

ಬಳ್ಳಾರಿ: ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಅವರ ಜನಪ್ರಿಯತೆ, ಪುತ್ಥಳಿ ಅನಾವರಣದ ವೈಭವ ನೋಡಲಾಗದೇ ಅಸೂಯೆ ಭಾವನೆಯಿಂದ ಬ್ಯಾನರ್ ಗಲಾಟೆ ನಡೆದಿದೆ ಎಂದು ಸತ್ಯ ಶೋಧನಾ ಸಮಿತಿ ವರದಿ ನೀಡಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬ್ಯಾನರ್‌ಗಲಭೆ ಬಳಿಕ ಸತ್ಯಾಸತ್ಯತೆಯನ್ನು ಅರಿಯಲು ಕಾಂಗ್ರೆಸ್‌ನಿಂದ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಸಮಿತಿ ಬಳ್ಳಾರಿಗೆ ಆಗಮಿಸಿ, ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರ ಜೊತೆ ಚರ್ಚಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸಹ ಶಾಸಕರ ತಪ್ಪಿಲ್ಲ. ಅವರು ನಮಗೆ ಸಹಕರಿಸಿದ್ದಾರೆ ಎಂದು ಹೇಳಿದ್ದಾರೆ. ಗಲಾಟೆ ನಡೆಯಲು ಜನಾರ್ದನ ರೆಡ್ಡಿ ಮನೆ ಮುಂದೆ ಇದ್ದ ಬ್ಯಾನರ್ ತೆಗೆದು ಹಾಕಿರುವುದೇ ಮುಖ್ಯ ಕಾರಣ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ ಎಂದು ಹೇಳಿದ್ದಾರೆ.
ಬ್ಯಾನರ್‌ಗಲಾಟೆ ತೀವ್ರ ನೋವುಂಟು ಮಾಡಿದೆ. ಈ ರೀತಿಯ ಘಟನೆ ಬಳ್ಳಾರಿಯಲ್ಲಿ ನಡೆಯಬಾರದಿತ್ತು. ಶಾಂತಿಗೆ ಹೆಸರಾದ ಜಿಲ್ಲೆಯಲ್ಲಿ ಅವಘಡ ನಡೆದು ಹೋಗಿದೆ. ಘಟನೆಯ ಬಗ್ಗೆ ತೀವ್ರ ಬೇಸರವಾಗಿದೆ. ನಮ್ಮವರಿಗೆ ಬುದ್ಧಿವಾದ ಹೇಳಿದ್ದೇನೆ. ಮುಂದೆಯೂ ಹೇಳುತ್ತೇನೆ. ಬಿಜೆಪಿಯವರು ಬುದ್ಧಿಹೇಳೋದು ಬಿಡೋದು ಅವರಿಗೆ ಬಿಟ್ಟದ್ದು ಎಂದು ತಿಳಿಸಿದರು.
ಘಟನೆಯ ದಿನ ಶಾಸಕರು ತಡವಾಗಿ ಬಂದಿದ್ದಾರೆ. ನಮ್ಮ ಶಾಸಕ ಯುವಕ. ಬಿಸಿ ರಕ್ತ ಇರುತ್ತದೆ. ಘಟನೆ ಬಳಿಕ ಕಾರ್ಯಕರ್ತರಿಗೆ ಏನಾಗಿದೆ ಎಂದು ತಿಳಿದುಕೊಳ್ಳಲು ಹೋಗಿದ್ದಾರೆ. ಶಾಸಕರು ಕಾನೂನು ಚೌಕಟ್ಟು ಮೀರಿ ನಡೆದುಕೊಂಡಿಲ್ಲ ಎಂದು ಪೊಲೀಸರೇ ತಿಳಿಸಿದ್ದಾರೆ. ಸತ್ಯಾಂಶ ಮುಚ್ಚಿಡಲು ಸಾಧ್ಯವಿಲ್ಲ. ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದು, ನಿಜಾಂಶ ಹೊರ ಬರುತ್ತದೆ. ನಾವು ಯಾವ ಪ್ರಭಾವವೂ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿ ಜನ ಶಾಂತಿ ಪ್ರಿಯರು. ನಾನು ಸಹ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಈ ಜಿಲ್ಲೆಯ ಜನರ ಬಗ್ಗೆ ಗೊತ್ತು. ಬಳ್ಳಾರಿಗೆ ಶಾಂತಿ ಬೇಕಾಗಿದೆ. ಹೀಗಾಗಿ ಕಾರ್ಯಕರ್ತರು ಉದ್ರೇಕಕ್ಕೆ ಒಳಗಾಗಬಾರದುಎಂದು ಮನವಿ ಮಾಡಿದರು.
ಇದೇ ವೇಳೆ ಗುಂಡಿನ ದಾಳಿಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಅವರ ಮರಣೋತ್ತರ ಪರೀಕ್ಷೆಯನ್ನು ಎರಡು ಬಾರಿ ನಡೆಸಲಾಗಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ತೀವ್ರವಾಗಿ ಕಿಡಿಕಾರಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸುಳ್ಳು ಹೇಳುವ, ಮಿಸ್‌ಗೈಡ್ ಮಾಡುವ ಚಟವಿದೆ. ಮಾಧ್ಯಮದ ಮುಂದೆ ಹೋಗೋ ಚಟವಿದೆ'. ಗಲಾಟೆಯಲ್ಲಿ ಮೃತಪಟ್ಟ ಯುವಕನ ದೇಹವನ್ನು 2 ಬಾರಿ ಪೋಸ್ಟ್ ಮಾರ್ಟಂ ಮಾಡಲಾಗಿದೆ ಎಂದು ಎಚ್‌ಡಿಕೆ ಮಾಧ್ಯಮಗಳಿಗೆ ಹೇಳಿದ್ದಾರೆ. ಅವರು ಬಳ್ಳಾರಿಗೆ ಬಂದಿಲ್ಲ. ಅವರಿಗೆ ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಿದರು.
ಬ್ಯಾನರ್ ಗಲಾಟೆ ವೇಳೆ ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಗಾಲಿ ಜನಾರ್ದನ ರೆಡ್ಡಿ ಅವರು ಹೇಳಿದ್ದು, ಬುಲೆಟ್ ಸಹ ಪ್ರದರ್ಶಿಸಿದ್ದಾರೆ. ಆದರೆ, ಬುಲೆಟ್ ಮೈಗೆ ಬಿತ್ತಾ, ಕೈಗೆ ಬಿದ್ದಿತಾ? ಯಾವ ಭಾಗಕ್ಕೆ ಬಿತ್ತು ಎಂದು ವ್ಯಂಗ್ಯವಾಡಿದರು. ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಅನುಮತಿಯೇ ಇರಲಿಲ್ಲ ಎಂದು ತಿಳಿಸಿದರು.
ಮೃತ ಕಾರ್ಯಕರ್ತನ ಕುಟುಂಬದೊಂದಿಗೆ ಪಕ್ಷ ನಿಲ್ಲುತ್ತದೆ
ಮೃತ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾತನಾಡಿ, ಪಕ್ಷವು ಮೃತ ಕಾರ್ಯಕರ್ತನ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದರು.
ಕಾರ್ಯಕರ್ತನ ಕುಟುಂಬದ ಸದಸ್ಯರಿಗೆ ಆರ್ಥಿಕ ನೆರವು ಅಥವಾ ಸರ್ಕಾರಿ ಉದ್ಯೋಗದ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಕುರಿತು ಕಾನೂನು ಚೌಕಟ್ಟಿನೊಳಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎಸ್‌ಪಿ ಪವನ್ ನೆಜ್ಜೂರ್ ಅವರನ್ನು ಅಧಿಕಾರ ವಹಿಸಿಕೊಂಡ ಏಳು ಗಂಟೆಗಳ ಒಳಗೆ ಅಮಾನತುಗೊಳಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಕುರಿತ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದರು.
Advertisement