
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಮತ್ತು ಭಿನ್ನಮತ ಚಟುವಟಿಕೆಗಳ ನಡುವಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಗುರುವಾರ ಬೆಂಗಳೂರಿಗೆ ಭೇಟಿ ನೀಡಿದ್ದು, ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.
ಗುರುವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಡ್ಡಾ ಅವರನ್ನು ಪ್ರತಿಪಕ್ಷ ನಾಯಕ ಆರ್ ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಯುವ ಮೋರ್ಚಾ ಅಧ್ಯಕ್ಷ ಧೀರಜ್ ಸ್ವಾಗತಿಸಿದರು.
ಬಳಿಕ ವಿಮಾನ ನಿಲ್ದಾಣದ ವಿಐಪಿ ಲಾಂಜ್ನಲ್ಲಿ ನಡ್ಡಾ ಅವರು, ರಾಜ್ಯ ಬಿಜೆಪಿ ನಾಯಕನ ಜೊತೆ ನಡ್ಡಾ ಮಾತುಕತೆ ನಡೆಸಿದರು.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಹೇಗೆ ನಡೆಯುತ್ತಿವೆ ಎಂದು ವಿವರ ಕೇಳಿದರು. ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿ ಯೋಜನೆ ಬೆಳವಣಿಗೆ ಬಗ್ಗೆ ಪ್ರಸ್ತಾಪಿಸಿ ಕರ್ನಾಟಕ ಸ್ಥಿತಿಗತಿ ಬಗ್ಗೆ ಮಾಹಿತಿ ತಿಳಿದುಕೊಂಡರು.
ಇದೇ ವೇಳೆ ಪ್ರತಿಕ್ರಿಸಿದ ರಾಜ್ಯ ಬಿಜೆಪಿ ನಾಯಕರು, ಕಾಂಗ್ರೆಸ್ ಸರ್ಕಾರಕ್ಕೆ ಯೋಜನೆಗಳನ್ನು ಮುಂದುವರಿಸುವುದು ಕಷ್ಟವಾಗುತ್ತಿದೆ ಎಂದು ವಿವರಿಸಿದ್ದಾರೆ. ಇದಲ್ಲದೆ ಬಸ್ ದರ ಹೆಚ್ಚಳದ ಬಗ್ಗೆಯೂ ಮಾಹಿತಿ ನೀಡಿದರು.
ನಂತರ ನಡ್ಡಾ ಅವರು ವಿಮಾನ ನಿಲ್ದಾಣದಿಂದ ಕೆಕೆ ಗೆಸ್ಟ್ ಹೌಸ್ನತ್ತ ಪ್ರಯಾಣ ಬೆಳೆಸಿದರು. ಏರ್ಪೋರ್ಟ್ನಿಂದ ತೆರಳುವ ವೇಳೆ ವಿಜಯೇಂದ್ರ ಅವರನ್ನು ನಡ್ಡಾ ತಮ್ಮ ಜೊತೆ ಕಾರಿನಲ್ಲಿ ಕರೆದೊಯ್ದರು. ಇತರ ನಾಯಕರ ಬಳಿ ಶುಕ್ರವಾರ ಮಾತುಕತೆ ನಡೆಸುವುದಾಗಿ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
ಅಧಿಕೃತ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂಬಂಧ ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ ನಡ್ಡಾ ಅವರು, ಶುಕ್ರವಾರ ಕಾರ್ಯಕ್ರಮ ಮುಗಿದ ಬಳಿಕ ಸುಮಾರು 2 ತಾಸು ಕುಮಾರಕೃಪ ಅತಿಥಿ ಗೃಹದಲ್ಲಿ ತಂಗಲಿದ್ದಾರೆ.
ಈ ವೇಳೆ ವಿವಿಧ ರಾಜ್ಯ ನಾಯಕರು ಪ್ರತ್ಯೇಕವಾಗಿ ನಡ್ಡಾ ಅವರನ್ನು ಭೇಟಿ ಮಾಡಿ, ರಾಜ್ಯ ಘಟಕದಲ್ಲಿನ ಗೊಂದಲಗಳನ್ನು ಬಗೆಹರಿಸುವಂತೆ ಮನವಿ ಮಾಡುವ ಸಾಧ್ಯತೆಗಳಿವೆ.
ಬುಧವಾರವಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ ಅವರು ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯದ ಬೆಳವಣಿಗೆ ಬಗ್ಗೆ ವಿವರಿಸಿದ್ದರು. ಜತೆಗೆ ಭಿನ್ನಮತೀಯ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣದ ವಿರುದ್ಧ ದೂರು ನೀಡಿದ್ದರು. ಇದರ ಬೆನ್ನಲ್ಲೇ ಪೂರ್ವ ನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡ್ಡಾ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದರಿಂದ ವಿಜಯೇಂದ್ರ ಅವರು ದೆಹಲಿಯಿಂದ ರಾಜ್ಯಕ್ಕೆ ವಾಪಸ್ಸಾಗಿದ್ದರು.
ಇದೀಗ ನಡ್ಡಾ ಅವರು, ರಾಜ್ಯಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಬಣ ಬಡಿದಾಟಕ್ಕೆ ಬ್ರೇಕ್ ಹಾಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Advertisement