BJP ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಗೆ ಬ್ರೇಕ್; 2022ರ ಹಿಂದಿನ ಸ್ಥಿತಿಗೆ ತರಲು 'ಕೈ' ಸರ್ಕಾರ ಮುಂದು..!

ಇದೇ ವೇಳೆ, ಪಕ್ಷದ ಆಂತರಿಕ ವಿಚಾರಗಳ ಕುರಿತು ಮಾತನಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷನಾಗಿ ತಮಗೆ ಮಾತ್ರ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದರು.
Representation purpose only
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯ ತಿದ್ದುಪಡಿಗಳನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ರದ್ದುಗೊಳಿಸಿ, 2022ರ ಹಿಂದಿನ ಸ್ಥಿತಿಗೆ ಮರಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ನೀಡಿರುವ ಭರವಸೆಗಳನ್ನು ಈಡೇರಿಸುವಂತೆ ಅಲ್ಪಸಂಖ್ಯಾತರು ಮತ್ತು ದಲಿತ ಸಂಘಟನೆಗಳು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್ ಅವರು. 2022ಕ್ಕೂ ಮುನ್ನ ಇದ್ದ ಸ್ಥಿತಿಗೆ ಮತಾಂತರ ನಿಷೇಧ ಕಾಯ್ದೆಯನ್ನು ಮರುಸ್ಥಾಪಿಸಲಾಗುವುದು. ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

ಇದೇ ವೇಳೆ, ಪಕ್ಷದ ಆಂತರಿಕ ವಿಚಾರಗಳ ಕುರಿತು ಮಾತನಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷನಾಗಿ ತಮಗೆ ಮಾತ್ರ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಸಂಘಟನಾತ್ಮಕ ವಿಚಾರಗಳು ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳಿದ್ದರೆ ಅವುಗಳ ಬಗ್ಗೆ ಸಚಿವರು ಮತ್ತು ಹಿರಿಯ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ವಿಚಾರವನ್ನು ಮುಖ್ಯಮಂತ್ರಿ ಮತ್ತು ತಾವು ನಿರ್ವಹಿಸಲಿದ್ದು, ಅವರನ್ನು ಕಾಂಗ್ರೆಸ್‌ನಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ರಾಜಣ್ಣ ಅವರು ಮುಕ್ತವಾಗಿ ಮಾತನಾಡುತ್ತಾರೆ. ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಮಾತನಾಡಬಹುದು. ಆದರೆ, ಅವರು ಪಕ್ಷ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಅವರನ್ನು ಉಳಿಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಈ ವಿಚಾರವಾಗಿ ಮುಖ್ಯಮಂತ್ರಿ ಮತ್ತು ನಾನು ಅವರೊಂದಿಗೆ ಮಾತನಾಡುತ್ತೇವೆ. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬೇರೆ ಯಾರೂ ಮಾತನಾಡಬಾರದು. ಇತರ ಸಚಿವರು ಬಿಜೆಪಿಯನ್ನು ಟೀಕಿಸುವುದಕ್ಕೆ ಮಾತ್ರ ತಮ್ಮ ಮಾತುಗಳನ್ನು ಸೀಮಿತಗೊಳಿಸಬೇಕು. ಪಕ್ಷದ ಆಂತರಿಕ ವಿಚಾರಗಳನ್ನು ಮುಖ್ಯಮಂತ್ರಿ ಮತ್ತು ನಾನು ಮಾತ್ರ ಚರ್ಚಿಸಬೇಕು ಎಂದು ಹೇಳಿದರು.

Representation purpose only
ಕಾಂಗ್ರೆಸ್‌ನ ನರನಾಡಿದಲ್ಲೂ ಹರಿಯುತ್ತಿರುವ ತುಷ್ಟೀಕರಣ, ಓಲೈಕೆ: ಗುಲಾಮಿ ಮಾನಸಿಕತೆಯ ನಾಯಕರಿಗೆ, ಸ್ವಾತಂತ್ರ್ಯ ಹೋರಾಟದ ಪವಿತ್ರತೆ ಹೇಗೆ ಅರ್ಥವಾಗುತ್ತೆ!

ಇದೇ ವೇಳೆ ಕೆಪಿಸಿಸಿಯ ಸಂಘಟನಾತ್ಮಕ ಪುನರ್‌ರಚನೆ ಕುರಿತು ಮಾಹಿತಿ ನೀಡಿದ ಹರಿಪ್ರಸಾದ್ ಅವರು, ಪಕ್ಷದ ಕಾರ್ಯದರ್ಶಿಗಳ ನೇಮಕಕ್ಕಾಗಿ ಒಟ್ಟು 920 ಅರ್ಜಿಗಳು ಬಂದಿವೆ. ಈ ಪೈಕಿ ಬೆಂಗಳೂರಿನಿಂದಲೇ 308 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಬಿ.ಎಲ್. ಶಂಕರ್, ಎಚ್.ಕೆ. ಪಾಟೀಲ್, ನಸೀರ್ ಅಹ್ಮದ್ ಮತ್ತು ರಾಣಿ ಸತೀಶ್ ಅವರನ್ನೊಳಗೊಂಡ ಸಮಿತಿಗೆ ಅರ್ಜಿದಾರರ ಸಂದರ್ಶನ ನಡೆಸಿ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ಜವಾಬ್ದಾರಿ ನೀಡಲಾಗಿದೆ.

ಒಟ್ಟು 112 ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರತಿಯೊಬ್ಬರಿಗೂ ತಲಾ ಎರಡು ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ನೀಡಲಾಗುತ್ತದೆ. ಮುಂದಿನ 18 ತಿಂಗಳ ಕಾಲ ಅವರು ಪಕ್ಷದ ಸಂಘಟನೆಗಾಗಿ ಪೂರ್ಣಾವಧಿ ಕೆಲಸ ಮಾಡಬೇಕಾಗುತ್ತದೆ. ಇದೇ ಸಂಖ್ಯೆಯಲ್ಲಿ ಸಂಯೋಜಕರನ್ನೂ ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಪಕ್ಷದ ಸಂಘಟನೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಪ್ರಾತಿನಿಧ್ಯ ನೀಡುವುದರ ಜತೆಗೆ ಇತರ ಹಿಂದುಳಿದ ವರ್ಗಗಳು (ಒಬಿಸಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X