
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ತೀವ್ರಗೊಂಡಿದ್ದು, ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಬಹಿರಂಗವಾಗಿಯೇ ಹೇಳಿದ್ದಾರೆ.
ಇಂದು ನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ರಾಜ್ಯದಲ್ಲಿ ಯಾವ ನಾಯಕತ್ವ ಬದಲಾವಣೆಯೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಬಲಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ನಾಯಕತ್ವ ಬದಲಾವಣೆ ಇಲ್ಲ ಮತ್ತು ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಸಹ ನಡೆದಿಲ್ಲ. ಪಕ್ಷವನ್ನು ಸಂಘಟಿಸುವ ಬಗ್ಗೆ ಮಾತ್ರ ಚರ್ಚೆ ನಡೆದಿದೆ. ಇದು ಸಂಘಟನೆಯ ವರ್ಷವಾಗಿದೆ ಎಂದು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟವಾಗಿ ಸಂದೇಶ ನೀಡಿದ್ದಾರೆ ಎಂದರು. ಈ ಮೂಲಕ ಎರಡುವರೆ ವರ್ಷದ ಬಳಿಕ ಸಿಎಂ ಬದಲಾವಣೆ ಗೊಂದಲಗಳಿಗೆ ಸ್ವತಃ ಡಿಕೆ ಶಿವಕುಮಾರ್ ತೆರೆ ಎಳೆದರು.
ಇದೇ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವವರೆಗೆ ಖಡಕ್ ಎಚ್ಚರಿಕೆ ನೀಡಿದ ಡಿಕೆಶಿ, ಇನ್ಮುಂದೆ ಯಾರೂ ಮಾಧ್ಯಮಗಳ ಮುಂದೆ ಹೋಗಬಾರದು. ಶಾಸಕ ಇಕ್ಬಾಲ್ ಹುಸೇನ್ ಗೆ ನೋಟಿಸ್ ಕೊಡುತ್ತೇನೆ ಎಂದರು.
ಶಾಸಕರಾದ ಬಿ.ಆರ್.ಪಾಟೀಲ್, ಬಾಲಕೃಷ್ಣ ಯಾರೇ ಆಗಿರಲಿ ಯಾರೂ ಸಹ ಮಾಧ್ಯಮಗಳ ಮುಂದೆ ಹೋಗಬಾರದು ಡಿಸಿಎಂ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದರು.
Advertisement