

ಬೆಂಗಳೂರು: ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಮಲ್ಲೇಶ್ವರಂನ ಕಚೇರಿಯಲ್ಲಿ ಸೋಮವಾರ ನಡೆದಿದ್ದು, ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಆಡಳಿತ ವೈಫಲ್ಯಗಳು,ಕೋಗಿಲು ಲೇಔಟ್ನಲ್ಲಿ ಅಕ್ರಮ ಮನೆಗಳ ತೆರವು, ಬ್ಯಾನರ್ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದಿರುವ ಮಾರಾಮಾರಿ, ಪರಿಷತ್ ಚುನಾವಣೆ ಮತ್ತು ವಿಧಾನಸಭೆ ಉಪ ಚುನಾವಣೆ ಸೇರಿ ಪ್ರಮುಖ ವಿಚಾರಗಳ ಬಗ್ಗೆ ನಾಯಕರು ಸಮಾಲೋಚನೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು, ಬಳ್ಳಾರಿಯಲ್ಲಿ ನಡೆದ “ಸಿನಿಮಾ ಶೈಲಿಯ” ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬರ ಹತ್ಯೆ ಪ್ರಕರಣದ ಕುರಿತು ಚರ್ಚಿಸಿ, ರಾಜ್ಯ ಸರ್ಕಾರದ ತನಿಖೆಯ ಮೇಲಿನ ವಿಶ್ವಾಸ ಕೊರತೆಯಿಂದಾಗಿ ಸಿಬಿಐ ತನಿಖೆಗೆ ಒತ್ತಾಯಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮುಂದಿನ ವಿಧಾನ ಪರಿಷತ್ ಚುನಾವಣೆಗಳ ಸಿದ್ಧತೆಗಳನ್ನೂ ಸಭೆಯಲ್ಲಿ ಪರಿಶೀಲಿಸಲಾಯಿತು. ಈ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಎಸ್ ಜೊತೆ ಒಗ್ಗಟ್ಟಾಗಿ ಚುನಾವಣೆ ಎದುರಿಸುವ ಕುರಿತು ವಿಜಯೇಂದ್ರ ಅವರು ಚರ್ಚೆ ನಡೆಸಲಿದ್ದಾರೆ. ಅಲ್ಲದೆ, ಗೃಹ ಲಕ್ಷ್ಮಿ ಯೋಜನೆಯಡಿ ರೂ.11,000 ಕೋಟಿ ಹಣ ನಾಪತ್ತೆ, ಮುಂದಿನ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳ ತಂತ್ರ ರೂಪಣೆ ಮತ್ತು ಬೆಂಗಳೂರಿನ ಹದಗೆಡುತ್ತಿರುವ ಪರಿಸ್ಥಿತಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಡ್ರಗ್ಸ್ ಕಾರ್ಖಾನೆಗಳು ಪತ್ತೆಯಾದ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಜನರ ಬಳಿಗೆ ಹೋಗಿ ಸಭೆಗಳನ್ನು ನಡೆಸಲು ಸಭೆ ನಿರ್ಧರಿಸಿದೆ, ಗೃಹ ಲಕ್ಷ್ಮಿ ಹಣ ಸೋರಿಕೆ, ಸ್ಥಳೀಯ ಸಮಸ್ಯೆಗಳು. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಕೈಗೆತ್ತಿಕೊಂಡು ಕಲಬುರಗಿ ಸೇರಿದಂತೆ ಕರ್ನಾಟಕದಾದ್ಯಂತ ಸರಣಿ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯುರಪ್ಪ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಸಂಸದ ಗೋವಿಂದ್ ಕಾರಜೋಳ ಶಾಸಕ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು.
Advertisement