ಕೋವಿಡ್-19: ಹಗಲಿರುಳು ಸೋಂಕಿತರ ಸೇವೆ ಮಾಡುತ್ತಿರುವ ರಾಜ್ಯದ ಈ ನರ್ಸ್'ಗೆ ಆಸ್ಪತ್ರೆಯೇ ಮೊದಲ ಮನೆ

ಮಹಾಮಾರಿ ಕೊರೋನಾ ಸೋಂಕಿಗೊಳಗಾಗಿ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳ ಸೇವೆಗಾಗಿ ಹಗಲಿರುಳು ದುಡಿಯುತ್ತಿರುವ ರಾಜ್ಯದ ಈ ನರ್ಸ್'ಗೆ ಆಸ್ಪತ್ರೆಯೇ ಮೊದಲ ಮನೆಯಾಗಿ ಹೋಗಿದೆ.
ನರ್ಸ್ ಶೋಭಾ
ನರ್ಸ್ ಶೋಭಾ

ಶಿವಮೊಗ್ಗ: ಮಹಾಮಾರಿ ಕೊರೋನಾ ಸೋಂಕಿಗೊಳಗಾಗಿ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳ ಸೇವೆಗಾಗಿ ಹಗಲಿರುಳು ದುಡಿಯುತ್ತಿರುವ ರಾಜ್ಯದ ಈ ನರ್ಸ್'ಗೆ ಆಸ್ಪತ್ರೆಯೇ ಮೊದಲ ಮನೆಯಾಗಿ ಹೋಗಿದೆ. 

ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಳೆದ 14 ವರ್ಷಗಳಿಂದ 42 ವರ್ಷದ ಶೋಭಾ ಕೆ ಸೇವೆ ಸಲ್ಲಿಸುತ್ತಿದ್ದು, ಆಸ್ಪತ್ರೆಯಲ್ಲಿ ಎಐಸಿ (ವೈದ್ಯಕೀಯ ತುರ್ತುನಿಗಾ ಘಟಕ) ಶೋಭಾ ಎಂದೇ ಗುರ್ತಿಕೆ ಪಡೆದುಕೊಂಡಿದ್ದಾರೆ. 

ಪೋಷಕರಿಗೆ ದೊಡ್ಡ ಮಗಳಾಗಿರುವ ಶೋಭಾ ಅವರು ಅವಿವಾಹಿತರಾಗಿದ್ದು, ಇವರಿಗೆ ಇಬ್ಬರು ತಂಗಿ ಹಾಗೂ ಓರ್ವ ಸಹೋದರನಿದ್ದಾನೆ. ಮೊದಲ ಬಾರಿಗೆ ಕೊರೋನಾ ಕರ್ತವ್ಯಕ್ಕೆ ನಿಯೋಜನೆಗೊಂಡಾಗ ಮನೆ ಬಾಡಿಗೆ ಪಡೆದು, ಮನೆಯವರಿಂದ ಪ್ರತ್ಯೇಕವಾಗಿದ್ದು, ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಬಳಿಕ ಆಸ್ಪತ್ರೆಯ ಸಿಬ್ಬಂದಿಗಳು ಸಹಾಯ ಮಾಡಿ, ಕ್ವಾರ್ಟರ್ಸ್ ನಲ್ಲಿ ಮನೆಯನ್ನು ಕೊಡಿಸಿದ್ದರು. 

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ನನಗೇನು ಭಯವಿಲ್ಲ. ಆದರೆ, ಅವರ ಆರೋಗ್ಯ ಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಸೋಂಕಿತರಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡುವುದು ನನ್ನ ಜವಾಬ್ದಾರಿ ಎಂದು ನಾನು ತಿಳಿಯುತ್ತೇನೆಂದು ಶೋಭಾ ಅವರು ಹೇಳಿದ್ದಾರೆ. 

2001ರಲ್ಲಿ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದ ಶೋಭಾ ಅವರು, ನಂತರ ಸಾಗರದ ಏಡ್ಸ್ ಕೇಂದ್ರದಲ್ಲಿ ಹೆಚ್ಐಸಿ ಪಾಸಿಟಿವ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರು. ಹಲವು ವರ್ಷಗಳ ಬಳಿಕ ರಾಮಯ್ಯ ಆಸ್ಪತ್ರೆಗೆ ಸೇರ್ಪಡೆಗೊಂಡು ಸೇವೆ ಸಲ್ಲಿಸಲು ಆರಂಭಿಸಿದ್ದರು. ಇದಾದ ಬಳಿಕ ಮೆಗ್ಗಾನ್ ಆಸ್ಪತ್ರೆಗೆ ನರ್ಸ್ ಆಗಿ ಸೇರ್ಪಡೆಗೊಂಡಿದ್ದರು. 

ಆಸ್ಪತ್ರೆಯ ಸಹೋದ್ಯೋಗಿಗಳಿಂದ ತಮ್ಮ ಬಲವನ್ನು ಹೆಚ್ಚಿಸಿಕೊಂಡ ಶೋಭಾ ಅವರು, ಹಗಲಿರುಳು ದುಡಿದು ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಚಿಕಿತ್ಸೆ ಪಡೆಯುವ ರೋಗಿಗಳ ಮನಸ್ಸು ಗೆದ್ದಿದ್ದಾರೆ. ವೈದ್ಯರು ನಿರ್ಭೀತಿಯಿಂದ ಕರ್ತವ್ಯ ನಿಭಾಯಿಸುತ್ತಿರುವಾಗ ನನಗೂ ಭಯವಿಲ್ಲ. ನಮ್ಮೆಲ್ಲಾ ಸಿಬ್ಬಂದಿಗಳು ಹಾಗೂ ವೈದ್ಯರು ಸಾಕಷ್ಟು ಬೆಂಬಲ ನೀಡುತ್ತಿದ್ದಾರೆ. ಸಾಮಾನ್ಯ ರೋಗಿಗಳಂತೆಯೇ ಕೊರೋನಾ ಸೋಂಕಿತರನ್ನೂ ನೋಡುತ್ತಿದ್ದೇನೆಂದು ಶೋಭಾ ಅವರು ಹೇಳಿದ್ದಾರೆ. 

ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರ ಸ್ಥಿತಿ ನೋಡಿದರೆ, ಹೃದಯ ತುಂಬಿ ಬರುತ್ತದೆ. ತುರ್ತುನಿಗಾ ಘಟಕಕ್ಕೆ ದಾಖಲು ಮಾಡುವಾಗ ಕುಟುಂಬಸ್ಥರು ಸಾಕಷ್ಟು ಆತಂಕಕ್ಕೊಳಗಾಗಿರುತ್ತಾರೆ. ಆದರೆ, ಈ ಘಟಕದಲ್ಲಿಯೇ ರೋಗಿಗಳನ್ನು ಅತ್ಯಂತ ಸೂಕ್ಷ್ಮವಾಗಿ ನೋಡಿಕೊಳ್ಳಲಾಗುತ್ತದೆ. ಆಸ್ಪತ್ರೆಗೆ ದಾಖಲಾಗಿದ್ದ ಶೇ.90ರಷ್ಟು ಮಂದಿ ಗುಣಮುಖರಾಗಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾಗುವವರನ್ನು ರಕ್ಷಣೆ ಮಾಡುವುದು ಅತ್ಯಂತ ಕಷ್ಟಕರವಾಗಿರುತ್ತದೆ. ತುರ್ತು ನಿಗಾ ಘಟಕವೇ ಇದೀಗ ನನ್ನ ಮೊದಲ ಮನೆಯಾಗಿ ಹೋಗಿದೆ ಎಂದು ತಿಳಿಸಿದ್ದಾರೆ. 

ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಸ್.ಶ್ರೀಧರ್ ಅವರು ಮಾತನಾಡಿ, ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಶೋಭಾ ಅವರು ಅತ್ಯಂತ ಸಮರ್ಪಿತ, ಆತ್ಮವಿಶ್ವಾಸವಿರುವ ಮತ್ತು ಧೈರ್ಯಶಾಲಿ ಮಹಿಳೆಯಾಗಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಅಪಾಯಕ್ಕೂ ಸಿಲುಕಿಕೊಳ್ಳಲೂ ಸಿದ್ಧರಿರುತ್ತಾರೆಂದು ಹೇಳಿದ್ದಾರೆ. 

ಕಳೆದ ತಿಂಗಳಷ್ಟೇ ಕರ್ತವ್ಯದಿಂದ ನಿವೃತ್ತಿ ಹೊಂದಿದ್ದ ಚಂದ್ರಮತಿ ಹೆಗಡೆ ಎಂಬುವವರು ಮಾತನಾಡಿ, ಯಾವುದೇ ತುರ್ತು ಸಂದರ್ಭದಲ್ಲಿಯೇ ಕರೆದರೂ ಬರುವುದಿಲ್ಲ ಎಂದು ಎಂದಿಗೂ ಶೋಭಾ ಹೇಳುತ್ತಿರಲಿಲ್ಲ. ಇತರರಿಗೆ ಅವರು ಮಾದರಿಯಾಗಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com