
ಬೆಂಗಳೂರು: ಬೆಂಗಳೂರು ಮೆಟ್ರೋ ಫೇಸ್ 2 ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿರುವ ಕೇಂದ್ರ ಸರ್ಕಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಿಗೆ ಆಹ್ವಾನ ನೀಡದೆ, ಕಡೆಗಣಿಸಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆಯವರ ಹೇಳಿಕೆಗೆ ಆರ್.ಅಶೋಕ್ ಅವರು ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆರ್.ಅಶೋಕ್ ಅವರು, ಪ್ರಧಾನಿ ಮೋದಿಯವರ ಕಾರ್ಯಕ್ರಮದ ವೇಳಾಪಟ್ಟಿ ಜೊತೆಗೆ ಕಾರ್ಯಕ್ರಮದ ವೇಳೆ ವೇದಿಕೆಯ ಹಂಚಿಕೊಳ್ಳುವ ನಾಯಕರು ಹಾಗೂ ಅಧಿಕಾರಿಗಳ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಪ್ರಿಯಾಂಕ್ ಖರ್ಗೆಯವರಿಗೆ ತಿರುಗೇಟು ನೀಡಿದ್ದಾರೆ.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಇದೇ ಆತುರ, ಕಾತುರ, ಅವಸರ, ಹಂಬಲ, ಹಾತೊರೆ, ತವಕ, ಉತ್ಸಾಹ, ಕುತೂಹಲಗಳನ್ನ ತಾವು ಮತ್ತು ತಮ್ಮ ಕುಟುಂಬ ರಿಪಬ್ಲಿಕ್ ಆಫ್ ಕಲಬುರಗಿ ಸೃಷ್ಟಿ ಮಾಡಿಕೊಳ್ಳುವ ಬದಲು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ತೋರಿಸಿದಿದ್ದರೆ, ಕಲ್ಯಾಣ ಕರ್ನಾಟಕ ಇವತ್ತು ಇಷ್ಟೊಂದು ಹಿಂದೆ ಉಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಟ್ವೀಟ್ ಮಾಡಿದ್ದ ಪ್ರಿಯಾಂಕ್ ಖರ್ಗೆಯವರು, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸ್ವಪಕ್ಷದವರು ವಿರೋಧಿಸುವ ನಾಯಕನಾಗಿದ್ದಾರೆಯೇ? ಬೆಂಗಳೂರು ಮೆಟ್ರೋ ಫೇಸ್ 2 ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿರುವ ಕೇಂದ್ರ ಸರ್ಕಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೇ ವೇದಿಕೆಯಲ್ಲಿ ಜಾಗ ನೀಡುವುದನ್ನು ನಿರಾಕರಿಸಿದೆ. ಕೇಂದ್ರ ಸರ್ಕಾರ ಪ್ರೊಟೋಕಾಲ್ ಮರೆತಿದೆಯೇ? ಅಥವಾ ಉದ್ದೇಶಪೂರ್ವಕ ಕಡೆಗಣನೆಯೇ? ಎಂದು ಪ್ರಶ್ನಿಸಿದ್ದರು.
ಮೊದಲ ಬಾರಿ ಶಾಸಕರಾಗಿರುವ ಹಾಗೂ ಬೆಂಗಳೂರಿನ ಶಾಸಕರಲ್ಲದಿರುವ ವಿಜಯೇಂದ್ರ ಅವರಿಗೆ ಸಿಕ್ಕ ಅವಕಾಶ ಅಶೋಕ್ ಅವರಿಗಿಲ್ಲ. ಅಶೋಕ್ ಅವರೇ ತಾವು ಬೆಂಗಳೂರು ಶಾಸಕರಾಗಿದ್ದರೂ, ವಿರೋಧ ಪಕ್ಷದ ನಾಯಕನಾಗಿದ್ದರೂ, ಬಿಜೆಪಿ ಪಕ್ಷದ ಹಿರಿಯ ನಾಯಕ ಎನಿಸಿಕೊಂಡಿದ್ದರೂ, ಹಲವು ಬಾರಿ ಆಯ್ಕೆ ಆಗಿದ್ದರೂ ನಿಮ್ಮನ್ನು ಕಡೆಗಣಿಸಲಾಗಿದೆ ಎಂದರೆ ನಿಮ್ಮ ಕುರ್ಚಿ ಕಿತ್ತುಕೊಳ್ಳುವ ಸಂದೇಶ ಬಂದಿದೆ ಎಂದು ಭಾವಿಸೋಣವೇ?
ಯಾರು ಯಾರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿಲ್ಲ ಎಂದು ತಲೆಕೆಡಿಸಿಕೊಂಡು ಕುಳಿತಿದ್ದ ತಮಗೆ ಈಗ “ನನಗೇಕೆ ಆಹ್ವಾನವಿಲ್ಲ” ಎಂದು ತಲೆಕೆಡಿಸಿಕೊಂಡು ಕೂರುವ ಸಮಯ ಬಂದಿದೆ. ಇನ್ನಾದರೂ ಇತರರ ಮನೆ ಇಣುಕುವ ಬದಲು ನಿಮ್ಮ ಬುಡ ಅಲ್ಲಾಡುತ್ತಿರುವುದನ್ನು ಗಮನಿಸಿದರೆ ಒಳ್ಳೆಯದು ಎಂದು ವ್ಯಂಗ್ಯವಾಡಿದ್ದರು.
Advertisement