ವಿಶ್ವಾದ್ಯಂತ 77 ಕೋಟಿ ಇಮೇಲ್ ವಿಳಾಸ, 2.1 ಕೋಟಿ ಪಾಸ್​ವರ್ಡ್ ಲೀಕ್!

ಇಂಟರ್ನೆಟ್ ಇತಿಹಾಸದಲ್ಲೇ ವಿಶ್ವದ ಅತೀ ದೊಡ್ಡ ಆನ್ ಲೈನ್ ಭದ್ರತಾ ಮಾಹಿತಿ ಸೋರಿಕೆಯಾಗಿದ್ದು, ವಿಶ್ವಾದ್ಯಂತ ಸುಮಾರು 77 ಕೋಟಿ ಇಮೇಲ್ ವಿಳಾಸ ಮತ್ತು 2.1 ಕೋಟಿ ಪಾಸ್​ವರ್ಡ್ ಲೀಕ್ ಆಗಿವೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಇಂಟರ್ನೆಟ್ ಇತಿಹಾಸದಲ್ಲೇ ವಿಶ್ವದ ಅತೀ ದೊಡ್ಡ ಆನ್ ಲೈನ್ ಭದ್ರತಾ ಮಾಹಿತಿ ಸೋರಿಕೆಯಾಗಿದ್ದು, ವಿಶ್ವಾದ್ಯಂತ ಸುಮಾರು 77 ಕೋಟಿ ಇಮೇಲ್ ವಿಳಾಸ ಮತ್ತು 2.1 ಕೋಟಿ ಪಾಸ್​ವರ್ಡ್ ಲೀಕ್ ಆಗಿವೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, 77 ಕೋಟಿಗೂ ಹೆಚ್ಚು ಇಮೇಲ್ ವಿಳಾಸಗಳು ಸಾರ್ವಜನಿಕರಿಗೆ ಲೀಕ್ ಆಗಿದ್ದು, ಅಷ್ಟು ಮಾತ್ರವಲ್ಲದೇ ಸುಮಾರು 2.1 ಕೋಟಿ ಪಾಸ್ ವರ್ಡ್​ಗಳೂ ಲೀಕ್ ಆಗಿವೆ ಎಂದು ವರದಿ ಮಾಡಿದೆ,. ವರದಿಯ ಅನ್ವಯ ಮೆಗಾ ಎಂಬ ಶೇರಿಂಗ್ ವೆಬ್ ಸೈಟ್ ನಲ್ಲಿ ಲೀಕ್ ಆಗಿರುವ ಈ ಎಲ್ಲಾ ಡೇಟಾಗಳು ಮೊದಲು ಪ್ರಕಟವಾಗಿದ್ದು ಟ್ರಾಯ್ ಹಂಟ್ ಎಂಬ ಸೆಕ್ಯೂರಿಟಿ ರಿಸರ್ಚರ್ ಅವರ ಕಣ್ಣಿಗೆ ಬಿದ್ದಿದೆ. ಇದಾದ ಬಳಿಕ ಮೆಗಾ ವೆಬ್ ಸೈಟ್​ನಿಂದ ಈ ಡೇಟಾವನ್ನು ತೆಗೆದುಹಾಕಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವರದಿಯಲ್ಲಿರುವಂತೆ ಬಹುತೇಕ ವೆಬ್ ಸೈಟ್​ಗಳು ಲಾಗಿನ್ ಹಾಗೂ ಪಾಸ್ ವರ್ಡ್​ಗಳನ್ನು ಯಥಾವತ್ತಾಗಿ ಸಂಗ್ರಹಿಸುವುದಿಲ್ಲ. ಸಂಕೀರ್ಣ ನಂಬರ್ ಗಳಿರುವ ಹ್ಯಾಷ್ ರೂಪದಲ್ಲಿ ಪಾಸ್ ವರ್ಡ್ ಸಂಗ್ರಹವಾಗುತ್ತದೆ. ಈ ಹ್ಯಾಷ್ ಗಳು ನಮ್ಮ ಪಾಸ್ವರ್ಡ್​ಗೆ ಕವಚದಂತೆ ಕಾರ್ಯನಿರ್ವಹಿಸುತ್ತವೆ. ಹ್ಯಾಕರ್ ಗಳು ಇದೇ ಹ್ಯಾಷ್ ಗಳನ್ನ ಕ್ರ್ಯಾಕ್ ಮಾಡಿ ಪಾಸ್ವರ್ಡ್​ಗಳನ್ನ ಹ್ಯಾಕ್ ಮಾಡಿದ್ದಾರೆ ಎನ್ನಲಾಗಿದೆ. ಇಂಥಹ ಸುಮಾರು 2.1 ಕೋಟಿ ಪಾಸ್ವರ್ಡ್​ಗಳು ಲೀಕ್ ಆಗಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಹೇಳಲಾಗಿದೆ.
ನಿಮ್ಮ ಡೇಟಾ ಲೀಕ್ ಆಗಿದೆಯಾ? ಪರೀಕ್ಷಿಸುವುದು ಹೇಗೆ?
ಸೆಕ್ಯೂರಿಟಿ ರೀಸರ್ಚರ್ ಟ್ರಾಯ್ ಹಂಟ್ ಅವರು ತಮ್ಮ 'Have I Been Pwned' ವೆಬ್ ಸೈಟ್​ನಲ್ಲಿ ಈ ಎಲ್ಲಾ ಡೇಟಾವನ್ನು ಫೀಡ್ ಮಾಡಿದ್ದಾರೆ. ಯಾರಿಗಾದರೂ ಅವರ ಇಮೇಲ್ ವಿಳಾಸ ಮತ್ತು ಪಾಸ್ ವರ್ಡ್ ಲೀಕ್ ಆಗಿದೆ ಎಂದೆನಿಸಿದರೆ ಈ ವೆಬ್ ಸೈಟ್​ನಲ್ಲಿ ಹೋಗಿ ಪರೀಕ್ಷಿಸಬಹುದು ಎಂದು ಹಂಟ್ ಹೇಳಿದೆ.  ಹ್ಯಾಕರ್ ಗಳು ಹೆಕ್ಕಿರುವ ಮೊದಲ ಪಟ್ಟಿಯಲ್ಲಿ 12 ಸಾವಿರ ಫೈಲ್ ಗಳಲ್ಲಿ ಇಮೇಲ್, ಪಾಸ್ವರ್ಡ್​ಗಳಿರುವ 87 ಜಿಬಿಯಷ್ಟು ಗಾತ್ರದ ಡೇಟಾವನ್ನು ಸಂಗ್ರಹಿಸಲಾಗಿತ್ತು. ಅಂತರ್ಜಾಲ ಇತಿಹಾಸದಲ್ಲೇ ಇದೊಂದು ಅತಿ ದೊಡ್ಡ ಸೆಕ್ಯೂರಿಟಿ ಲೀಕ್ ಎನ್ನಲಾಗಿದೆ. ನೀವು ಹಂಟ್ ಅವರ ವೆಬ್ ಸೈಟ್​ಗೆ ಹೋಗಿ ಪರೀಕ್ಷಿಸಲು ಅನುಮಾನವಿದ್ದರೆ ಕೂಡಲೇ ನಿಮ್ಮ ಇಮೇಲ್​ಗಳ ಪಾಸ್ವರ್ಡ್​ಗಳನ್ನ ಬದಲಿಸುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com