ಎಡವಟ್ಟು ಮಾಡೋದು, ಸುಳ್ಳು ಹೇಳೋದು... ಇದೇ ಸಿಎಂ ದಿನಚರಿ: BJP ವ್ಯಂಗ್ಯ

ನಾಗರೀಕ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂಬ ವರದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿತ್ತು.
R.Ashok
ವಿಪಕ್ಷ ನಾಯಕ ಆರ್.ಅಶೋಕ್
Updated on: 

ಬೆಂಗಳೂರು: ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಸುಳ್ಳು ಹೇಳುತ್ತೀರಲ್ಲಾ, ತಮ್ಮ ಭಂಡತನಕ್ಕೆ ಏನು ಹೇಳೋಣ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.

ನಾಗರೀಕ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂಬ ವರದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿತ್ತು.

ಮೀಸಲಾತಿ ನೀಡಬೇಕೆಂಬ ಬೇಡಿಕೆ ಬಂದಿರುವುದು ನಿಜ. ಆದರೆ, ಈ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ತಿಳಿಸಲಾಗಿತ್ತು.

ಸರ್ಕಾರದ ಸ್ಪಷ್ಟನೆ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಎಡವಟ್ಟು ಮಾಡೋದು, ಆಮೇಲೆ ಸುಳ್ಳು ಹೇಳೋದು... ಇದೇ ಸಿಎಂ ಸಿದ್ದರಾಮಯ್ಯ ಅವರ ದಿನಚರಿ ಎಂದು ಕಿಡಿಕಾರಿದ್ದಾರೆ.

ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಸುಳ್ಳು ಹೇಳುತ್ತೀರಲ್ಲಾ, ತಮ್ಮ ಭಂಡತನಕ್ಕೆ ಏನು ಹೇಳೋಣ? ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕೊಡಬೇಕು ಎಂದು ತಮ್ಮ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮುಸ್ಲಿಂ ಶಾಸಕರು ಆಗಸ್ಟ್ 24, 2024 ರಂದು ತಮಗೆ ಪತ್ರ ಬರೆಯುತ್ತಾರೆ. ತಾವು ಅದೇ ದಿನವೇ ಈ ಪತ್ರವನ್ನ ಪರಿಶೀಲಿಸಿ ಮಂಡಿಸಿ ಎಂದು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಿದ್ದೀರಿ. ಈ ಸಂಬಂಧ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರಲೂ ಸಹ ತಾವು ಅನುಮೋದನೆ ನೀಡಿದ್ದೀರಿ.

R.Ashok
ನಾಗರೀಕ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ: ವಿವಾದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟನೆ

ಇಷ್ಟೆಲ್ಲಾ ಪತ್ರ ವ್ಯವಹಾರ ನಡೆದಿದ್ದರೂ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಹಸಿ ಸುಳ್ಳು ಹೇಳುತ್ತಿರಲ್ಲ, ತಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ, ನೈತಿಕತೆ ಅನ್ನುವುದೇ ಇಲ್ಲವೇ? ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿ, ಬಾಯಿ ಬಿಟ್ಟರೆ ಬರಿ ಸುಳ್ಳು ಹೇಳುವ ತಮ್ಮನ್ನ ಆ ತಾಯಿ ಚಾಮುಂಡೇಶ್ವರಿ ಮೆಚ್ಚುತ್ತಾಳಾ? ತಮ್ಮನ್ನ ನಂಬಿ ಮತ ಹಾಕಿ ಅಧಿಕಾರ ಕೊಟ್ಟ ಕನ್ನಡಿಗರು ಕ್ಷಮಿಸುತ್ತಾರಾ? ಎಂದು ಕುಟುಕಿದ್ದಾರೆ.

ಇದೇ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಸ್ಲಾಂಗೆ ಮತಾಂತರಗೊಳ್ಳಲು ಸಿದ್ಧರಿದ್ದರು ಎಂಬ ಹೇಳಿಕೆಗೆ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಸೈಯದ್ ಅಜೀಂಪೀರ್ ಖಾದ್ರಿ ಅವರ ವಿರುದ್ಧವೂ ಅಶೋಕ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಬಾಬಾ ಸಾಹೇಬ್ ಅಂಬೇಡ್ಕರರಿಗೆ ಮತ್ತೊಮ್ಮೆ ಅವಮಾನವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧರಾಗಿದ್ದರು ಎಂದು ಸುಳ್ಳು ಹೇಳುವ ಮೂಲಕ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಅಜ್ಜಂಪೀರ್ ಖಾದ್ರಿ ಅಂಬೇಡ್ಕರ್ ಅವರಿಗೆ ಘೋರ ಅಪಮಾನ ಎಸಗಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರರು ಇಸ್ಲಾಂ ಧರ್ಮ ಸ್ವೀಕರಿಸುವುದು ದೂರದ ಮಾತು. ಅವರಿಗೆ ಇಸ್ಲಾಂ ಧರ್ಮದ ಬಗ್ಗೆ ಇದ್ದ ಅಭಿಪ್ರಾಯ ಎಂಥದ್ದು ಎನ್ನುವುದನ್ನ ಕಾಂಗ್ರೆಸ್ ನಾಯಕರು ಒಮ್ಮೆ ಓದಿಕೊಳ್ಳಬೇಕು.

R.Ashok
ಅಂಬೇಡ್ಕರ್ ಅವರ ಮೀಸಲಾತಿ ನೀತಿಗಳನ್ನು ಕಾಂಗ್ರೆಸ್ ವಿರೋಧಿಸಿತ್ತು: ಬೊಮ್ಮಾಯಿ

ಇಸ್ಲಾಂಗೆ ತಲೆ ಎತ್ತುವ ಅವಕಾಶ ಸಿಕ್ಕಾಗಲೆಲ್ಲ ಇನ್ನೊಂದು ಸಂಸ್ಕೃತಿಯನ್ನು ನಾಶ ಮಾಡಿದೆ. ಇಸ್ಲಾಂ ಜೊತೆ ಒಂದು ದೇಶದೊಳಗೆ ನೆಮ್ಮದಿಯಾಗಿರಲು ಸಾಧ್ಯವಿಲ್ಲ" ಎಂದು ಇಸ್ಲಾಂ ಧರ್ಮದ ಗುಣವನ್ನ ಅಂಬೇಡ್ಕರ್ ಅವರು ಬಹಳ ಹಿಂದೆಯೇ ಸ್ಪಷ್ಟವಾಗಿ ಬಣ್ಣಿಸಿದ್ದಾರೆ. ಇಸ್ಲಾಂ, ಕ್ರೈಸ್ತ ಮತಕ್ಕೆ ಮತಾಂತರವಾದರೆ ಅದು ಕೇವಲ ಮತಾಂತರವಾಗದೆ ರಾಷ್ಟ್ರಾಂತರವಾಗಿ ಭಾರತದ ಏಕತೆಗೆ ಸಾರ್ವಭೌಮಕ್ಕೆ ಧಕ್ಕೆ ಆಗುತ್ತದೆ" ಎಂದು ಅಂಬೇಡ್ಕರ್ ಅವರು ಅಭಿಪ್ರಾಯಪಟ್ಟಿದ್ದರು.

ಇಸ್ಲಾಂ ಧರ್ಮದ ಬಗ್ಗೆ ಇಂತಹ ಅಭಿಪ್ರಾಯ ಹೊಂದಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಇಸ್ಲಾಂ ಧರ್ಮ ಸ್ವೀಕರಿಸಲು ಮುಂದಾಗಿದ್ದರು ಎಂದರೆ ಅದನ್ನು ನಂಬಲು ಸಾಧ್ಯವೇ? ಇಸ್ಲಾಂನ ಭ್ರಾತೃತ್ವ ಇಡೀ ಮನುಕುಲದ ಭ್ರಾತೃತ್ವವಾಗುವ ಬದಲು ಕೇವಲ ಮುಸಲ್ಮಾನರಿಗೆ ಸೀಮಿತವಾದದ್ದು ಎಂಬುದನ್ನು ಅರಿತೇ ಅಂಬೇಡ್ಕರ್‌ ಅವರು ಪಾಕಿಸ್ತಾನದ ರಚನೆಯನ್ನು ಸಮರ್ಥಿಸಿದ್ದರು. ಕಾಂಗ್ರೆಸ್ ಹಿಡಿತದಲ್ಲಿದ್ದ ಸ್ವಾತಂತ್ರ್ಯೋತ್ತರ ಭಾರತ ಪಾಕಿಸ್ತಾನವನ್ನೂ ಕಳೆದುಕೊಂಡಿತು, ಅಂಬೇಡ್ಕರ್‌ ಎಚ್ಚರಿಕೆಯನ್ನೂ ಧಿಕ್ಕರಿಸಿತು. ಪರಿಣಾಮ ಕಾಂಗ್ರೆಸ್ ಪಕ್ಷ ದೇಶದೊಳಗೆ ಸೆಕ್ಯುಲರಿಸಂ ಹೆಸರಿನಲ್ಲಿ ತುಷ್ಟೀಕರಣದ ನೀತಿಯನ್ನ ಇಂದಿಗೂ ಮುಂದುವರಿಸುತ್ತಲೇ ಬಂದಿದೆ.

ಒಂದು ಕಡೆ ಸಚಿವ ಜಮೀರ್ ಅಹಮದ್ ಖಾನ್ ಅವರು ಕುಮಾರಸ್ವಾಮಿ ಅವರ ಮೇಲೆ ಜನಾಂಗೀರ ನಿಂದನೆ ಮಾಡುತ್ತಾರೆ. ಮತ್ತೊಂದು ಕಡೆ ಕಾಂಗ್ರೆಸ್ ಮಾಜಿ ಶಾಸಕರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚರಿತ್ರೆಯ ಬಗ್ಗೆ ಸುಳ್ಳು ಹೇಳುತ್ತಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಅವರು ಬಾಯಿ ಬಿಡದೆ ಜಾಣ ಕಿವುಡುತನ ಪ್ರದರ್ಶನ ಮಾಡುತ್ತಿರುವುದನ್ನ ನೋಡುತ್ತಿದ್ದರೆ ಈ ವಿವಾದಾತ್ಮಕ ಹೇಳಿಕೆಗಳೆಲ್ಲಾ ಅವರ ಸೂಚನೆಯ ಮೇರೆಗೆ ಹೂರಬರುತ್ತಿರುವಂತೆ ಕಾಣುತ್ತಿದೆ. ಒಂದು ಉಪಚುನಾವಣೆಗೋಸ್ಕರ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದು ರಾಜಕೀಯ ಮಾಡಬೇಕೆ? ಜನಾಂಗೀಯ ನಿಂದನೆ ಮಾಡುವ ಸಂವಿಧಾನ ವಿರೋಧಿಗಳನ್ನ, ಅಂಬೇಡ್ಕರ್ ಅವರ ಚಾರಿತ್ರ್ಯ ಹರಣ ಮಾಡುವ ದ್ರೋಹಿಗಳನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com