ಜಲವಿವಾದಗಳಲ್ಲಿ ಕರ್ನಾಟಕಕ್ಕೇ ಅನ್ಯಾಯ..!

ಕರ್ನಾಟಕಕ್ಕೆ ಮಹಾರಾಷ್ಟ್ರ ರಾಜ್ಯದೊಂದಿಗೆ ಜಲವಿವಾದ ಕೂಡ ಇದೆ. ಕೃಷ್ಣಾನದಿ ನೀರಿನಲ್ಲಿ ಮಹಾರಾಷ್ಟ್ರದ ಪಾಲಿದೆ. ಈಗ ಕರ್ನಾಟಕದ ಪಾಲಿನ ನೀರಿನ ಮೇಲೂ ಮಹಾರಾಷ್ಟ್ರ ಕಣ್ಣು ಹಾಕಿದ್ದು, ಅದನ್ನು ತನಗೇ ನೀಡುವಂತೆ...
ಕೃಷ್ಣ ರಾಜ ಸಾಗರ ಅಣೆಕಟ್ಟು (ಸಂಗ್ರಹ ಚಿತ್ರ)
ಕೃಷ್ಣ ರಾಜ ಸಾಗರ ಅಣೆಕಟ್ಟು (ಸಂಗ್ರಹ ಚಿತ್ರ)

ಗಡಿ ವಿವಾದದಂತೆಯೇ ಕರ್ನಾಟಕ ರಾಜ್ಯದೊಂದಿಗೆ ಹಲವು ರಾಜ್ಯಗಳು ಜಲವಿವಾದದಲ್ಲಿ ತೊಡಗಿದ್ದು, ಈ ವಿವಾದ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಆದರೂ ಈ ವರೆಗೂ ಈ ಜಲ ವಿವಾದಗಳಿಗೆ ತಾರ್ಕಿಕ ಅಂತ್ಯಕಾಣಿಸುವಲ್ಲಿ ನಾವು ಯಶಕಂಡಿಲ್ಲ. ಗಡಿವಿವಾದದಂತೆಯೇ ಕರ್ನಾಟಕಕ್ಕೆ ಮಹಾರಾಷ್ಟ್ರ ರಾಜ್ಯದೊಂದಿಗೆ ಜಲವಿವಾದ ಕೂಡ ಇದೆ. ಕೃಷ್ಣಾನದಿ ನೀರಿನಲ್ಲಿ ಮಹಾರಾಷ್ಟ್ರದ ಪಾಲಿದೆ. ಈಗ ಕರ್ನಾಟಕದ ಪಾಲಿನ ನೀರಿನ ಮೇಲೂ ಮಹಾರಾಷ್ಟ್ರ ಕಣ್ಣು ಹಾಕಿದ್ದು, ಅದನ್ನು ತನಗೇ ನೀಡುವಂತೆ ನ್ಯಾಯಾಧೀಕರಣದ ಮೊರೆ ಹೋಗಿದ್ದು, ಕೃಷ್ಣಾ ನ್ಯಾಯ ಮಂಡಳಿಯ ತೀರ್ಪಿನಲ್ಲೂ ಕರ್ನಾಟಕಕ್ಕೆ ನಿರಾಸೆಯಾಗಿದೆ.

ಗೋವಾ-ಕರ್ನಾಟಕಕ್ಕೆ ಸಂಬಂಧಿಸಿದಂತೆ ಮತ್ತೊಂದು ಜಲವಿವಾದವಿದ್ದು, ಅದು ಮಹದಾಯಿ ನದಿಗೆ ಸಂಬಂಧಿಸಿದ್ದಾಗಿದೆ. ಮಹಾದಾಯಿ ನದಿಯನ್ನು ಗೋವಾದ ಜೀವನದಿ ಎಂದು  ಕರೆಯುತ್ತಾರೆ. ಸುಮಾರು 77 ಕಿ.ಮೀ. ಇರುವ ಈ ನದಿಯು ಕರ್ನಾಟಕದಲ್ಲಿ ಸುಮಾರು 29 ಕಿ.ಮೀ.ಹರಿಯುತ್ತದೆ. ರಾಜ್ಯದ ಬೆಳಗಾವಿಯ ಮೂಲಕ ಈ ನದಿ ಹರಿದು ಸಮುದ್ರ ಸೇರಿಕೊಳ್ಳುತ್ತದೆ.  ಕರ್ನಾಟಕದ ಮೂಲಕ ಹರಿದು ಹೋಗುವ ನೀರನ್ನು ಬಳಸಿಕೊಂಡು, ನೀರನ್ನು ಮಲಪ್ರಭಾ ಡ್ಯಾಂನಲ್ಲಿ ಸಂಗ್ರಹಿಸಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು  ಒದಗಿಸುವುದೇ ಮಹಾದಾಯಿ ಅಥವಾ ಕಳಸಾ-ಬಂಡೂರಿ ಯೋಜನೆಯ ಉದ್ದೇಶ. ಮಹದಾಯಿ ನದಿಯ 34 ಟಿಎಂಸಿ ನೀರನ್ನು ಗೋವಾ ಬಳಸುತ್ತಿದೆ. ಆದರೆ ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರಿಗಾಗಿ 7 ಟಿಎಂಸಿ ನೀರು ಬಳಸಲು ಕಳಸಾ ಬಂಡೂರಿ ಯೋಜನೆ ಜಾರಿಗೆ ಕರ್ನಾಟಕ ಯತ್ನಿಸಿದರೆ ಅದಕ್ಕೆ ಗೋವಾ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ಕೇಂದ್ರ ಸರ್ಕಾರ 2002ರಲ್ಲಿ ಯೋಜನೆಗೆ ಒಪ್ಪಿಗೆ ಕೊಟ್ಟಿತು. 2002ರ ಏ.30ರಂದು ಕಳಸಾ ಬಂಡೂರಿ ಕಾಲುವೆ ಮೂಲಕ ನೀರನ್ನು ಹರಿಸಲು ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯವೂ ಒಪ್ಪಿಗೆ ನೀಡಿತು.

ಆದರೆ, 2002ರ ಮೇನಲ್ಲಿ ಗೋವಾ ಸರ್ಕಾರ ಯೋಜನೆ ಬಗ್ಗೆ ತಕರಾರು ಎತ್ತಿತು. ಈ ನದಿ ವಿವಾದದ ಬಗ್ಗೆ ನ್ಯಾಯಾಧೀಕರಣ ರಚಿಸುವಂತೆ ಗೋವಾ ಸರ್ಕಾರ 2002ರಲ್ಲಿ ಕೇಂದ್ರ  ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆಯಿತು. 2002ರ ಸೆಪ್ಟೆಂಬರ್‌ನಲ್ಲಿ ಯೋಜನೆಗೆ ಕೇಂದ್ರ ಜಲ ಆಯೋಗ ತಡೆ ನೀಡಿತು. ನಂತರ ದೆಹಲಿಯಲ್ಲಿ ಕರ್ನಾಟಕ-ಗೋವಾ ಸಚಿವರ ಸಭೆ  ನಡೆಯಿತು. ಬೆಳಗಾವಿಯ ಜಿಲ್ಲೆಯ ಕಣಕುಂಬಿಯಲ್ಲಿ ಜಲಾಶಯ ನಿರ್ಮಿಸಲು 2006ರ ಸೆಪ್ಟೆಂಬರ್‌ನಲ್ಲಿ ಭೂಮಿ ಪೂಜೆ ಮಾಡಲಾಯಿತು. 2006ರ ನವೆಂಬರ್‌ನಲ್ಲಿ ಗೋವಾ ಸರ್ಕಾರ ಈ  ಯೋಜನೆಗೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಕಾಮಗಾರಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. 2010ರಲ್ಲಿ ಮಹದಾಯಿ ಜಲ ವಿವಾದ  ನ್ಯಾಯಾಧೀಕರಣವನ್ನು ನೇಮಕ ಮಾಡಲಾಯಿತು. 2014ರಲ್ಲಿ ನ್ಯಾಯಾಧೀಕರಣದ ತಂಡ ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. 2015ರ ಜೂನ್​ನಿಂದ ಯೋಜನೆ  ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಆರಂಭವಾಗಿದೆ.

ಕೃಷ್ಣೆಯಲ್ಲಿ ಪಾಲು ಹೆಚ್ಚಿಸಿಕೊಳ್ಳಲು ಆಂಧ್ರ ಪ್ರದೇಶ ಯತ್ನ
 ಕೃಷ್ಣಾ ನ್ಯಾಯಾಧೀಕರಣವು ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರಗಳಿಗೆ ಇಂತಿಷ್ಟು ನೀರು ಎಂದು ಸ್ಪಷ್ಟವಾಗಿ ಹಂಚಿಕೆ ಮಾಡಿದ್ದರೂ ತನ್ನ ಪಾಲು ಹೆಚ್ಚಿಸಿಕೊಳ್ಳಲು ಆಂಧ್ರ ಪ್ರದೇಶ ಸರ್ಕಾರ  ಸತತವಾಗಿ ಪ್ರಯತ್ನಿಸುತ್ತಿದೆ. ಈ ಮೂರು ರಾಜ್ಯಗಳು ಸೇರಿ ತಮಿಳುನಾಡಿನ ಚೆನ್ನೈಗೆ ತೆಲುಗು-ಗಂಗಾ ಯೋಜನೆಯಡಿ ಕುಡಿಯುವ ನೀರು ಪೂರೈಸಲು ಬಿಡುಗಡೆ ಮಾಡಬೇಕಾದ ನೀರಿನ  ಪ್ರಮಾಣವೂ ವಿವಾದದಲ್ಲಿದೆ. ಆಂಧ್ರದ ಮೆಹಬೂಬನಗರ ಜಿಲ್ಲೆಯ ಜುರಾಲ ಎಂಬಲ್ಲಿ ಕೃಷ್ಣಾ ನದಿಗೆ ಪ್ರಿಯದರ್ಶಿನಿ ಅಣೆಕಟ್ಟು ಕಟ್ಟಲಾಗಿದ್ದು, ಅದರಿಂದ ರಾಯಚೂರು ಜಿಲ್ಲೆ ಹತ್ತೂರು ಗ್ರಾಮದ  ನೂರಾರು ಎಕರೆ ಫಲವತ್ತಾದ ಕೃಷಿ ಭೂಮಿ ಮುಳುಗಿದೆ. ಅಣೆಕಟ್ಟಿನಲ್ಲಿ ಹೆಚ್ಚಿನ ನೀರು ಸಂಗ್ರಹಿಸಬಾರದೆಂದು ಕರ್ನಾಟಕ ಎಷ್ಟು ಸಲ ಹೇಳಿದರೂ ಕಿವುಡಾಗಿದೆ. ಪಾಲಾರ್ ಪೆನ್ನಾರ್ ನದಿ ಹರಿಯುವ ಕೋಲಾರ, ಚಿಕ್ಕಬಳ್ಳಾಪುರ, ಜಿಲ್ಲೆಗಳ ಬಂಜರು ಭೂಮಿಗೆ ನೀರುಣಿಸಲು ಕರ್ನಾಟಕ ರೂಪಿಸುವ ಪರಗೋಡು ಯೋಜನೆಗೆ ಆಂಧ್ರ ತಕರಾರು ತೆಗೆದಿದೆ. ರಾಯಚೂರು ತಾಲೂಕಿನಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸುತ್ತಿರುವ ’ಗೂಗಲ್ ಬ್ಯಾರೇಜ್ ಕೈಬಿಡಬೇಕೆಂದು ಆಂಧ್ರ ತಕರಾರು ಮಾಡಿದೆ.

೧೨೦ ವರ್ಷಗಳು ಕಳೆದರೂ ತೆರೆಕಂಡಿಲ್ಲ ತಮಿಳುನಾಡು-ಕರ್ನಾಟಕದ ಜಲವಿವಾದ

೧೨೦ ವರ್ಷಗಳ ಇತಿಹಾಸ ಹೊಂದಿದ ಕಾವೇರಿ ಜಲವಿವಾದಕ್ಕೆ ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪು ಹೊರಬಿದ್ದು, ನ್ಯಾಯಾಧೀಕರಣದ ಅವಧಿ ಮುಗಿದಿದ್ದರೂ ವಿವಾದ ಬಗೆಹರಿದಿಲ್ಲ. ತಮಿಳುನಾಡು ಹೆಚ್ಚು ನೀರು ಕೇಳುತ್ತಲಿದೆ. ಬ್ರಿಟೀಷರ ಕಾಲದ ಒಪ್ಪಂದವನ್ನೇ ಇಟ್ಟುಕೊಂಡು ತಮಿಳುನಾಡು ತನ್ನ ಹಕ್ಕು ಸಾಧಿಸಲು ಹೊರಟಿತು. ಇದನ್ನು ಬಗೆಹರಿಸಲು  ಕರ್ನಾಟಕದ ವಿರೋಧದ ನಡುವೆಯೂ ಕಾವೇರಿ ನ್ಯಾಯ ಮಂಡಳಿ ರಚನೆಯಾಯಿತು. ಕಾವೇರಿ ನ್ಯಾಯ ಮಂಡಳಿ ತನ್ನ ಮಧ್ಯಂತರ ಮತ್ತು ಅಂತಿಮ ವರದಿಗಳೆರಡರಲ್ಲೂ ಕಣ್ಣಿಗೆ ಕಾಣುವಂಥ  ಅನ್ಯಾಯವೆಸಗುವ ಮೂಲಕ ತಮಿಳುನಾಡಿಗೆ ಸಿಂಹಪಾಲು ನೀಡಿತು.

ಒಟ್ಟಾರೆ ಜಲವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪಾಲಿಗೆ ಪ್ರತೀ ಬಾರಿಯೂ ಅನ್ಯಾಯವೇ ಆಗುತ್ತಿದ್ದು, ನಮ್ಮ ರಾಜ್ಯದಲ್ಲಿ ಹರಿಯುವ ನದಿಯ ನೀರನ್ನು ನಾವು ಬಳಸಿಕೊಳ್ಳದಂತಾಗಿದೆ.  ಇನ್ನು ಕೆಆರ್ ಎಸ್ ಅಣೆಕಟ್ಟೆಯಲ್ಲಿ ನೀರೇ ಇಲ್ಲದ ಸಂದರ್ಭದಲ್ಲಿಯೂ ನೀರು ಬಿಡಿ ಎಂದು ಆದೇಶಿಸುವ ಕಾವೇರಿ ಪ್ರಾಧಿಕಾರ, ಸುಪ್ರೀಂ ಕೋರ್ಟ್ ಗಳು, ಇದರ ಪರಿಣಾಮವಾಗಿ ನಮ್ಮ ರೈತರು  ಪಡುತ್ತಿರುವ ಪಾಡು, ಪ್ರತಿಭಟನೆಗಳು ಇವೆಲ್ಲವೂ ಮಾಮೂಲಿ ವಿದ್ಯಮಾನಗಳು ಎಂಬಂತಾಗಿ ಹೋಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com