ಭಾರತದಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ: ಇಸ್ರೋ ಅಧ್ಯಕ್ಷ ಕೆ.ಶಿವನ್

ಪ್ರಪಂಚದ ಇತರೆ ದೇಶಗಳಂತೆ ಭಾರತದಲ್ಲಿಯೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶದ ಬಾಗಿಲು ತೆರೆಯಲಾಗಿದ್ದು, ರಾಕೆಟ್ ಮತ್ತು ಉಪಗ್ರಹ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ.
ಇಸ್ರೋ ಅಧ್ಯಕ್ಷ ಕೆ ಶಿವನ್
ಇಸ್ರೋ ಅಧ್ಯಕ್ಷ ಕೆ ಶಿವನ್
Updated on

ಬೆಂಗಳೂರು: ಪ್ರಪಂಚದ ಇತರೆ ದೇಶಗಳಂತೆ ಭಾರತದಲ್ಲಿಯೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶದ ಬಾಗಿಲು ತೆರೆಯಲಾಗಿದ್ದು, ರಾಕೆಟ್ ಮತ್ತು ಉಪಗ್ರಹ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ.

ಈ ಕುರಿತಂತೆ ಇಸ್ರೋ ಅಧ್ಯಕ್ಷ ಕೆ ಶಿವನ್ ಅವರು ಇಂದು ಮಾತನಾಡಿದ್ದು, ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ತರಲಿಚ್ಥಿಸಿರುವ ಸುಧಾರಣಾ ನೀತಿಗಳ ಕುರಿತು ಮಾಹಿತಿ ನೀಡಿದರು. ಪ್ರಮುಖವಾಗಿ ಬಾಹ್ಯಾಕಾಶ ಕ್ಷೇತ್ರಗ ಖಾಸಗೀಕರಣದ ಕೆ ಶಿವನ್ ಮಾಹಿತಿ ನೀಡಿದರು.

'ಖಾಸಗಿ ಉದ್ಯಮಗಳು ದೇಶದಲ್ಲಿ ಸ್ವತಂತ್ರವಾಗಿ ಬಾಹ್ಯಾಕಾಶ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವ ಮಹತ್ವದ ಸುಧಾರಣಾ ನೀತಿಯನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದ್ದು, ರಾಕೆಟ್‌ ನಿರ್ಮಾಣ, ಉಪಗ್ರಹ ನಿರ್ಮಾಣ ಮತ್ತು ಉಡಾವಣೆಗಳಂತಹ ಕಾರ್ಯಗಳನ್ನೂ ಖಾಸಗಿಯವರೂ ಇನ್ನು ಮುಂದೆ ಕೈಗೊಳ್ಳಬಹುದಾಗಿದೆ. ಇದಕ್ಕೆ ಅಗತ್ಯ ನೆರವು, ತಂತ್ರಜ್ಞಾನ ವೆರ್ಗಾವಣೆಗೆ ಇಸ್ರೊ ಸಹಕಾರ ನೀಡಲಿದೆ. ಇಸ್ರೋದ ಮೂಲಭೂತ ಸೌಕರ್ಯಗಳನ್ನು ಖಾಸಗಿಯವರೂ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್ ತಿಳಿಸಿದ್ದಾರೆ.

'ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಹೊರ ಹೊಮ್ಮಲು ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಚಟುವಟಿಕೆಗಳನ್ನು ನಡೆಸುವುದರಿಂದ ಬಾಹ್ಯಾಕಾಶ ವಿಜ್ಞಾನ ಮೂಲದ ಆದಾಯ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಸಾಧ್ಯವಾಗಲಿದೆ. ಖಾಸಗಿಯವರು ಇಲ್ಲಿಯವರೆಗೆ ಇಸ್ರೋಗೆ ಬಿಡಿ ಭಾಗಗಳನ್ನು ತಯಾರಿಸುವುದಷ್ಟಕ್ಕೇ ಸೀಮಿತವಾಗಿದ್ದರು. ಇನ್ನು ಮುಂದೆ ಬಾಹ್ಯಾಕಾಶ ಸಂಸ್ಥೆಗೆ ಸಮಾನವಾಗಿ ಬೆಳೆಯುವುದಕ್ಕೆ ಅವಕಾಶ ನೀಡುವ ಮಹತ್ವದ ಸುಧಾರಣಾ ಕ್ರಮ ಇದಾಗಿದೆ. ಇದರಿಂದ ದೇಶದಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ದಿಯ ಹೊಸ ಯುಗವೇ ಸೃಷ್ಟಿಯಾಗಲಿದೆ ಎಂದು ಕೆ ಶಿವನ್ ಅಭಿಪ್ರಾಯಪಟ್ಟಿದ್ದಾರೆ.

ಅಂತೆಯೇ ' ರಾಕೆಟ್‌ ನಿರ್ಮಾಣ, ರಾಕೆಟ್‌ ಉಡ್ಡಯನ, ಉಪಗ್ರಹ ಮತ್ತು ಅದರ ಪೇಲೋಡ್‌ ನಿರ್ಮಾಣದಿಂದ ಮೊದಲ್ಗೊಂಡು ಹಲವು ಚಟುವಟಿಕೆಗಳು ಮತ್ತು ಸೇವೆಗಳನ್ನು ಖಾಸಗಿ ವಲಯ ನೀಡಬಹುದು. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲೂ ತೊಡಗಿಕೊಳ್ಳಬಹುದು. ಇದರಿಂದ ದೇಶದಲ್ಲಿ ಬಾಹ್ಯಾಕಾಶ ಉದ್ಯಮ ಬೆಳೆಯುವುದರ ಜೊತೆಗೆ ಅಪಾರ ಪ್ರಮಾಣದಲ್ಲಿ ಉದ್ಯೋಗವೂ ಸೃಷ್ಟಿಯಾಗಲಿದೆ. ಖಾಸಗಿ ಕ್ಷೇತ್ರದ ದೊಡ್ಡ, ಸಣ್ಣ ಮಟ್ಟದ ಉದ್ಯಮಗಳು ಮತ್ತು ಸಾರ್ಟ್‌ಅಪ್‌ಗಳು ಭಾಗವಹಿಸಬಹುದು. ಇವರ ಚಟುವಟಿಕೆಗಳ ಗುಣಮಟ್ಟ, ಸುರಕ್ಷತೆ ಮತ್ತು ಭದ್ರತೆಯನ್ನು ಇಸ್ರೊ ನೋಡಿಕೊಳ್ಳಲಿದೆ ಎಂದು ಶಿವನ್ ಮಾಹಿತಿ ನೀಡಿದರು.

ಸುಧಾರಣಾ ಕ್ರಮವಾಗಿ ಹೊಸ ನ್ಯಾವಿಗೇಷನ್‌ ನೀತಿ ಜಾರಿ ಮಾಡಲಾಗುವುದು. ದೂರಸಂವೇದಿ ನೀತಿ ಮತ್ತು ಉಪ್ರಗ್ರಹ ನೀತಿಯನ್ನೂ ಪರಿಷ್ಕರಿಸಲಾಗುವುದು. ಖಾಸಗಿ ಕಂಪನಿಗಳು ಬೇಡಿಕೆ ಪೂರೈಕೆ ಮಾದರಿಗೆ ಸೀಮಿತವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಶಿವನ್ ಹೇಳಿದರು.

ಸ್ವಾಯತ್ತ ಸ್ಥಾನಮಾನ, 'ಇನ್ ಸ್ಪೇಸ್' ಗೆ ನೋಡಲ್ ಏಜೆನ್ಸಿ ಪಾತ್ರ
ಖಾಸಗಿ ಚಟುವಟಿಕೆಗಳು ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುತ್ತವೆ. ಈ ಸಂಸ್ಥೆಗಳಿಗೆ ಇಸ್ರೊ ನೋಡಲ್‌ ಏಜೆನ್ಸಿಯಾಗಿರುತ್ತದೆ. ಇದಕ್ಕಾಗಿಯೇ ‘ಇನ್‌ಸ್ಪೇಸ್‌’ ಎಂಬ ಪ್ರತ್ಯೇಕ ಸಂಸ್ಥೆ ಹುಟ್ಟು ಹಾಕುತ್ತೇವೆ. ಇದರಲ್ಲಿ ಖಾಸಗಿ ಉದ್ಯಮಗಳ ಪ್ರತಿನಿಧಿಗಳು, ಇಸ್ರೊ ಮತ್ತು ಸರ್ಕಾರದ ಪ್ರತಿನಿಧಿಗಳೂ ಇರುತ್ತಾರೆ. ಇನ್‌ಸ್ಪೇಸ್‌ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಬಾಹ್ಯಾಕಾಶ ಚಟುವಟಿಕೆಗಳಲ್ಲಿ ತೊಡಗುವ ಸಂಸ್ಥೆಗಳಿಗೆ ಅಗತ್ಯ ಜ್ಞಾನವನ್ನು ನೀಡಲಿದೆ. ‘ಇನ್‌ಸ್ಪೇಸ್‌’ ಇನ್ನು 6 ತಿಂಗಳಲ್ಲಿ ಸ್ಥಾಪನೆ ಆಗಲಿದೆ. ಆದರೆ, ಸಾಕಷ್ಟು ಖಾಸಗಿ ಸಂಸ್ಥೆಗಳು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಒಪ್ಪಿಗೆ ನೀಡುವ ಪ್ರಕ್ರಿಯೆ ಸದ್ಯದಲ್ಲೇ ಚಾಲನೆ ನೀಡುತ್ತೇವೆ. ಇಸ್ರೊ ಬಾಹಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಮುಂದುವರಿದ ಸಂಶೋಧನೆಗಳು ಮತ್ತು ಅಂತರ್ ಗ್ರಹಯಾನಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಿದೆ. ಜಾಗತಿಕ ಬಾಹ್ಯಾಕಾಶ ಕ್ಷೇತ್ರದ ಪವರ್‌ ಹೌಸ್ ಆಗಿ ಭಾರತ ರೂಪುಗೊಳ್ಳಲಿದೆ ಎಂದು ಶಿವನ್ ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com