
ನವದೆಹಲಿ: ಲಕ್ಷಾಂತರ ಕಿ.ಮೀ ದೂರದಲ್ಲಿರುವ ಆಕಾಶಕಾಯಗಳು ಆಗಾಗ ಭೂಮಿಯ ಸಮೀಪದಲ್ಲಿ ಹಾದುಹೋಗುವ ಮೂಲಕ ನಮ್ಮಲ್ಲಿ ರೋಮಾಂಚನವನ್ನುಂಟು ಮಾಡುತ್ತವೆ. ಆಕಾಶಕಾಯಗಳನ್ನು ನೋಡುವ ಇಂತಹುದೇ ಮತ್ತೊಂದು ಸುವರ್ಣಾವಕಾಶ ಒದಗಿಬಂದಿದ್ದು, ಸೋಮವಾರ ಬುಧ ಗ್ರಹ ಭೂಮಿಯ ಸಮೀಪದಲ್ಲಿ ಹಾದುಹೋಗಲಿದೆ.
ಸೂರ್ಯನ ಸುತ್ತ ಹಾದುಹೋಗುವ ಬುಧ ಗ್ರಹವನ್ನು ವೀಕ್ಷಿಸುವ ಅದೃಷ್ಟ ಈ ಬಾರಿ ಭಾರತೀಯರಿಗೆ ಒಲಿದಿದ್ದು, ಇದೇ ಮೇ 9ರಂದು ಅಂದರೆ ನಾಳೆ ಸೋಮವಾರ ಸರಿಯಾಗಿ ಸಂಜೆ 4.41ರಿಂದ ಬುಧ ಗ್ರಹವನ್ನು ಭೂಮಿಯಿಂದಲೇ ಕಣ್ತುಂಬಿಕೊಳ್ಳಬಹುದು. 7 ಗಂಟೆ ಮತ್ತು 30 ನಿಮಿಷದ ಕಾಲಾವಧಿಯಲ್ಲಿ ಸೂರ್ಯನನ್ನು ಹಾದು ಹೋಗುವ ಬುಧ ಗ್ರಹವನ್ನು ಜಪಾನ್ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳನ್ನು ಹೊರತುಪಡಿಸಿ ಏಷ್ಯಾದ್ಯಂತ ಹೆಚ್ಚಿನ ರಾಷ್ಟ್ರಗಳಲ್ಲಿ ವೀಕ್ಷಿಸಬಹುದು.
ಸುಮಾರು 2 ಗಂಟೆ 45 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿರುವ ಬುಧ ಸೂರ್ಯನಿಗೆ ಮುಖಮಾಡಿ ಸಂಚರಿಸಲಿದೆ. ಸೂರ್ಯ ಮುಳುಗುವ ಸಮಯಕ್ಕೆ ಹೊಂದಿಕೊಂಡಂತೆ ಬುಧ ಗ್ರಹವು ಪೂರ್ವದ ತುದಿಯಲ್ಲಿ, ಅಂದರೆ ಅಂಡಮಾನ್ ಮತ್ತು ನಿಕೋಬಾರ್ನ ಪೋರ್ಟ್ ಬ್ಲೇರ್ನತ್ತ ಸುಮಾರು 1 ಗಂಟೆ ಕಾಣಿಸಲಿದೆ. ಸುಮಾರು 2 ಗಂಟೆ 45 ನಿಮಿಷದ ನಂತರ ಸಂಪೂರ್ಣ ಪಶ್ಚಿಮ ದಿಕ್ಕಿಗೆ, ಅಂದರೆ ಗುಜರಾತ್ನ ದ್ವಾರಕದತ್ತ ಸಂಚರಿಸಿರುತ್ತದೆ ಎಂದು ಕೇಂದ್ರ ಭೂವಿಜ್ಞಾನ ಸಚಿವಾಲಯ ತಿಳಿಸಿದೆ.
ಭಾರತೀಯರು ಈ ಅವಕಾಶವನ್ನು ತಪ್ಪಿಸಿಕೊಂಡರೆ ಮತ್ತೆ ಬುಧ ಗ್ರಹ ವೀಕ್ಷಣೆಗೆ ಬರೊಬ್ಬರಿ 16 ವರ್ಷ ಕಾಯಬೇಕಾಗುತ್ತದೆ. ಅಂದರೆ ನವೆಂಬರ್ 13, 2032ರಲ್ಲಿ ಭಾರತಕ್ಕೆ ಬುಧ ಗ್ರಹದ ದರ್ಶನವಾಗಲಿದೆ. 2019 ನವೆಂಬರ್ 11ರಲ್ಲಿ ಬುಧ ಗ್ರಹ ಸೂರ್ಯನನ್ನು ಹಾದುಹೋಗಲಿದೆಯಾದರೂ. ಆದರೆ ಭಾರತಕ್ಕೆ ಕಾಣಿಸುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ನೋಡುವುದು ಹೇಗೆ?
ಯಾವುದೇ ದೃಷ್ಟಿ ವರ್ಧನವಿಲ್ಲದೆ, ಬರೀಗಣ್ಣಿಗೆ ವೀಕ್ಷಣೆ ಅಸಾಧ್ಯವಾಗಿದೆ. ಬೈನಾಕ್ಯುಲರ್ ಅಥವಾ ದೂರದರ್ಶಕದ ಸಹಾಯದಿಂದ ಸರಿಯಾದ ಸೌರ ಶೋಧಕವನ್ನು ಬಳಸಿ ಬುಧ ಗ್ರಹವನ್ನು ವೀಕ್ಷಿಸಬಹುದಾಗಿದೆ. ಸೂರ್ಯ, ಬುಧ ಮತ್ತು ಭೂಮಿ ಒಂದೇ ಸಾಲಿಗೆ ಬಂದಾಗ ಇಂತಹ ಬಾಹ್ಯಾಕಾಶ ಅಚ್ಚರಿ ನಡೆಯುತ್ತದೆ. ಬುಧ ಗ್ರಹ ಅತ್ಯಂತ ಸಣ್ಣದಾಗಿರುವುದರಿಂದ ಸೂರ್ಯನಿಗೆ ಸಣ್ಣ ಕಪ್ಪು ಚುಕ್ಕೆಯಿಟ್ಟಂತೆ ಕಾಣಲಿದೆ.
Advertisement