ಖರ್ಗೆ, ಮನ್ಸೂರ್ ಖಾನ್, ಪವನ್ ಖೇರಾಗೆ ರಾಜ್ಯಸಭೆ ಟಿಕೆಟ್; ಮೇಲ್ಮನೆ ಚುನಾವಣೆ ಮೇಲೆ 'ಕೈ' ಕಮಾಂಡ್ ಫುಲ್ ಫೋಕಸ್, ತಂತ್ರ ರೂಪಿಸಲು ಬೆಂಗಳೂರಿಗೆ ರಾಹುಲ್..!

ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿ ಕಾನ್ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಅವರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ ಎನ್ನಲಾಗಿದೆ.
file photo
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆಗಳನ್ನು ಮತ್ತಷ್ಟು ಚುರುಕುಗೊಳಿಸಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಮೇಲ್ವಿಚಾರಣೆ ಹಾಗೂ ಅಂತಿಮ ಹಂತದ ರಾಜಕೀಯ ಕಸರತ್ತಿಗಾಗಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಶುಕ್ರವಾರ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ.

ಪಕ್ಷದ ಉನ್ನತ ಮೂಲಗಳ ಪ್ರಕಾರ, ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಪ್ರಮುಖ ನಾಯಕರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಹಾಗೂ ಅಂತಿಮ ಹಂತದ ತಂತ್ರಗಾರಿಕೆಗೆ ರಾಹುಲ್ ಗಾಂಧಿ ನೇರವಾಗಿ ಗಮನ ಹರಿಸಲಿದ್ದಾರೆಂದು ತಿಳಿದುಬಂದಿದೆ.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಾಜಿ ಅಭ್ಯರ್ಥಿ ಮನ್ಸೂರ್ ಅಲಿ ಕಾನ್ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಅವರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ ಎನ್ನಲಾಗಿದೆ.

ಇದೇ ವೇಳೆ ವಿಧಾನಸಭಾ ಕೋಟಾದಡಿ ಭರ್ತಿಯಾಗಲಿರುವ ಏಳು ವಿಧಾನ ಪರಿಷತ್ ಸ್ಥಾನಗಳಿಗೆ ಕಾಂಗ್ರೆಸ್ ಇದುವರೆಗೆ ನಾಲ್ವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೆಪಿಸಿಸಿ ಅಧ್ಯಕ್ಷ ಬಿಕೆ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಾಮಕನೂರ್, ಪಿವಿ ಮೋಹನ್ ಮತ್ತು ಶಿವಣ್ಣ ಮಳವಳ್ಳಿ ಅವರಿಗೆ ಟಿಕೆಟ್ ನೀಡಲಾಗಿದೆ.

ಆದರೆ, ಜೂನ್ 8ರ ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕಕ್ಕೂ ಮುನ್ನ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್‌ನಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ.

224 ಸದಸ್ಯರ ಕರ್ನಾಟಕ ವಿಧಾನಸಭೆಯಲ್ಲಿ ಪ್ರಸ್ತುತ ಎರಡು ಸ್ಥಾನಗಳು ಖಾಲಿ ಇವೆ. ಅವುಗಳಲ್ಲಿ ಒಂದು ಸ್ಥಾನ ಸಚಿವರಾಗಿದ್ದ ಡಿ.ಸುಧಾಕರ್ ಅವರ ನಿಧನದಿಂದ ತೆರವಾಗಿದೆ.

ಏಳು ಎಂಎಲ್‌ಸಿ ಸ್ಥಾನಗಳ ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಯೊಬ್ಬರಿಗೆ 29 ಪ್ರಥಮ ಪ್ರಾಶಸ್ತ್ಯದ ಮತಗಳು ಅಗತ್ಯ. ಕಾಂಗ್ರೆಸ್‌ಗೆ ಸ್ವತಂತ್ರ ಶಾಸಕರ ಬೆಂಬಲ ಸೇರಿ ಸುಮಾರು 136 ರಿಂದ 140 ಮತಗಳ ಬೆಂಬಲವಿದ್ದು, ಐದನೇ ಸ್ಥಾನವನ್ನು ಗೆಲ್ಲಲು ಇನ್ನೂ ಕೆಲ ಮತಗಳ ಅಗತ್ಯವಿದೆ.

file photo
ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್ ಪಕ್ಷದಿಂದ ಐವರು ಅಭ್ಯರ್ಥಿಗಳು ಕಣಕ್ಕೆ: ಸಿಎಂ ಡಿ.ಕೆ. ಶಿವಕುಮಾರ್

ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಹೆಚ್ಚುವರಿ ಸ್ಥಾನ ಗೆಲ್ಲುವ ಸಾಧ್ಯತೆಯನ್ನು ಪರೀಕ್ಷಿಸಬಹುದು. ಆದರೆ ಇದು ಅಪಾಯವಿಲ್ಲದ ನಡೆ ಅಲ್ಲ. ಬಿಜೆಪಿ ಕೂಡ ಮೂರನೇ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಸಂಖ್ಯೆಯಿಂದ ಸ್ವಲ್ಪ ಹಿಂದೆ ಇರುವುದರಿಂದ ಏಳನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅಡ್ಡಮತದಾನ, ಗೈರುಹಾಜರಿ ಅಥವಾ ಕೊನೆಯ ಕ್ಷಣದ ರಾಜಕೀಯ ಮಾತುಕತೆಗಳು ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

ಆರಂಭದಲ್ಲಿ ನಾಲ್ವರು ಅಭ್ಯರ್ಥಿಗಳನ್ನು ಮಾತ್ರ ಘೋಷಿಸುವ ಮೂಲಕ ಆಂತರಿಕ ಅಸಮಾಧಾನ ತಪ್ಪಿಸಲು ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಟ್ಟಿತ್ತು. ಆದರೆ, ಇದೀಗ ರಾಹುಲ್ ಗಾಂಧಿ ಅವರ ನೇರ ಹಸ್ತಕ್ಷೇಪದೊಂದಿಗೆ ಪಕ್ಷ ತನ್ನ ಪೂರ್ಣ ಶಕ್ತಿಯನ್ನು ಪ್ರದರ್ಶಿಸಿ ಐದನೇ ಸ್ಥಾನಕ್ಕಾಗಿ ಹೋರಾಡುವ ಮನಸ್ಥಿತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಐದನೇ ಅಭ್ಯರ್ಥಿಯ ಹೆಸರನ್ನು ಶುಕ್ರವಾರ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಜಕೀಯ ವಿಶ್ಲೇಷಕ ಪಿ.ಎಸ್. ಜಯರಾಮು ಅವರು ಮಾತನಾಡಿ, ರಾಜ್ಯಸಭೆ ಸ್ಥಾನಗಳ ಗೆಲುವು ಕಾಂಗ್ರೆಸ್‌ಗೆ ದೊಡ್ಡ ಸವಾಲಾಗದಿದ್ದರೂ, ಎಂಎಲ್‌ಸಿ ಚುನಾವಣೆಯಲ್ಲಿ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅಪಾಯವನ್ನು ಒಳಗೊಂಡ ತಂತ್ರವಾಗಿದೆ. ಆದರೆ, ಗೆಲುವು ಸಾಧಿಸುವಲ್ಲಿ ಶಿವಕುಮಾರ್ ಅವರ ರಾಜಕೀಯ ಸಾಮರ್ಥ್ಯದ ಮೇಲೆ ಪಕ್ಷ ವಿಶ್ವಾಸವಿಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ನಾಯಕತ್ವ ಬದಲಾವಣೆಗಳ ಬಳಿಕ ಪಕ್ಷದ ಏಕತೆಯನ್ನು ಕಾಪಾಡುವುದು ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖ ಗುರಿಯಾಗಿದೆ.

ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಫಲಿತಾಂಶ ಜೂನ್ 18ರಂದು ಪ್ರಕಟವಾಗಲಿದ್ದು, ಮುಂದಿನ ಕೆಲವು ದಿನಗಳು ರಾಜ್ಯ ರಾಜಕೀಯದಲ್ಲಿ ಮಹತ್ವ ಪಡೆದುಕೊಳ್ಳಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com