
‘ಹಾಳು ಹರಟೆಯಿಂದ ಸಮಯ ವ್ಯರ್ಥ’ ಎಂದು ಯಾರೆಷ್ಟೇ ದೂರಿದರೂ ಹರಟೆ ಕೊಡುವ ಸಂತಸ ಕಡಿಮೆಯೇನಲ್ಲ. ಈ ಆಧುನಿಕ ಜೀವನದಲ್ಲಿ ದುಡ್ಡು, ಕೆಲಸ ಎಂದು ಜನರು ಮಾತನಾಡುವುದು, ನಗುವುದನ್ನೇ ಕಡಿಮೆ ಮಾಡಿಬಿಟ್ಟಿದ್ದಾರೆ.
ಪ್ರಪಂಚದಲ್ಲಿ ಇಂದು ನಡೆದಿರುವ ನೂರಾರು ಸಂಶೋಧನೆಗಳ ಪೈಕಿ ‘ನೊಂದ ಮನಗಳಿಗೆ ನೆಮ್ಮದಿ ನೀಡುವುದು ಹೇಗೆ?’ ಎನ್ನುವ ವಿಷಯ ಸೇರಿಕೊಂಡಿದ್ದರೂ ಅಚ್ಚರಿ ಪಡಬೇಕಾಗಿಲ್ಲ. ಸೇರಿರದಿದ್ದರೆ ಸೇರಿಸಿದರೂ ತಪ್ಪೇನಿಲ್ಲ! ಏಕೆಂದರೆ ಎಷ್ಟು ದುಡ್ಡು ನೀಡಿದರೂ, ಎಲ್ಲೇ ಹುಡುಕಿದರೂ ಈಗ ಅದು ಸಿಗದ ವಸ್ತುವಾಗಿದೆ. ಕೆಲವರು ಎಲ್ಲಿದ್ದರೂ ಇದ್ದುದರಲ್ಲೇ ನೆಮ್ಮದಿಯಿಂದ ಇರುತ್ತಾರೆ ಎನ್ನುವುದು ಬೇರೆ ವಿಷಯ. ಆಫೀಸ್ ಒತ್ತಡ, ಮನೆಯ ರಗಳೆ, ವೈಯಕ್ತಿಕ ಸಮಸ್ಯೆಗಳ ಏಕತಾನತೆಯಿಂದ ಸ್ವಲ್ಪ ಹೊತ್ತು ಮಾನಸಿಕವಾಗಿ ದೂರವಿರಲು ಒಂದಿಷ್ಟು ಮಂದಿ ನಾನಾ ಉಪಾಯ ಕಂಡುಕೊಂಡಿರುತ್ತಾರೆ. ವೀಕೆಂಡ್ ಪಿಕ್‌ನಿಕ್, ಕ್ಷೇತ್ರ ದರ್ಶನ, ಸಿನಿಮಾ, ಪಾರ್ಕು, ಪಾರ್ಟಿ... ಎಟ್ಸೆಟ್ರಾ.
ಇವೆಲ್ಲ ಭರ್ತಿ ಬಿಸಿಲಿನಲ್ಲಿ ದಣಿದು ಬಂದವ ಗಂಟಲಿಗೊಂದಿಷ್ಟು ತಂಪು ಪಾನೀಯ ಸುರುವಿಕೊಂಡಾಗ ನೀಡುವಷ್ಟೇ ಸಮಾಧಾನ ನೀಡುತ್ತವೆ. ಭಾನುವಾರ ರಾತ್ರಿ ಮತ್ತೆ ಕೌಂಟ್‌ಡೌನ್ ಶುರುವಾಗುತ್ತದೆ. ಸೋಮವಾರ ಬೆಳಗ್ಗೆ ಮನಸ್ಸು ಮತ್ತದೇ ಒತ್ತಡದ ಹಳಿಯ ಮೇಲೆ ಓಡಲು ಆರಂಭಿಸುತ್ತದೆ. ಇದು ಈಗ ಅನಿವಾರ್ಯ ಅಷ್ಟೇ ಅಲ್ಲ, ಜಗದ ನಿಯಮವೇ ಆಗಿಬಿಟ್ಟಿದೆ. ಹಳ್ಳಿಗಳಲ್ಲೂ ಇಂದು ಇದೇ ರೀತಿಯ ಪರಿಸ್ಥಿತಿಗಳು ಎದುರಾಗತೊಡಗಿವೆ.
ಹಿಂದೆಲ್ಲಾ ಒತ್ತಡ ನಿವಾರಿಸಲು ಹರಟೆ ಕಟ್ಟೆಗಳಿರುತ್ತಿದ್ದವು. ‘ಊರಿಗೊಂದು ಹನುಮಪ್ಪನ ಗುಡಿ’ ಅನ್ನುವ ಹಾಗೆ ಹಳ್ಳಿಗೊಂದು ಅರಳಿಕಟ್ಟೆ ಇದ್ದೇ ಇರುತ್ತಿತ್ತು. ಒಂದೊಂದು ಕಟ್ಟೆಗೂ ಒಂದೊಂದು ಹೆಸರಿರುತ್ತಿತ್ತು. ಈ ಕಟ್ಟೆಗಳು ಸಾಮಾನ್ಯವಾಗಿ ಇದು ಭೂಮಿಮಟ್ಟದಿಂದ ನಾಲ್ಕಡಿಯಷ್ಟಾದರೂ ಎತ್ತರ ಇರುತ್ತದೆ. ಹಳ್ಳಿಯ ಕಟ್ಟೆಗಳು ಕೇವಲ ಕಲ್ಲುಮಣ್ಣಿನ ಕಟ್ಟೆಗಳಾಗಿರಲಿಲ್ಲ. ಪ್ರತಿದಿನ ಒಂದೊಂದು ಸಮಯಕ್ಕೆ ಅವು ಜೀವ ತಳೆಯುತ್ತಿದ್ದವು.
ಆಯಾ ಸಮಯಕ್ಕೆ ಜನ ಅಲ್ಲಿ ಬಂದು ಸೇರುತ್ತಿದ್ದರು. ಎರಡ್ಮೂರು ತಾಸು ಏನೇನೋ ವಿಚಾರಗಳು ಅಲ್ಲಿ ಹರಿದಾಡುತ್ತಿದ್ದವು. ಊರ ಸುದ್ದಿ, ನೆರೆಯೂರುಗಳ ಸುದ್ದಿ, ನಾಡು-ದೇಶಗಳ ಸುದ್ದಿ ಅಲ್ಲಿ ವಿನಿಮಯಗೊಳುತ್ತಿದ್ದವು. ಹರಟೆ-ನಗೆ-ಕೇಕೆಗಳಿಂದ ಕಟ್ಟೆಗಳು ಕಳೆಗಟ್ಟುತ್ತಿದ್ದವು. ಕಟ್ಟೆಗಳೆಂದರೆ ಆಯಾ ಊರಿನ ಕಲೆ-ಸಂಸ್ಕೃತಿಯ ತಾಣಗಳಾಗಿದ್ದವು.
ಈ ಕಟ್ಟೆಗಳಿಗೆ ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಮುಕ್ತ ಪ್ರವೇಶ ಇರುತ್ತಿತ್ತು. ಒಂದು ರೀತಿಯಲ್ಲಿ ಹೇಳಬೇಕೆಂದರೆ, ಈ ಕಟ್ಟೆಗಳೂ ಕೂಡ ಒಂದು ಬಗೆಯ ಶಾಲೆಗಳೇ ಆಗಿದ್ದವು. ಅಂದರೆ, ಇಲ್ಲಿ ವಿಚಾರ ವಿನಿಮಯ, ತಿಳುವಳಿಕೆಗಳೂ ಸಿಗುತ್ತಿದ್ದವು.
ಆದರೆ, ಇತ್ತೀಚಿನ ತಾಂತ್ರಿಕ ಯುಗದಲ್ಲಿ ಎಲ್ಲರೂ ಮೊಬೈಲ್, ಕಂಪ್ಯೂಟರ್ ನಲ್ಲಿ ಮುಳುಗಿ ಹೋಗಿದ್ದಾರೆ. ಇದಲ್ಲದೆ ಟಿವಿಗಳಲ್ಲಿ ಬರುವ ಧಾರಾವಾಹಿಗಳು ಜನರು ಕಟ್ಟೆಗಳಿಗೆ ಬರದಂತೆ ನಿಯಂತ್ರಿಸುತ್ತಿವ. ಹೀಗಾಗಿ ಕಟ್ಟೆಗಳು ಅನಾಥವಾಗುತ್ತಿತ್ತು, ಕಾಲಕ್ರಮೇಣ ಕಣ್ಮರೆಯಾಗುತ್ತಿವೆ.
ಆದರೆ, ಈ ಕಟ್ಟೆಗಳ ಪ್ರಾಮುಖ್ಯತೆ ಅರಿತ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ಸಂಸ್ಥೆಯು, ಮಂಗಳೂರು ಚಾಪ್ಟರ್ ಎಂಬ ಯೋಜನೆಯೊಂದನ್ನು ಪ್ರಾರಂಭಿಸಿ ಕಟ್ಟೆಗಳಿಗೆ ಮರುಜೀವ ನೀಡಲು ಮುಂದಾಗಿದೆ. ಯೋಜನೆಯಡಿಯಲ್ಲಿ ಕರಾವಳಿ ಭಾಗದಲ್ಲಿನ 250ಕ್ಕೂ ಹೆಚ್ಚು ಕಟ್ಟೆಗಳನ್ನು ಸಂರಕ್ಷಣೆ ಮಾಡುತ್ತಿದೆ.
INTACH, ಮಂಗಳೂರು ಚಾಪ್ಟರ್‌ನ ಸಂಚಾಲಕ ಸುಭಾಷ್ ಬಸು ಅವರು ಮಾತನಾಡಿ, ಸಾಮಾಜಿಕ, ಧಾರ್ಮಿಕ ಹಾಗೂ ಪರಿಸರದ ಅಗತ್ಯತೆಯ ಬಗ್ಗೆ ಜನರರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಲಾಗಿದೆ. QR ಕೋಡ್ ವ್ಯವಸ್ಥೆಯ ಮೂಲಕ ಹೊಸ ಕಟ್ಟೆಗಳನ್ನು ಗುರುತಿಸುವ ಮತ್ತು ಪಟ್ಟಿಗೆ ಸೇರಿಸುವ ಕೆಲಸ ಮಾಡಲಾಗುತ್ತಿದೆ. ನಾಗರೀಕರು ಹಾಗೂ ವಿದ್ಯಾರ್ಥಿಗಳೂ ಕೂಡ ಯೋಜನೆಗೆ ಕೊಡುಗೆ ನೀಡಬಹುದು. ಇದು ಸ್ಥಳೀಯರು ತಮ್ಮ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ಕಟ್ಟೆಗಳು ವ್ಯಕ್ತಿಗೆ ದೈಹಿಕ ಮತ್ತು ಮಾನಸಿಕವಾಗಿ ವಿಶ್ರಾಂತಿ ನೀಡುವ ತಾಣವಾಗಿದೆ. ಕಟ್ಟೆಗಳು ನೆರಳು ನೀಡುತ್ತವೆ. ಮರದ ನೆರಳಿನಲ್ಲೂ ಆರೋಗ್ಯವಿದೆ. ಈ ಕಟ್ಟೆಗಳು ಕುಟುಂಬ ಹಾಗೂ ಹಿರಿಯರನ್ನು ಒಗ್ಗೂಡಿಸುತ್ತವೆ. ಆದರೆ, ಇಂದು ಈ ಕಟ್ಟೆಗಳ ಜಾಗಗಳನ್ನು ವಾಹನಗಳು ಆಕ್ರಮಿಸಿಕೊಂಡಿವೆ. ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿವೆ. ಹೀಗಾಗಿ ಇವುಗಳ ಸಂರಕ್ಷಣೆ ಅಗತ್ಯವಿದೆ. ಜನರು ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಪರಿಸರ ಸಂರಕ್ಷಣೆಗಾಗಿ ಈ ಕಟ್ಟೆಗಳ ಸಂರಕ್ಷಣೆಗೆ ಒಗ್ಗೂಡಬೇಕಿದೆ ಎಂದು ತಿಳಿಸಿದ್ದಾರೆ.
Advertisement