Cockroach Janta Partyಗೆ ಕಾಂಗ್ರೆಸ್ ಹಣಕಾಸು ನೆರವು, ಕರ್ನಾಟಕವೇನು ATM ಆಗಿದೆಯೇ..?

ದೇಶವನ್ನು ಅಸ್ಥಿರಗೊಳಿಸಲು ತೀವ್ರಗಾಮಿ ಹಾಗೂ ದೇಶವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುವುದು, ಅವುಗಳನ್ನು ಬೆಳೆಸುವುದು ಮತ್ತು ಹಣಕಾಸಿನ ನೆರವು ನೀಡುವುದು ಕಾಂಗ್ರೆಸ್‌ನ ದೀರ್ಘಕಾಲದ ಇತಿಹಾಸವಾಗಿದೆ.
R. Ashok Casual Images
ಆರ್. ಅಶೋಕ್
Updated on: 

ಬೆಂಗಳೂರು: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಗೆ ಕಾಂಗ್ರೆಸ್ ಹಣಕಾಸು ನೆರವು ನೀಡುತ್ತಿದೆ ಎಂದು ಆರೋಪಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ರಾಜ್ಯದ ತೆರಿಗೆದಾರರ ಹಣವನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನಿಂದ ಸಿಜೆಪಿಗೆ ಹಣ ಹರಿಯುತ್ತಿದೆ ಎಂಬ ಆರೋಪದ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿರುವ ಅವರು, ರಾಜ್ಯದ ಖಜಾನೆಯನ್ನು ಎಟಿಎಂನಂತೆ ಬಳಸಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ. ಈ ಆರೋಪಗಳು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧದ ಪ್ರತಿಭಟನೆಗಳು ಹಾಗೂ ಇತರ ಅಂಚಿನ ಸಂಘಟನೆಗಳ ಚಟುವಟಿಕೆಗಳಿಗೆ ಕಾಂಗ್ರೆಸ್ ಹಣಕಾಸು ನೆರವು ನೀಡಲಿದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿರುವಾಗ ನನಗೆ ಅಚ್ಚರಿಯಾಗಿಲ್ಲ. ಅವರು ಕೇವಲ ತಮ್ಮ ಮುಖವಾಡವನ್ನು ಕಳಚಿದ್ದಾರೆ ಎಂದು ಟೀಕಿಸಿದರು.

ದೇಶವನ್ನು ಅಸ್ಥಿರಗೊಳಿಸಲು ತೀವ್ರಗಾಮಿ ಹಾಗೂ ದೇಶವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುವುದು, ಅವುಗಳನ್ನು ಬೆಳೆಸುವುದು ಮತ್ತು ಹಣಕಾಸಿನ ನೆರವು ನೀಡುವುದು ಕಾಂಗ್ರೆಸ್‌ನ ದೀರ್ಘಕಾಲದ ಇತಿಹಾಸವಾಗಿದೆ.

ಕೆಲವೇ ದಿನಗಳ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ಮತ್ತು ಸಿಜೆಪಿ (CJP) ಒಂದೇ ಎಂದು ಬಹಿರಂಗವಾಗಿ ಹೇಳಿದ್ದರು. ಇದೀಗ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ನಿರ್ಭೀತ ಒಪ್ಪಿಗೆಯು ಈ ಅಪವಿತ್ರ ಮೈತ್ರಿಯನ್ನು ಮತ್ತಷ್ಟು ದೃಢಪಡಿಸಿದೆ ಎಂದು ಹೇಳಿದ್ದಾರೆ.

R. Ashok Casual Images
ಈ ದೇಶದಲ್ಲಿ ಸ್ಟಿಂಗ್ ಆಪರೇಷನ್ 'ಪಿತಾಮಹ' ಅಂತ ಯಾರಾದ್ರೂ ಇದ್ರೆ ಅದು ಮೋದಿ: ಹಳೇ ಘಟನೆ ಕೆದಕಿದ ಬಿಕೆ ಹರಿಪ್ರಸಾದ್

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ತೆರಿಗೆದಾರರ ಹಣ ಹಾಗೂ ಕಾಂಗ್ರೆಸ್‌ನ ನಿಧಿಯನ್ನು ರಾಜಕೀಯ ಪ್ರೇರಿತ, ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ರಾಹುಲ್ ಗಾಂಧಿಗೆ ತಮ್ಮ ಮೇಲೆಯೇ ಅಥವಾ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಮೇಲೆಯೇ ನಂಬಿಕೆ ಇಲ್ಲದಂತಾಗಿದೆ. ಹೀಗಾಗಿ, ತಮ್ಮ ರಾಜಕೀಯ ಕಾರ್ಯಸೂಚಿಯನ್ನು ಮುನ್ನಡೆಸಲು ನೇಹಾ ಬೋರಾ ಮತ್ತು ಸಿಜೆಪಿಯಂತಹ ಹೊರಗಿನವರನ್ನು ಅವರು ನಂಬುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಒಂದು ಪಕ್ಷದ ಹೈಕಮಾಂಡ್ ತನ್ನದೇ ಕಾರ್ಯಕರ್ತರ ಮಾತು ಕೇಳುವ ಬದಲು ಅಂಚಿನ ಸಂಘಟನೆಗಳ ಕಾರ್ಯಕರ್ತರ ಸೂಚನೆಗಳಿಗೆ ಅನುಗುಣವಾಗಿ ನಡೆದುಕೊಂಡರೆ, ಆ ಪಕ್ಷ ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತದೆ ಎಂಬುದಕ್ಕೆ ಇದು ನಿದರ್ಶನ.

'ಸಂವಿಧಾನ ಉಳಿಸಿ' ಎಂಬ ಘೋಷಣೆ ಕಾಂಗ್ರೆಸ್‌ಗೆ ಕೇವಲ ಕಪಟದ, ಅನುಕೂಲಕ್ಕೆ ತಕ್ಕ ಗುರಾಣಿಯಾಗಿದೆ. ಪ್ರಧಾನಿ ಮೋದಿ ವಿರುದ್ಧ ಅಪ್ರಾಮಾಣಿಕ ಹಾಗೂ ಅರಾಜಕತೆಯ ಅಭಿಯಾನಗಳನ್ನು ನಡೆಸಲು ಎಷ್ಟು ಹಣ ಬೇಕಾದರೂ ಖರ್ಚು ಮಾಡುವುದೇ ಕಾಂಗ್ರೆಸ್‌ನ ನಿಜವಾದ ಉದ್ದೇಶ ಎಂದು ಆರೋಪಿಸಿದ್ದಾರೆ.

ಈ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನರಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ ಅವರು, “ಸಿಜೆಪಿಗೆ ಹಣಕಾಸು ನೆರವು ನೀಡಲು ಮತ್ತು ದೇಶವನ್ನು ಅಸ್ಥಿರಗೊಳಿಸಲು ರಾಜ್ಯ ಸರ್ಕಾರದ ಖಜಾನೆಯನ್ನು ಎಟಿಎಂನಂತೆ ಬಳಸಲಾಗುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com