

ಬೆಂಗಳೂರು: 'ಕಾಂಗ್ರೆಸ್ ಒಂದು ಸಮದಾಯ ನೆಚ್ಚಿಕೊಂಡಿಲ್ಲ..' 'ಎರಡೂ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವ ವಿಶ್ವಾಸವಿದೆ ಎಂದು ಹಿರಿಯ ನಾಯಕ ರಂದೀಪ್ ಸುರ್ಜೇವಾಲ ಹೇಳಿದ್ದಾರೆ.
ಕರ್ನಾಟಕ ಉಪಚುನಾವಣೆ ರಣಾಂಗಣ ಕಾವೇರಿರುವಂತೆಯೇ ಟಿಕೆಟ್ ಗಾಗಿ ಜಟಾಪಟಿಯೂ ನಡೆಯುತ್ತಿದೆ. ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಂಗ್ರೆಸ್ ಪಕ್ಷದ ಟಿಕೆಟ್ ಘೋಷಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ನಮಗೇ ಟಿಕೆಟ್ ಬೇಕು ಎಂದು ಒಂದು ಸಮುದಾಯ ಪಟ್ಟು ಹಿಡಿದಿದೆ.
ಟಿಕೆಟ್ ಹಂಚಿಕೆ ಸಂಬಂಧ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ರಾಜ್ಯ ನಾಯಕರ ಜೊತೆ ಮಹತ್ವದ ಸಭೆ ನಡೆಸಿದ್ದು, ದಾವಣಗೆರೆ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಶಾಮನೂರು ಕುಟುಂಬ ಮತ್ತು ಮುಸ್ಲಿಂ ಸಮುದಾಯದ ನಾಯಕರ ನಡುವೆ ದೊಡ್ಡ ಹಗ್ಗಜಗ್ಗಾಟವೇ ನಡೆದಿದೆ.
ಈ ಸಭೆಯಲ್ಲಿ ಕಾಂಗ್ರೆಸ್ ನಾಯಕ, ಸಚಿವ ಜಮೀರ್ ಅಹಮ್ಮದ್ ಸೇರಿದಂತೆ ಹಲವು ಮುಸ್ಲಿಂ ನಾಯಕರು ರಾಜೀನಾಮೆ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಹೇಳಲಾಗಿದೆ. ನಿನ್ನೆ ರಾತ್ರಿಯಿಂದ ರಾಜ್ಯ ನಾಯಕರ ಜೊತೆ ಸಭೆ ನಡೆಸುತ್ತಿರುವ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮುಂದೆ ನಾಯಕರು ವಿವಿಧ ಬೇಡಿಕೆ ಮುಂದಿಟ್ಟಿದ್ದಾರೆ.
'ಕಾಂಗ್ರೆಸ್ ಒಂದು ಸಮದಾಯ ನೆಚ್ಚಿಕೊಂಡಿಲ್ಲ..': ಸುರ್ಜೆವಾಲ ತಿರುಗೇಟು
ಈ ನಡುವೆ ಜಮೀರ್ ಮತ್ತು ಮುಸ್ಲಿಂ ನಾಯಕರ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ರಂದೀಪ್ ಸುರ್ಜೇವಾಲ, 'ಕಾಂಗ್ರೆಸ್ ಒಂದು ಸಮದಾಯ ನೆಚ್ಚಿಕೊಂಡಿಲ್ಲ. ಎಲ್ಲಾ ಸಮುದಾಯ ನಮ್ಮ ಜೊತೆಗಿದೆ. ಟಿಕೆಟ್ ಸೂಕ್ತ ಅಭ್ಯರ್ಥಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ಕರ್ನಾಟಕದಲ್ಲಿ ಮುಂಬರುವ ಉಪಚುನಾವಣೆಗಳಲ್ಲಿ ಪಕ್ಷದ ಗೆಲುವಿನ ಬಗ್ಗೆ ಸುರ್ಜೇವಾಲ ವಿಶ್ವಾಸ ವ್ಯಕ್ತಪಡಿಸಿದ್ದು, 'ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸುತ್ತೆ. ಟಿಕೆಟ್ ಬೇಕೆಂದು ಎಲ್ಲರಿಗೂ ಆಸೆ, ಆಸಕ್ತಿ ಇದ್ದೇ ಇರುತ್ತೆ. ನ್ಯಾಯ ಕೊಡಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತದೆ. ಕರ್ನಾಟಕ ಜನ ನಮ್ಮ ಪರ ಇದ್ದಾರೆ. ಹಿಂದೆಯೂ ಚುನಾವಣೆ ಗೆದ್ದಿದ್ದೇವೆ, ಈಗಲೂ ಗೆಲ್ಲುತ್ತೇವೆ' ಎಂದು ಹೇಳಿದ್ದಾರೆ.
ಜಮೀರ್ ಪಟ್ಟೇನು?
ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಮುಸ್ಲಿಮ್ ನಾಯಕರಿಗೆ ನೀಡಬೇಕು ಎಂದು ಜಮೀರ್ ಪಟ್ಟು ಹಿಡಿದಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಿದೆ. ನಮ್ಮ ಸಮುದಾಯಕ್ಕೆ ಟಿಕೆಟ್ ನೀಡಲು ಮೌಲ್ವಿಗಳು,ಮುಸ್ಲಿಂ ಪ್ರಮುಖರು ಆಗ್ರಹಿಸಿದ್ದಾರೆ. ಹೀಗಾಗಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡುವುದಾಗಿ ಜಮೀರ್ ಅಹಮ್ಮದ್ ಹೇಳಿದ್ದಾರೆ ಎಂದು ವರದಿಯಾಗಿದೆ.
Advertisement