ಲಸಿಕೆ ಹಾಕಿಸಿಕೊಂಡರೆ ಉಡುಗೊರೆ: ಗ್ರಾಮಸ್ಥರನ್ನು ಪ್ರೋತ್ಸಾಹಿಸಲು ಸಾಮಾಜಿಕ ಕಾರ್ಯಕರ್ತನ ಐಡಿಯಾ!

ತಮಿಳುನಾಡಿನಲ್ಲಿ ಲಸಿಕಾ ಅಭಿಯಾನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲ್ಲಿನ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ಲಸಿಕೆ ಹಾಕಿಸಿಕೊಂಡವರಿಗೆ ಉಡುಗೊರೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಲಸಿಕೆ ಹಾಕಿಸಿಕೊಂಡವರಿಗೆ ಉಡುಗೊರೆ
ಲಸಿಕೆ ಹಾಕಿಸಿಕೊಂಡವರಿಗೆ ಉಡುಗೊರೆ

ಚೆನ್ನೈ: ತಮಿಳುನಾಡಿನಲ್ಲಿ ಲಸಿಕಾ ಅಭಿಯಾನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲ್ಲಿನ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ಲಸಿಕೆ ಹಾಕಿಸಿಕೊಂಡವರಿಗೆ ಉಡುಗೊರೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಲಸಿಕಾ ಅಭಿಯಾನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಲಸಿಕೆ ಹಾಕಿಸಿಕೊಂಡವರಿಗೆ ಅಡುಗೆ ಮನೆ ವಸ್ತುಗಳು ಮತ್ತು ಪ್ಲಾಸ್ಟಿಕ್ ಬಿಂದಿಗೆಗಳು ಸೇರಿದಂತೆ ವಿವಿಧ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಗ್ರಾಮಸ್ಥರನ್ನು ಪ್ರೋತ್ಸಾಹಿಸುವ ಹೊಸ ಪ್ರಯತ್ನವನ್ನು ಪ್ರಾರಂಭಿಸಲಾಗಿದೆ.

ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಉಲುಂದರ್‌ಪೇಟೆ ಬಳಿಯ ಎಂ.ಗುನ್ನಥೂರು ಗ್ರಾಮದಲ್ಲಿ 3,000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇಲ್ಲಿ ಈವರೆಗೂ 20 ಕ್ಕೂ ಹೆಚ್ಚು ಜನರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಇದೇ ಕಾರಣಕ್ಕೆ ಇಲ್ಲಿ ಕಳೆದ 3 ದಿನಗಳಿಂದ ಗ್ರಾಮದಲ್ಲಿ ರಾಜ್ಯ ಆರೋಗ್ಯ ಇಲಾಖೆ ವಿಶೇಷ  ಕೊರೋನಾ ಲಸಿಕೆ ಶಿಬಿರ ನಡೆಸುತ್ತಿದೆ. ಅಲ್ಲದೆ ನಿತ್ಯ 500ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿತ್ತು. ಆದರೆ 48 ಗಂಟೆಗಳಲ್ಲಿ ಕೇವಲ 50 ಮಂದಿಗೆ ಮಾತ್ರ ಲಸಿಕೆ ಹಾಕಲು ಆರೋಗ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಲಸಿಕೆ ಕುರಿತು ಗ್ರಾಮಸ್ಥರಲ್ಲಿ ಇರುವ ಭಯ ಮತ್ತು ತಪ್ಪು ಕಲ್ಪನೆಗಳು ಅವರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಾರದಂತೆ ಮಾಡಿದೆ. ಇದು ಲಸಿಕಾ ಶಿಬಿರದಲ್ಲಿ ಪಾಲ್ಗೊಂಡಿರುವ ಆರೋಗ್ಯ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿತ್ತು. ಇದೇ ಸಂದರ್ಭದಲ್ಲಿ ಪರಿಸ್ಥಿತಿ ಮನಗಂಡ ಗ್ರಾಮದ ಸಾಮಾಜಿಕ ಕಾರ್ಯಕರ್ತ, ತಂಬಿದುರೈ ಮತ್ತು ಅವರ ಯುವಕರ ತಂಡ ಗ್ರಾಮಸ್ಥರಲ್ಲಿ ಲಸಿಕೆ ಕುರಿತಂತೆ ಇರುವ ತಪ್ಪುಕಲ್ಪನೆಗಳನ್ನು ಹೋಗಲಾಡಿಸಲು ಮುಂದಾದರು. ಅಲ್ಲದೆ ಲಸಿಕೆ ಹಾಕಿಸಿಕೊಂಡವರಿಗೆ ಪ್ರೋತ್ಸಾಹವಾಗಿ ಅಡುಗೆ ಮನೆ ವಸ್ತುಗಳು ಸೇರಿದಂತೆ ಇತರೆ ಉಡುಗೊರೆಗಳನ್ನು ಹಂಚಲು ಮುಂದಾದರು. ಲಸಿಕೆ ಹಾಕಿಸಿಕೊಳ್ಳಲು ಬರುವವರಿಗೆ ಪ್ಲೇಟ್, ಗ್ಲಾಸ್, ಟಿಫನ್ ಬಾಕ್ಸ್ ಮತ್ತು ಪ್ಲಾಸ್ಟಿಕ್ ಬಿಂದಿಗೆಯಂತಹ ವಸ್ತುಗಳನ್ನು ನೀಡುತ್ತಿದ್ದಾರೆ.

ಕೊರೋನಾ ಲಸಿಕೆ ಪಡೆಯಲು ಬರುವ ಪ್ರತಿಯೊಬ್ಬರೂ ಮೇಲಿನ ಒಂದು ವಸ್ತುವನ್ನು ಉಡುಗೊರೆಯಾಗಿ ತೆಗೆದುಕೊಳ್ಳಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ್ದಾರೆ. ಈ ಪ್ರಕಟಣೆ ಗುನ್ನತೂರು ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹರಡಿ, ಲಸಿಕಾ ಶಿಬಿರದತ್ತ ಜನ ಸಾಗರವೇ ಹರಿಯುತ್ತಿದೆ. ಈ ಹಿಂದೆ ವೈದ್ಯರೇ ಕರೆದು ಕರೆದು ಲಸಿಕೆ ನೀಡುತ್ತೇವೆ ಎಂದರೂ ಹಾಕಿಸಿಕೊಳ್ಳದ ಜನ ಇದೀಗ ಸರತಿ ಸಾಲಲ್ಲಿ ಗಂಟೆಗಟ್ಟಲೆ ಕಾದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಅದರಂತೆ ನಿನ್ನೆ ಒಂದೇ ದಿನ 80 ಗ್ರಾಮಸ್ಥರಿಗೆ ಲಸಿಕೆ ಹಾಕಲಾಗಿದೆ. 

ಇನ್ನು ತಂಬಿದುರೈ ಮತ್ತು ಅವರ ತಂಡದ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ತಮ್ಮ ಕಾರ್ಯವನ್ನು ಸುತ್ತಮುತ್ತಲಿನ ಗ್ರಾಮಗಳಿಗೂ ವಿಸ್ತರಿಸುವಂತೆ ಬೇಡಿಕೆ ಶುರುವಾಗಿದೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ತಂಬಿದುರೈ ಅವರು, ಲಸಿಕೆ ಹಾಕಿಸಿಕೊಳ್ಳಲು ಯಾರೂ ಮುಂದೆ ಬಾರದೇ ಇದ್ದಾಗ ಈ ಅಭಿಯಾನಕ್ಕೆ ಏನಾದರೂ ಮಾಡಬೇಕು ಎಂದೆನಿಸಿತು. ಹೀಗಾಗಿ ಅಡುಗೆ ಮನೆಗೆ ಬೇಕಾಗುವ ವಸ್ತುಗಳನ್ನು ತಂದು ಕೊಡುವ ಕುರಿತು ನಾವು ನಿರ್ಧರಿಸಿದೆವು. ಅದರಂತೆ ತಟ್ಟೆ, ಲೋಟ, ಪಾತ್ರೆಗಳು  ಸೇರಿದಂತೆ ಹಲವು ರೀತಿಯ ವಸ್ತುಗಳನ್ನು ತಂದು ಲಸಿಕೆ ಹಾಕಿಸಿಕೊಂಡ ಗ್ರಾಮಸ್ಥರಿಗೆ ಹಂಚಿಕೆ ಮಾಡುತ್ತಿದ್ದೇವೆ. ನಮ್ಮ ಈ ಉಪಾಯ ಯಶಸ್ವಿಯಾಗಿದ್ದು, 48 ಗಂಟೆಗಳಲ್ಲಿ 50ಕ್ಕಿಂತ ಕಡಿಮೆ ಇದ್ದ ಫಲಾನುಭವಿಗಳ ಸಂಖ್ಯೆ ಇದೀಗ 130ರ ಗಡಿ ದಾಡಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ 80ಕ್ಕೂ ಹೆಚ್ಚು ಮಂದಿ  ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com