
ಬೆಂಗಳೂರು: ಹಾಲಿನ ಬೆಲೆ ಏರಿಕೆಯ ಪ್ರಸ್ತಾಪದ ಕುರಿತು ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ನಡುವೆ ವಾಗ್ಯುದ್ಧ ಆರಂಭವಾಗಿದೆ.
ಪ್ರತಿ ಲೀಟರ್ ನಂದಿನಿ ಹಾಲಿನ ದರವನ್ನು ಅರ್ಧ ಶತಕಕ್ಕೆ ಮುಟ್ಟಿಸಿದ್ದ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಈಗ ಹಾಲಿನ ದರವನ್ನು ಶತಕಕ್ಕೆ ಮುಟ್ಟಿಸಲು ಶತ ಪ್ರಯತ್ನ ಮಾಡುತ್ತಿದೆ. ಪ್ರತಿ ಲೀಟರ್ ಹಾಲಿಗೆ ರೂ.5 ಹೆಚ್ಚಿಸಲು ನಿರ್ಧರಿಸಿದ್ದು, ಜನರ ಜೇಬಿಗೆ ಮತ್ತೊಮ್ಮೆ ಕನ್ನ ಹಾಕುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.
ಬಿಜೆಪಿ ನಾಯಕ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಅಧಿಕಾರ ಕಲಹದಿಂದ ಬೆಂಗಳೂರು ಹಾಳಾಗುತ್ತಿದೆ. ನಗರವು ಆಸ್ತಿ ತೆರಿಗೆಯಿಂದ ಮಾತ್ರ ನಡೆಯುತ್ತಿದ್ದು, ಸರ್ಕಾರದಿಂದ ಅನುದಾನ ಶೂನ್ಯವಾಗಿದೆ. ರಸ್ತೆಗಳು ಹದಗೆಟ್ಟಿದ್ದು, ಸಂಚಾರ ದಟ್ಟಣೆ ತೀವ್ರವಾಗಿದೆ, ಮತ್ತು ಮೂಲಸೌಕರ್ಯ ಕುಸಿತ ಹಾಗೂ ಬೆಲೆ ಏರಿಕೆ ಅತಿಯಾದ ಮಟ್ಟಕ್ಕೆ ತಲುಪಿದೆ. ಸರ್ಕಾರ ಜನರಿಗೆ ಬೆಲೆಗೆ ಏರಿಕೆ ಗ್ಯಾರಂಟಿ ನೀಡಿದೆ. ಒಂದು ವೇಳೆ ಹಾಲಿನ ದರ ಏರಿಕೆಯಾಗಿದ್ದೇ ಆದರೆ, ಒಂದು ಲೀಟರ್ ಹಾಲಿನ ದರ ರೂ.47ಕ್ಕೆ ತಲುಪಲಿದೆ. ಸರ್ಕಾರ ಜನರಿಗೆ ಬೆಲಿ ಏರಿಕೆ ಭಾಗ್ಯ ನೀಡಿದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಕರ್ನಾಟಕ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮತ್ತು ಕಾಂಗ್ರೆಸ್ ಎಂಎಲ್‌ಸಿ ಸಲೀಮ್ ಅಹ್ಮದ್ ಅವರು ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ, ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಬೆಲೆ ಪರಿಷ್ಕರಣೆಗಳು ನಿಯಮಿತ ಪ್ರಕ್ರಿಯೆಯಾಗಿದೆ ಎಂದು ಹೇಳಿದ್ದಾರೆ.
ಕಾಲಕಾಲಕ್ಕೆ ಬೆಲೆ ಹೆಚ್ಚಿಸಲಾಗಿದೆ, ಆದರೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ; ಪ್ರಸ್ತಾವನೆಯನ್ನು ಮಾತ್ರ ಸಲ್ಲಿಸಲಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ, ಅಗತ್ಯ ವಸ್ತುಗಳ ಬೆಲೆಗಳು ಕೂಡ ಏರಿಕೆಯಾಗಿದ್ದವು. ಪೆಟ್ರೋಲ್ ಬೆಲೆಗಳನ್ನು ಕಡಿಮೆ ಮಾಡುವಂತೆ ಪ್ರಧಾನಿ ಮೋದಿಯವರನ್ನು ಕೇಳುವ ಧೈರ್ಯ ಅವರಿಗಿಲ್ಲ.
ಕಾಂಗ್ರೆಸ್ ಸರ್ಕಾರವ ಐದು ಪ್ರಮುಖ ಚುನಾವಣಾ ಭರವಸೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ, ಇದು ಇತ್ತೀಚಿನ ಮೂರು ಉಪಚುನಾವಣೆಗಳಲ್ಲಿ ಗೆಲುವಿಗೆ ಕಾರಣವಾಗಿದೆ. ಅಭಿವೃದ್ಧಿಗಾಗಿ ಬೆಲೆಗಳು ಸ್ವಲ್ಪ ಹೆಚ್ಚಳವಾಗಲಿದೆ. ಜನರು ಅದನ್ನು ಸ್ವೀಕರಿಸುತ್ತಾರೆಂದು ತಿಳಿಸಿದರು.
Advertisement