

ಬೆಂಗಳೂರು: ಖಗೋಳಾಸಕ್ತರಿಗೆ ಇಲ್ಲಿದೆ ಒಂದು ಮಹತ್ವದ ಸುದ್ದಿ. ಸೆಪ್ಟೆಂಬರ್ 19, 2026 ರಂದು ಜಾಗತಿಕವಾಗಿ 'ಅಂತರರಾಷ್ಟ್ರೀಯ ಚಂದ್ರ ವೀಕ್ಷಣೆ ರಾತ್ರಿ' (International Observe the Moon Night) ಎಂದು ಆಚರಿಸಲಾಗುತ್ತಿದ್ದು, ಭಾರತದಲ್ಲಿ ಸೆಪ್ಟೆಂಬರ್ 18 ಮತ್ತು 19 ರಂದು ಚಂದ್ರನ ಮೇಲ್ಮೈಯನ್ನು ಅತ್ಯಂತ ಸ್ಪಷ್ಟವಾಗಿ ವೀಕ್ಷಿಸಲು ಪ್ರಕೃತಿ ಅದ್ಭುತ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ನಾಸಾ (NASA) ಪ್ರಾಯೋಜಿಸುವ ಈ ವಾರ್ಷಿಕ ಜಾಗತಿಕ ಕಾರ್ಯಕ್ರಮವು ಚಂದ್ರನ ವಿಜ್ಞಾನ, ಪರಿಶೋಧನೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಿದೆ.
ಸೆಪ್ಟೆಂಬರ್ 18 ಮತ್ತು 19ರಂದು ಚಂದ್ರನು ಪ್ರಥಮ ಪಾದದ ಹಂತದಲ್ಲಿರುವುದರಿಂದ, ಆಕಾಶ ವೀಕ್ಷಕರು ಚಂದ್ರನ ಮೇಲ್ಮೈಯಲ್ಲಿರುವ ಕುಳಿಗಳು, ಪರ್ವತಗಳು ಹಾಗೂ ಕಪ್ಪು ಬಯಲು ಪ್ರದೇಶಗಳನ್ನು ಸ್ಪಷ್ಟವಾಗಿ ವೀಕ್ಷಿಸಬಹುದಾಗಿದೆ. ಆಕಾಶ ನಿರ್ಮಲವಾಗಿದ್ದರೆ ಈ ವಿಶೇಷ ದೃಶ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆಯಲಿದೆ.
ಚಂದ್ರನ ಪ್ರಕಾಶಮಾನ ಭಾಗ ಮತ್ತು ನೆರಳಿನ ಭಾಗವನ್ನು ಬೇರ್ಪಡಿಸುವ ರೇಖೆಯನ್ನು ‘ಟರ್ಮಿನೇಟರ್’ ಎಂದು ಕರೆಯಲಾಗುತ್ತದೆ. ಈ ರೇಖೆಯು ಚಂದ್ರನ ಮೇಲ್ಮೈಯ ವಿವಿಧ ವೈಶಿಷ್ಟ್ಯಗಳನ್ನು ವೀಕ್ಷಿಸಲು ಅನುಕೂಲಕರವಾಗಿರುವುದರಿಂದ, ಈ ಅವಧಿಯ ವೀಕ್ಷಣೆ ವಿಶೇಷ ಅನುಭವ ನೀಡಲಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ‘ಅಂತರರಾಷ್ಟ್ರೀಯ ಚಂದ್ರ ವೀಕ್ಷಣಾ ರಾತ್ರಿ’ಯನ್ನು ಆಚರಿಸಲಾಗುತ್ತದೆ.
ಈ ಸಂದರ್ಭವನ್ನು ಬಳಸಿಕೊಂಡು, ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಆಡಳಿತ ಸಂಸ್ಥೆ (ನಾಸಾ) ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಜನರಲ್ಲಿ ಆಸಕ್ತಿ ಮೂಡಿಸುವುದು ಮತ್ತು ತನ್ನ ಮುಂಬರುವ ಚಂದ್ರಯಾನದತ್ತ ಗಮನ ಸೆಳೆಯುವುದು ಇದರ ಉದ್ದೇಶವಾಗಿದೆ. ಆದರೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಇನ್ನೂ ಹಿಂದೆ ಉಳಿದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ನಡೆದ ಬೆಂಗಳೂರು ಬಾಹ್ಯಾಕಾಶ ಪ್ರದರ್ಶನ-2026ರಲ್ಲಿ ಅಮೆರಿಕವು ತನ್ನ ಚಂದ್ರಯಾನದಲ್ಲಿ ಭಾಗಿಯಾಗುವಂತೆ ಇಸ್ರೋಗೆ ಆಹ್ವಾನ ನೀಡಿತ್ತು. ಭಾರತವು ಈಗಾಗಲೇ ಆರ್ಟೆಮಿಸ್ ಒಪ್ಪಂದದ ಭಾಗವಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೋ ಅಧಿಕಾರಿಗಳು, ಜುಲೈ 20ರಂದು ಅಂತರರಾಷ್ಟ್ರೀಯ ಚಂದ್ರ ದಿನ ಹಾಗೂ ಆಗಸ್ಟ್ 23ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತದೆ. ಹೀಗಾಗಿ ಹೆಚ್ಚುವರಿಯಾಗಿ ಮತ್ತೊಂದು ದಿನವನ್ನು ಆಚರಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಆದರೆ, ಭಾರತವೂ ತನ್ನದೇ ಆದ ಚಂದ್ರಯಾನದಲ್ಲಿ ಹಾಗೂ ನಾಸಾದೊಂದಿಗೆ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಮತ್ತು ನೈಸರ್ಗಿಕ ಬಾಹ್ಯಾಕಾಶ ವಿದ್ಯಮಾನಗಳನ್ನು ಜನರಿಗೆ ಪರಿಚಯಿಸುವುದು ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಆಸಕ್ತಿ ಹಾಗೂ ಉತ್ಸಾಹವನ್ನು ಪುನರುಜ್ಜೀವನಗೊಳಿಸಲು ಸಹಕಾರಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಈ ದಿನದ ಮಹತ್ವವನ್ನು ವಿವರಿಸಿದ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಬಿ.ಆರ್. ಗುರುಪ್ರಸಾದ್ ಅವರು, ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಚಂದ್ರನು ಪ್ರಥಮ ಪಾದದ ಹಂತದಲ್ಲಿ ಅಥವಾ ಅದರ ಸಮೀಪದಲ್ಲಿರುವ ಸಂದರ್ಭದಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಇದು ಮಳೆಗಾಲದ ನಂತರದ ಅವಧಿಗೆ ಹೊಂದಿಕೆಯಾಗುವುದರಿಂದ ಆಕಾಶ ಸಾಮಾನ್ಯವಾಗಿ ನಿರ್ಮಲವಾಗಿರುತ್ತದೆ ಮತ್ತು ಚಂದ್ರನ ವೀಕ್ಷಣೆಗೆ ಉತ್ತಮ ಅವಕಾಶ ದೊರೆಯುತ್ತದೆ ಎಂದು ತಿಳಿಸಿದ್ದಾರೆ.
ಚಂದ್ರನ ಬೆಳಕು ಮತ್ತು ನೆರಳಿನ ನಡುವಿನ ಸ್ಪಷ್ಟ ಗಡಿ ರೇಖೆ ಆಕಾಶ ವೀಕ್ಷಕರಿಗೆ ಉತ್ತಮ ವೀಕ್ಷಣಾ ಅವಕಾಶ ಒದಗಿಸುತ್ತದೆ. ಬರಿಗಣ್ಣಿನಿಂದ ಹೆಚ್ಚಿನ ವಿವರಗಳನ್ನು ವೀಕ್ಷಿಸಲು ಸಾಧ್ಯವಾಗದಿದ್ದರೂ, ದೂರದರ್ಶಕದ ಮೂಲಕ ಚಂದ್ರನ ಮೇಲ್ಮೈಯಲ್ಲಿರುವ ವಿಶಿಷ್ಟ ಲಕ್ಷಣಗಳನ್ನು ಇನ್ನಷ್ಟು ಸ್ಪಷ್ಟವಾಗಿ ನೋಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಜನರಲ್ಲಿ ಚಂದ್ರನ ಬಗ್ಗೆ ಆಸಕ್ತಿ ಮೂಡಿಸುವುದು ಹಾಗೂ ಚಂದ್ರ ವಿಜ್ಞಾನ ಮತ್ತು ಅನ್ವೇಷಣೆಯ ಕುರಿತು ಜಾಗೃತಿ ಹೆಚ್ಚಿಸುವ ಉದ್ದೇಶದಿಂದ 2010ರಿಂದ ಪ್ರತಿವರ್ಷ ‘ಅಂತರರಾಷ್ಟ್ರೀಯ ಚಂದ್ರ ವೀಕ್ಷಣಾ ರಾತ್ರಿ’ಯನ್ನು ಆಚರಿಸಲಾಗುತ್ತಿದೆ.
ಈ ಕಾರ್ಯಕ್ರಮವು ಆಕಾಶ ವೀಕ್ಷಕರಲ್ಲಿ ಜನಪ್ರಿಯವಾಗಿದ್ದರೂ, ಭಾರತೀಯ ಬಾಹ್ಯಾಕಾಶ ಸಂಸ್ಥೆಗಳಿಂದ ಚಂದ್ರ ವೀಕ್ಷಣೆಗೆಂದೇ ಮೀಸಲಾದ ಯಾವುದೇ ದಿನವನ್ನು ಆಚರಿಸಲಾಗುತ್ತಿಲ್ಲ ಎಂದು ತಜ್ಞರು ಹೇಳಿದ್ದಾರೆ.