ಪುರುಷರೇ ಸೆಲಬ್ರೇಟ್ ಮಾಡದ ಪುರುಷರ ದಿನ: ಮೆನ್ಸ್ ಡೇ ಬಗ್ಗೆ ತಾರತಮ್ಯವೇಕೆ?

ಕಳೆದ ವರ್ಷ ನಾನು, ನನಗೆ ಪರಿಚಯವಿದ್ದ ಪುರುಷರಿಗೆ "ಹ್ಯಾಪಿ ಮೆನ್ಸ್ ಡೇ" ಎಂಬ ಸಂದೇಶ ರವಾನಿಸಿದಾಗ ಬಹುತೇಕ ಎಲ್ಲರ ಉತ್ತರ, "ಥ್ಯಾಂಕ್ ಯು" ಎನ್ನುವ ಬದಲಿಗೆ, "ಮೆನ್ಸ್ ಡೇ ನಾ? ಯಾವಾಗ?" ಎಂಬುದಾಗಿತ್ತು!
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
<strong>ಲೇಖಕಿ: ಅದಿತಿಮಾನಸ ಟಿ. ಎಸ್.</strong>
ಲೇಖಕಿ: ಅದಿತಿಮಾನಸ ಟಿ. ಎಸ್.

ಅದಿತಿಮಾನಸ, ಇಂಜಿನಿಯರಿಂಗ್ ಪದವೀಧರೆ. ಚಿಕ್ಕ ವಯಸ್ಸಿನಿಂದಲೂ ಕಥೆ ಹೇಳುವ ಹುಚ್ಚು, ಟಿವಿ, ಪ್ರಿಂಟ್, ರೇಡಿಯೋ ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ 10 ವರ್ಷಗಳಿಂದ ಕೆಲಸ. ಅಪ್ಪ ಮಾಡಿದ ಬಿಸಿ ಬಿಸಿ ಶುಂಠಿ ಚಹಾ ತುಂಬಾ ಇಷ್ಟ. ನಗುವುದು - ನಗಿಸುವುದು ಹಾಗು ಹಗಲುಗನಸು ಕಾಣುವುದು ಇನ್ನೂ ಇಷ್ಟ. ಉಪ್ಪಿಟ್ಟು ತಿನ್ನುವುದು ಕಷ್ಟ. ತಡ ರಾತ್ರಿ, ಕತ್ತಲೆ ಕೋಣೆಯಲ್ಲಿ ಒಬ್ಬಳೇ ಕುಳಿತು ಹಾರರ್ ಸಿನಿಮಾ ನೋಡುವುದು. ಅಮ್ಮನೊಂದಿಗೆ ಹರಟೆ ಇವೆಲ್ಲಾ ಹವ್ಯಾಸಗಳು

ಜವಾಬ್ದಾರಿಗಳ ಮುಂಡಾಸು ತೊಟ್ಟು ನಡೆಯುವಾಗ ಎಷ್ಟೇ ಕಷ್ಟವಾದರೂ ಕೈ ತೊಳೆದು ಓಡಿ ಹೋಗುವ ಹಾಗಿಲ್ಲ. ಎಷ್ಟೇ ಭಯವಾದರೂ, ಹೆದರಿಕೆ ತೋರಿಸುವ ಹಾಗಿಲ್ಲ. ದೈಹಿಕ ಅಥವಾ ಮಾನಸಿಕವಾಗಿ ನೋವಾದರೂ ಅಳುವ ಹಾಗಿಲ್ಲ. ಒಂದು ವೇಳೆ, ಈ ಭಾವನೆಗಳನ್ನು ವ್ಯಕ್ತ ಪಡಿಸಿದರೆ, "ನೀ ಗಂಡಸೇ ಅಲ್ಲ" ಎಂಬ ಟೀಕೆಗಳಿಗೆ ತುತ್ತಾಗಬೇಕಲ್ಲ! ಪುರುಷರ ಬಾಳು ಸುಲಭವಲ್ಲ. ಅವರು ಮಹಿಳೆಯರೊಂದಿಗೆ ಸ್ಪರ್ಧಿಸುತ್ತಿಲ್ಲ.

9 ತಿಂಗಳು ಗರ್ಭದಲ್ಲಿ ಹೊತ್ತು, ಹೆತ್ತು ಸಾಕುವ ತಾಯಿಗಾಗಿ ಅಮ್ಮಂದಿರ ದಿನವಿದೆ. ಅಜ್ಜಿ, ಅಕ್ಕ, ತಂಗಿ, ಅತ್ತೆ, ಸೊಸೆ, ಗೆಳತಿ, ಹೆಂಡತಿ, ಮಗಳು, ಮೊಮ್ಮಗಳು, ಮುಂತಾದ ರೂಪದಲ್ಲಿ ಬಾಳಲ್ಲಿ ಸುಖ ದುಃಖ ಹಂಚುವ ಹೆಂಗಸರಿಗೆ ಮಹಿಳಾ ದಿನವಿದೆ. ಅಂತೆಯೇ ಜೀವನದಲ್ಲಿ ಆಧಾರ, ಆದರ್ಶ ಆಗಿರುವ ಗಂಡಸರಿಗೂ ಪುರುಷರ ದಿನ ಮೀಸಲಿದೆ. ಆದರೆ, ಎಷ್ಟು ಜನರಿಗೆ ಇದು ಗೊತ್ತಿದೆ? ಎಷ್ಟು ಜನರು ಇದನ್ನು ಆಚರಿಸುತ್ತಾರೆ? ಯಾಕೀ ತಾರತಮ್ಯ! ನಾನು ಹೇಳುತ್ತೇನೆ.

ಅಪ್ಪಂದಿರ ದಿನಕ್ಕೂ ಕೆಲವು ವರ್ಷಗಳ ಹಿಂದಷ್ಟೇ ಜನಪ್ರಿಯತೆ ಸಿಗಲು ಶುರುವಾದದ್ದು. ಏಕೆಂದರೆ, ಅಮ್ಮಂದಿರ ದಿನದಂತೆ, ಅಪ್ಪಂದಿರ ದಿನ ಉಡುಗೊರೆಗಳ ಮಾರಾಟ ಹೆಚ್ಚಾಗಲಿ, ವ್ಯಾಪಾರ ವೃದ್ಧಿಸಲಿ ಎಂದು ಅಂಗಡಿ, ಮಾರುಕಟ್ಟೆಗಳು ಕೊಡುಗೆ, ರಿಯಾಯಿತಿ ಮತ್ತು ಬಹುಮಾನಗಳ ಆಮಿಷ ಒಡ್ಡಿ ಗ್ರಾಹಕರನ್ನು ತಮ್ಮಲ್ಲಿಗೆ ಸೆಳೆಯಲು ಮಾಡಿದ ಪ್ರಯತ್ನದ ಫಲವಿದು.

ಕಳೆದ ವರ್ಷ ನಾನು, ನನಗೆ ಪರಿಚಯವಿದ್ದ ಪುರುಷರಿಗೆ "ಹ್ಯಾಪಿ ಮೆನ್ಸ್ ಡೇ" ಎಂಬ ಸಂದೇಶ ರವಾನಿಸಿದಾಗ ಬಹುತೇಕ ಎಲ್ಲರ ಉತ್ತರ, "ಥಾಂಕ್ ಯು" ಎನ್ನುವ ಬದಲಿಗೆ, "ಮೆನ್ಸ್ ಡೇ ನಾ? ಯಾವಾಗ?" ಎಂಬುದಾಗಿತ್ತು! ನಾನು ಅವರ ಕಾಲು ಎಳೆಯುತ್ತಿದ್ದೇನೆ ಎಂಬುದೇ ಅವರ ವಾದವಾಗಿತ್ತು. ಕೊನೆಗೆ "ಗೂಗಲ್" ಮಹಾನುಭಾವರ ಮೊರೆ ಹೋದಮೇಲಷ್ಟೇ ಅವರಿಗೆಲ್ಲಾ ನನ್ನ ಮೇಲೆ ನಂಬಿಕೆ ಬಂದದ್ದು.

ಅಮ್ಮಂದಿರ ದಿನ ಎಂದಾಗ, ಒಂದು ದಿನದ ಮಟ್ಟಿಗೆ ಮಕ್ಕಳು ಅಡುಗೆ ಮಾಡುವುದೇನು! ಕಸಗುಡಿಸುವುದೇನು! ಪಾತ್ರೆ ತೊಳೆವುದೇನು! ಫೋಟೋ ಕ್ಲಿಕ್ಕಿಸಿ ಅವುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ಲೋಡ್ ಮಾಡುವುದೇನು! ಆದರೆ, ಅಪ್ಪಂದಿರ ದಿನ ಏನು ಮಾಡುವುದು? ಕಾರು, ಬೈಕ್ ತೊಳೆಯುವುದೋ, ಸಿನಿಮಾ ನೋಡುವುದೋ ಎಂದು ಭಾನುವಾರದ ಕಾರ್ಯಕ್ರಮ ಫಿಕ್ಸ್ ಮಾಡುವುದು. ಮಹಿಳೆಯರಿಗೆ ಉಡುಗೊರೆ ನೀಡಲು ಆಯ್ಕೆಗಳು ಒಂದಾ, ಎರಡಾ? ಪುರುಷರಿಗೆ ಅದೇ ವಾಲ್ಲೆಟ್ಟು, ವಾಚು! ತುಂಬಾ ಹತ್ತಿರದವರಾದರೆ ಪರ್ಫ್ಯೂಮು, ಶೇವಿಂಗ್ ಕಿಟ್, ಶರ್ಟ್, ಪ್ಯಾಂಟ್ ಇತ್ಯಾದಿ ನೀಡಬಹುದು. ಇಲ್ಲವಾದಲ್ಲಿ ಊಟ ಕೊಡಿಸಿ ಹರಕೆ ಸಂದಾಯ ಮಾಡುವುದು! 

ಆಚರಣೆಯ ವಿಚಾರದಲ್ಲಿ, ಪಾಪ, ಗಂಡಸರಿಗೆ ಅನ್ಯಾಯವಾಗುತ್ತಿದೆ. ಅವರಿಗೇನಾದರೂ ವಿಶೇಷವಾದದ್ದು ನೀಡಬೇಕೆಂದು ನಾನು, ನನ್ನ ಗೆಳತಿಯರು ಹಾಡಿಗೆ ಸಾಹಿತ್ಯ ಬರೆದು, ಡಾನ್ಸ್ ಮಾಡಿ, ವಿಡಿಯೋ ಶೂಟ್ ಮಾಡಿ, ಹ್ಯಾಪಿ ಮೆನ್ಸ್ ಡೇ ಎಂದು ವಿಶ್ ಮಾಡಿ ಕಳುಹಿಸಿಕೊಟ್ಟರೆ, "ಸೇಮ್ ಟು ಯು" ಅಂತ ಅಂದರು ದಡ್ಡ ಶಿಕಾಮಣಿಗಳು. ಅದಕ್ಕೆ… ಯಾರು ಈ ಮೆನ್ಸ್ ಡೇ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com