
ಬೆಂಗಳೂರು: ಐಶ್ವರ್ಯ ಗೌಡ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ತನಿಖೆ ಎದುರಿಸಲು ಸಿದ್ಧ ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಡಿಕೆ ಸುರೇಶ್ ಇ.ಡಿ ತನಿಖೆಗೆ ಹೋಗಿರುವ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು, ನಮ್ಮ ಕುಟುಂಬ ಇಡಿ ತನಿಖೆ ಎದುರಿಸಲು ಸಿದ್ದರಿದ್ದೇವೆಂದು ಹೇಳಿದರು.
ನನ್ನ ವಿರುದ್ಧವೂ ಇಡಿ ಪ್ರಕರಣ ದಾಖಲಾಗಿದೆ. ಆ ಪ್ರಕರಣ ಏನಾಯಿತು? ನ್ಯಾಯಾಂಗವು ನಮ್ಮನ್ನು ರಕ್ಷಿಸಿತು. ಯಾರೋ ಹೇಳಿಕೆ ಕೊಟ್ಟಿದ್ದಾರೆಂದು ಕರೆದಿದ್ದಾರೆ. ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳ ಜನರನ್ನು ಭೇಟಿ ಮಾಡುವುದು ಸಾಮಾನ್ಯ. ಸುರೇಶ್ ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ. ಅದನ್ನ ಯಾಕೆ ನೀವು ದೊಡ್ಡದಾಗಿ ಬಿಂಬಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಬಿಆರ್ ಪಾಟೀಲ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಆ ವಿಚಾರ ನಾನು ಏನು ಹೇಳಬೇಕೋ ಹೇಳಿದ್ದೀನಿ. ಸಿಎಂ ಮತ್ತು ವಸತಿ ಸಚಿವರು ಅದಕ್ಕೆ ಉತ್ತರ ಕೊಡುತ್ತಾರೆ. ಶಾಸಕರ ಗಮನಕ್ಕೆ ಬರದೇ ಅನುದಾನ ತೆಗೆದುಕೊಂಡು ಹೋಗುವ, ರಾಜೀನಾಮೆ ಕೊಡುವ ಬಗ್ಗೆ ಶಾಸಕ ರಾಜು ಕಾಗೆ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
Advertisement