

ಬೆಂಗಳೂರು: ಟಿ. ನರಸಿಪುರದಲ್ಲಿ ಗಣೇಶೋತ್ಸವದ ಮೇಲೆ ವಿಧಿಸಿರುವ ನಿರ್ಬಂಧಗಳು ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ನೀಡಿದ ಎಚ್ಚರಿಕೆಯು ಇದೀಗ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದನ್ನು ಖಂಡಿಸಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಖ್ ಖರ್ಗೆ, ಅಹಿತಕರ ಘಟನೆಗಳಾಗದಂತೆ ಮುಂಜಾಗ್ರತಾ ಕ್ರಮವಾಗಿ ಅನುಮತಿ ನೀಡಲಾದ ರೂಟ್ ಮ್ಯಾಪ್ ನಂತೆಯೇ ಗಣಪತಿ ಮೆರವಣಿಗೆ ಸಾಗಬೇಕು ಎಂಬ ಪೊಲೀಸರ ನಿರ್ದೇಶನವೇ ಬಿಜೆಪಿಗರಿಗೆ ಧರ್ಮ ರಾಜಕಾರಣದ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಎಂದು ಭಾವಿಸಿದ್ದಾರೆ ಎಂದಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಪ್ರತಿಭಟನೆ ಎಂಬ ಸದಾರಮೆ ನಾಟಕ ಮಾಡಲು ಹಿಂದುತ್ವದ ವೇಷ ತೊಟ್ಟು ಮೈಸೂರಿನ ಟಿ. ನರಸೀಪುರಕ್ಕೆ ತೆರಳಿರುವ ಅಶೋಕ ಅವರೇ, ಈ ಹಿಂದೆ ನಿಮ್ಮದೇ ಬಾಯಿಯಿಂದ ಉದುರಿದ ಅಣಿಮುತ್ತುಗಳನ್ನು ಒಮ್ಮೆ ಕೇಳಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಿ! ಎಂದು ಆರ್ ಅಶೋಕ ಅವರ ಹಳೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ನಿಮ್ಮದೇ ಹೇಳಿಕೆಯಂತೆ, ನೀವೀಗ "ಧರ್ಮ ರಾಜಕಾರಣ" ಶುರು ಮಾಡಿರುವುದು ನಾಯಕ ಎನಿಸಿಕೊಳ್ಳುವುದಕ್ಕಾ ಅಥವಾ ಅಭದ್ರತೆಯಲ್ಲಿರುವ ವಿಪಕ್ಷ ನಾಯಕನ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕಾ?. ಅಶೋಕ್ ಅವರೇ, ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಮತ್ತು ರಾಜ್ಯದಲ್ಲಿ ಕೋಮುಸಂಘರ್ಷ ನಿಗ್ರಹಿಸುವ ವಿಷಯದಲ್ಲಿ ನಾನು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಪೊಲೀಸರ ಮೇಲೆ ನಿಮ್ಮ ದರ್ಪ ದೌರ್ಜನ್ಯಗಳನ್ನು ಸಹಿಸುವುದೂ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಟಿ.ನರಸಿಪುರದಲ್ಲಿ ಗಣೇಶೋತ್ಸವದ ಮೇಲೆ ವಿಧಿಸಿರುವ ನಿರ್ಬಂಧಗಳು ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಅವರ ಹೇಳಿಕೆ ಹಾಗೂ ಷರತ್ತುಗಳನ್ನು ಖಂಡಿಸಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.