
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳ ತಾರಕ್ಕೇರಿರುವ ನಡುವಲ್ಲೇ ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಬಣದ ನಾಯಕರು ಶುಕ್ರವಾರ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಯಾವೆಲ್ಲಾ ನಿರ್ಧಾರ ಕೈಗೊಳ್ಳಲಿದ್ದಾರೆಂಬುದು ಕುತೂಹಲ ಮೂಡಿಸಿದೆ.
ಚುನಾವಣೆ ಮೂಲಕ ರಾಜ್ಯಕ್ಷಕರ ಬದಲಾವಣೆಗೆ ಹೈಕಮಾಂಡ್ ಮುಂದಾದರೆ, ತಮ್ಮ ಬಣದಿಂದ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಯತ್ನಾಳ್ ಅವರು, ಶೇ.100ರಷ್ಟು ಬಿಜೆಪಿ ರಾಜ್ಯಾಧ್ಯಕ್ಷನಾಗಲು ಸಿದ್ದನಿದ್ದೇನೆ. ಎರಡು ಹಂತದಲ್ಲಿ ಸಭೆ ನಡೆಯಲಿದ್ದು, ತಟಸ್ಥ ಗುಂಪು ಪರಿವರ್ತನೆಯಾಗಿ ನಿಷ್ಠಾವಂತ ಗುಂಪಾಗುತ್ತಿದೆ. ಪಕ್ಷ ಉಳಿಸುವ ಗುಂಪು ದೊಡ್ಡದಾಗುತ್ತಿದೆ. ಎಲ್ಲದರ ಕುರಿತು ಚರ್ಚೆ ಮಾಡುತ್ತೇವೆಂದು ಹೇಳಿದರು.
ಈ ಅಧ್ಯಕ್ಷತೆಯನ್ನ ನಾವು ಸುಕಾರಾಮ್ ಒಪ್ಪೋದಿಲ್ಲ. ಅಧ್ಯಕ್ಷ ಸ್ಥಾನದ ಸ್ಪರ್ಧೆ ವಿಚಾರ ಚರ್ಚೆ ಮಾಡುತ್ತೇವೆ. ಇನ್ನೂ ಫೈನಲ್ ಮಾಡಿಲ್ಲ. ಬಹಳ ದಿವಸ ಅನ್ಯಾಯ ಸರ್ವಾಧಿಕಾರಿ ಮನಸ್ಥಿತಿ ಯಾವ ನಾಯಕನಲ್ಲಿದೆಯೋ ಅವರ ಅಂತ್ಯ ಬೇಗ ಆಗುತ್ತೆ. ಇವರ ಅಂತ್ಯಯೂ ಬೇಗ ಆಗಲಿದೆ ಎಂದು ತಿಳಿಸಿದರು.
ರಾಮುಲು ಬಳಿ ನಾನು ಮಾತಾಡಿಲ್ಲ, ನಮ್ಮ ಪ್ರಮುಖರು ಮಾತಾಡಿದ್ದಾರೆ. ಸುಧಾಕರ್ ನಿನ್ನೆ ಹೇಳಿದ್ದಾರಲ್ಲ. ಓರ್ವ ಸಂಸದರ ಫೋನ್ ತೆಗೆಯಲ್ಲ, ವಿಜಯೇಂದ್ರಗೆ ದುಡ್ಡಿನ ದುರಂಕಾರ ಇದೆ. ಮುಡಾ ಹಗರಣ ವಿಚಾರದಲ್ಲಿ ಸಿಎಂ ರಾಜೀನಾಮೆ ಕೇಳಿ ಪಾದಯಾತ್ರೆ ಮಾಡ್ತಾನೆ, ಮೈಸೂರು ಮುಟ್ಟೋದರೊಳಗೆ ರಾಜೀನಾಮೆ ಕೊಡ್ಬೇಕು ಅಂತಾನೆ. ಸಿದ್ದರಾಮಯ್ಯ ಇವರದ್ದು ಎಲ್ಲವನ್ನು ಹೊರ ತೆಗೆದರೆ ಗೊತ್ತಾಗುತ್ತೆ. ಆದರೆ ಅವರು ಹೊರಗೆ ತೆಗೆಯುತ್ತಿಲ್ಲ.
ಸಿಎಂ ಸಿದ್ದರಾಮಯ್ಯ ಜೊತೆ ಇವರದ್ದು ಏನೇನಿದ್ಯೋ ಏನೊ, ಇವರ ಮೇಲಿರುವ ಆರೋಪ ತೆಗೆದು ಬಿಟ್ರೆ ಕಥೆ ಮುಗಿದು ಹೋಗುತ್ತೆ. ಅದ್ಯಾಕೆ ಸಿದ್ದರಾಮಯ್ಯನವರು ಸುಮ್ಮನಿದ್ದಾರೋ ಗೊತ್ತಿಲ್ಲ. ಅವರದ್ದು ಏನಾದ್ರೂ ಇವರ ಹತ್ರ ಇದ್ಯೋ ಗೊತ್ತಿಲ್ಲ. ಅದಕ್ಕೆ ಹೊಂದಾಣಿಕೆ ಮಾಡಿಕೊಂಡಂತೆ ಕಾಣುತ್ತಿದೆ. ಯತ್ನಾಳ್ ಅರೆಸ್ಟ್ ಗ್ಯಾರೆಂಟಿ ಎಂದರು, ಎಲ್ಲಿ ನಾನೇನು ಅರೆಸ್ಟ್ ಆದ್ನಾ ಎಂದು ಪ್ರಶ್ನಿಸಿದರು.
ಇಂದು ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಯತ್ನಾಳ್,. ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಬಿಜೆಪಿಯ ಇತರ ನಾಯಕರು ಭಾಗಿಯಾಗಲಿದ್ದಾರೆಂದು ತಿಳಿದುಬಂದಿದೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಂದು ವೇಳೆ ಚುನಾವಣೆ ಘೋಷಣೆಯಾದರೆ ಕುಮಾರ್ ಬಂಗಾರಪ್ಪ ಅವರನ್ನು ಕಣಕ್ಕಿಳಿಸಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ಪಕ್ಷದ ಹೈಕಮಾಂಡ್ ವಿಜಯೇಂದ್ರ ಅವರ ಹೆಸರನ್ನು ಸರ್ವಾನುಮತದಿಂದ ಘೋಷಿಸಲು ಮುಂದಾಗಿರುವ ಕಾರಣ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇದೂವರೆಗೆ ಚುನಾವಣೆ ನಡೆದಿಲ್ಲ. ಹೀಗಾಗಿ, ಬಂಡಾಯ ನಾಯಕರು ನಡೆಸುತ್ತಿರುವ ಇಂದಿನ ಕಾರ್ಯತಂತ್ರ ಸಭೆ ವಿಫಲವಾಗಬರುದು ಎನ್ನಲಾಗುತ್ತಿದೆ. ಹೀಗಾಗಿ ವಿಜಯೇಂದ್ರ ಮತ್ತು ಇತರ ನಾಯಕರ ಮೇಲೆ ಒತ್ತಡ ಹೆಚ್ಚಿಸುವ ಕುರಿತಂತೆ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
Advertisement