ಮುಸ್ಲಿಮರು ವಾರಣಾಸಿ, ಮಥುರಾ ಮಸೀದಿಗಳನ್ನೂ ಕೂಡ ಹಿಂದೂಗಳಿಗೆ ಸ್ವಇಚ್ಛೆಯಿಂದ ಹಸ್ತಾಂತರಿಸಬೇಕು: ಪುರಾತತ್ವಶಾಸ್ತ್ರಜ್ಞ ಕೆಕೆ ಮುಹಮ್ಮದ್ (ಸಂದರ್ಶನ)

ವಾರಣಾಸಿ, ಮಥುರಾ ಮಸೀದಿಗಳನ್ನೂ ಕೂಡ ಹಿಂದೂಗಳಿಗೆ ಸ್ವಇಚ್ಛೆಯಿಂದ ಹಸ್ತಾಂತರಿಸಲು ಮುಸ್ಲಿಂ ಸಮುದಾಯ ಸಿದ್ಧರಾಗಿರಬೇಕು ಎಂದು ಪುರಾತತ್ವಶಾಸ್ತ್ರಜ್ಞ ಕೆಕೆ ಮಹಮ್ಮದ್ ಕೆಕೆ. ಮುಹಮ್ಮದ್ ಅವರು ಹೇಳಿದ್ದಾರೆ.
ಪುರಾತತ್ವಶಾಸ್ತ್ರಜ್ಞ ಕೆಕೆ ಮಹಮ್ಮದ್
ಪುರಾತತ್ವಶಾಸ್ತ್ರಜ್ಞ ಕೆಕೆ ಮಹಮ್ಮದ್

ವಾರಣಾಸಿ, ಮಥುರಾ ಮಸೀದಿಗಳನ್ನೂ ಕೂಡ ಹಿಂದೂಗಳಿಗೆ ಸ್ವಇಚ್ಛೆಯಿಂದ ಹಸ್ತಾಂತರಿಸಲು ಮುಸ್ಲಿಂ ಸಮುದಾಯ ಸಿದ್ಧರಾಗಿರಬೇಕು ಎಂದು ಪುರಾತತ್ವಶಾಸ್ತ್ರಜ್ಞ ಕೆಕೆ ಮಹಮ್ಮದ್ ಕೆಕೆ. ಮುಹಮ್ಮದ್ ಅವರು ಹೇಳಿದ್ದಾರೆ.

ಅಯೋಧ್ಯಾದ ವಿವಾದಿತ ಸ್ಥಳದಲ್ಲಿ ದೇವಸ್ಥಾನವಿತ್ತು ಎಂದು ಬಲವಾಗಿ ಪ್ರತಿಪಾದಿಸಿದ್ದವರಲ್ಲಿ ಕೆ.ಕೆ. ಮುಹಮ್ಮದ್ ಪ್ರಮುಖರಾಗಿದ್ದು, ಇವರು ಬಾಬ್ರಿ ಮಸೀದಿ ಸ್ಥಳವನ್ನು ಉತ್ಖನನ ಮಾಡಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ತಂಡದ ಭಾಗವಾಗಿದ್ದರು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮುಸ್ಲಿಮರು ಜ್ಞಾನವಾಪಿ ಮತ್ತು ಮಥುರಾ ಮಸೀದಿಗಳನ್ನು ಹಿಂದೂಗಳಿಗೆ ಸ್ವಇಚ್ಛೆಯಿಂದ ಹಸ್ತಾಂತರಿಸಬೇಕು. ಇದರಿಂದ ಈಗಾಗಲೇ ಆಗಿರುವ ಗಾಯಗಳೂ ಮಾಸಿ ಹೋಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೀವು 1976 ರಲ್ಲಿ ಬಾಬರಿ ಮಸೀದಿ/ರಾಮ ಜನ್ಮಭೂಮಿಯನ್ನು ಉತ್ಖನನ ಮಾಡಿದ ASI ತಂಡದ ಭಾಗವಾಗಿದ್ದೀರಿ. ನಿಮ್ಮ ಸಂಶೋಧನೆಗಳ ಫಲಿತಾಂಶವೇನು?
ಪ್ರೊಫೆಸರ್ ಬಿ ಬಿ ಲಾಲ್ ನೇತೃತ್ವದ ತಂಡವು ಉತ್ಖನನವನ್ನು ನಡೆಸಿತ್ತು. ನಾನೂ ಕೂಡ ಅದರ ಭಾಗವಾಗಿದ್ದೆ. ಸ್ಥಳದಲ್ಲಿ ಹಿಂದೂ ದೇವಾಲಯದ ಕಂಬಗಳು ಕಂಡು ಬಂದಿದ್ದೆವು, ಅವುಗಳ ಮೇಲೆ ಕೆತ್ತನೆಗಳೂ ಕಂಡು ಬಂದಿದ್ದೆವು. ವಿರೂಪಗೊಂಡ ದೇವರು ಮತ್ತು ದೇವತೆಗಳ ಮೂರ್ತಿಗಳೂ ಕೂಡ ಕಂಡು ಬಂದಿತ್ತು. ದೇವಾಲಯಗಳಿಗೆ ಸಂಬಂಧಿಸಿದ ಪ್ರತಿಮೆಗಳನ್ನು ಕೂಡ ಕಂಡು ಬಂದಿತ್ತು. ಮಾನವನ ರೂಪದ ಪ್ರತಿಮೆಗಳನ್ನು ಮುಸ್ಲಿಮರು ಹರಾಮ್ ಎಂದೇ ಪರಿಗಣಿಸುತ್ತಾರೆ. ಹೀಗಾಗಿ ಮಸೀದಿಗಳಲ್ಲಿ ಮಾನವನ ರೂಪದ ಪ್ರತಿಮೆಗಳು ಕಂಡು ಬರುವುದಿಲ್ಲ. ಇದರಿಂದಾಗಿ ಮಸೀದಿಯನ್ನು ಕಟ್ಟುವ ಮೊದಲು ಅಲ್ಲಿ ದೇವಸ್ಥಾನವಿತ್ತು ಎಂದು ನಮಗೆ ಖಚಿತವಾಗಿತ್ತು.

ಆದರೆ AMU ನ ಪ್ರೊಫೆಸರ್ ಸೈಯದ್ ಅಲಿ ರಿಜ್ವಿಯಂತಹ ಕೆಲವರು ನೀವು ಉತ್ಖನನ ತಂಡದ ಭಾಗವಾಗಿರಲಿಲ್ಲ ಎಂದು ಆರೋಪಿಸಿದ್ದಾರೆ?
ನಾನು ಆಗ ASI ಸ್ಕೂಲ್ ಆಫ್ ಆರ್ಕಿಯಾಲಜಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದೆ. ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಪತ್ನಿ ಜೈಶ್ರೀ ರಾಮನಾಥನ್ ಸೇರಿದಂತೆ ನಾವು ಹತ್ತು ಮಂದಿ ತಂಡವಾಗಿ ಹೋಗಿದ್ದೆವು. ನಾನು ಬಿ ಕಂದಕದ ಉತ್ಖನನದಲ್ಲಿ ತೊಡಗಿದ್ದೆ.

ಈ ಅಧ್ಯಯನಗಳ ಸಂಶೋಧನೆಗಳು ಯಾವುದಾದರೂ ಶೈಕ್ಷಣಿಕ ಜರ್ನಲ್‌ನಲ್ಲಿ ಪ್ರಕಟವಾಗಿದೆಯೇ?
ಹೌದು. ಇದು ಭಾರತೀಯ ಪುರಾತತ್ವ ಸರ್ವೇಕ್ಷಣಾದ ಪುಸ್ತಕದಲ್ಲಿದೆ. ಇದು ಶೈಕ್ಷಣಿಕ ಸ್ವರೂಪವಾಗಿತ್ತು. ಹೀಗಾಗಿ ಎಎಸ್‌ಐ, ವಿಶೇಷವಾಗಿ ಪ್ರೊಫೆಸರ್ ಲಾಲ್, ಇದನ್ನು ಎಂದಿಗೂ ದೊಡ್ಡದು ಮಾಡಲು ಬಯಸಲಿಲ್ಲ.

ASI ಉತ್ಖನನದಲ್ಲಿ ದೇವಾಲಯವಿದೆ ಎಂದು ಸಾಬೀತುಪಡಿಸಲು ರಚನೆಗಳು ಕಂಡುಬಂದಿದ್ದವು. ಆದರೆ ಅದು ರಾಮಮಂದಿರವೇ ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿದ್ದವೇ?
ಹೌದು. 1992 ರಲ್ಲಿ ಮಸೀದಿಯನ್ನು ಕೆಡವಿದ ನಂತರ ಅವರಿಗೆ ಒಂದು ಶಾಸನ ಸಿಕ್ಕಿತ್ತು. ಅದರಲ್ಲಿ ವಿಷ್ಣುಹರಿಸಿಲ ಫಲಕಮ್ ಎಂದು ಬರೆದಿರುವುದು ಕಂಡು ಬಂದಿತ್ತು. ಈ ದೇವಾಲಯವು ಬಲಿಯನ್ನು ಕೊಂದ ಮಹಾವಿಷ್ಣುವಿಗೆ ಸಮರ್ಪಿಸಲಾಗಿತ್ತು.

ಈ ಪುರಾವೆಗಳು ಬಾಬ್ರಿ ಮಸೀದಿಯನ್ನು ಕೆಡುವ ಸಂದರ್ಭದಲ್ಲಿ ಪತ್ತೆ ಮಾಡಲಾಗಿತ್ತು. ಉತ್ಖನನದ ಸಮಯದಲ್ಲಿ ಅಲ್ಲ...?
ಹೌದು. ಅವರಿಗೆ ಈ ಪುರಾವೆ ಸಿಕ್ಕಿದ್ದು, ಮಸೀದಿ ಧ್ವಂಸದ ನಂತರವೇ ಹೊರತು ಉತ್ಖನನದ ಸಮಯದಲ್ಲಿ ಅಲ್ಲ. ವಿಮರ್ಶಕರು ಮೊದಲು ಇದು 18 ನೇ ಶತಮಾನದ ಶಾಸನ ಎಂದು ಹೇಳಿದ್ದರು. ನಂತರ ಈ ಹೇಳಿಕೆಯಿಂದ ಹಿಂದೆ ಸರಿದಿದ್ದರು. ವಾಸ್ತವವಾಗಿ ಇದು 12 ನೇ ಶತಮಾನದ ಶಾಸನವಾಗಿದೆ. ಸಾಕ್ಷ್ಯಗಳನ್ನು ಸ್ವತಃ ಇಡಲಾಗಿತ್ತು ಎಂಬ ಆರೋಪಗಳೂ ಕೇಳಿಬಂದಿದ್ದವು. ಆದ್ದರಿಂದ, ಲಖನೌನಲ್ಲಿ ಪರೀಶೀಲನೆಗೆ ರವಾನಿಸಲಾಗಿತ್ತು. ಇಂತಹ ಶಾಸನ ತಮ್ಮ ಬಳಿಯಿರುವುದನ್ನು ಅಲ್ಲಿನ ಅಧಿಕಾರಿಗಳೂ ಹೇಳಿದ್ದರು.

ಬಾಬರ್ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ್ಜ ಎಂಬುದು ಜನಪ್ರಿಯ ಕಥೆಯಾಗಿದೆ. ಆದರೆ ಬಾಬರ್ ದೇವಾಲಯವನ್ನು ಕೆಡವಿದ್ದನೆಂದು ಸಾಬೀತುಪಡಿಸಲು ನಮ್ಮ ಬಳಿ ಸಾಕ್ಷ್ಯವಿದೆಯೇ?
ಬಾಬರ್‌ನ ಸೇನಾ ಕಮಾಂಡರ್ ಮೀರ್ ಬಕ್ಷಿ ದೇವಾಲಯದ ಧ್ವಂಸದ ನೇತೃತ್ವ ವಹಿಸಿದ್ದ. ಮೀರ್ ಬಕ್ಷಿ ದೇವಾಲಯವನ್ನು ಕೆಡವಿದ ಎಂದು ಪರ್ಷಿಯನ್ ಭಾಷೆಯಲ್ಲಿ ಒಂದು ಶಾಸನವೂ ಪತ್ತೆಯಾಗಿದೆ.

ಆದರೆ ಮಸೀದಿ ನಿರ್ಮಿಸಲು ದೇವಾಲಯವನ್ನು ಕೆಡವುವುದಕ್ಕೂ ಶಿಥಿಲಗೊಂಡ ದೇವಾಲಯದ ಅವಶೇಷಗಳ ಮೇಲೆ ಮಸೀದಿ ನಿರ್ಮಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ...?
ಮಧ್ಯಕಾಲೀನ ಭಾರತದಲ್ಲಿ ಅನೇಕ ದೇವಾಲಯಗಳನ್ನು ಕೆಡವಲಾಯಿತು. ದೆಹಲಿಗೆ ಭೇಟಿ ನೀಡಿದರೆ ಕುತುಬ್ ಮಿನಾರ್ ಬಳಿ ಕುವ್ವಾತ್-ಉಲ್-ಇಸ್ಲಾಂ ಮಸೀದಿಯನ್ನು ನೋಡಬಹುದು (ಮಸೀದಿಯನ್ನು ದೇವಾಲಯದ ಸ್ಥಳದಲ್ಲಿ ನಿರ್ಮಿಸಲಾಗಿದೆ). ಬಾಬರ್ ನಾಮದ ಕೆಲವು ಪುಟಗಳೂ ಅಲ್ಲಿ ಕಾಣೆಯಾಗಿವೆ. ಮೂರು ತಿಂಗಳ ಚಟುವಟಿಕೆಗಳನ್ನು ವಿವರಿಸುವ ಪುಟಗಳು ಕಾಣೆಯಾಗಿವೆ. ಮೀರ್ ಬಕ್ಷಿ ಮಸೀದಿಯನ್ನು ನಿರ್ಮಿಸಿದ ಎಂಬ ಶಾಸನವಿತ್ತು. ಧ್ವಂಸವು ಯುದ್ಧದ ಭಾಗವಾಗಿತ್ತು. ಇಂದಿನ ಪೀಳಿಗೆಯ ಮುಸ್ಲಿಮರು ಈ ಕೃತ್ಯದ ಯಾವುದೇ ರೀತಿಯಲ್ಲಿ ಜವಾಬ್ದಾರರಲ್ಲ. ಆದರೆ, ಕೆಲವು ಆಕ್ರಮಣಕಾರರು ದೇವಾಲಯಗಳನ್ನು ಕೆಡವಿರುವುದನ್ನು ಮುಸ್ಲಿಮರು ಸಮರ್ಥಿಸಿಕೊಳ್ಳಬಾರದು. ಗೋವಾದಲ್ಲಿ ಪೋರ್ಚುಗೀಸರು ಮಾಡಿದ್ದನ್ನು ಕ್ರೈಸ್ತರು ಸಮರ್ಥಿಸುವುದಿಲ್ಲ.

ನೀವು ಹೇಳುವ ಪ್ರಕಾರ, 12 ನೇ ಶತಮಾನದ ದೇವಾಲಯವಿತ್ತು. 16 ನೇ ಶತಮಾನದಲ್ಲಿ ಅದರ ಮೇಲೆ ಮಸೀದಿಯನ್ನು ನಿರ್ಮಿಸಲಾಯಿತು ಎನ್ನಲಾಗಿದೆ. ಪುರಾತತ್ತ್ವ ಶಾಸ್ತ್ರಜ್ಞರಾಗಿ ನೀವು ಮಸೀದಿ/ದೇವಾಲಯ ರಚನೆಯನ್ನು ಕೆಡವುವುದನ್ನು ಒಪ್ಪುತ್ತೀರಾ?
ಯಾವುದೇ ಪುರಾತತ್ತ್ವಜ್ಞರು ಯಾವುದೇ ಐತಿಹಾಸಿಕ ರಚನೆಯನ್ನು ಕೆಡವಲು ಒಪ್ಪುವುದಿಲ್ಲ. ಆದರೆ, ಮಸೀದಿಯನ್ನು ಈಗಾಗಲೇ ಕೆಡವಲಾಗಿತ್ತು. ಹೀಗಾಗಿ ನಾವು ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಬೇಕಾಗಿತ್ತು.

1992ರಲ್ಲಿ ಬಾಬರಿ ಮಸೀದಿಯನ್ನು ಕೆಡವಲಾಯಿತು. ಪುರಾತತ್ವಶಾಸ್ತ್ರಜ್ಞರಾಗಿ ನಿಮಗೆ ಏನನಿಸಿತು?
ನಾವೆಲ್ಲ ತತ್ತರಿಸಿ ಹೋದೆವು. ಶತಮಾನಗಳ ಹಿಂದೆ ನಡೆದ ಐತಿಹಾಸಿಕ ತಪ್ಪನ್ನು ಸರಿಪಡಿಸಲು ತಪ್ಪು ಮಾಡಬಾರದು ಎಂದು ಹಿರಿಯ ಐಎಎಸ್ ಅಧಿಕಾರಿ ಐ ಮಹದೇವನ್ ಹೇಳಿಕೆ ನೀಡಿದ್ದರು. ನಾವೆಲ್ಲರೂ ಧ್ವಂಸವನ್ನು ವಿರೋಧಿಸಿದ್ದೇವೆ. ಇದು ಆಗಬಾರದಿತ್ತು.

ಭಾರತೀಯ ಮುಸಲ್ಮಾನನಾಗಿ ನಿಮ್ಮ ಆಲೋಚನೆ ಹೇಗಿತ್ತು...?
ಪುರಾತತ್ವಶಾಸ್ತ್ರಜ್ಞನು ಎಂದಿಗೂ ಮುಸ್ಲಿಂ ಅಥವಾ ಹಿಂದೂ ಆಗಲು ಸಾಧ್ಯವಿಲ್ಲ. ಇಂತಹ ವಿಷಯಗಳನ್ನು ವಸ್ತುನಿಷ್ಠವಾಗಿ ನೋಡುತ್ತೇವೆ. ನಾನು ವಿವಿಧ ಸಂದರ್ಭಗಳಲ್ಲಿ ಮುಸ್ಲಿಂ ಸಮುದಾಯ ಮತ್ತು ಹಿಂದೂ ಗುಂಪುಗಳಿಂದ ತೀವ್ರ ವಿರೋಧವನ್ನೂ ಎದುರಿಸಿದ್ದೇನೆ.

ಜ್ಞಾನವಾಪಿ ಮತ್ತು ಮಥುರಾ ಬಗ್ಗೆ ಈಗ ಇದೇ ರೀತಿಯ ಬೇಡಿಕೆಗಳನ್ನು ಇಡಲಾಗುತ್ತಿದೆ…?
ಮುಸ್ಲಿಮರು ಜ್ಞಾನವಾಪಿ ಮತ್ತು ಮಥುರಾ ಮಸೀದಿಗಳನ್ನು ಹಿಂದೂಗಳಿಗೆ ಸ್ವಇಚ್ಛೆಯಿಂದ ಹಸ್ತಾಂತರಿಸಬೇಕು. ಈ ವಿಚಾರದಲ್ಲಿ ಉದ್ನಿಗ್ನ ಪರಿಸ್ಥಿತಿ ಎದುರಾಗುವುದಂತೂ ಖಂಡಿತ. ಆದರೆ ಐತಿಹಾಸಿಕ ದೃಷ್ಟಿಕೋನದಿಂದ ನೋಡುವುದಾದರೆ, ಈ ಎರಡನ್ನೂ ಹಸ್ತಾಂತರಿಸದೆ ಇಡೀ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯುವುದು ಸಾಧ್ಯವಿಲ್ಲ. ವಿಭಜನೆಯ ನಂತರವೂ ಭಾರತವು ಜಾತ್ಯತೀತ ರಾಷ್ಟ್ರವಾಗಿ ಉಳಿದಿರುವುದು ಅದರ ಹಿಂದೂ ಬಹುಸಂಖ್ಯಾತರಿಂದ ಎಂದು ನಾನು ಮುಸ್ಲಿಮರಿಗೆ ಯಾವಾಗಲೂ ಹೇಳುತ್ತೇನೆ,

ಆದರೆ ಇದು ಹೆಚ್ಚು ಉದ್ವಿಗ್ನಕ್ಕೆ ಕಾರಣವಾಗುವುದಿಲ್ಲವೇ?
ಹಿಂದೂಗಳಿಗೆ ಅಯೋಧ್ಯೆ, ಕಾಶಿ, ಮಥುರಾ ಎಷ್ಟು ಮುಖ್ಯವೋ ಮುಸ್ಲಿಮರಿಗೆ ಮೆಕ್ಕಾ, ಮದೀನಾ ಕೂಡ ಅಷ್ಟೇ ಮುಖ್ಯ. ಆದ್ದರಿಂದ, ಮುಸ್ಲಿಮರು ಈ ಸ್ಥಳಗಳನ್ನು ಸ್ವಇಚ್ಛೆಯಿಂದ ಹಸ್ತಾಂತರಿಸಲು ಸಿದ್ಧರಾಗಿರಬೇಕು.

ಜ್ಞಾನವಾಪಿಯಲ್ಲಿ ಹಿಂದೂ ದೇವಾಲಯ ಇರುವ ಕುರಿತು ಪುರಾವೆಗಳು ಸಿಕ್ಕಿವೆಯೇ?
ಹೌದು. ಇಸ್ಲಾಮಿಕ್ ಶಾಸನಗಳು ಪತ್ತೆಯಾಗಿರಬಹುದು, ಆದರೆ ಒಟ್ಟಾರೆಯಾಗಿ, ಇದು ಹಿಂದೂ ರಚನೆಯಾಗಿದೆ. ಅಲ್ಲದೆ, ಇದನ್ನು ಬೆಂಬಲಿಸುವ ಅನೇಕ ಸಾಹಿತ್ಯಗಳಿವೆ. ಈ ವಿಷಯವು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದೊಡ್ಡ ಒಡಕನ್ನು ಸೃಷ್ಟಿಸಿದೆ. ಹಾಗಾಗಿ ಅದನ್ನು ಹಿಂದೂಗಳಿಗೆ ಒಪ್ಪಿಸುವುದೊಂದೇ ಶಾಶ್ವತ ಪರಿಹಾರ.

ಆರ್‌ಎಸ್‌ಎಸ್-ವಿಎಚ್‌ಪಿ ಮಸೀದಿಗಳನ್ನು ನಿರ್ಮಿಸಲು ಕೆಡವಲಾದ ಸುಮಾರು 2,000 ದೇವಾಲಯಗಳ ಪಟ್ಟಿಯನ್ನು ಇಟ್ಟುಕೊಂಡಿದೆ ಎಂದು ವರದಿಯಾಗಿದೆ?
ಹೀಗೆ ಮುಂದುವರಿದರೆ ಅಂತ್ಯವೇ ಇರುವುದಿಲ್ಲ. ಆದರೆ, ಆಕ್ರಮಣಶೀಲತೆಯ ಮನಸ್ಸನ್ನು ಹಿಂದೂಗಳು ಎಂದಿಗೂ ಒಪ್ಪುವುದಿಲ್ಲ. ರಾಮಮಂದಿರ ವಿಚಾರದ ಹೋರಾಟದಲ್ಲಿ ಅನೇಕ ಹಿಂದೂಗಳು  ಮುಸ್ಲಿಮರೊಂದಿಗೆ ನಿಂತಿದ್ದರು ಎಂಬುದನ್ನು ನಾವು ಇಲ್ಲಿ ಸ್ಮರಿಸಬೇಕು. ಆದರೆ,  ಮುಸ್ಲಿಮರು ಹಿಂದೂಗಳ ಪರವಾಗಿ ನಿಂತ ಒಂದು ಉದಾಹರಣೆ ನಿಮಗೆ ನೆನಪಿದೆಯೇ?

ಅಯೋಧ್ಯೆಯು ಪುರಾತತ್ವ ಅಥವಾ ಐತಿಹಾಸಿಕ ಸಮಸ್ಯೆಗಿಂತ ಹೆಚ್ಚಾಗಿ ರಾಜಕೀಯ ವಿಷಯವಾಗಿತ್ತು ಎನಿಸುವುದಿಲ್ಲವೇ?
ಹೌದು. ಇದು ರಾಜಕೀಯ ವಿಚಾರವಾಗಿ ಪರಿವರ್ತನೆಯಾಗಿದೆ. ಬಿಜೆಪಿ ಮತ್ತು ಆರೆಸ್ಸೆಸ್ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಇದನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಸತ್ಯ. ಅದೇ ಸಮಯದಲ್ಲಿ, ಲಕ್ಷಾಂತರ ಸಾಮಾನ್ಯ ಹಿಂದೂ ಭಕ್ತರ ನೋವನ್ನು ನಾವು ಅರ್ಥಮಾಡಿಕೊಳ್ಳಬೇಕು. ಹಿಂದೂಗಳ ನೋವು ಮುಸಲ್ಮಾನರಿಗೆ ಅರ್ಥವಾಗಿದ್ದಿದ್ದರೆ ಉತ್ತಮವಾಗಿರುತ್ತಿತ್ತು.

ಆದರೆ ಈ ಭಾವನೆಗಳನ್ನು ರಾಜಕಾರಣಿಗಳು ಸೃಷ್ಟಿಸಿದ್ದಲ್ಲವೇ?
ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳು ನಡೆದಿವೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ 1976-77ರಲ್ಲಿ ನಾನು ಅಯೋಧ್ಯೆಗೆ ಭೇಟಿ ನೀಡಿದಾಗಲೂ, ಬಡ ಹಿಂದೂಗಳ ಹೃದಯ ವಿದ್ರಾವಕ ಸಂಕಟವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಮೆಕ್ಕಾ ಅಥವಾ ಮದೀನಾ ಆಗಿದ್ದರೆ ಇಷ್ಟೊತ್ತಿಗೆ ಎಷ್ಟು ಬಾಂಬ್‌ಗಳು ಸ್ಫೋಟಗೊಳ್ಳುತ್ತಿದ್ದವು? ಆದರೆ, ಹಿಂದೂಗಳು ಮಸೀದಿಯನ್ನು 500 ವರ್ಷಗಳ ಕಾಲ ಅಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟರು. ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಈ ಉದಾತ್ತತೆಯನ್ನು ನಾವು ಅರ್ಥಮಾಡಿಕೊಳ್ಳಬೇಕು.

16ನೇ ಶತಮಾನದ ಕಟ್ಟಡವನ್ನು ಕೆಡವಿ ಆಧುನಿಕ ತಂತ್ರಜ್ಞಾನ ಬಳಸಿ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ನ್ಯಾಯ ದೊರಕಿದೆ ಎಂದು ನೀವು ಭಾವಿಸುತ್ತೀರಾ?
ಈ ಕಾಯ್ದೆ ಸಮರ್ಥನೆಯೋ ಇಲ್ಲವೋ ಎಂಬುದಲ್ಲ. ರಚನೆಯನ್ನು ಕೆಡವಲಾಗಿದೆ. ಅದನ್ನು ಕೆಡವದಿದ್ದರೆ, ಎಎಸ್ಐ ರಚನೆಯಿಂದ 300 ಮೀಟರ್ ಒಳಗೆ ಮತ್ತೊಂದು ರಚನೆಯನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ. ವಿವಾದಿತ ಕಟ್ಟಡ ಧ್ವಂಸಗೊಂಡಿದ್ದು, ಪ್ರಸ್ತುತ ಕಾಲದ ಅವಶ್ಯಕತೆಗಳನ್ನು ಪರಿಗಣಿಸಿ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ. ಇದು ನಂಬಿಕೆಯ ವಿಷಯವಾಗಿದೆ. ಈ ವಿಚಾರದಲ್ಲಿ ನಾವು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು.

ಹಿಂದೂಗಳು ದಯಾನುಭಾವವುಳ್ಳವರು ಎಂದು ಹೇಳುತ್ತೀರಿ. ಅಂತಹ ದೊಡ್ಡ ಹೃದಯದ ಹಿಂದೂಗಳನ್ನು ಈಗ ನಾವು ಎಲ್ಲಿ ನೋಡಬಹುದು?
ಇತರ ಧರ್ಮಗಳಿಗೆ (ಅನುಯಾಯಿಗಳಿಗೆ) ಹೋಲಿಸಿದರೆ, ಹಿಂದೂಗಳು ಈಗಲೂ ಉತ್ತಮರಾಗಿದ್ದಾರೆ. ಅವರು ಅಜಾಗರೂಕತೆಯಿಂದ ಪ್ರತಿಕ್ರಿಯಿಸಬಹುದು, ಭಾವನೆಗಳೊಂದಿಗೆ ಆಟವಾಡಬಹುದು, ಆದರೆ, ನಂತರ ಯೋಚಿಸುತ್ತಾರೆ, ಸಮಸ್ಯೆಯನ್ನು ಸರಿಪಡಿಸುತ್ತಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಅವಧಿಯಲ್ಲಿ ಬಾಬ್ರಿ ಮಸೀದಿಗೆ ಹಾಕಲಾಗಿದ್ದ ಬೀಗವನ್ನು ತೆರೆಯಲಾಗಿದೆ. ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಆ ನಡೆ ಎಷ್ಟು ಮಹತ್ವಪೂರ್ಣವಾಗಿತ್ತು?
1986 ರಲ್ಲಿ ಮಸೀದಿಯ ಬೀಗವನ್ನು ತೆರೆಯುವುದು ಮೊದಲ ಪ್ರಮುಖ ನಿರ್ಧಾರವಾಗಿತ್ತು. ನಂತರ, 1989 ರಲ್ಲಿ ಅವರು ವಿವಾದಿತ ಕಟ್ಟಡದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಾಯಿತು. ಖ್ಯಾತ ಇಸ್ಲಾಮಿಕ್ ವಿದ್ವಾಂಸ ಅಬ್ದುಲ್ ಹಸನ್ ಅಲಿ ನದ್ವಿ ಮತ್ತು ರಾಜೀವ್ ಗಾಂಧಿಯವರ ಸಮಸ್ಯೆ ಪರಿಹರಿಸಲು ಅಲಿಖಿತ ಒಪ್ಪಂದವಾಗಿತ್ತು. ಮುಸ್ಲಿಮರಿಗೆ ಬಾಬ್ರಿ ಮಸೀದಿ ತೆರೆಯಲು ಅವಕಾಶ ನೀಡಿದರೆ, ಶಾ ಬಾನೋ ಪ್ರಕರಣದ ತೀರ್ಪನ್ನು ಜಯಿಸಲು ಸರ್ಕಾರ ಮಸೂದೆಯನ್ನು ತರುತ್ತದೆ ಎಂಬುದು ಒಪ್ಪಂದವಾಗಿತ್ತು.

ಆಗ ಏನಾಯಿತು?
ಸೈಯದ್ ಶಹಾಬುದ್ದೀನ್ ಸೇರಿದಂತೆ ವಕ್ಫ್ ಸಮಿತಿ ಒಪ್ಪಂದದ ಪರವಾಗಿತ್ತು. ಆದರೆ ಶಾ ಬಾನೋ ಮಸೂದೆ ಅಂಗೀಕಾರವಾದ ನಂತರ ಅಬ್ದುಲ್ ಹಸನ್ ಅಲಿ ನದ್ವಿ ಹೊರತುಪಡಿಸಿ ಎಲ್ಲರೂ ತಮ್ಮ ನಿಲುವು ಬದಲಿಸಿದರು. ರಾಜೀವ್ ಗಾಂಧಿಯವರ ಮರಣದ ನಂತರ, ಒಪ್ಪಂದ ಮರೆಯಾಯಿತು.

ಈ ಒಪ್ಪಂದವನ್ನು ವಿಫಲಗೊಳಿಸುವಲ್ಲಿ ಇತಿಹಾಸಕಾರ ಇರ್ಫಾನ್ ಹಬೀಬ್ ಪಾತ್ರವಿದೆ ಎಂದು ವದಂತಿಗಳಿವೆ. ಅದು ನಿಜವೆ?
ಅವರ ಪಾತ್ರದ ಬಗ್ಗೆ ನನಗೆ ಗೊತ್ತಿಲ್ಲ. ಇರ್ಫಾನ್ ಹಬೀಬ್ ಬಗ್ಗೆ ಮಾತನಾಡುವಾಗ ನಾನು ವಸ್ತುನಿಷ್ಠವಾಗಿರುವುದಿಲ್ಲ, ಏಕೆಂದರೆ ನನಗೆ ಅವಕ ಮೇಲೆ ವೈಯಕ್ತಿಕ ದ್ವೇಷವಿದೆ. ಅವರು ನನ್ನ ಗುರು. ಆದರೆ, ಅವರ ಬಗ್ಗೆ ನನಗೆ ಗೌರವವಿಲ್ಲ.

ಬಾಬ್ರಿ ಮಸೀದಿ ವಿಚಾರದಲ್ಲಿ ಕೇರಳ ಸಿಪಿಎಂನ ನಿಲುವು ಮಾರ್ಕ್ಸ್‌ವಾದಿ ಇತಿಹಾಸಕಾರರ ವಾದಗಳಿಂದ ಪ್ರೇರಿತವಾಗಿದೆ ಎಂದು ನೀವು ಭಾವಿಸುತ್ತೀರಾ?
ಕಮ್ಯುನಿಸ್ಟರ ನಿಲುವಿನ ಮೇಲೆ ಪ್ರಭಾವ ಬೀರುವಲ್ಲಿ ಇರ್ಫಾನ್ ಹಬೀಬ್ ಪ್ರಮುಖ ಪಾತ್ರ ವಹಿಸುತ್ತಾರೆ. ಮುಸ್ಲಿಮರ ಬೆಂಬಲ ಪಡೆಯಲು ಸಿಪಿಎಂ ಈ ವಿಚಾರದಲ್ಲಿ ರಾಜಕೀಯ ನಿಲುವು ತೆಗೆದುಕೊಂಡಿತು. ಮುಸ್ಲಿಂ ಲೀಗ್‌ನ ನಿಲುವು ಹೆಚ್ಚು ಸ್ವೀಕಾರಾರ್ಹವೆಂದು ಎಂಬುದನ್ನು ಈ ವೇಳೆ ನಾನು ಕಂಡುಕೊಂಡೆ.

ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸದಿರುವ ಕಾಂಗ್ರೆಸ್ ನಿರ್ಧಾರವನ್ನು ನೀವು ಹೇಗೆ ನೋಡುತ್ತೀರಿ?
ಬಾಬ್ರಿ ಮಸೀದಿಯ ಬೀಗವನ್ನು ತೆರೆಯಲು ರಾಜೀವ್ ಗಾಂಧಿಯವರು ಮುಂದಾದ ಕಾರಣ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಬರಬೇಕಿತ್ತು ಎಂಬುದು ನನ್ನ ಅಭಿಪ್ರಾಯ. ಕಾಂಗ್ರೆಸ್ ಹಿಂದೂಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕಿತ್ತು, ಆದರೆ, ಕಾಂಗ್ರೆಸ್ ಅನ್ನು ನಿಯಂತ್ರಿಸುತ್ತಿರುವವರು ಈ ನಿಟ್ಟಿನಲ್ಲಿ ಆಲೋಚಿಸುತ್ತಿಲ್ಲ.

ಉತ್ತರ ಭಾರತದ ಹಿಂದೂಗಳ ಮನಸ್ಸನ್ನು ಅರ್ಥಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ನೀವು ಭಾವಿಸುವಿರಾ?
ಹೌದು. ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅದರ ಪರಿಣಾಮದ ಭಯ ಅವರಿಗಿದೆ. ದೇಶದಲ್ಲಿ ಕಾಂಗ್ರೆಸ್ ಅಪ್ರಸ್ತುತವಾದರೆ ಉಳಿದುಕೊಳ್ಳುವವರು ಯಾರು? ಬಿಜೆಪಿ ಯಾವ ಮಟ್ಟಕ್ಕ ಬೇಕಾದರೂ ಹೋಗುತ್ತದೆ. ಇಡಿ ಯಂತಹ ಸಂಸ್ಥೆಗಳ ದುರ್ಬಳಕೆ ಬೇಸರ ತರಿಸಿದೆ.

ಹಲವರು ನಿಮ್ಮನ್ನು ಬಿಜೆಪಿಯ ವ್ಯಕ್ತಿ ಎಂದು ಪರಿಗಣಿಸುತ್ತಾರೆ?
ಜನರು ಹಾಗೆ ಚಿಂತಿಸುತ್ತಾರೆ. ಆದರೆ, ಬಿಜೆಪಿ ಸಭೆಗಳಿಗೆ ನನ್ನನ್ನು ಆಹ್ವಾನಿಸದರೂ ನಾನು ಹೋಗುವುದಿಲ್ಲ.

ಬಿಜೆಪಿ ಆಡಳಿತದಲ್ಲಿ ಎಎಸ್‌ಐ ಜೀವಂತ ಶವವಾಗಿದೆ ಎಂಬ ನಿಮ್ಮ ವಿವಾದವನ್ನು ಸೃಷ್ಟಿಸಿದೆ?
ಹೌದು. ಬಿಜೆಪಿ ಆಡಳಿತದ 10 ವರ್ಷಗಳಲ್ಲಿ ಎಎಸ್‌ಐ ಜೀವಂತ ಶವವಾಗಿ ಮಾರ್ಪಟ್ಟಿದೆ. ಇದು ಎಎಸ್ಐನ ಕರಾಳ ಯುಗವಾಗಿದೆ. ಚಂಬಲ್ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಲ್ಲಿ 80 ದೇವಾಲಯಗಳು ಧ್ವಂಸಗೊಂಡಿದ್ದವು. ಅವುಗಳ ಜೀರ್ಣೋದ್ಧಾರ ಕೈಗೊಂಡಿದ್ದೆವು. ಈ ಕಾರ್ಯದಲ್ಲಿ ಸರ್ಕಾರ ನಮ್ಮೊಂದಿಗಿರುತ್ತದೆ ಎಂದು ಭಾವಿಸಿದ್ದೆವು. ಆದರೆ ಕಳೆದ ಒಂಬತ್ತು ವರ್ಷಗಳಿಂದ ಒಂದೇ ಒಂದು ದೇವಸ್ಥಾನವೂ ಜೀರ್ಣೋದ್ಧಾರವಾಗಿಲ್ಲ.

ನಿಮ್ಮ ಪ್ರಕಾರ, ಮೋದಿಯವರು ಇತರ ದೇವಾಲಯಗಳ ಜೀರ್ಣೋದ್ಧಾರಕ್ಕೆ ಯಾವುದೇ ಆಸಕ್ತಿ ತೋರಿಸಿಲ್ಲ. ಅಯೋಧ್ಯೆ ರಾಮಮಂದಿರದ ಬಗ್ಗೆ ಮಾತ್ರ ಉತ್ಸುಕರಾಗಿದ್ದರು ಎಂಬ ಅರ್ಥವನ್ನು ನೀಡುತ್ತದೆ. ಹಾಗಾದರೆ, ಮೋದಿಯವರ ಅಯೋಧ್ಯೆ ರಾಮಮಂದಿರ ಆಸಕ್ತಿ ಧಾರ್ಮಿಕವಲ್ಲ, ರಾಜಕೀಯ ಎಂದು ಅರ್ಥವೇ?
ಇದು ರಾಜಕೀಯ ಆಸಕ್ತಿ ಎಂದು ಬಿಜೆಪಿಯವರೇ ಒಪ್ಪಿಕೊಂಡಿದ್ದಾರೆ.

ನೀವು ಪುರಾತತ್ತ್ವ ಶಾಸ್ತ್ರದ ಅನೇಕ ರಚನೆಗಳ ಬಗ್ಗೆ ತಿಳಿದಿರುವ ವ್ಯಕ್ತಿ. ನಿಮ್ಮ ಅಭಿಪ್ರಾಯದ ಪ್ಪಕಾರ ಭಾರತದ ಅತ್ಯಂತ ಅದ್ಭುತವಾದ ರಚನೆಗಳು ಯಾವುವು?
ಕರ್ನಾಟಕದ ಹಂಪಿ ಮತ್ತು ಹಳೇಬೀಡು. ಅವುಗಳನ್ನು ಸರಿಯಾಗಿ ನವೀಕರಿಸಿದರೆ, ಅವು ರೋಮ್‌ಗಿಂತ ಹೆಚ್ಚು ಸುಂದರವಾಗಿರುತ್ತದೆ.

ಹ್ಯೂಯೆನ್ ತ್ಸಾಂಗ್ ಭಾರತದಿಂದ ತೆಗೆದುಕೊಂಡ ಪುಸ್ತಕಗಳ ಸಂಗ್ರಹವು ಚೀನಾದ ಅಭಿವೃದ್ಧಿಗೆ ಆಧಾರವಾಗಿದೆ ಎಂದು ನೀವು ಹೇಳಿದ್ದೀರಾ...?
ಹ್ಯೂಯೆನ್ ತ್ಸಾಂಗ್ 20 ಕುದುರೆಗಳ ಮೂಲಕ ಭಾರತದಿಂದ 751 ಪುಸ್ತಕಗಳನ್ನು ಚೀನಾಕ್ಕೆ ಸಾಗಿಸಿದ್ದ. ಐ-ತ್ಸಿಂಗ್ ತನ್ನೊಂದಿಗೆ 400 ಹಸ್ತಪ್ರತಿಗಳನ್ನು ಒಯ್ದಿದ್ದ. ಈ ಕೃತಿಗಳನ್ನು ಅನುವಾದಿಸಿದ್ದರು. ಇದನ್ನು ತಮ್ಮ ಭವಿಷ್ಯದ ಬೆಳವಣಿಗೆಗೆ ಬಳಸಿಕೊಂಡರು. ಇದರಿಂದ ನಮ್ಮ ಜ್ಞಾನ ಸಂಗ್ರಹಗಳು ನಾಶವಾದವು.

ರಾಜರು ಮತ್ತು ಚಕ್ರವರ್ತಿಗಳು ವಿಜಯದ ಭಾಗವಾಗಿ ದೇವಾಲಯಗಳು ಅಥವಾ ಮಸೀದಿಗಳನ್ನು ನಾಶಮಾಡುವುದು ಸಾಮಾನ್ಯವಾದಿಚ್ಚು? ಅದರಲ್ಲಿ ಧಾರ್ಮಿಕ ಒಳಾರ್ಥವಿದೆ ಎಂದು ನೀವು ಭಾವಿಸುತ್ತೀರಾ?
ಹಾನಿಯು ನಿಜವಾಗಿಯೂ ಅಧೀನತೆಯ ಒಂದು ಭಾಗವಾಗಿದೆ, ಆದರೆ ಸೆಮಿಟಿಕ್ ಧರ್ಮಗಳ ವಿಷಯದಲ್ಲಿ ಧಾರ್ಮಿಕ ಒಳಾರ್ಥವೂ ಇದೆ. ಆದರೆ, ಇಂಡೋನೇಷ್ಯಾ ಅಥವಾ ಮಲೇಷ್ಯಾದಂತಹ ಇತರ ದೇಶಗಳಲ್ಲಿ ಇಂತಹ ವಿನಾಶಗಳನ್ನು ನಾವು ನೋಡಲು ಸಾಧ್ಯವಿಲ್ಲ.

ಆದರೆ ಮರಾಠರು ತಮ್ಮ ದಾಳಿಯ ಸಮಯದಲ್ಲಿ ಅನೇಕ ದೇವಾಲಯಗಳನ್ನು ಲೂಟಿ ಮಾಡಿದ್ದರು... ಅದೇ ರೀತಿ, ಪಾಂಡ್ಯ ರಾಜನು ತಿರುವನಂತಪುರಂನಲ್ಲಿರುವ ಕಾಂತಲೂರ್ ಸಾಲಾವನ್ನು ಸುಟ್ಟುಹಾಕಿದ್ದನೆಂದು ಹೇಳಲಾಗುತ್ತದೆ...
ಹೌದು... ಅವರು ದೇವಾಲಯಗಳನ್ನು ಧ್ವಂಸ ಮಾಡಿದ್ದರು, ಆದರೆ ಸೆಮಿಟಿಕ್ ಆಕ್ರಮಣಕಾರರಂತೆ ಅವುಗಳನ್ನು ನಾಶಪಡಿಸಲಿಲ್ಲ. ಸೆಮಿಟಿಕ್ ಧರ್ಮಗಳು ತಾವು ಮಾತ್ರ ಸರಿ ಎಂದು ಭಾವಿಸುತ್ತವೆ.

ರಾಮಾಯಣ ಮತ್ತು ಮಹಾಭಾರತ ಕುರಿತು ಯಾವುದೇ ಪುರಾವೆಗಳಿವೆಯೇ?
ಹೌದು. ಕಬ್ಬಿಣದ ಅದಿರು ಪತ್ತೆಯಾದ ನಂತರ ಮಹಾಭಾರತದ ನಡೆದಿರುಬಹುದು ಎನ್ನಲಾಗಿದೆ. ನಮ್ಮ ಅಂದಾಜಿನ ಪ್ರಕಾರ, ಇದು 1200 BC ಮತ್ತು 1300 BC ನಡುವೆ ನಡೆದಿದೆ. ರಾಮಾಯಣ ನಡೆದದ್ದು ಕ್ರಿಸ್ತಪೂರ್ವ 1500ರಲ್ಲಿ. ಕುರುಕ್ಷೇತ್ರ ಮತ್ತು ಮಥುರಾ ನಡುವಿನ ಪ್ರದೇಶಗಳಲ್ಲಿ ಮಹಾಭಾರತ ನಡೆದಿರುವ ಕುರಿತು ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳು ಇವೆ.

ರಾವಣನ ಲಂಕಾ ಈಗಿನ ಶ್ರೀಲಂಕಾ ರಾಷ್ಚ್ರವೇ?
ಇಲ್ಲ ಇದು ಛತ್ತೀಸ್‌ಗಢದಲ್ಲಿದೆ ಎಂದು ಅಂದಾಜಿಸಲಾಗಿದೆ.

ಹಾಗಾದರೆ, ರಾಮಾಯಣ ಮತ್ತು ಮಹಾಭಾರತಗಳು ಪುರಾಣವಲ್ಲ...ಇತಿಹಾಸವೇ?
ಕಮ್ಯುನಿಸ್ಟರು ಇವುಗಳನ್ನು ಪುರಾಣಗಳು ಎಂದು ಹೇಳುತ್ತಾರೆ. ಆದರೆ, ಬಲಪಂಥೀಯರು ಇದು ಎರಡು ಲಕ್ಷ ವರ್ಷಗಳ ಹಿಂದೆ ನಡೆದಿದೆ ಎಂದು ಹೇಳುತ್ತಾರೆ. ಪುರಾತತ್ವಶಾಸ್ತ್ರಜ್ಞರು ಇವುಗಳಲ್ಲಿ ಯಾವುದನ್ನೂ ಸ್ವೀಕರಿಸುವುದಿಲ್ಲ. ಸತ್ಯವು ವಾಸ್ತವದ ನಡುವೆ ಇದೆ. ಮಹಾಭಾರತ ಯುದ್ಧವು ಬುಡಕಟ್ಟು ಜನಾಂಗದ ಯುದ್ಧವಾಗಿರಬೇಕು, ವಿಶ್ವ ಯುದ್ಧವಲ್ಲ.

1976 ರಲ್ಲಿ ನೀವು ASI ಗೆ ಸೇರಿದ ದಿನದಿಂದ ಭಾರತದಲ್ಲಿ ನೀವು ಗಮನಿಸಿದ ಬದಲಾವಣೆಗಳೇನು?
ಜನರು ಹೆಚ್ಚು ಧಾರ್ಮಿಕರಾಗಿದ್ದಾರೆ. ಹಿಂದೂಗಳ ವಿಷಯದಲ್ಲಿ ಈ ಬದಲಾವಣೆ ಹೆಚ್ಚು ಸ್ಪಷ್ಟವಾಗಿದೆ. ಹಿಂದೂಗಳು ಸೆಮಿಟಿಕ್ ಧರ್ಮಗಳಂತೆ ಹೆಚ್ಚು ಸಂಘಟಿತರಾಗಲು ಪ್ರಯತ್ನಿಸುತ್ತಿದ್ದಾರೆ.

ಉಪನಿಷತ್ತುಗಳು ನಿಮ್ಮ ಮೆಚ್ಚಿನ ಪುಸ್ತಕಗಳೇ...?
ಹೌದು. ನಾನು ವಿವೇಕಾನಂದರ ಅನುಯಾಯಿ.

ಅಯೋಧ್ಯೆ ತೀರ್ಪಿನ ನಂತರ ನಿಮಗೆ ಹಲವು ಬೆದರಿಕೆಗಳು ಬಂದಿವೆ ಎಂಬುದು ಕೇಳಿಬಂದಿದೆ.
ಹೌದು, ಬೆದರಿಕೆಗಳು ಬಂದಿದ್ದೆವು. ಮೂರು ವರ್ಷಗಳ ಕಾಲ ಪೊಲೀಸ್ ಭದ್ರತೆ ನೀಡಲಾಗಿತ್ತು. ಈಗಲೂ ನಾನು ಆಗಾಗ್ಗೆ ಹೊರಗೆ ಹೋಗುವುದಿಲ್ಲ.

ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ನಿಮಗೆ ಆಹ್ವಾನ ಬಂದಿದೆಯೇ?
ಹೌದು. ನನಗೆ ಆಹ್ವಾನ ಬಂದಿದೆ. ಆದರೆ ಆರೋಗ್ಯದ ಕಾರಣದಿಂದ ನಾನು ಹೋಗಲು ಸಾಧ್ಯವಾಗದೇ ಇರಬಹುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com