

ಬೆಂಗಳೂರು: ಬಾಗಲಕೋಟೆಯಲ್ಲಿ ನಡೆದ ಕಲ್ಲು ತೂರಾಟ ಘಟನೆಗೆ ರಾಜ್ಯ ಬಿಜೆಪಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಪೊಲೀಸರ ಉಪಸ್ಥಿತಿಯಲ್ಲಿಯೇ ಕಲ್ಲು ತೂರಾಟ ನಡೆದರೆ, ಇನ್ನು ರಾಜ್ಯದಲ್ಲಿ ಜನಸಾಮಾನ್ಯರಿಗೆ ಸುರಕ್ಷತೆ ಎಲ್ಲಿದೆ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಕಳೆದ ಎರಡುವರೆ ವರ್ಷದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವನ್ನು ಕಲ್ಲು ತೂರಾಟದ ಮಾರ್ಕೆಟ್ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದೆ.
ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಪ್ರಯುಕ್ತ ಮೆರವಣಿಗೆ ಹೊರಟ್ಟಿದ್ದ ಹಿಂದೂಗಳ ಮೇಲೆ ಮಸೀದಿ ಮೇಲೆ ನಿಂತು ಮತಾಂಧರು ಪೊಲೀಸರಿಗೂ ಕ್ಯಾರೆ ಎನ್ನದೇ ಚಪ್ಪಲಿ, ಕಲ್ಲು ತೂರಿದ್ದಾರೆ. ಕಾಂಗ್ರೆಸ್ ಸರ್ಕಾರ ಕೊನೆಗೂ ರಾಹುಲ್ ಗಾಂಧಿಯವರ ಮೊಹಬ್ಬತ್ ಕೀ ದುಖಾನ್ ಆಸೆಯನ್ನು ಈಡೇರಿಸಿದೆ. ಮೊಹಬ್ಬತ್ ಕೀ ದುಖಾನ್ ಎಂದರೆ ಪ್ರೀತಿಯ ಮಾರುಕಟ್ಟೆಯಲ್ಲ, ಕಲ್ಲು ತೂರಾಟಗಾರರ ಕೇಂದ್ರ ಎಂದು ಕಿಡಿಕಾರಿದೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ಕಲ್ಲು, ಚಪ್ಪಲಿ ತೂರಾಟದ ಪುಂಡಾಟಿಕೆ ನಡೆದಿರುವುದು ಅತ್ಯಂತ ಖಂಡನೀಯ ಹಾಗೂ ಹೇಯ ಕೃತ್ಯ ಎಂದು ಹೇಳಿದ್ದಾರೆ.
ಈ ಓಲೈಕೆ ದುರಾಡಳಿತದ, ತುಘಲಕ್ ಕಾಂಗ್ಹೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಶಾಂತಿ ಕದಡುವ ಕಿಡಿಗೇಡಿಗಳಿಗೆ ರಾಜಾಶ್ರಯ ಸಿಕ್ಕಿದೆ. ಪೊಲೀಸರ ಉಪಸ್ಥಿತಿಯಲ್ಲಿಯೇ ಕಲ್ಲು ತೂರಾಟ ನಡೆದರೆ, ಇನ್ನು ರಾಜ್ಯದಲ್ಲಿ ಜನಸಾಮಾನ್ಯರಿಗೆ ಸುರಕ್ಷತೆ ಎಲ್ಲಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಹಿಂದೂಗಳ ಹಬ್ಬ ಮತ್ತು ಮೆರವಣಿಗೆಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಂತಹ ನಿರಂತರ ದಾಳಿಗಳು ವ್ಯವಸ್ಥಿತ ಪಿತೂರಿಯಂತೆ ಕಾಣುತ್ತಿದೆ. ರಾಜ್ಯ ಸರ್ಕಾರ ತಮ್ಮ ಪರ ನಿಲ್ಲಲಿದೆ ಎನ್ನುವ ಧೈರ್ಯವಿಲ್ಲದೆ ಇಂತಹ ಪುಂಡಾಟಿಕೆ ನಡೆಯುವುದು ಸಾಧ್ಯವಿಲ್ಲ.
ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ತನ್ನ ಓಲೈಕೆ ರಾಜಕೀಯವನ್ನು ಬಿಟ್ಟು, ರಾಷ್ಟ್ರದ ಅಸ್ಮಿತೆಯಾಗಿರುವ ಶಿವಾಜಿ ಮಹಾರಾಜರ ಗೌರವಕ್ಕೆ ಧಕ್ಕೆ ತಂದವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು. ಮುಖ್ಯಮಂತ್ರಿಗಳೇ, ಹಿಂದೂ ಸಮಾಜದ ತಾಳ್ಮೆಯನ್ನು ಪರೀಕ್ಷಿಸಬೇಡಿ. ನಮ್ಮ ಆರಾಧ್ಯ ಪುರುಷರ, ನಾಡಿನ ಅಸ್ಮಿತೆಯ ವಿಷಯದಲ್ಲಿ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಶಿವಾಜಿ ಭಾವಚಿತ್ರ ಮೆರವಣಿಗೆಯ ವೇಳೆ ಮತಾಂಧ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ, ಚಪ್ಪಲಿ ಎಸೆಯುವ ಮೂಲಕ ದುಷ್ಕೃತ್ಯ ಎಸಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣದಿಂದಲೇ ಕರ್ನಾಟಕ 'ಮತಾಂಧ ಮುಸ್ಲಿಮರ' ಬೀಡಾಗಿ ಪರಿವರ್ತನೆ ಹೊಂದುತ್ತಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಹಿಂದೂಗಳು ಗಣೇಶ ಮೆರವಣಿಗೆ, ಶಿವಾಜಿ ಮೆರವಣಿಗೆ ಸೇರಿದಂತೆ ತಮ್ಮ ಹಬ್ಬಗಳನ್ನೂ ಸಂಭ್ರಮಿಸದಂತಾಗಿದೆ. ಡಿಜೆ ಹಳ್ಳಿ - ಕೆಜೆ ಹಳ್ಳಿ ಗಲಭೆಯಲ್ಲಿ ಪೊಲೀಸ್ ಠಾಣೆ ಹಾಗೂ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದ ಮತಾಂಧರನ್ನು ಕಾಂಗ್ರೆಸ್ ನಾಯಕರು ಅಮಾಯಕರು ಎಂದದ್ದೇ ಈ ರೀತಿಯ ಕುಕೃತ್ಯಗಳಿಗೆ ಪ್ರೋತ್ಸಾಹಕವಾಗಿದೆ.
ಗೃಹ ಮತ್ತು ಗೊತ್ತಿಲ್ಲ ಖಾತೆ ಸಚಿವರಾದ ಡಾ. ಜಿ. ಪರಮೇಶ್ವ್ ಅವರೇ, ಓಲೈಕೆ ರಾಜಕಾರಣದ ನಶೆಯಲ್ಲಿರುವ ತೇಲಾಡುತ್ತಿರುವ ಸಿಎಂ ಸಿದ್ದರಾಮಯ್ಯನವರೇ, ಹಿಂದೂಗಳ ಸುರಕ್ಷತೆಯೂ ಸರ್ಕಾರದ ಜವಾಬ್ದಾರಿ ಎನ್ನುವುದನ್ನು ಮರೆಯದಿರಿ. ಬಾಗಲಕೋಟೆಯಲ್ಲಿ ಪುಂಡಾಟಿಕೆ ಮೆರೆದ ಈ ಮತಾಂಧ ಮುಸ್ಲಿಮರನ್ನು ಶೀಘ್ರವೇ ಬಂಧಿಸಿ, ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸಚಿವ ವಿ.ಸೋಮಣ್ಣ ಅವರು ಪ್ರತಿಕ್ರಿಯಿಸಿ, ಬಾಗಲಕೋಟೆಯಲ್ಲಿ ಮಸೀದಿ ಮೇಲಿಂದ ಮತಾಂಧ ಯುವಕರ ಗುಂಪು ಶಿವಾಜಿ ಜಯಂತಿಯ ಪ್ರಯುಕ್ತ ನಡೆದ ಮೆರವಣಿಗೆಯ ಮೇಲೆ ಕಲ್ಲು ಹಾಗೂ ಚಪ್ಪಲಿ ಎಸೆದು ದುಷ್ಕೃತ್ಯ ಮೆರೆದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಓಲೈಕೆಯ ರಾಜಕಾರಣದ ಪರಿಣಾಮವಾಗಿ ಇಂದು ಕರ್ನಾಟಕ ಅಶಾಂತಿಯ ತಾಣವಾಗಿ ಮಾರ್ಪಟ್ಟಿದ್ದು, ಶಾಂತಿಯುತವಾಗಿ ಸಾಗುವ ಹಿಂದೂ ಮೆರವಣಿಗೆಗಳ ಮೇಲೆ ಕಲ್ಲೆಸೆಯುವ ಪ್ರಕರಣಗಳು ಮುಂದುವರೆಯುತ್ತಲೇ ಇವೆ. ಇಂತಹ ಕಿಡಿಗೇಡಿಗಳನ್ನು ಶಿಕ್ಷಿಸುವ ಮೂಲಕ, ಈ ಮನಸ್ಥಿತಿಗೆ, ಮಾನಸಿಕತೆಗೆ ತಿಲಾಂಜಲಿ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬಾಗಲಕೋಟೆಯಲ್ಲಿ ದುಷ್ಕೃತ್ಯ ಎಸಗಿದ ಮತಾಂಧ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ, ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Advertisement