ಪಕ್ಷದಲ್ಲಿ ತಾಳ್ಮೆ, ಶಿಸ್ತು ಕಾಪಾಡಿದವರಿಗೆ ಮುಂದೆ ಅವಕಾಶ ಸಿಗಲಿದೆ: ಲಕ್ಷ್ಮೀ ಹೆಬ್ಬಾಳ್ಕರ್

ಮೂರು ವರ್ಷಗಳ ಕಾಲ ಸಚಿವೆಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು. ಮುಂದೆಯೂ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ. ಪಕ್ಷದ ತೀರ್ಮಾನಗಳಿಗೆ ಬದ್ಧವಾಗಿರುತ್ತೇನೆ.
Laxmi hebbalkar
ಲಕ್ಷ್ಮೀ ಹೆಬ್ಬಾಳ್ಕರ್
Updated on

ಬೆಳಗಾವಿ: ರಾಜಕೀಯದಲ್ಲಿ ಏಳು-ಬೀಳುಗಳು ಸಹಜ. ಪಕ್ಷದೊಳಗೆ ತಾಳ್ಮೆ ಹಾಗೂ ಶಿಸ್ತು ಕಾಪಾಡಿಕೊಂಡು ಮುನ್ನಡೆಯುವವರಿಗೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಅವಕಾಶ ಹಾಗೂ ಪ್ರತಿಫಲ ಸಿಗಲಿದೆ ಎಂದು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗುರುವಾರ ಹೇಳಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ ಸೇಠ್ ಅವರು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಬ್ಬಾಳ್ಕರ್, ತಾವು ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಯನ್ನು ಭೇಟಿಯಾಗಿ ಆಸಿಫ್ ಸೇಠ್ ಅವರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಮುಖ್ಯಮಂತ್ರಿಯವರ ಮೇಲೆ ಸಂಪೂರ್ಣ ವಿಶ್ವಾಸವಿತ್ತು. ಅವರು ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇತ್ತು ಎಂದು ಹೇಳಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದ ಹೆಬ್ಬಾಳ್ಕರ್, ಮೂರು ವರ್ಷಗಳ ಕಾಲ ಸಚಿವೆಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು. ಮುಂದೆಯೂ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ. ಪಕ್ಷದ ತೀರ್ಮಾನಗಳಿಗೆ ಬದ್ಧವಾಗಿರುತ್ತೇನೆ ಎಂದರು.

Laxmi hebbalkar
ಮಂತ್ರಿಗಿರಿ ರಹಸ್ಯ?: ಸಿಎಂ DK Shivakumar ಭೇಟಿಯಾದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಕುಟುಂಬ!

ಬೇರೆಯವರಿಗೆ ಸಚಿವ ಸ್ಥಾನ ನೀಡಿದರೆ, ಅವರು ನಮಗಿಂತಲೂ ಹೆಚ್ಚಿನ ಸಾಮರ್ಥ್ಯವನ್ನು ಪ್ರದರ್ಶಿಸಬಹುದು. ರಾಜಕೀಯದಲ್ಲಿ ಏಳು-ಬೀಳುಗಳು ಸಹಜ. ಪ್ರತಿಯೊಬ್ಬ ರಾಜಕಾರಣಿಯೂ ತಾಳ್ಮೆ ಮತ್ತು ಸಾಮರ್ಥ್ಯದ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪಕ್ಷದೊಳಗೆ ತಾಳ್ಮೆ ಹಾಗೂ ಶಿಸ್ತು ಕಾಪಾಡಿಕೊಂಡು ಇರುವವರಿಗೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಪ್ರತಿಫಲ ಸಿಗಲಿದೆ ಎಂದು ತಿಳಿಸಿದರು.

5,000 ಕೋಟಿ ರೂ. ಹಗರಣ ಆರೋಪ ತಳ್ಳಿಹಾಕಿದ ಹೆಬ್ಬಾಳ್ಕರ್

ಇದೇ ವೇಳೆ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಮಾಡಿರುವ 5,000 ಕೋಟಿ ರೂ. ಭ್ರಷ್ಟಾಚಾರ ಹಗರಣದ ಆರೋಪವನ್ನು ಹೆಬ್ಬಾಳ್ಕರ್ ತಳ್ಳಿಹಾಕಿದರು.

ಹಣಕಾಸು ಇಲಾಖೆಯೇ ರೂ.5,000 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಹಾಗಿರುವಾಗ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದ ಅವರು, ರೂ.5,000 ಕೋಟಿ ಬಿಡುಗಡೆಯೇ ಆಗಿಲ್ಲ ಎಂಬ ಕನಿಷ್ಠ ಅರಿವಿಲ್ಲದೆ ಇಂತಹ ಆರೋಪ ಮಾಡಲಾಗಿದೆ ಎಂದು ಟೀಕಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com