ಬಂಗಾಳದ ವಲಸೆ ಕಾರ್ಮಿಕನಿಗೆ ಒಲಿದ 70 ಲಕ್ಷ ರೂ. ಕೇರಳ ಬಂಪರ್ ಲಾಟರಿ: ಪೊಲೀಸ್ ಠಾಣೆಗೆ ಓಡಿದ ವಿಜೇತ

ಬಂಗಾಳದ ಮಾಲ್ಡಾ ನಿವಾಸಿಯಾದ ಇಮಾಮ್  ತನಗೊಲಿದ ಲಾಟರಿ ಹಣದಲ್ಲಿ ಸ್ವಂತ ಮನೆ ಖರೀದಿ ಮತ್ತು ಸ್ವಂತ ಅಂಗಡಿ ತೆರಯುವುದಾಗಿ ಇಮಾಮ್ ಹೇಳಿದ್ದಾನೆ.
ಬಂಗಾಳದ ವಲಸೆ ಕಾರ್ಮಿಕನಿಗೆ ಒಲಿದ 70 ಲಕ್ಷ ರೂ. ಕೇರಳ ಬಂಪರ್ ಲಾಟರಿ: ಪೊಲೀಸ್ ಠಾಣೆಗೆ ಓಡಿದ ವಿಜೇತ

ಕೊಚ್ಚಿ: ಪಶ್ಚಿಮ ಬಂಗಾಳದ ಇಮಾಮ್ ಹುಸೇನ್ 5 ವರ್ಷಗಳ ಹಿಂದೆ ಕೆಲಸ ಅರಸಿ ಕುಟುಂಬ ಸಮೇತ ಕೇರಳಕ್ಕೆ ಬಂದಿದ್ದ. ಆತ ಕಳೆದ ವಾರ 5 ಕೇರಳ ರಾಜ್ಯ ಲಾಟರಿ ಟಿಕೆಟ್ ಗಳನ್ನು ಖರೀದಿಸಿದ್ದ. 

ಇಮಾಮ್ ತನ್ನ ದಿನ ನಿತ್ಯದ ಸಂಪಾದನೆಯಲ್ಲಿ ಇಂತಿಷ್ಟು ಮೊತ್ತವನ್ನು ಲಾಟರಿ ಖರೀದಿಗೆ ಮೀಸಲಿಡುತ್ತಿದ್ದ ಮತ್ತು ಆ ಹಣದಲ್ಲಿ ಲಾಟರಿ ಟಿಕೆಟ್ ಖರೀದಿಸಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದ. ಆತನ ಲಾಟರಿ ಟಿಕೆಟ್ ಕೊಳ್ಳುವ ಹವ್ಯಾಸ ಕಡೆಗೂ ಫಲ ನೀಡಿದೆ. 

ಬಂಗಾಳದ ಮಾಲ್ಡಾ ನಿವಾಸಿಯಾದ ಇಮಾಮ್ ಕೇರಳದ ಎಡತನಟ್ಟುಕ್ಕರ ಎಂಬಲ್ಲಿ ನೆಲೆಸಿದ್ದ. ಇದೀಗ ತನಗೊಲಿದ ಲಾಟರಿ ಹಣದಲ್ಲಿ ಸ್ವಂತ ಮನೆ ಖರೀದಿ ಮತ್ತು ಸ್ವಂತ ಅಂಗಡಿ ತೆರಯುವುದಾಗಿ ಇಮಾಮ್ ಹೇಳಿದ್ದಾನೆ.

ಬಹುಮಾನ ಗೆದ್ದಿರುವುದು ತಿಳಿಯುತ್ತಲೇ ಇಮಾಮ್ ಮಾಡಿದ ಮೊದಲ ಕೆಲಸ ಏನೆಂದರೆ ಪೊಲೀಸ್ ಠಾಣೆಗೆ ತೆರಳಿದ್ದು. ಅಲ್ಲಿಂದಲೇ ಬ್ಯಾಂಕ್ ಅಧಿಕಾರಿಗಳನ್ನು ಆತ ಸಂಪರ್ಕಿಸಿದ್ದ. ಬ್ಯಾಂಕ್ ಅಧಿಕಾರಿಗಳು ಮರುದಿನ ತಾವೇ ಪೊಲೀಸ್ ಠಾಣೆಗೆ ಬಂಡು ಲಾಟರಿ ಟಿಕೆಟ್ ಪಡೆದುಕೊಳ್ಳುವುದಾಗಿ ಹೇಳಿದ್ದರು. 

ಆ ದಿನ ರಾತ್ರಿ ಪೂರ್ತಿ ಇಮಾಮ್ ಪೊಲೀಸ್ ಠಾಣೆಯಲ್ಲೇ ಕಳೆದಿದ್ದ. ಬ್ಯಾಂಕ್ ಅಧಿಕಾರಿಗಳು ಬಂದ ಬಳಿಕವಷ್ಟೇ ಆತ ಠಾಣೆಯಿಂದ ಹಿಂದಿರುಗಿದ್ದು. ಲಾಟರಿ ಟಿಕೆಟ್ ಅನ್ನು ಪೊಲೀಸರ ಸಮ್ಮುಖದಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ. 

ಇಮಾಮ್ ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ಒದಗಿಸಬೇಕಿದೆ. ಆ ದಾಖಲೆಗಳು ಆತನ ಊರಿನಲ್ಲಿರುವುದರಿಂದ ದಾಖಲೆ ನೀಡಲು ಸಮಯಾವಕಾಶ ಕೇಳಿದ್ದಾನೆ. ಈ ಪ್ರಕ್ರಿಯೆ ಮುಗಿದ ಒಂದೆರಡು ತಿಂಗಳುಗಳಲ್ಲಿ 70 ಲಕ್ಷ ಬಹುಮಾನದ ಹಣ ಇಮಾಮ್ ಬ್ಯಾಂಕ್ ಖಾತೆಗೆ ಸಂದಾಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com