ಅಡ್ಡ ಮತದಾನದಿಂದ ಮೈತ್ರಿಗೆ ಯಾವುದೇ ಧಕ್ಕೆಯಿಲ್ಲ, 2028ರ ಚುನಾವಣೆಯಲ್ಲಿ BJP-JDS ಒಗ್ಗಟ್ಟಿನ ಹೋರಾಟ: HD ಕುಮಾರಸ್ವಾಮಿ

ಈ ಬೆಳವಣಿಗೆಯಿಂದ ನಮ್ಮ ಮೈತ್ರಿಗೆ ಯಾವುದೇ ಧಕ್ಕೆಯಾಗುವುದಿಲ್ಲ. 2028ರ ವಿಧಾನಸಭೆ ಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಎದುರಿಸಲಿವೆ. ಮಾಧ್ಯಮಗಳು ಈ ವಿಚಾರವನ್ನು ಅನಗತ್ಯವಾಗಿ ದೊಡ್ಡದಾಗಿ ಬಿಂಬಿಸಬಾರದು.
H D Kumraswamy
ಹೆಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ (ಕ್ರಾಸ್ ವೋಟಿಂಗ್) ಬಿಜೆಪಿ-ಜೆಡಿಎಸ್ ಮೈತ್ರಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 2028ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಮೈತ್ರಿಯಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದರು. ಬಿಜೆಪಿ ಮತ್ತು ಜೆಡಿಎಸ್ ನಡುವಿನ ಪರಸ್ಪರ ವಿಶ್ವಾಸ ಅಚಲವಾಗಿದೆ ಎಂದು ಹೇಳಿದರು.

“ಈ ಬೆಳವಣಿಗೆಯಿಂದ ನಮ್ಮ ಮೈತ್ರಿಗೆ ಯಾವುದೇ ಧಕ್ಕೆಯಾಗುವುದಿಲ್ಲ. 2028ರ ವಿಧಾನಸಭೆ ಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಎದುರಿಸಲಿವೆ. ಮಾಧ್ಯಮಗಳು ಈ ವಿಚಾರವನ್ನು ಅನಗತ್ಯವಾಗಿ ದೊಡ್ಡದಾಗಿ ಬಿಂಬಿಸಬಾರದು” ಎಂದು ತಿಳಿಸಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌ಗೆ 17 ಮತಗಳು ಇದ್ದವು. ಬಿಜೆಪಿಯಿಂದ 4-5 ಹೆಚ್ಚುವರಿ ಮತಗಳ ನಿರೀಕ್ಷೆ ಇತ್ತು. ಆದರೆ, ಆ ಮತಗಳು ಬಂದಿದ್ದರೂ ಗೆಲುವು ಸಾಧ್ಯವಾಗುತ್ತಿರಲಿಲ್ಲ ಎಂದು ಒಪ್ಪಿಕೊಂಡರು.

ನಾವು ಬಿಜೆಪಿಯ ಹೆಚ್ಚುವರಿ ಮತಗಳನ್ನು ಕೇಳಿದ್ದೆವು. ಒಟ್ಟು 22 ಮತಗಳು ಸಿಕ್ಕಿದ್ದರೂ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಅದು ಜೆಡಿಎಸ್ ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಿಸುತ್ತಿತ್ತು ಎಂದರು.

H D Kumraswamy
Watch | ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ! ವಿಜಯೇಂದ್ರ, ಕುಮಾರಸ್ವಾಮಿ ಹೇಳಿದ್ದಿಷ್ಟು...

ಇದೇ ವೇಳೆ ಅಡ್ಡ ಮತದಾನ ಹೊಸ ವಿಷಯವಲ್ಲ ಎಂದು ಹೇಳಿದ ಕುಮಾರಸ್ವಾಮಿ ಅವರು, ದೇಶದ ವಿವಿಧ ರಾಜ್ಯಗಳಲ್ಲೂ ಇಂತಹ ಘಟನೆಗಳು ನಡೆದಿವೆ ಎಂದು ಉದಾಹರಣೆ ನೀಡಿದರು. ಈ ವಿಷಯವನ್ನು ಅನಗತ್ಯ ವಿವಾದವನ್ನಾಗಿ ಮಾಡುವುದು ಸರಿಯಲ್ಲ ಎಂದು ಹೇಳಿದರು,

ಪರಿಷತ್ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೊದಲು ಜೆಡಿಎಸ್ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರೊಂದಿಗೂ ಚರ್ಚಿಸಿದ್ದೆ ಎಂದು ತಿಳಿಸಿದರು.

ಇದೇ ವೇಳೆ ಶೀಘ್ರದಲ್ಲೇ ನವದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ ಪರಿಷತ್ ಚುನಾವಣೆಯ ಬಳಿಕ ರಾಜ್ಯದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವುದಾಗಿ ಕುಮಾರಸ್ವಾಮಿ ಹೇಳಿದರು.

ಬಳಿಕ ಜೆಡಿಎಸ್ ಶಾಸಕರಿಗೆ ಸಂದೇಶ ನೀಡಿದ ಅವರು, “ಪಕ್ಷದಲ್ಲಿ ತಮ್ಮ ಭವಿಷ್ಯ ಇಲ್ಲ ಎಂದು ಭಾವಿಸುವವರು ಹೊರ ಹೋಗಲು ಸ್ವತಂತ್ರರು. ಆದರೆ, ಪಕ್ಷದಲ್ಲಿದ್ದುಕೊಂಡೇ ದ್ವಂದ್ವ ನೀತಿ ಅನುಸರಿಸುವುದು ಸರಿಯಲ್ಲ” ಎಂದು ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com