ಸಾರ್ಕ್ ದೇಶಗಳಿಗೆ ಭಾರತದ ಗಿಫ್ಟ್‌; ಜಿಸ್ಯಾಟ್‌- 9 ಉಡಾವಣೆಗೆ ಕ್ಷಣಗಣನೆ ಆರಂಭ

ಸಾರ್ಕ್ ರಾಷ್ಟ್ರಗಳಿಗೆ ಉಡುಗೊರೆ ರೂಪದಲ್ಲಿ ನೀಡಲು ಭಾರತ ಅಭಿವೃದ್ಧಿಪಡಿಸಿರುವ ಜಿಸ್ಯಾಟ್‌- 9 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ ಸಂಜೆ 4.57ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಪಗ್ರಹ ಉಡಾವಣೆಯಾಗಲಿದೆ.
ಇಸ್ರೋ ಚಿತ್ರ
ಇಸ್ರೋ ಚಿತ್ರ

ಶ್ರೀಹರಿಕೋಟಾ: ಸಾರ್ಕ್ ರಾಷ್ಟ್ರಗಳಿಗೆ ಉಡುಗೊರೆ ರೂಪದಲ್ಲಿ ನೀಡಲು ಭಾರತ ಅಭಿವೃದ್ಧಿಪಡಿಸಿರುವ ಜಿಸ್ಯಾಟ್‌- 9 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ ಸಂಜೆ 4.57ಕ್ಕೆ ಆಂಧ್ರಪ್ರದೇಶದ  ಶ್ರೀಹರಿಕೋಟಾದಿಂದ ಉಪಗ್ರಹ ಉಡಾವಣೆಯಾಗಲಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ಮಹತ್ವದ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದ್ದು, ಸಾರ್ಕ್ ದೇಶಗಳ ನಡುವೆ ಸಂಪರ್ಕ ವೃದ್ಧಿಸುವ ಸಲುವಾಗಿ ಈ ಭೂಸ್ಥಿರ ಸಂಪರ್ಕ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದೆ. ದಕ್ಷಿಣ ಏಷ್ಯಾ  ಸಂಪರ್ಕ ಉಪಗ್ರಹ ಎಂದು ಕರೆಯಲಾಗುವ ಈ ಸ್ಯಾಟಲೈಟ್‌ ನಿರ್ಮಾಣಕ್ಕೆ ಸುಮಾರು 450 ಕೋಟಿ ರು. ವೆಚ್ಚವಾಗಿದ್ದು, ಈ ಉಪಗ್ರಹ 12 ವರ್ಷಗಳ ಜೀವಿತಾವಧಿ ಹೊಂದಿದೆ. ಅಂತೆಯೇ 12 ಕೆಯು ಬ್ಯಾಂಡ್ ಗಳ ಮೂಲಕ  ಸಾರ್ಕ್ ರಾಷ್ಟ್ರಗಳಿಗೆ ಉಪಗ್ರಹ ನೆರವಾಗಲಿದ್ದು, ಸಂಪರ್ಕ, ವಿಪತ್ತಿನ ಸಂದರ್ಭದಲ್ಲಿ ಸಹಾಯ ಸೇರಿದಂತೆ ಹಲವಾರು ಅನುಕೂಲಗಳು ಈ ಉಪಗ್ರಹದಿಂದ ಲಭ್ಯವಾಗಲಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇಂದು ಸಂಜೆ ಸುಮಾರು 4.57ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜಿಎಸ್ ಎಲ್ ವಿ-ಎಫ್09 ಉಪಗ್ರಹ ವಾಹಕ ಜಿಸ್ಯಾಟ್-09 ಉಪಗ್ರಹವನ್ನು ಕಕ್ಷೆಗೆ ಸೇರಿಸಲಿದೆ.

2014ರ ಮೇ ತಿಂಗಳಿನಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಾರ್ಕ್ ರಾಷ್ಟ್ರಗಳಿಗಾಗಿ ಉಪಗ್ರಹವೊಂದನ್ನು ಅಭಿವೃದ್ಧಿಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಸಂಸ್ಥೆಯನ್ನು ಕೇಳಿಕೊಂಡಿದ್ದರು. 8  ಸಾರ್ಕ್ ರಾಷ್ಟ್ರಗಳು ಈ ಉಪಗ್ರಹ ಯೋಜನೆಗೆ ಒಪ್ಪಿಗೆ ನೀಡಿದ್ದವು. ಆದರೆ ಪಾಕಿಸ್ತಾನ ಮಾತ್ರ ಯೋಜನೆಯಿಂದ ಹೊರನಡೆದಿತ್ತು.

ಇತ್ತೀಚೆಗಷ್ಟೇ ತಮ್ಮ ‘ಮನ್‌ ಕೀ ಬಾತ್‌' ರೇಡಿಯೋ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ್ದ ಪ್ರಧಾನಿ ಮೋದಿ, "ದಕ್ಷಿಣ ಏಷ್ಯಾ ಉಪಗ್ರಹವು ನೆರೆರಾಷ್ಟ್ರಗಳಿಗೆ ಭಾರತ ನೀಡುತ್ತಿರುವ ಬೆಲೆ ಕಟ್ಟಲಾಗದ ಉಡುಗೊರೆಯಾಗಿದೆ"  ಎಂದು ಬಣ್ಣಿಸಿದ್ದರು.

ಉಪಗ್ರಹದ ಅನುಕೂಲಗಳೇನು?
ಭಾರತದ ಈ ಮಹತ್ವಾಕಾಂಕ್ಷಿ ಉಪಗ್ರಹ ಯೋಜನೆಯಿಂದಾಗಿ ದೂರಸಂಪರ್ಕ, ಡಿಟಿಎಚ್‌, ಟೆಲಿ ಶಿಕ್ಷಣ, ಟೆಲಿಮೆಡಿಸಿನ್‌ ಹಾಗೂ ವಿಪತ್ತು ನಿರ್ವಹಣಾ ನೆರವು ಈ ಉಪಗ್ರಹದಿಂದ ಸಾರ್ಕ್ ದೇಶಗಳಿಗೆ ಲಭ್ಯವಾಗಲಿದೆ. ಭೂಕಂಪ,  ಚಂಡಮಾರುತ, ಪ್ರವಾಹ ಹಾಗೂ ಸುನಾಮಿ ಉಂಟಾದಾಗ ಅದನ್ನು ಎದುರಿಸುವ ಸಂಬಂಧ ನೇಪಾಳ, ಭೂತಾನ್‌, ಬಾಂಗ್ಲಾದೇಶ ಆಫ್ಘಾನಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಭಾರತ ಸೇರಿ ಏಳೂ ರಾಷ್ಟ್ರಗಳು ಪರಸ್ಪರ  ಚರ್ಚಿಸಿಕೊಳ್ಳಲು ಸುರಕ್ಷಿತ ‘ಹಾಟ್‌ ಲೈನ್‌'ವೊಂದನ್ನು ಈ ಉಪಗ್ರಹದಿಂದಾಗಿ ತೆರೆಯಬಹುದಾಗಿದೆ.

ಇನ್ನು ಸಾರ್ಕ್ ದೇಶಗಳ ಪೈಕಿ ಭಾರತ ಹೊರತುಪಡಿಸಿ ಕೇವಲ 3 ರಾಷ್ಟ್ರಗಳು ಮಾತ್ರವೇ ಉಪಗ್ರಹ ಹೊಂದಿವೆ. ಚೀನಾ ನೆರವಿನಿಂದ ಪಾಕಿಸ್ತಾನ, ಶ್ರೀಲಂಕಾ ಈ ವ್ಯವಸ್ಥೆ ಹೊಂದಿದ್ದರೆ, ಆಫ್ಘಾನಿಸ್ತಾನ ಕೂಡ ಉಪಗ್ರಹ ಹೊಂದಿದೆ.  ಬಾಂಗ್ಲಾದೇಶ ಇದೇ ವರ್ಷದಲ್ಲಿ ಉಪಗ್ರಹ ವ್ಯವಸ್ಥೆ ಹೊಂದಲು ಉದ್ದೇಶಿಸಿದೆ. ನೇಪಾಳ ಈಗಾಗಲೇ 2 ಉಪಗ್ರಹಗಳಿಗಾಗಿ ಟೆಂಡರ್‌ ಕರೆದಿದ್ದು, ಇದೀಗ ಆ ದೇಶಗಳಿಗೆ ಉಚಿತ ಉಪಗ್ರಹ ಸೇವೆ ಒದಗಿಸುವ ಮೂಲಕ ಅವುಗಳನ್ನು  ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮೋದಿ ಆಲೋಚನೆಯಾಗಿದೆ ಎಂದು ತಜ್ಞರು ಆಭಿಪ್ರಾಯಪಟ್ಟಿದ್ದಾರೆ.

ಉಪಗ್ರಹ ವಿಶೇಷತೆ ಏನು?
ಬಹುಪಯೋಗಿ ಮತ್ತು ಬಹು ಉದ್ದೇಶಿತ ಈ ಜಿಸ್ಯಾಟ್‌- 9 ಸಾರ್ಕ್ ಉಪಗ್ರಹದಲ್ಲಿ 12 ಟ್ರಾನ್ಸ್‌ ಪಾಂಡರ್‌ಗಳಿವೆ. ಪ್ರತಿ ದೇಶಕ್ಕೂ ಕಡೇ ಪಕ್ಷ ಒಂದು ಟ್ರಾನ್ಸ್‌ಪಾಂಡರ್‌ ಆದರೂ ಸಿಗಲಿದೆ. ಅದನ್ನು ಬಳಸಿ ಕಾರ್ಯಕ್ರಮ ಪ್ರಸಾರ  ಮಾಡಬಹುದು. ಆದರೆ ಅದಕ್ಕೆ ಬೇಕಾದ ಮೂಲ ಸೌಕರ್ಯ ಅಭಿವೃದ್ಧಿಪಡಿಸಿ ಕೊಳ್ಳಬೇಕಾಗುತ್ತದೆ. ಅದಕ್ಕೂ ನೆರವು ನೀಡಲು ಸಿದ್ಧ ಎಂದು ಭಾರತ ಈಗಾಗಲೇ ಹೇಳಿದೆ. ಸಾರ್ಕ್ ದೇಶಗಳಿಗೆ ಭಾರತ ನೀಡುತ್ತಿರುವ ಉಪಗ್ರಹಕ್ಕೆ ರು.  450 ಕೋಟಿ ವೆಚ್ಚವಾಗಿದೆ. ಇಷ್ಟೂ ಹಣವನ್ನು ಭಾರತ ಸರ್ಕಾರವೇ ವ್ಯಯಿಸುತ್ತಿದ್ದು, ಸಾರ್ಕ್ ದೇಶಗಳು ನಯಾಪೈಸೆ ಕೊಟ್ಟಿಲ್ಲ. ಹೀಗಾಗಿಯೇ ಇದು ಉಡುಗೊರೆ ಎಂದು ಬಣ್ಣಿಸಲಾಗಿದೆ. 12 ವರ್ಷ ಜೀವಿತಾವಧಿ ಇರುವ ಈ ಉಪಗ್ರಹ  ಸುಮಾರು 2, 230 ಕೆ.ಜಿ. ತೂಕವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com