎಂದು ಹೇಳಿ ಸುದ್ದಿ ಹಬ್ಬಿಸಿದ್ದು, ಶಾಸಕರು, ಸಂಸದರನ್ನು ಕರೆಸಿ ಡ್ರಾಮಾ ಮಾಡಿದ್ದಾರೆ.
ಕಾರ್ಯಕರ್ತರನ್ನು ನೋಡಿ ಪೊಲೀಸರು ಹಿಂತಿರುಗಿ ಹೋದರು ಎಂದು ಹೇಳಿದ್ದಾರೆ. ಮುಖ್ಯಮಂತ್ರಿ, ಸಚಿವರನ್ನೇ ಪೊಲೀಸರು ಬಂಧನ ಮಾಡಿಲ್ಲವೇ.. ಸರಕಾರ ಮನಸ್ಸು ಮಾಡಿದ್ದರೆ ಶಾಸಕರನ್ನು ಬಂಧನ ಮಾಡಲು ಅಷ್ಟು ಕಷ್ಟ ಇದೆಯೇ.. ತಹಸೀಲ್ದಾರ್ ಬಗ್ಗೆ ಅವಾಚ್ಯ ನಿಂದನೆ ಮಾಡುತ್ತಾರೆ. ಅದೇ ತಹಸೀಲ್ದಾರ್ ಚುನಾವಣೆಗೂ ಮುನ್ನ ಎಂಟು ತಿಂಗಳು ಇರಲಿಲ್ಲವೇ, ಆಗಲೂ ಕಾಂಗ್ರೆಸ್ ಏಜೆಂಟ್ ಇದ್ದರೇ ಅಥವಾ ಬಿಜೆಪಿ ಏಜಂಟ್ ಆಗಿದ್ದರೇ.. ಯಾಕೆ, ಆಗ ತಹಸೀಲ್ದಾರ್ ಬಗ್ಗೆ ಮಾತನಾಡಿಲ್ಲ ಎಂದು ಪ್ರಶ್ನೆ ಮಾಡಿದರು.
ಬಂಗೇರ ಅವರ ರಾಜಕಾರಣದ ವಯಸ್ಸಿನಷ್ಟು ನಿಮಗೆ ವಯಸ್ಸು ಆಗಿಲ್ಲ. ಕೆಜೆ ಹಳ್ಳಿ ಮಾಡುತ್ತೀನಿ ಎನ್ನು ಬದಲು ಒಳ್ಳೆಯ ತಾಲೂಕು ಮಾಡುತ್ತೇನೆ ಎಂದು ಹೇಳಿ. ಇವರು ಕಾನೂನು ಕೈಗೆತ್ತಿಕೊಂಡವರ ಪರ ಮಾತನಾಡುತ್ತಿದ್ದಾರೆ, ಬಂಗೇರ ಯಾವತ್ತೂ ರೌಡಿ, ಭ್ರಷ್ಟರು, ಅಕ್ರಮ ಮಾಡುತ್ತಿದ್ದವರ ಪರ ಅಧಿಕಾರಿಗಳ ವಿರುದ್ಧ ಮಾತನಾಡಿಲ್ಲ. ಇದರ ನಡುವೆ, ಬಿಜೆಪಿ ನಾಯಕರು 4ನೇ ತಾರೀಕು ನಂತರ ಕಾಂಗ್ರೆಸ್ ಸರ್ಕಾರ ಹೋಗುತ್ತೆ ಎಂದು ಹೇಳುತ್ತಾರೆ. ಯಾವ ಆಧಾರದಲ್ಲಿ ಇದನ್ನು ಹೇಳುತ್ತಾರೋ ಗೊತ್ತಿಲ್ಲ. ನಿಮಗೆ ಅಧಿಕಾರಿಗಳು, ಕಾರ್ಯಾಂಗವೇ ಬೇಡ ಅಂತಾದರೆ, ರಾಜ್ಯಾಂಗವನ್ನೇ ಇಟ್ಕೊಂಡು ಸರಕಾರ ನಡೆಸಕಾಗುತ್ತಾ.. ಆಡಳಿತ ಮಾಡಕ್ಕೆ ಆಗೋದಾದ್ರೆ ಅದನ್ನು ಮಾಡಿಸಿ ಎಂದು ಹೇಳಿದರು.
ಅಕ್ರಮ ಕಲ್ಲು ಕೋರೆ, ಮರಳುಗಾರಿಕೆ ಎಲ್ಲ ಕಡೆ ಇದೆ ಎಂದು ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಇಲ್ಲ. ಅಕ್ರಮಗಳಿಗೆ ಬೆಂಬಲ ಕೊಡುವುದಿಲ್ಲ. ಎಲ್ಲ ರೀತಿಯ ಅಕ್ರಮಗಳನ್ನು ಹತ್ತಿಕ್ಕಲು ಉಸ್ತುವಾರಿ ಸಚಿವರಿಗೆ ಹೇಳುತ್ತೇನೆ. ಹರೀಶ್ ಪೂಂಜ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಹೇಳಿಲ್ಲ. ಅದರ ಹಿಂದೆ ಕಾಂಗ್ರೆಸ್ ಕೈವಾಡವೂ ಇಲ್ಲ. ಇವರೇ ಮೈಗೆ ಬಿದ್ದು ಇದನ್ನೆಲ್ಲ ಮೈಗೆ ಎಳೆದುಕೊಂಡಿದ್ದಾರೆಂದು ಹೇಳಿದರು.
Advertisement