ಎರಡು ಕಣ್ಣಿನ ಚೆಂಡು

ಕ್ರಿಕೆಟ್ಟು ನಮ್ಮೊಳಗೆ ಎಂದೂ ಮುಗಿಯದ ಸೀರಿಯಲ್ಲು. ಇಲ್ಲಿನ ಎಪಿಸೋಡುಗಳಲ್ಲಿ ಸಿಗರೇಟಿನಂತೆ ಕಿಕ್ ಇದೆ. ಒಂದಲ್ಲಾ ಒಂದು ಮಗ್ಗುಲನ್ನು ಕಾಣದಂತೆ ಸುಟ್ಟು, ಸಮಾಧಾನಿಸುವ ಅಮಲಿನ ಔಷಧವಿದೆ..
ವಿಶ್ವಕಪ್ ಟ್ರೋಫಿ ಎತ್ತಿಹಿಡಿದ ಕಪಿಲ್ ದೇವ್ (ಸಂಗ್ರಹ ಚಿತ್ರ)
ವಿಶ್ವಕಪ್ ಟ್ರೋಫಿ ಎತ್ತಿಹಿಡಿದ ಕಪಿಲ್ ದೇವ್ (ಸಂಗ್ರಹ ಚಿತ್ರ)
Updated on

ಕ್ರಿಕೆಟ್ಟು ನಮ್ಮೊಳಗೆ ಎಂದೂ ಮುಗಿಯದ ಸೀರಿಯಲ್ಲು. ಇಲ್ಲಿನ ಎಪಿಸೋಡುಗಳಲ್ಲಿ ಸಿಗರೇಟಿನಂತೆ ಕಿಕ್ ಇದೆ. ಒಂದಲ್ಲಾ ಒಂದು ಮಗ್ಗುಲನ್ನು ಕಾಣದಂತೆ ಸುಟ್ಟು, ಸಮಾಧಾನಿಸುವ ಅಮಲಿನ ಔಷಧವಿದೆ. ಕೇವಲ ಅಂಕಿಅಂಶಗಳ ಕಾರಣಕ್ಕೇ ನಾವು ಕ್ರಿಕೆಟ್ಟನ್ನು ಪ್ರೀತಿಸುತ್ತಿಲ್ಲ. ಸೋಲು, ಗೆಲವು, ಡ್ರಾ, ಬೌಂಡರಿ, ಗಾಯ, ವಿದಾಯ-ಇವುಗಳಾಚೆ ಏನೇನೋ ಕಥೆ ಹೇಳುತ್ತದೆ ಈ ಕ್ರಿಕೆಟ್ಟು....

ಒಂದೇ ಕಣ್ಣು. ಕಾಣುತ್ತಿದ್ದದ್ದು ಎರಡು ಕನಸು; ಒಂದು ಚೆಂಡು, ಇನ್ನೊಂದು ಚೆಂದುಳ್ಳಿ. ಮನ್ಸೂರ್ ಅಲಿಖಾನ್ ಪಟೌಡಿ ಎಂಬ ನವಾಬ ಒಕ್ಕಣ್ಣಿನಲ್ಲೇ ಕ್ರಿಕೆಟ್ ಬ್ಯಾಟು ಹಿಡಿದ. ಇಂಗ್ಲೆಂಡಿನ ಹೋವ್‍ನಲ್ಲಿ ಕಾರು ಅಪಘಾತ ಅವನ ಇನ್ನೊಂದು ಕಣ್ಣನ್ನು ಅಪಹರಿಸಿತ್ತು. ಚೆನ್ನಾಗಿದ್ದ ಒಂದು ಕಣ್ಣಿಗೂ ಅಪಹರಣದ ಹುಚ್ಚು. ಹುಡುಗಿಯ ಅಪಹರಣ. ಅದು ಅಂತಿಂಥ ಹುಡುಗಿಯಲ್ಲ, ಹೀರೋಯಿನ್! ಶರ್ಮಿಳಾ ಟ್ಯಾಗೋರ್ ಎಂಬ ಮಸ್ತು ನಟಿ. ಕ್ರೀಸಿಗಿಳಿದ ಪಟೌಡಿ ಮೊದಲು ನೋಡುತ್ತಿದ್ದುದ್ದು ಅಂಪೈರ್‍ನಲ್ಲ; ಚಪ್ಪಾಳೆ ತಟ್ಟುತ್ತಿದ್ದ ಪ್ರೇಕ್ಷಕರನ್ನ. ಆಗಿನ ಕ್ಯಾಮೆರಾಗಳಲ್ಲೇನೂ ಝೂಮ್ ಇದ್ದಿರಲಿಲ್ಲ. ಆದರೆ, ಪಟೌಡಿಯ ಒಕ್ಕಣ್ಣಿನಲ್ಲಿತ್ತು. ತುಂಡು ಸ್ಕರ್ಟು ಹಾಕ್ಕೊಂಡ ಶರ್ಮಿಳಾ ಗ್ಯಾಲರಿಯಲ್ಲಿ ಎಲ್ಲಿ ಕೂತಿದ್ದಾಳೆಂದು ಹುಡುಕಲಿಕ್ಕೆ. `ರೂಪ್ ತೇರಾ ಮಸ್ತಾನಾ, ಪ್ಯಾರ್ ಮೇರಾ ದಿವಾನಾ' ಹಾಡನ್ನು ಅಧರದ ತುದಿಯಲ್ಲಿ ಉದುರದೆ ಕುಣಿಸುತ್ತಾ, ಅವಳು ಕೂತಿದ್ದ ಜಾಗಕ್ಕೆ ಸಿಕ್ಸರ್ ಅಟ್ಟುತ್ತಿದ್ದ ಪಟೌಡಿ.

ಕೆಲವೊಮ್ಮೆ ಶರ್ಮಿಳಾ ಬೇಕಂತಲೇ ಕೂತ ಜಾಗ ಬದಲಿಸುತ್ತಿದ್ದಳು. ಪೆಟ್ಟು ತಿಂದ ಚೆಂಡಿಗೆ ಅವಳ ಪರಿಮಳ ಗೊತ್ತಿತ್ತು. ಹಾದಿ ತಪ್ಪುತ್ತಿರಲಿಲ್ಲ. ಬಹುಶಃ ಆ ಶುಕ್ಲಾಚಾರಿಯೂ ಖುಷಿಪಡುವ ವಿಚಾರ, ಪಟೌಡಿಯಂತೆ ನಮಗೂ ಇವತ್ತು ಒಂದು ಕಣ್ಣಿಲ್ಲ! ಒಂದು `ಕ್ರಿಕೆಟ್ ಬೇಡ' ಎಂದು ರೆಪ್ಪೆ ಮುಚ್ಚಿದೆ. ಇನ್ನೊಂದು ಬೇಕೇ ಬೇಕೆಂದು ಹಠ ಹಿಡಿದು ತೆರೆದು ಕೂತಿದೆ. ಸುಮ್ಮನೆ ಲೆಕ್ಕ ಒಪ್ಪಿಸಿ, ಈ ಹತ್ತಾರು ವರುಷಗಳಲ್ಲಿ ನಾವೆಷ್ಟು ಸಲ `ಇನ್ನೆಂದೂ ಕ್ರಿಕೆಟ್ ನೋಡಲ್ಲ' ಅಂತ ಪ್ರತಿಜ್ಞೆ ಕೈಗೊಂಡಿಲ್ಲ? ಅಜರ್ ಸಾಹೇಬರ ಬಳಗ ಮ್ಯಾಚ್ ಫಿಕ್ಸಿಂಗ್‍ನಲ್ಲಿ ಸಿಲುಕಿದಾಗ, ಗಂಗೂಲಿಯನ್ನು ಚಾಪೆಲ್ ಚಾಪೆ ಥರ ಸುತ್ತಿ ಮೂಟೆ ಕಟ್ಟುತ್ತಿದ್ದಾಗ, 2007ರ ವಿಶ್ವಕಪ್‍ನಲ್ಲಿ ಹೀನಾಮಾನ ಸೋತಾಗ, ತೆಂಡೂಲ್ಕರ್ ನಿವೃತ್ತಿಯಾದಾಗ... ಅಷ್ಟೇ ಯಾಕೆ ನಿನ್ನೆ ಮೊನ್ನೆ ನಮ್ಮವರು ಒಂದೇ ಒಂದೇ ಟೆಸ್ಟನ್ನು ಗೆಲ್ಲದೇ ಇದ್ದಾಗಲೂ ಈ ಶಪಥ ಕೈಗೊಂಡಿದ್ದುಂಟು.

ಆದರೆ, ಮುಂದಿನ ಪಂದ್ಯದ ಹೊತ್ತಿಗೆ ಆ ಪ್ರತಿಜ್ಞೆ ಉಫೀಟಾಗಿರುತ್ತದೆ. ಇದೊಂಥರ ಟಿ.ಎನ್. ಸೀತಾರಾಮ್ ಇನ್ನೆಂದು ನಾನು ಸೀರಿಯಲ್ ತೆಗೆಯೋದಿಲ್ಲ' ಅನ್ನೋ ಹಾಗೆ. ಜೋಗಿ, `ನಾನಿನ್ನು ಸದ್ಯಕ್ಕೆ ಕಾದಂಬರಿ ಬರೆಯೋದಿಲ್ಲ, ಸಿಗರೇಟು ಸೇದೋದಿಲ್ಲ' ಅಂತ ಸಲೀಸಾಗಿ `ಸುಳ್ಳು' ಹೇಳಿದಂತೆ!

ಕ್ರಿಕೆಟ್ಟು ನಮ್ಮೊಳಗೆ ಎಂದೂ ಮುಗಿಯದ ಸೀರಿಯಲ್ಲು. ಇಲ್ಲಿನ ಎಪಿಸೋಡುಗಳಲ್ಲಿ ಸಿಗರೇಟಿನಂತೆ ಕಿಕ್ ಇದೆ. ಒಂದಲ್ಲಾ ಒಂದು ಮಗ್ಗುಲನ್ನು ಕಾಣದಂತೆ ಸುಟ್ಟು, ಸಮಾಧಾನಿಸುವ ಅಮಲಿನ ಔಷಧವಿದೆ. ಕೇವಲ ಅಂಕಿಅಂಶಗಳ ಕಾರಣಕ್ಕೇ ಕ್ರಿಕೆಟ್ಟನ್ನು ನಾವು ಪ್ರೀತಿಸುತ್ತಿಲ್ಲ. ಸೋಲು, ಗೆಲವು, ಡ್ರಾ, ಬೌಂಡರಿ, ಗಾಯ, ವಿದಾಯ- ಇವುಗಳಾಚೆ ಏನೇನೋ ಕಥೆ ಹೇಳುತ್ತದೆ ಈ ಕ್ರಿಕೆಟ್ಟು. ಚಂದಮಾಮನಷ್ಟು ಚೆಂದದ, ಬಿ.ವಿ. ಅನಂತರಾಮು- ಕೌಂಡಿನ್ಯ ಥರ ಥ್ರಿಲ್ಲೆನಿಸುವಷ್ಟು ಸೊಗಸಾದ ಕಥನದೃಶ್ಯಗಳು ಈ ಸ್ಕೋರ್ ಬೋರ್ಡಿನ ಹಿಂದಿವೆ.

ಶೋಯೆಬ್ ಅಖ್ತರ್ ಬೌಲಿಂಗು. ನಾನ್ ಸ್ಟೈಕರ್‍ನಲ್ಲಿ ಸಚಿನ್ನು.
ಸ್ಟ್ರೈಕರ್‍ನಲ್ಲಿದ್ದ ಸೆಹ್ವಾಗ್, ಅಖ್ತರ್‍ನ ಒಂದೊಂದು ಎಸೆತಕ್ಕೂ ತಿಣುಕಾಡುತ್ತಿದ್ದ. ಮೊದಲ ಚೆಂಡನ್ನು ಬೌನ್ಸರ್ ಎಸೆದ ಅಖ್ತರ್. ಎಂದಿನಂತೆ ಸೆಹ್ವಾಗ್ ಬೀಟ್ ಮಾಡಿದ. `ಯೇ ಮೋಟು, ಹುಕ್ ಕರ್?' ಎಂದ ಅಖ್ತರ್, ನಗುತ್ತಾ ಅಗಲ ಬಾಯಿ ತೆರೆದ. ಹುಕ್ ಮಾಡಲಾಗದ್ದೇ ಸೆಹ್ವಾಗನ ವೀಕ್ ನೆಸ್ಸು. ಅಖ್ತರ್ ಎರಡನೇ ಚೆಂಡೆಸೆದ. ಅದೂ ಬೀಟಾಯಿತು. `ಯೇ ನಜಾಫ್ ಗಢ್ ಕ ಕಸಾಯಿ, ಹುಕ್ ಕರ್?' ಎಂದು ಹುಬ್ಬರಳಿಸಿ ಗೇಲಿ ಮಾಡಿದ ಅಖ್ತರ್. ಮತ್ತೆ ಮುಂದಿನ ಎಸೆತ. ಢುಮ್ ಢುಮ್ಮಕ್ಕಿದ್ದ ಸೆಹ್ವಾಗ್ ಆಲೂಗಡ್ಡೆ ಥರ ಕಂಡನೇನೋ, ಅಖ್ತರ್ `ಯೇ ಆಲೂ... ಹುಕ್ ಕರ್' ಅಂದ. ಆಗ ಸ್ವಲ್ಪ ಸಿಟ್ಟಾದ ಸೆಹ್ವಾಗ್, ಅಖ್ತರ್‍ನನ್ನು ಕರೆದು `ಏಯ್  ಬಾ ಇಲ್ಲಿ...

ಒಂದು ಸಿಂಗಲ್ ರನ್ ತಗೊಳ್ಳೋಕೆ ಬಿಡು ಮಾರಾಯ. ಆ ಕಡೆ ನನ್ನ ತಂದೆ ನಿಂತಿದ್ದಾನೆ. ಮುಂದಿಂದೆಲ್ಲ ಅವನೇ ನೋಡ್ಕೊಳ್ತಾನೆ'. ಸೆಹ್ವಾಗ್ ಸಿಂಗಲ್ ಕದ್ದ. ನಂತರ ಶೋಯೆಬ್ ಎಸೆದ ಶಾರ್ಟ್ ಪಿಚ್ ಬೌನ್ಸರ್‍ಗೆ ತೆಂಡೂಲ್ಕರ್ ಹುಕ್ ಮಾಡಿ ಸಿಕ್ಸರ್‍ ಗಟ್ಟಿದ. ಸೆಹ್ವಾಗ್ ನಗುತ್ತಾ, `ತಂದೆ ತಂದೇನೆ, ಮಗ ಮಗಾನೆ. ಮಕ್ಕಳ ಹತ್ತಿರ ನಿನ್ನ ಪೌರುಷ ತೋರ್ಸೋಕೆ ಬರ್ಬೇಡ ಆಯ್ತಾ?' ಎಂದು ಅಖ್ತರ್‍ಗೆ ವಾರ್ನ್ ಮಾಡಿದ.

ಇನ್ನೊಂದು ಸಲ, ಆಗಲೂ ಸೆಹ್ವಾಗೇ ಬ್ಯಾಟಿಂಗು. ಅಖ್ತರ್ ಮೂರು ಬಾರಿ ಎಸೆದಾಗಲೂ ಅಂಪೈರ್ ಎದುರು ಸುಮ್ಮಸುಮ್ಮನೆ `ಔಟ್ಸ್ ದ.....ಟ್' ಎಂದು ಕಿರುಚಿ ಕೇಳುತ್ತಿದ್ದ. ಅದಕ್ಕೆ ಸೆಹ್ವಾಗ್, `ತೂ ವಿಕೆಟ್ ಮಾಂಗ್ ರಹೆ ಹೈ, ಔರ್ ಭೀಕ್ ಮಾಂಗ್ ರಹೆ ಹೈ?' ಅಂತ ಕೇಳಿದ್ದ. ವಿವಿಎನ್ ರಿಚರ್ಡ್ಸ್ ಜೈಲರ್ ಮಗ. ಮೊದಲನೇ ವಿಶ್ವಕಪ್‍ಗೂ ಮುನ್ನ ಕ್ಲೈವ್ ಲಾಯ್ಡ್, ಸೋಬರ್ಸ್ಎಂಬ ಬಡ ಹುಡುಗರನ್ನು ಕರಕೊಂಡು, ಕೆರಿಬಿಯನ್ ಬೀಚುಗಳಲ್ಲಿ ಕ್ರಿಕೆಟ್ ಆಡುವ ಹುಚ್ಚು ಅವನಿಗೆ. ಆಗೇನೂ ವಿಲ್ಲೋ ಮರದ ಬ್ಯಾಟುಗಳಿರಲಿಲ್ಲ. ಬೀಚಿನ ಬದಿಯ ತೆಂಗಿನಮರವನ್ನೇರಿ ಒಣ ಹೆಡ್ಲು ಬೀಳಿಸಿ, ಬ್ಯಾಟ್ ಮಾಡುತ್ತಿದ್ದರು. ಇವರ ಚರ್ಮ ಸುಟ್ಟು ಸುಟ್ಟೂ ಸೂರ್ಯನಿಗೇ ಬೇಜಾರಾಗುತ್ತಿತ್ತೇನೋ. ರಿಚರ್ಡ್ಸ್ ಒಂದು ಸಿಕ್ಸರ್ ಹೊಡೆದ. ಆ ಚೆಂಡು ಒಬ್ಬ ಬಿಳಿಯನ ಬೆನ್ನಿಗೆ ಬಡಿಯಿತು. ಅವನು ಸೀದಾ ಬಂದು, ಇವನ ಕಪಾಳಕ್ಕೆ ಬಾರಿಸಿದ. ನರಪೇತಲ ಬಿಳಿಯನಿಗೆ ಹೊಡೆದು ಮಲಗಿಸುವಷ್ಟು ಬಲಾಢ್ಯನಿದ್ದ ರಿಚರ್ಡ್ಸ್.

ಆದರೆ, ಹೊಡೆಯಲು ಹೋಗದೆ ಕೈಕಟ್ಟಿ ನಿಂತು, ಮುಖ ಕೆಳಹಾಕಿ ಅಳತೊಡಗಿದ. ಹಾಗೆ ಅಳುತ್ತಾ ಸೀದಾ ಮನೆಗೆ ಹೋದಾಗ ಅಪ್ಪನಿಗೆ ಇದು ಗೊತ್ತಾಯಿತು. ಅಪ್ಪ ಚೆನ್ನಾಗಿ ಬೈದ. `ಮೂಗಲ್ಲಿ ರಕ್ತ ಸುರೀತಾ ಇದ್ರೂ ನಗುತ್ತಾ ಇರ್ಬೇಕು ನೀನು. ಕಪ್ಪು ಜನರ ರಕ್ತದಲ್ಲಿ ಎಂಥ ಶಕ್ತಿ ಇದೆ ಅಂತ ಹೋಗಿ ತೋರಿಸು' ಎಂದು ಮಗನನ್ನು ಮನೆಯಿಂದ ಹೊರದಬ್ಬಿದ. ರಿಚರ್ಡ್ಸ್ ಪುನಃ ಆ ಬಿಳಿಯನೆದುರು ಬಂದು, ಹ್ಹಿಹ್ಹಿಹ್ಹಿ ಎಂದು ನಕ್ಕ. ಮತ್ತೆಂದೂ ಜೀವನದಲ್ಲಿ ರಿಚರ್ಡ್ಸ್ ಅಳಲಿಲ್ಲ. ಅದೇ ಸಿಟ್ಟಿನಲ್ಲೇ ಬಿಳಿಯರನ್ನು ಮೈದಾನದಲ್ಲಿ ಬಗ್ಗುಬಡಿದು, ವಿಶ್ವಕಪ್ ಗೆಲ್ಲಿಸಿಕೊಟ್ಟರು ರಿಚರ್ಡ್ಸ್.

ಮೊದಲ ಎರಡು ವಿಶ್ವಕಪ್ (1975, 1979) ಗೆದ್ದ ವೆಸ್ಟ್‍ಇಂಡೀಸ್ ಮೂರನೇ ವಿಶ್ವಕಪ್‍ಗೆ ಭಾರಿ ಅಹಂಕಾರದಿಂದಲೇ ಬಂದಿತ್ತು. ಭಾರತ ಮೊದಲ ವಿಶ್ವಕಪ್ ಗೆದ್ದಿದ್ದೂ ಅದೇ ಬಾರಿ. ವಿಂಡೀಸಿಗರ ಓವರ್ ಕಾನ್ಫಿಡೆನ್ಸ್ ಎಷ್ಟಿತ್ತು ಎನ್ನುವುದಕ್ಕೆ ಮಾಲ್ಕೋಂ ಮಾರ್ಷಲ್ ಎಂಬ ಫಾಸ್ಟ್ ಬೌಲರ್ ಸಾಕ್ಷಿ. ಬಿಎಂಡಬ್ಲ್ಯು ಕಾರನ್ನು ಬುಕ್ ಮಾಡಿ ಆತ ವರ್ಲ್ಡ್‍ಕಪ್‍ಗೆ ಬಂದಿದ್ದ. ಆದರೆ, ಸೋತು ವಾಪಸು ಹೋಗುವಾಗ ವಿಮಾನದಲ್ಲಿ ಅವನ ಕಣ್ಣೀರು ನೋಡಬೇಕಿತ್ತು. `ಇನ್ನೊಂದು ಹನಿ ಕಣ್ಣೀರು ಹಾಕಿದ್ರೂ ಫ್ಲೈಟ್ ಬ್ಯಾಲೆನ್ಸ್ ತಪ್ಪಿ, ಕೆಳಬೀಳುತ್ತದೆ' ಅಂತ ಸಹ ಆಟಗಾರರು ತಮಾಷೆ ಮಾಡುತ್ತಿದ್ದರಂತೆ.

ರಿಚರ್ಡ್ಸ್ ಹೇಳುವ ಹಾಗೆ, ಅವನ ಲೆಕ್ಕಾಚಾರ ಹೀಗಿತ್ತು; ಇಂತಿಂಥ ಮ್ಯಾಚಿನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ತಗೊಳ್ತೀನಿ, ವರ್ಲ್ಡ್‍ಕಪ್ ಗೆದ್ದಾಗ ಇಷ್ಟೇ ದುಡ್ಡು ಸಿಗುತ್ತೆ. ಈ ಕಾಸ್ಟ್ಲಿ ಕಾರನ್ನು ತಗೊಳ್ಳಬಹುದು ಅಂತ ಬಂದಿದ್ದನಂತೆ ಮಾರ್ಷಲ್.

ಕನ್ನಡದ ಜಾಗತಿಕ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಬಗ್ಗೆ ಅವರ ಮಿತ್ರ ಕೃಷ್ಣನಾಡಿಗ್ ಸೊಗಸಾಗಿ ಕಥೆ ಹೇಳುತ್ತಾರೆ. ವಿಶಿ ಆಡಿದ ಮೊದಲ ಪಂದ್ಯದಲ್ಲೇ ಸೊನ್ನೆ. ಆಸ್ಟ್ರೇಲಿಯಾದ ವಿರುದ್ಧ ಕಾನ್ಪುರದಲ್ಲಿ ನಡೆದ ಟೆಸ್ಟ್ ಅದು. ಡಕೌಟ್ ಆದ ವಿಶಿ, ತಲೆತಗ್ಗಿಸಿ ಪೆವಿಲಿಯನ್‍ಗೆ ಹೋಗೋವಾಗ ಪ್ರೇಕ್ಷಕರು ಕೋಳಿ ಮೊಟ್ಟೆ, ಕಲ್ಲುಗಳನ್ನೆಲ್ಲ ಎಸೆದಿದ್ದರಂತೆ. ಅಳತೊಡಗಿದ ವಿಶಿಗೆ ಅವತ್ತು ಸಮಾಧಾನ ಹೇಳಿದ್ದು ಅಂದಿನ ಕ್ಯಾಪ್ಟನ್ ಮನ್ಸೂರ್ ಅಲಿಖಾನ್ ಪಟೌಡಿಯೇ. `ಎರಡನೇ ಇನ್ನಿಂಗ್ಸ್‍ನಲ್ಲಿ ಸೆಂಚೂರಿ ಬಾರಿಸಿ ಟೀಮನ್ನ ಕಾಪಾಡೋನೇ ನೀನು. ಅಳಬೇಡ, ನೀನು ನನ್ನ ಆಯ್ಕೆ' ಅಂತ ಬೆನ್ನು ತಟ್ಟಿದ್ದರಂತೆ. ವಿಶಿ ಆ ಎರಡನೇ ಇನ್ನಿಂಗ್ಸ್‍ನಲ್ಲಿ ಬಾರಿಸಿದ್ದು 137 ರನ್ನು. ಶೂನ್ಯಕ್ಕೆ ಔಟಾದಾಗ ಆಯ್ಕೆಮಂಡಳಿ,`ಎಂಥ ಹುಡುಗನನ್ನ ರೆಕ್ಮೆಂಡ್ ಮಾಡ್ದೆ ನೀನು' ಅಂತ ಪಟೌಡಿಯನ್ನೇ ಲೇವಡಿ ಮಾಡಿತ್ತು. ಎರಡನೇ ಇನ್ನಿಂಗ್ಸಿನಲ್ಲಿ ಪಟೌಡಿ `ಈಗ ಈತ ಬಾರಿಸೋ ಸ್ಕೋರುಗಳನ್ನು ಎಣಿಸ್ಕೊಳ್ಳಿ, ನಾ ಸ್ವಲ್ಪ ರೆಸ್ಟ್ ತಗೊಳ್ತೀನಿ' ಅಂತ ಎದ್ದು ಹೋಗಿದ್ದರು.

ಜಿಆರ್‍ವಿ ಮೊದಲನೇ ಟೆಸ್ಟಿಗೆ ಆಯ್ಕೆಯಾದಾಗ ಇವರ ಬಳಿ ಸರಿಯಾದ ಕಿಟ್ ಇರಲಿಲ್ಲ. ಕೋಚ್ ಆಗಿದ್ದ ಶೆಟ್ಟಿ ಚಂದ್ರ ಅದನ್ನು ಹೇಗ್ಹೇಗೋ ಮಾಡಿ ಹೊಂದಿಸಿದರು. ಜಿಆರ್‍ವಿಗೆ ನೆಟ್ಟಗೆ ಕೋಟ್ ಇರಲಿಲ್ಲ. ತಮ್ಮ ಮದುವೆಯ ಕೋಟನ್ನೇ ಹಾಕಿ, ಕಳುಹಿಸಿದ್ದರು. ಬೀದಿ ಬದಿಯಲ್ಲಿ ಆಡಿಕೊಂಡಿದ್ದ ಜಿಆರ್‍ವಿಯನ್ನು ಕರೆದು ಬೆಳೆಸಿದ್ದೇ ಈ ಚಂದ್ರು ಅವರು. ಉಮಾ ಥಿಯೇಟರ್ ಎದುರು ಆಗೊಂದು ಭೂತಬಂಗಲೆ ಇತ್ತು. ಅದರೆದುರು ಒಂದು ಪೇರಳೆ ಮರ. ನೀರಿಗೆ ಅದ್ದಿ ಒದ್ದೆಮಾಡಿದ ಲೆದರ್ ಬಾಲ್‍ಗೆ ತೂತು ಮಾಡಿ, ದಾರ ಕಟ್ಟಿ ಪ್ರ್ಯಾಕ್ಟೀಸ್ ಮಾಡುತ್ತಿದ್ದರು ಜಿಆರ್‍ವಿ. ಶೆಟ್ಟಿ ಚಂದ್ರ ಪಕ್ಕದಲ್ಲೇ ನಿಂತು ಗಮನಿಸುತ್ತಿದ್ದರು. ಆ ಚೆಂಡು ಬ್ಯಾಟಿನ ಮಧ್ಯದಲ್ಲೇ ಬೀಳಬೇಕು. ಎಡ್ಜ್‍ಗೆ ಬಿತ್ತೆಂದರೆ ಜಿಆರ್ ವಿಗೆ ಮಂಡೆಗೆ ಪೆಟ್ಟೇ!

60-70ರ ದಶಕದ ಸ್ಪಿನ್ ತಾರೆ ಬಿ.ಎಸ್. ಚಂದ್ರಶೇಖರ್ ಈಗಲೂ ಮಾಧ್ಯಮದ ಮುಂದೆ ಕಾಣಿಸುವುದು ಅಪರೂಪ. ಪೋಲಿಯೋ ಕಾರಣಕ್ಕಾಗಿ ಅವರು ಖ್ಯಾತ ಲೆಗ್‍ಸ್ಪಿನ್ ಆದಂಥವರು. ಆರೂ ಎಸೆತವನ್ನೂ ಒಂದೇ ಥರ, ಆರೂ ಎಸೆತವನ್ನು ಆರು ಥರ ಹಾಕಬಲ್ಲವರು. ಒಮ್ಮೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯ. ಹಾಕಿದ ನಾಲ್ಕೂ ಎಸೆತಗಳಲ್ಲಿ ಬ್ಯಾಟ್ಸ್ ಮನ್ ಎಲ್‍ಬಿ ಆಗಿ, ಕೀಪರ್ ಕ್ಯಾಚ್ ಆಗಿ, ಏನೇನೋ ಆಗಿ ನಿಚ್ಚಳವಾಗಿ ಔಟಾಗಿದ್ದಾನೆ. ಆದರೆ, ಅವರದ್ದೇ ದೇಶದ ಅಂಪೈರು ಇದನ್ನು ನಿರಾಕರಿಸಿದ. ಐದನೇ ಎಸೆತಕ್ಕೆ ಬ್ಯಾಟ್ಸಮನ್ ಕ್ಲೀನ್ ಬೌಲ್ಡ್. ಆಗ ಚಂದ್ರಶೇಖರ್, `ಏನ್ ಸಾರ್, ಇದು ಔಟಾ?' ಅಂತ ಕೇಳಿದರು. ಅದಕ್ಕೆ ಅಂಪೈರ್, `ಔಟು ಅಂತ ಇಡೀ ಜಗತ್ತಿಗೇ ಗೊತ್ತು'
ಎಂದು ದರ್ಪ ತೋರಿಸಿದ. ಅದಕ್ಕಿವರು, `ಜಗತ್ತಿಗೆ ಗೊತ್ತು, ನಿಮ್ಗೆ ಗೊತ್ತಾ ಅಂತ ಕೇಳ್ದೆ' ಎಂದಾಗ ಅಂಪೈರ್ ತಲೆ ತಗ್ಗಿಸಿದ್ದ.

ಮತ್ತೆ ವಿಶ್ವಕಪ್ ಬಂದಿದೆ. ಇವೆಲ್ಲ ಕಥೆಗಳು ಮತ್ತೆ ಮತ್ತೆ ಮುತ್ತಿಕೊಳ್ಳುತ್ತಿವೆ. ಅವತ್ತಿನ ಕ್ರಿಕೆಟ್ಟೇ ಚೆಂದವೋ, ಇವತ್ತಿನ ಕ್ರಿಕೆಟ್ಟೇ ಅಂದವೋ ಎಂಬ ಪ್ರಶ್ನೆ ಕೆಲವರ ಎದೆಯ ಕೋರ್ಟಿನಲ್ಲಿದೆ. ಏನೇ ಪ್ರಶ್ನೆ ಇದ್ದರೂ ಕ್ರಿಕೆಟ್ ಯಾವತ್ತಿಗೂ ಚೆಂದವೇ ಅನ್ನೋಂದು ಕಟ್ಟಾಭಿಮಾನಿಗಳು ಕೊಡುವ ತೀರ್ಪು. ಈ ಅಮಲಿನ ಕ್ರಿಕೆಟನ್ನು ಒಂದೇ ಕಣ್ಣಿನಲ್ಲೇ ನೋಡಬೇಕಾ, ಎರಡೂ ಕಣ್ಣನ್ನು ಅರಳಿಸಿಕೊಂಡು ನೋಡಬೇಕಾ? ಎಂಬ ಗೊಂದಲ ವಿಕೆಟಿನಂತೆ ಹೂತುಹೋಗಿದೆ. ವಿಶ್ವಕಪ್‍ನ ಚಂಡಮಾರುತ ಬಹುಶಃ ಈ ಗೊಂದಲವನ್ನು ಹೊಡೆದುರುಳಿಸಲೂಬಹುದು.?

-ಕೀರ್ತಿ ಕೋಲ್ಗಾರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com