ಹೆಂಡತಿ ಗಂಡನಿಗಿಂತ ಚೆನ್ನಾಗಿ ದುಡಿದರೆ ಏನ್ ಪ್ರಾಬ್ಲಮ್ಮು?: ಬದಲಾಗದ ಸಮಾಜದಲ್ಲಿ ಬದಲಾಗುತ್ತಿರುವ ಸನ್ನಿವೇಶ

ಮಹಿಳೆ ಪುರುಷನಿಗಿಂತ ಹೆಚ್ಚು ದುಡಿದರೆ ಪುರುಷರ ಅಹಂ ಸಹಿಸೀತೇ? ಒಂದೊಮ್ಮೆ ಅವರವರು ಸುಖವಾಗಿದ್ದರೂ ನಮ್ಮ ಸಮಾಜ ಸುಮ್ಮನೇ ಬಿಟ್ಟೀತೇ? ಗಂಡನಿಗೆ ವ್ಯಂಗ್ಯ, ಕುಹಕ henpecked ಪಟ್ಟ ಕಟ್ಟಿಟ್ಟ ಬುತ್ತಿ. ಹೆಂಡತಿಗೆ ಬಜಾರಿ, ಅಹಂಕಾರ ಎಂಬ ಬಿರುದು ಖಚಿತ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
<strong>ಲೇಖಕಿ: ಡಾ. ಕೆ.ಎಸ್.ಚೈತ್ರಾ</strong>
ಲೇಖಕಿ: ಡಾ. ಕೆ.ಎಸ್.ಚೈತ್ರಾ

ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಡಾ.ಕೆ.ಎಸ್.ಚೈತ್ರಾ ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ನಡೆಸಿರುವರು. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಗೂ ಚೈತ್ರಾ ಭಾಜನರು. ಪ್ರವಾಸ ಹೋಗಿ ಸಣ್ಣ ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ. ಅಡಿಗೆ ಮಾಡೋದು-ಬಡಿಸೋದು-ತಿನ್ನೋದು ಎಲ್ಲವೂ ಇಷ್ಟ. ಪಾತ್ರೆ ತೊಳೆಯೋದು ಕಷ್ಟ. ಮಾತು-ಮೌನ ಎರಡೂ ಪ್ರಿಯ!


ಪಾಪ ಹೀಗಾಗಬಾರದಿತ್ತು! ನೋಡಲು ಚೆನ್ನಾಗಿದ್ದಳು, ವಿದ್ಯಾವಂತೆ, ಜಾಣೆ, ಮೊನ್ನೆ ತಾನೇ ಒಳ್ಳೆ ಪ್ರಮೋಶನ್ ಸಿಕ್ಕಿತ್ತು! ಈಗ ಇದೊಂತರಾ ಸೆಟ್‌ಬ್ಯಾಕ್’ ಎಂಬ ರೀತಿಯ ಗುಸುಗುಸು ಮದುವೆಮನೆಯಲ್ಲಿ ನಡೆಯುತ್ತಿತ್ತು. ಅಷ್ಟಕ್ಕೂ ಆಗಿದ್ದೇನು? ಕನಿಕರದ ದನಿಯಲ್ಲಿ ವಿವರಣೆ ಸಿಕ್ಕಿತು ‘ಅಯ್ಯೋ ನಿಮಗೆ ಗೊತ್ತಿಲ್ವಾ! ಹುಡುಗನಿಗೆ ಹುಡುಗಿಗಿಂತ ಕಡಿಮೆ ಸ್ಯಾಲರಿ. ತನಗೆ ವಯಸ್ಸು ಹೆಚ್ಚಾಯ್ತು ಅಂತ ಒಪ್ಪಿದಾಳೆ ಅನ್ನಿಸುತ್ತೆ. ಈ ಸಂಸಾರ ಸರಿ ಹೋದ ಹಾಗೆಯೇ’ ಬಹುಪಾಲು ಪೋಷಕರೇ ಮಕ್ಕಳಿಗೆ ಜೀವನಸಂಗಾತಿಯನ್ನು ನಿರ್ಧರಿಸುವ ಭಾರತೀಯ ಕುಟುಂಬಗಳಲ್ಲಿ ಮಗಳ ಮದುವೆ ಮಾಡುವಾಗ ‘ ಹುಡುಗನ ಸಂಬಳ/ಸ್ಯಾಲರಿ ’ ಇಂದಿಗೂ ಮುಖ್ಯ ಪ್ರಶ್ನೆಯೇ! 

ಕೈತುಂಬಾ ದುಡಿಯುತ್ತಿದ್ದ ವರ

ಅಡುಗೆಮನೆಯ ಚೌಕಟ್ಟನ್ನು ಹೆಣ್ಣುಮಕ್ಕಳು ಮೀರದ ಕಾಲದಲ್ಲಿ ಮನೆಯ ಯಜಮಾನ ಅಂದರೆ ಹುಡುಗಿಯ ಅಪ್ಪ/ ದೊಡ್ಡಪ್ಪ/ ಅಣ್ಣರ ಸಂಬಳದ ಜತೆ ವರನ ಸಂಬಳದ ತುಲನೆ ನಡೆಯುತ್ತಿತ್ತು. ಜಾತಿ, ಮತದ ಜತೆ ಅಂತಸ್ತು ಕೂಡಾ ಸರಿಸಮಾನವಾಗಿರುವುದು ವೈವಾಹಿಕ ಜೀವನದಲ್ಲಿ ಹುಡುಗಿ ಹೊಂದಿಕೊಳ್ಳುವ ಪ್ರಮುಖ ಅಂಶ ಎಂದು ಪರಿಗಣಿತವಾಗಿತ್ತು. ವರನ ರೂಪ, ವಯಸ್ಸು, ನಡತೆ, ಸ್ವಭಾವ, ಆರೋಗ್ಯ ಎಲ್ಲವೂ ಸಂಬಳ ಹೆಚ್ಚಿದಷ್ಟೂ ಅಚ್ಚುಮೆಚ್ಚು.

ಹುಡುಗಿಗೂ ಹುಡುಗ ಹೇಗೇ ಇರಲಿ ‘ಕೈ ತುಂಬಾ ದುಡಿಯುತ್ತಾನೆ’ ಎಂಬುದೇ ಹೆಮ್ಮೆಯ ವಿಷಯವಾಗಿತ್ತು. ತೊಂಬತ್ತರ ದಶಕದಲ್ಲಿ ಮಹಿಳೆಯರ ಶಿಕ್ಷಣ ಮಟ್ಟ ಹೆಚ್ಚಿತು, ನಿಧಾನವಾಗಿಯಾದರೂ ಮಹಿಳೆಯರು ತಮ್ಮ ಅಸ್ತಿತ್ವವನ್ನು ಹೊರಪ್ರಪಂಚದಲ್ಲಿ ಕಂಡುಕೊಳ್ಳಲು ಆರಂಭಿಸಿದರು. ಇದರೊಂದಿಗೇ ಮಹಾನಗರಗಳಲ್ಲಿ ಬದುಕು ಕಂಡುಕೊಳ್ಳಲು ಬರುವವರ ಸಂಖ್ಯೆ ಹೆಚ್ಚಿತು. 

ಸುಶೀಲ ಉದ್ಯೋಗಸ್ಥ ವಧು ಜಾಹೀರಾತು

ಮನೆಯ ಬಾಡಿಗೆ, ಅಗತ್ಯ ಸಾಮಗ್ರಿಗಳು, ಮಕ್ಕಳ ವಿದ್ಯಾಭ್ಯಾಸ ಹೀಗೆ ಆರ್ಥಿಕ ಹೊರೆ ಹೆಚ್ಚಿದಾಗ ಮಧ್ಯಮ ವರ್ಗದ ಕುಟುಂಬಗಳಲ್ಲಿ ಪತಿ- ಪತ್ನಿಯರಿಬ್ಬರೂ ಉದ್ಯೋಗಸ್ಥರಾಗಿ ದುಡಿಯುವ ಅನಿವಾರ್ಯತೆಯೂ ಹುಟ್ಟಿತು. ಹಾಗಾಗಿ ಜಾಹೀರಾತುಗಳಲ್ಲಿ ‘ಸುಶೀಲ, ಸುಂದರ, ವಿದ್ಯಾವಂತ, ಉದ್ಯೋಗಸ್ಥ ವಧು ಬೇಕಾಗಿದ್ದಾಳೆ’ ಜಾಹಿರಾತು ಸಾಮಾನ್ಯವಾಯಿತು. ಉದ್ಯೋಗಸ್ಥೆಯಾಗಿ ಮಹಿಳೆ ದುಡಿದರೂ ಯಜಮಾನನ ಪಟ್ಟ ಪುರುಷನಿಗೇ. 

ಮನೆ-ಅಡಿಗೆ-ಮಕ್ಕಳು ಜವಾಬ್ದಾರಿಯ ಜತೆ ಉದ್ಯೋಗ ಹೀಗೆ ಒಳಗೂ-ಹೊರಗೂ ಎಲ್ಲವನ್ನೂ ಸರಿದೂಗಿಸುವ ಬಹುಪಾತ್ರನಿರ್ವಹಣಾ ಸಾಮರ್ಥ್ಯ ಮಹಿಳೆಗೆ ಸಿದ್ಧಿಸಿತು!! ಉದ್ಯೋಗದ ವಿಷಯಕ್ಕೆ ಬಂದರೆ ಸಮಾನ ಶಿಕ್ಷಣ- ಪ್ರತಿಭೆ-ಅನುಭವ -ಸಾಮರ್ಥ್ಯವಿದ್ದರೂ ನೀಡುವ ವೇತನದಲ್ಲಿ ತಾರತಮ್ಯ ಎಲ್ಲಾ ರಂಗಗಳಲ್ಲಿಯೂ ಸಾಮಾನ್ಯ.ಲ್ಲಿಯೂ ಪುರುಷರದ್ದೇ ಮೇಲುಗೈ, ಆದ್ದರಿಂದ ತಾನು ಯಜಮಾನ ಎನ್ನುವ ಮನೋಸ್ಥಿತಿ ಮುಂದುವರಿಯಿತು.

ವೃತ್ತಿಜೀವನದ ನಂತರ ಮದುವೆ ಮನಸ್ಸು

ಹೊಸ್ತಿಲು ದಾಟಿ, ತಲೆಯನ್ನು ಮೇಲಕ್ಕೆತ್ತಿ ಗಟ್ಟಿ ಹೆಜ್ಜೆ ಇಟ್ಟ ಮಹಿಳೆಯರು ನಿಧಾನವಾಗಿ ಈ ತಾರತಮ್ಯವನ್ನು ಪ್ರಶ್ನಿಸಲಾರಂಭಿಸಿದರು. ಸಾಂಘಿಕವಾಗಿ ಇಂಥ ಪ್ರತಿಭಟನೆ ನಡೆದಾಗ ನಿರೀಕ್ಷಿತ ಮಟ್ಟದಲ್ಲಿ ಅಲ್ಲವಾದರೂ ಸಾಕಷ್ಟು ಸುಧಾರಣೆ ಆಗಿರುವುದನ್ನು ಅಲ್ಲಗಳೆಯುವಂತಿಲ್ಲ! ವೃತ್ತಿಜೀವನದಲ್ಲಿ ನೆಲೆಯೂರಿದ ನಂತರವೇ ಮದುವೆಗೆ ಮನಸ್ಸು ಮಾಡಿದಾಗ ಮತ್ತೆ ಸುದ್ದಿಯಾದದ್ದು ಹುಡುಗನ ಸ್ಯಾಲರಿ! 

ಹಿರಿಯರು ನಿಶ್ಚಯಿಸಿದ ಅಥವಾ ಪ್ರೇಮ ವಿವಾಹ ಏನೇ ಆದರೂ ಹುಡುಗಿಗಿಂತ ಹುಡುಗನ ಸಂಬಳ ಹೆಚ್ಚಿರಬೇಕು ಎಂಬುದು ನಮ್ಮಲ್ಲಿನ ಬಲವಾದ ನಂಬಿಕೆ. ಕಾರಣ ಇಷ್ಟೇ; ರೂಢಿಗತ ಸಿದ್ಧ ಪಾತ್ರಗಳ ಮಾದರಿಯಂತೆ ಪುರುಷ ಪ್ರಧಾನ, ಮಹಿಳೆ ಅಧೀನ. ಮಹಿಳೆ ಎಷ್ಟೇ ದುಡಿದರೂ ಹೆಚ್ಚಿನ ಸಂದರ್ಭಗಳಲ್ಲಿ ಹಣ- ಕಾಸಿನ ನಿರ್ವಹಣೆ ಪುರುಷನದ್ದೇ. ಆದರೆ ಮನೆಯ ಕೆಲಸ ಮಹಿಳೆಯದ್ದು. 

ಸ್ಥಾನ- ಮಾನ ಕೊಟ್ಟ ಸಂಬಳ

ಜವಾಬ್ದಾರಿ ಹಂಚಿಕೆ ಎಂಬ ಪದ ಕೇಳಲು ಸೊಗಸಾದರೂ ಅವೆರಡೂ ಸಮಾನವಲ್ಲ. ಮನೆಕೆಲಸಕ್ಕೆ ಬೆಲೆ ಇಲ್ಲ! ಸ್ಥಾನ- ಮಾನ ಎರಡೂ ಸಿಗುವುದು ಹೊರಗಿನ ಕೆಲಸದಿಂದ, ಅದು ನೀಡುವ ದುಡ್ಡಿನಿಂದ! ಪರಿಸ್ಥಿತಿ ಹೀಗಿರುವಾಗ ಮಹಿಳೆ ಪುರುಷನಿಗಿಂತ ಹೆಚ್ಚು ದುಡಿದರೆ ಆಕೆಗೆ ಹೆಚ್ಚು ಬೆಲೆ; ಇದನ್ನು ಪುರುಷರ ಅಹಂ ಸಹಿಸೀತೇ? ಒಂದೊಮ್ಮೆ ಅವರವರು ಸುಖವಾಗಿದ್ದರೂ ನಮ್ಮ ಸಮಾಜ ಸುಮ್ಮನೇ ಬಿಟ್ಟೀತೇ? ಗಂಡನಿಗೆ ವ್ಯಂಗ್ಯ, ಕುಹಕ henpecked ಪಟ್ಟ ಕಟ್ಟಿಟ್ಟ ಬುತ್ತಿ. ಹೆಂಡತಿಗೆ ಬಜಾರಿ, ಅಹಂಕಾರ ಎಂಬ ಬಿರುದು ಖಚಿತ. 

ಸಮಾಜದ ಈ ಎಲ್ಲಾ ಟೀಕೆ-ನಿರೀಕ್ಷೆಗಳು ಪುರುಷರ ಮನಸ್ಸಿನ ಮೇಲೆ ಒತ್ತಡವನ್ನು ಹೇರುತ್ತದೆ. ಮನದಲ್ಲಿ ಪತ್ನಿ- ಮಕ್ಕಳು-ಕುಟುಂಬ ಎಲ್ಲರೂ ತನ್ನನ್ನು ಕಡೆಗಣಿಸುತ್ತಾರೆ ಎಂಬ ಅಸುರಕ್ಷತೆ ಕಾಡುತ್ತದೆ.ಖಿನ್ನತೆ, ಹತಾಶೆಯಿಂದ ಪುರುಷರು ಬಳಲುವ ಸಾಧ್ಯತೆಯೂ ಇದೆ. ಇತ್ತ ಮಹಿಳೆಯರೂ ತಪ್ಪಿತಸ್ಥ ಭಾವನೆ, ಅತಿಯಾದ ನಿರೀಕ್ಷೆ, ಸ್ವಾನುಕಂಪದಿಂದ ತೊಳಲಾಡಬಹುದು. 

ಬೀಸಬೇಕಿದೆ ಬದಲಾವಣೆ ಗಾಳಿ

ಒಟ್ಟಿನಲ್ಲಿ ಸಂಸಾರದಲ್ಲಿ ಸಾರವೇ ಇಲ್ಲದಂತಾಗುವುದು ಸತ್ಯ. ಆದ್ದರಿಂದಲೇ ಮದುವೆಯ ವಿಷಯಕ್ಕೆ ಬಂದಾಗ ಮಹಿಳೆಯರನ್ನು ‘ನಿಮಗಿಂತ ಕಡಿಮೆ ಸಂಬಳ ಬರುವ ವರ ಪರವಾಗಿಲ್ಲವೇ?’ ಎಂದು ಪ್ರಶ್ನಿಸಿದರೆ ‘ಮೊದಲು ಪುರುಷರಿಗೆ ಅದನ್ನು ಒಪ್ಪಿಕೊಳ್ಳುವ, ಸಹಿಸುವ ಶಕ್ತಿ ಇದೆಯೇ’ ಎಂಬ ಮರುಪ್ರಶ್ನೆ ಎದುರಾಗುತ್ತದೆ. ಅಂದರೆ ಬದಲಾಗಬೇಕಾದದ್ದು ಇಬ್ಬರೂ! 

ಹಾಗೆಂದು ಇದು ಕೇವಲ ಪತಿ-ಪತ್ನಿಯ ನಡುವಿನ ಸಮಸ್ಯೆಯಲ್ಲ; ಬೆಳೆದುಬಂದ ಪರಿಸರ, ರೂಢಿಸಿಕೊಂಡ ಮನೋಭಾವ ಮತ್ತು ಸಮಾಜದ ಧೋರಣೆಯ ಒಟ್ಟು ಮೊತ್ತ. ಮಹಿಳೆ- ಪುರುಷರಿಬ್ಬರಿಗೂ ಸಂಸಾರದಲ್ಲಿ ಪ್ರೀತಿ ಮಾತ್ರವಲ್ಲ ಸಮಾನತೆ ಮತ್ತು ಘನತೆಯೂ ಮುಖ್ಯ. ಹೊರಗೆ ದುಡಿದು ತಂದ ದುಡ್ಡು ಮಾತ್ರವಲ್ಲ ಮನೆಯೊಳಗಿನ ಕೆಲಸವೂ ಬೆಲೆಯುಳ್ಳದ್ದಾಗಬೇಕು.ನಾನು ಎನ್ನುವುದಕ್ಕಿಂತ ನಾವು ಎನ್ನುವುದು ಸುಭದ್ರ. ಸಂಸಾರಕ್ಕೆ ಮಾತ್ರವಲ್ಲ ಆರೋಗ್ಯಕರ ಸಂಬಂಧ ಮತ್ತು ಸಮಾಜದ ತಳಹದಿ ಎಂಬುದು ಅರಿವಾದಾಗ ಮಾತ್ರ ಸ್ಯಾಲರಿ ‘ರ‍್ರಿ’ಯಾಗುವುದಿಲ್ಲ! 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com