

ಬೆಂಗಳೂರು: ಸಂಘದಿಂದ ಎರವಲು ಪಡೆದ ಎಐ ಬಳಸುವುದಕ್ಕಿಂತ ಒಐ (ಒರಿಜಿನಲ್ ಇಂಟೆಲಿಜೆನ್ಸ್) ಬಳಸಿದರೆ ಬಿಜೆಪಿಯ ಕೇಸರಲ್ಲಿ ಮುಳುಗುವುದರಿಂದ ಬಚಾವಾಗಬಹುದು ಎಂದು ಜೆಡಿಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆಯವರು ವ್ಯಂಗ್ಯವಾಡಿದ್ದಾರೆ.
ಎಸ್ಎಸ್ಎಲ್'ಸಿ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕುರಿತು ಜೆಡಿಎಸ್ ವ್ಯಂಗ್ಯವಾಡಿತ್ತು.
SSLC ಫಲಿತಾಂಶದಲ್ಲಿ ಕಲಬುರಗಿ 35 ಅಂದರೆ ಕೊನೆಯ ಸ್ಥಾನ ಪಡೆದಿದ್ದು, ಹಿಂದಿನ ಸಾಲಿನಲ್ಲಿಯೂ 34ನೇ ಸ್ಥಾನದಲ್ಲಿತ್ತು. 4-5 ದಶಕಗಳಿಂದ ಕಲಬುರಗಿ ಜಿಲ್ಲೆ ಆಳುತ್ತಿರುವ ಖರ್ಗೆ ಕುಟುಂಬ ಸ್ವಂತ ಜಿಲ್ಲೆಯ ಮಕ್ಕಳ ಭವಿಷ್ಯ ರೂಪಿಸುವಲ್ಲಿ ವಿಫಲವಾಗಿರುವುದು ನಾಚಿಕೆಗೇಡಿನ ಸಂಗತಿ.
ಕಲಬುರಗಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ, ಶಿಕ್ಷಕರ ನೇಮಕ ಸೇರಿದಂತೆ ಶಿಕ್ಷಣದ ಪ್ರಗತಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಅವರೇ, ನಿಮ್ಮ ಭಾಷಣದ ‘ಸಾಧನೆ’ಗೆ ಈ ಫಲಿತಾಂಶವನ್ನು ಸೇರಿಸಿಕೊಳ್ಳಿ. ಕಲಬುರಗಿಯನ್ನು ಅಕ್ಷರಶಃ ಶೈಕ್ಷಣಿಕ ಅಂಧಕಾರಕ್ಕೆ ದೂಡಿದ್ದೀರಿ. ಮಾತಿನಲ್ಲಿ ತೋರಿಸುವ ಶೌರ್ಯ ಶಿಕ್ಷಣದ ಸುಧಾರಣೆಯಲ್ಲಿ ತೋರಿಸಿ ಎಂದಿರುವ ಜೆಡಿಎಸ್ ಪ್ರಿಯಾಂಕ್ ಖರ್ಗೆಯನ್ನು ನಾಟಿಕೋಳಿ ಮಿನಿಸ್ಟರ್ ಎಂದು ವ್ಯಂಗ್ಯವಾಡಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆಯವರು, ಪುರುಷರು ಮತ್ತು ಮಹಿಳೆಯರ ಮೇಲೆ ಅತ್ಯಾಚಾರವೆಸಗುವುದಿಕ್ಕಿಂತ ಪರೀಕ್ಷೆಯಲ್ಲಿ 85% ಫಲಿತಾಂಶ ಪಡೆಯುವುದು ಹೆಚ್ಚು ಗೌರವದ ವಿಷಯ. ಅಂದಹಾಗೆ, ನಿಮ್ಮ "ಕುಟುಂಬ"ಕ್ಕೆ ಅಭಿನಂದನೆಗಳು, ನಾನು ಹೇಳಿದ ಮೊದಲನೆಯ ವಿಷಯದಲ್ಲಿ ನಂ1 ಆಗಿರುವುದಕ್ಕೆ. ಸಂಘದಿಂದ ಎರವಲು ಪಡೆದ Ai ಬಳಸುವುದಕ್ಕಿಂತ Oi - (ಒರಿಜಿನಲ್ ಇಂಟೆಲಿಜೆನ್ಸ್) ಬಳಸಿದರೆ ಜೆಡಿಎಸ್ ಬಿಜೆಪಿಯ ಕೇಸರಲ್ಲಿ ಮುಳುಗುವುದರಿಂದ ಬಚಾವಾಗಬಹುದು ಎಂದು ವ್ಯಂಗ್ಯವಾಡಿದ್ದಾರೆ.
Advertisement