

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನಡುವೆ ಸಿಎಂ ಪಟ್ಟಕ್ಕಾಗಿ ನಡೆಯುತ್ತಿರುವ ಸಂಘರ್ಷ ತಾರಕಕ್ಕೇರಿದ್ದು, ಈ ನಡುವಲ್ಲೇ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿಯವರು ಮಧ್ಯ ಪ್ರವೇಶ ಮಾಡಿದ್ದು, ಪಕ್ಷದ ಹಿರಿಯ ನಾಯಕರೊಂದಿಗೆ ಶನಿವಾರ ಮಹತ್ವದ ಸಭೆ ನಡೆಸಿದ್ದಾರೆ.
ವಾರದ ಹಿಂದಷ್ಟೇ ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿಗೆ ಆಗಮಿಸಿ, ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಜೊತೆ ಮಾತುಕತೆ ನಡೆಸಿ, ಬಳಿಕ ಈ ಕುರಿತು ಸೋನಿಯಾ ಗಾಂಧಿಗೆ ವರದಿ ನೀಡಿದ್ದರು. ಅಲ್ಲದೆ, ಕಳೆದ ಬುಧವಾರ ಮಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡ ಸಿದ್ದರಾಮಯ್ಯ ಜೊತೆ ಸುಮಾರು 15 ನಿಮಿಷ ರಹಸ್ಯ ಸಭೆ ನಡೆಸಿದ್ದರು.
ಇದರ ಬೆನ್ನಲ್ಲೇ ದೆಹಲಿಯಲ್ಲಿ ಸೋನಿಯಾಗಾಂಧಿ ನೇತೃತ್ವದಲ್ಲಿ ಉನ್ನತ ನಾಯಕರ ಸಭೆ ನಡೆದಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ಸೋನಿಯಾ ಗಾಂಧಿ ನಿವಾಸ, ಜನಪತ್ 10ರಲ್ಲಿ ಸತತ 2 ಗಂಟೆಗಳ ಕಾಲ ಸಭೆ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಇ ಕೆಸಿ.ವೇಣುಗೋಪಾಲ್ ಭಾಗಿಯಾಗಿದ್ದರು.
ಸಭೆಯಲ್ಲಿ ಕರ್ನಾಟಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಸಿಎಂ ಗಾದಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಸಂಘರ್ಷ, ಇದರಿಂದ ಪಕ್ಷದ, ರಾಜ್ಯ ಸರ್ಕಾರದ ಮೇಲೆ ಆಗುತ್ತಿರುವ ಪರಿಣಾಮ, ಮುಂದೆ ಕೈಗೊಳ್ಳಬೇಕಾದ ಕ್ರಮಗಳು, ಅದರಿಂದ ಆಗಬಹುದಾದ ರಾಜಕೀಯ ಪರಿಣಾಮಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸಭೆಯಿಂದ ಯಾವುದೇ ನಿರ್ಣಯಗಳು ಹೊರಬಂದಿಲ್ಲ ಎನ್ನಲಾಗುತ್ತಿದೆ. ಡಿಸೆಂಬರ್ 14 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ 'ಮತ ಕಳ್ಳತನ' ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದು, ಅಲ್ಲಿಯವರೆಗೆ ಯಾವುದೇ ರೀತಿ ಸಮಸ್ಯೆ, ನಿರ್ಣಯ ಕೈಗೊಳ್ಳದಿರಲು ನಾಯಕರು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಡಿಸೆಂಬರ್ 14 ಅಥವಾ 15 ರಂದು ಮತ್ತೆ ಸಭೆ ಸೇರುವ ನಿರೀಕ್ಷೆಯಿದ್ದು, ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೆ.ಸಿ.ವೇಣುಗೋಪಾಲ್, ಸಭೆಯಲ್ಲಿ ಕರ್ನಾಟಕ ರಾಜ್ಯ ದವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಿತು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾ ನಡುವೆ ನಡೆಯುತ್ತಿರುವ ಸಂಘರ್ಷ ಕುರಿತಾಗಿಯೂ ಚರ್ಚೆ ನಡೆಸಲಾಯಿತು. ಅಲ್ಲದೆ, ಡಿಸೆಂಬರ್ 14ರ 'ವೋಟ್ ಜೋರಿ' ಹ್ಯಾಲಿ ಬಗ್ಗೆಯೂ ಚರ್ಚೆ ನಡೆಸಲಾಯಿತು. ಸೋನಿಯಾ ಗಾಂಧಿಯವರ ಸಮ್ಮುಖದಲ್ಲಿಯೇ ಈ ಬಗ್ಗೆ ಚರ್ಚೆ ನಡೆಯಿತು. ಆದರೆ, ಇಂದಿನ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ, ಕರ್ನಾಟಕದಲ್ಲಿ ಪಕ್ಷದಲ್ಲಿ ಯಾವುದೇ ಒಡಕಿಲ್ಲ, ನಾವು ಒಗ್ಗಟ್ಟಾಗಿ ಇದ್ದೇವೆ ಎಂದು ಪ್ರತಿಪಾದಿಸಿದರು. ಆದರೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುರ್ಮಾ ಅವರಿಗೆ ಬುಲಾವ್ ನೀಡುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ
Advertisement