ಮೆಡಿಸಿನ್ ಮ್ಯಾನ್: ಕಾರನ್ನೇ ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಿ, ಕೋವಿಡ್ ಸೋಂಕಿತರಿಗೆ ನೆರವಾಗುತ್ತಿರುವ ವೈದ್ಯ!

ಬೆಂಗಳೂರು ಮೂಲದ ವೈದ್ಯರೊಬ್ಬರು ತಮ್ಮ ಕಾರನ್ನೇ ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಿ, ಕೊರೋನಾ ಸೋಂಕಿಗೊಳಗಾದ ಬಡವರಿಗೆ ಅವರ ಮನೆಗಳಿಗೇ ತೆರಳಿ ಉಚಿತವಾಗಿ ವೈದ್ಯಕೀಯ ಸೇವೆಗಳನ್ನು ನೀಡುತ್ತಿದ್ದಾರೆ. 
ಡಾ.ಸುನೀಲ್ ಕುಮಾರ್ ಹೆಬ್ಬಿ
ಡಾ.ಸುನೀಲ್ ಕುಮಾರ್ ಹೆಬ್ಬಿ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಭಾರತ ಬೆನ್ನು ಬಿಡದಂತೆ ಕಾಡುತ್ತಲೇ ಇಂದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನಿದ್ಯ ನೂರಾರು ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಈ ಬಿಕ್ಕಟ್ಟಿನ ನಡುವೆ, ಬೆಂಗಳೂರು ಮೂಲದ ವೈದ್ಯರೊಬ್ಬರು ತಮ್ಮ ಕಾರನ್ನೇ ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಿ, ಸೋಂಕಿಗೊಳಗಾದ ಬಡವರಿಗೆ ಅವರ ಮನೆಗಳಿಗೇ ತೆರಳಿ ಉಚಿತವಾಗಿ ವೈದ್ಯಕೀಯ ಸೇವೆಗಳನ್ನು ನೀಡುತ್ತಿದ್ದಾರೆ. 

ಮಲ್ಲೇಶ್ವರಂ ನಿವಾಸಿಯಾಗಿರುವ ಡಾ.ಸುನೀಲ್ ಕುಮಾರ್ ಹೆಬ್ಬಿ ಅವರು, ರಾತ್ರಿ 8 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಗೋರಿಪಾಳ್ಯದಲ್ಲಿರುವ ಬಿಬಿಎಂಪಿ ಕೋವಿಡ್ ಕೇರ್ ಕೇಂದ್ರದಲ್ಲಿ ಒಪ್ಪಂದದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಕೇರ್ ಕೇಂದ್ರದಲ್ಲಿ ಕೆಲಸ ಪೂರ್ಣಗೊಂಡ ಬಳಿಕ 2 ಗಂಟೆಗಳ ಕಾಲ ವಿರಾಮ ತೆಗೆದುಕೊಂಡು ಮತ್ತೆ ಬೆಳಿಗ್ಗೆ 10 ಗಂಟೆಯಿಂದ ತಮ್ಮ ಮೊಬೈಲ್ ಕಾರ್ ಕ್ಲಿನಿಕ್ ಸೇವೆ ಆರಂಭಿಸುತ್ತಾರೆ. 

ನಿದ್ರಿಸಲು ಸಮಯ ತೆಗೆದುಕೊಳ್ಳದ ಅವರು, ಪ್ರತೀನಿತ್ಯ ಸೋಂಕಿಗೊಳಗಾದ ಬಡವರಿಗೆ ಅವರ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. 

ವಿಜಯಪುರದಲ್ಲಿ ಹುಟ್ಟಿ, ಬೆಳೆದ ಹೆಬ್ಬಿಯವರು, ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. 2011ರಲ್ಲಿ ಕೆಲಸ ಬಿಟ್ಟ ಅವರು ನಂತರ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಮನಸ್ಸು ಮಾಡಿದ್ದರು. 

ಮಾತೃ ಸಿರಿ ಫೌಂಡೇಶನ್ ಹೆಸರಿನಲ್ಲಿ ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಿರುವ ಹೆಬ್ಬಿಯವರಿಗೆ, ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚಾದ ಬಳಿಕ ಸಹಾಯ ಕೋರಿ ಹಲವರು ದೂರವಾಣಿ ಕರೆ ಮಾಡುತ್ತಿದ್ದಾರೆ. ತಮ್ಮ ಆಪ್ತರಿಂದ ರೂ.2 ಲಕ್ಷದಷ್ಟು ದೇಣಿಗೆ ಪಡೆದ ಹೆಬ್ಬೀಯವರು ತಮ್ಮ ಬಳಿಯಿರುವ ಕಾರನ್ನೇ ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಿ, ವೈದ್ಯಕೀಯ ಸಲಕರಣೆಗಳನ್ನು ಇಟ್ಟುಕೊಂಡು ಬಡವರಿಗೆ ನೆರವಾಗುತ್ತಿದ್ದಾರೆ.

ಸಣ್ಣ ಪ್ರಮಾಣ ಕೊರೋನಾ ಲಕ್ಷಣಗಳಿರುವವರಿಗೆ ನಾನು ಚಿಕಿತ್ಸೆ ನೀಡುತ್ತಿದ್ದೇನೆ. ಮೊದಲಿಗೆ ಸೋಂಕಿತ ವ್ಯಕ್ತಿಯ ಆಕ್ಸಿಜನ್ ಪ್ರಮಾಣವನ್ನು ಅರಿತುಕೊಂಡು, ಫೋನ್ ಮೂಲಕವೇ ಔಷಧಿ ನೀಡಲು ಪ್ರಯತ್ನಿಸುತ್ತೇನೆ. ಪರಿಸ್ಥಿತಿ ಬಿಗಡಾಯಿಸಿದೆ ಎಂದು ತಿಳಿದರೆ, ಕೂಡಲೇ ಸೋಂಕಿತ ವ್ಯಕ್ತಿಯ ಮನೆಗೇ ತೆರಳಿ ಚಿಕಿತ್ಸೆ ನೀಡುತ್ತಿದ್ದೇನೆಂದು ಡಾ.ಹೆಬ್ಬಿಯವರು ಹೇಳಿದ್ದಾರೆ. 

ಕೇವಲ ವೈದ್ಯಕೀಯ ಸೇವೆ ಕೇಳಿಯಷ್ಟೇ ಅಲ್ಲ, ಇತರೆ ಸಮಸ್ಯೆಗಳನ್ನು ಹೇಳಿಕೊಂಡು ಡಾ.ಹೆಬ್ಬಿಯವರಿಗೆ ಜನರು ದೂರವಾಣಿ ಕರೆ ಮಾಡುತ್ತಿದ್ದಾರೆ. ಆದರೆ, ಯಾರೊಬ್ಬರಿಗೂ ಇಲ್ಲ ಎಂದು ಹೇಳದೆ ಹೆಬ್ಬಿಯವರು ತಮ್ಮ ಸಮಾಜ ಸೇವೆಯನ್ನು ಮುಂದುವರೆಸಿದ್ದಾರೆ. 

ಕಳೆದ ವಾರ ವ್ಯಕ್ಯಿಯೊಬ್ಬರಿಗೆ ಆಸ್ಪತ್ರೆಗೆ ತೆರಳುವ ಅವಶ್ಯಕತೆ ಎದುರಾಗಿದೆ. ಆದರೆ, 3 ಕಿಮೀ ದೂರದಲ್ಲಿರುವ ಆಸ್ಪತೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್ ಚಾಲಕನೊಬ್ಬ ರೂ.12,000 ಕೇಳಿದ್ದಾನೆ. ಬಳಿಕ ಆ ವ್ಯಕ್ತಿ ನನಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದ. ನಂತರ ವ್ಯಕ್ತಿಯನ್ನು ಎಲೆಕ್ಟ್ರಾನಿಕ್ ಸಿಟಿಯ ಆಸ್ಪತ್ರೆಗೆ ಡ್ರಾಪ್ ಮಾಡಿದ್ದೆ. 

ಕೊರೋನಾ ಸೋಂಕಿಗೊಳಗಾಗಿ ಕೆಲ ದಿನಗಳ ಹಿಂದಷ್ಟೇ ನನ್ನ ಅಣ್ಣನ ಮಗ ತೀರಿಕೊಂಡಿದ್ದ. ಬಳಿಕ ನನ್ನ ಕುಟುಂಬದವರು ಮೊಬೈಲ್ ಕ್ಲಿನಿಕ್ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದರು. ಆದರೆ, ಸೋಂಕಿತರ ಕುಟುಂಬಸ್ಥರ ನೋವು, ಚೀರಾಟ ನೋಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಣ್ಣನ ಮಗನ ಸಾವಿನ ಬಳಿಕ ಮರುದಿನವೇ ಮರಳಿ ನನ್ನ ಸೇವೆ ಆರಂಭಿಸಿದ್ದೆ ಎಂದು ಡಾ.ಹೆಬ್ಬಿ ತಿಳಿಸಿದ್ದಾರೆ. 

ಪ್ರತೀನಿತ್ಯ 10-12 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ಕೆಲವೊಮ್ಮೆ ಸೋಂಕಿತರಿಗೆ ಚಿಕಿತ್ಸೆ ನೀಡಲು ನಗರದಿಂದ 120 ಕಿಮೀ ದೂರ ಹೋಗಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ. ಗಗನಕ್ಕೇರಿರುವ ಪೆಟ್ರೋಲ್ ಬೆಲೆ, ಔಷಧಿ, ವೈದ್ಯಕೀಯ ಸಲಕರಣೆಗಳ ಬೆಲೆ ಕೂಡ ಏರಿಕೆಯಾಗಿದ್ದು, ಮೊಬೈಲ್ ಕ್ಲಿನಿಕ್ ಮುಂದುವರೆಸುವುದು ಕಷ್ಟವಾಗುತ್ತಿದೆ. ಸೆಕೆಂಡ್ ಹ್ಯಾಂಡ್ ಟೆಂಪೋ ತೆಗೆದುಕೊಳ್ಳಲು ಪ್ರಯತ್ನಿಸಿದ್ದೆ. ವ್ಯಕ್ತಿಯೊಬ್ಬನ ಬಳಿ ಬೆಲೆಯನ್ನೂ ಮಾತನಾಡಿದ್ದೆ. ಆದರೆ, ಆ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಇದೀಗ ದೇಣಿಗೆಗಾಗಿ ನಿರೀಕ್ಷಿಸುತ್ತಿದ್ದೇನೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com