

ಬೆಂಗಳೂರು: ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿರಂತರವಾಗಿ ಬಿ ಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿಕೊಂಡು ಬಂದಿದ್ದರು. ಈ ಕಾರಣದಿಂದಲೇ ಅವರು ಬಿಜೆಪಿಯಿಂದ ಉಚ್ಛಾಟಿತಗೊಂಡಿದ್ದರು ಕೂಡ.
ಆದರೆ ಎರಡು ದಿನಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ಬಿ ವೈ ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಮುಖಾಮುಖಿಯಾಗಿದ್ದು, ಒಟ್ಟಿಗೇ ಒಂದೇ ಟೇಬಲ್ ನಲ್ಲಿ ಎದುರು ಬದುರು ಕುಳಿತು ಉಭಯ ಕುಶಲೋಪರಿ ಹಂಚಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆದವು.
ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆಯಾ ಎಂಬ ಮಾತುಗಳು, ಚರ್ಚೆಗಳು ಕೇಳಿಬರುತ್ತಿವೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮುಖತಃ ಭೇಟಿಯಾಗಿದ್ದಾರೆ. ಕುಶಲೋಪರಿಯ ನಂತರ, ಇಬ್ಬರು ನಾಯಕರು ಸುಮಾರು ಮೂವತ್ತು ನಿಮಿಷ ಮಾತುಕತೆ ನಡೆಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಆಯುಧ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭಾಗವಹಿಸಿ ಪೂಜಾ ವಿಧಿಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದಾಗ, ಹುಬ್ಬಳ್ಳಿಯ ಜೈನ ಮುನಿಗಳ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದಾಗ ಯತ್ನಾಳ್ ಅವರು ಅನಿರೀಕ್ಷಿತವಾಗಿ ಸಿಕ್ಕಿದಾಗ ಪರಸ್ಪರ ಮಾತುಕತೆ ನಡೆಸಿದೆವು. ಮುಂದೇನಾಗುತ್ತದೋ ಕಾದು ನೋಡೋಣ ಎಂದರು.
ಬಿಜೆಪಿ ಕಚೇರಿಯಲ್ಲಿ ನಡೆದ ಆಯುಧಪೂಜೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಸಹ ಉಪಸ್ಥಿತರಿದ್ದರು. ಸಾಂಪ್ರದಾಯಿಕ ಆಯುಧ ಪೂಜೆಯ ಸಂದರ್ಭದಲ್ಲಿ, ಪಕ್ಷದ ಕಚೇರಿಯಲ್ಲಿನ ವಾಹನಗಳು, ಉಪಕರಣಗಳು ಮತ್ತು ಕಚೇರಿ ಸಾಮಗ್ರಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ರಾಜ್ಯದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ವಿಜಯೇಂದ್ರ, ರೈತರಿಗೆ ನ್ಯಾಯ ಒದಗಿಸುತ್ತಿರುವುದು ಎನ್‌ಡಿಎ ಸರ್ಕಾರ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ (MSP) ಜಾರಿಗೆ ತಂದಿದ್ದು, ಎಥೆನಾಲ್ ಉತ್ಪಾದನೆಗೆ ಅವಕಾಶ ಕಲ್ಪಿಸುವುದರ ಜೊತೆಗೆ ಆರ್ಥಿಕ ನೆರವನ್ನೂ ನೀಡಿದೆ ಎಂದು ತಿಳಿಸಿದ್ದಾರೆ.
ಕಬ್ಬಿನ ಬೆಲೆ ವಸೂಲಿ ಅಥವಾ ರಿಕವರಿ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ. ಈಗಾಗಲೇ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದ್ದು, ಆ ಸಮಿತಿ ಶೀಘ್ರದಲ್ಲೇ ಕರ್ನಾಟಕಕ್ಕೆ ಭೇಟಿ ನೀಡಲಿದೆ ಎಂದು ಹೇಳಿದ್ದಾರೆ.