ಕೊರಗ ಸಮುದಾಯದ ಕಲಾವತಿಗೆ ಡಾಕ್ಟರೇಟ್: ಬಡತನ, ಅಸ್ಪೃಶ್ಯತೆ ಬದಿಗೊತ್ತಿ ಸಾಧನೆಗೈದ ಮಹಿಳೆ!

ಅಸ್ಪೃಶ್ಯತೆ ಎಂಬ ಅಡತಡೆಗಳ ಬದಿಗೊತ್ತಿ ಛಲ ಬಿಡದೆ ಶಿಕ್ಷಣ ಪಡೆದು, ತಮ್ಮ ಜೀವನದ ಗುರಿಯಂತೆಯೇ ಡಾಕ್ಟರೇಟ್ ಪಡೆದು ಕೊರಗ ಸಮುದಾಯದ ಕಲಾವತಿಯವರು ಸಾಧನೆ ಮಾಡಿದ್ದಾರೆ.
ಕೊರಗ ಸಮುದಾಯದ ಮಹಿಳೆಯರೊಂದಿಗೆ ಮಾತುಕತೆ ನಡೆಸುತ್ತಿರುವ ಕಲಾವತಿ.
ಕೊರಗ ಸಮುದಾಯದ ಮಹಿಳೆಯರೊಂದಿಗೆ ಮಾತುಕತೆ ನಡೆಸುತ್ತಿರುವ ಕಲಾವತಿ.

ಬಡತನ, ಅಸ್ಪೃಶ್ಯತೆ ಎಂಬ ಅಡತಡೆಗಳ ಬದಿಗೊತ್ತಿ ಛಲ ಬಿಡದೆ ಶಿಕ್ಷಣ ಪಡೆದು, ತಮ್ಮ ಜೀವನದ ಗುರಿಯಂತೆಯೇ ಡಾಕ್ಟರೇಟ್ ಪಡೆದು ಕೊರಗ ಸಮುದಾಯದ ಕಲಾವತಿಯವರು ಸಾಧನೆ ಮಾಡಿದ್ದಾರೆ.

ಸಂವಿಧಾನ ಜಾರಿಗೆ ಬಂದು ಶಿಕ್ಷಣಕ್ಕೆ ಎಲ್ಲರೂ ತೆರೆದುಕೊಳ್ಳುವ ಸಂದರ್ಭ ಇದ್ದರೂ ಇನ್ನೂ ಹಲವಾರು ಸಮುದಾಯಗಳು ಅನಕ್ಷರಸ್ಥರಾಗೇ ಉಳಿದಿವೆ. ಜಾತಿ ಪದ್ಧತಿಯಿಂದಾಗಿ ಹಲವು ಸಮುದಾಯಗಳು ಸಾಮಾಜಿಕವಾಗಿ ಒಳಗೊಳ್ಳದೇ ಇಂದಿಗೂ ಸಾಮಾಜಿಕ ಕಳಂಕ, ಬಹಿಷ್ಕಾರವನ್ನು ಎದುರಿಸುತ್ತಲೇ ಇವೆ. ಈ ಸಮುದಾಯದ ಸಾಕಷ್ಟು ಜನರು ಇನ್ನು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಲೇ ಬರುತ್ತಿದ್ದಾರೆ. ಈ ಅಡೆತಡೆಗಳನ್ನು ಎದುರಿಸಿ ಸಾಧನೆ ಮಾಡಿದವರು ಮಾತ್ರ ಬೆರಳೆಣಿಕೆಯಷ್ಟು ಮಂದಿ ಮಾತ್ರ.

ಈ ಪೈಕಿ ಕಲಾವತಿ ಕೂಡ ಒಬ್ಬರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕೊರಗ ಸಮುದಾಯದ ಕುರಿತು ಕೆ ಎಂ ಮೇತ್ರಿ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಪ್ರಬಂಧ ಮಂಡಿಸಿದ ಕಲಾವತಿಯವರಿಗೆ ವಿಜಯನಗರ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪಿಎಚ್‌ಡಿ (ಡಾಕ್ಟರೇಟ್)‌ ಪದವಿ ನೀಡಿ ಗೌರವಿಸಿದೆ.

ʼಕೊರಗ ಆದಿಮ ಬುಡಕಟ್ಟಿನ ಸಮಾಜೋ – ಸಾಂಸ್ಕೃತಿಕ ಅಧ್ಯಯನʼ ಎನ್ನುವ ವಿಷಯದ ಕುರಿತು ಕಲಾವತಿಯವರು ಡಾ. ಕೆ ಎಮ್‌ ಮೇತ್ರಿಯವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೊರಗ ಸಮುದಾಯಕ್ಕೆ ಸೇರಿದವರಾದ ಕಲಾವತಿಯವರು ಈ ಸಂಶೋಧನಾ ಪ್ರಬಂದ ಮಂಡಿಸುವುದರೊಂದಿಗೆ ಈ ಸಮುದಾಯದಿಂದ ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್‌ ಪಡೆದ ಎರಡನೇ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

ಕೊರಗ ಸಮುದಾಯದ ಮಹಿಳೆಯರೊಂದಿಗೆ ಮಾತುಕತೆ ನಡೆಸುತ್ತಿರುವ ಕಲಾವತಿ.
‘ನಮ್ಮ ನ್ಯಾಯ ಕೂಟ’: ತಮ್ಮದೇ ನ್ಯಾಯಾಂಗ ವ್ಯವಸ್ಥೆ, ತೀರ್ಪಿನೊಂದಿಗೆ ಶಾಂತಿ ಕಾಪಾಡುತ್ತಿರುವ 'ಕೊರಗ ಸಮುದಾಯ'

ಈ ಹಿಂದೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಸಮೀಪದ ಗುಂಡ್ಮಿಯ ಸಬಿತಾ ಕೊರಗ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರವಿಭಾಗದ ಪ್ರಾದ್ಯಾಪಕ ಪ್ರೊ.ಜೋಗನ್ ಶಂಕರ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ ʼಇವ್ಯಾಲುವೇಶನ್ಸ್ ಆಫ್ ಪಾಲಿಸಿಸ್ ಆ್ಯಂಡ್ ಪ್ರೋಗ್ರಾಮ್ಸ್ ಆಫ್ ಟ್ರೈಬಲ್ ಡೆವೆಲಪ್‌ಮೆಂಟ್ ಆಫ್ ಕರ್ನಾಟಕ ಸ್ಟೇಟ್ ಎ ಸಿಚುವೇಷನಲ್ ಅನಾಲಿಸಿಸ್ʼ ಎನ್ನುವ ವಿಷಯದ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.

ಕರಾವಳಿಯ ಮೂಲನಿವಾಸಿಗಳೆಂದೇ ಪರಿಗಣಿತವಾದ ಬುಡಕಟ್ಟು ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊತ್ತಮೊದಲ ಮಹಿಳೆಯೆನ್ನಿಸಿಕೊಂಡಿರುವ ಡಾ. ಸಬಿತಾ ಗುಂಡ್ಮಿ ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತಿದ್ದಾರೆ.

ಕಲಾವತಿಯವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕರ್ಜೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕಡoಗೋಡು ಎನ್ನುವ ಊರಿನವರಾಗಿದ್ದು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಸೂರಾಲು ಎನ್ನುವ ಊರಿನಲ್ಲಿ ಪೂರ್ಣಗೊಳಿಸಿದ್ದಾರೆ. ರೋಶನಿ ನಿಲಯ ಮಂಗಳೂರು ಸಂಸ್ಥೆಯಲ್ಲಿ ಅವರು BSW ಪದವಿಯನ್ನು ಮುಗಿಸಿದ್ದಾರೆ.

ಡಾಕ್ಟರೇಟ್ ಪಡೆಯುವ ಹಾದಿ ಕಲಾವತಿಯವರಿಗೆ ಅಷ್ಟು ಸುಲಭವಾಗಿರಲಿಲ್ಲ. ಒಂದು ದಶಕದ ಹಿಂದೆ ಸಮುದಾಯಕ್ಕೆ ಸರ್ಕಾರಿ ಭೂಮಿಗೆ ಒತ್ತಾಯಿಸಿ ಕೊರಗ ಚಳವಳಿಯಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಒಮ್ಮೆ ಜೈಲು ಪಾಲಾಗಿದ್ದರು.

ತಮ್ಮ ಜೀವನದ ಏಳುಬೀಳು, ಹೋರಾಟದ ಕುರಿತು ಕಲಾವತಿಯವರು ಮಾತನಾಡಿದ್ದು, ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ದಿನವೇ ನನ್ನ ತಂದೆ (ಗುಂಬಳ ಕೊರಗ) ಇಹಲೋಕ ತ್ಯಜಿಸಿದ್ದರು. ಕ್ಯಾನ್ಸರ್ ರೋಗ ಅವರನ್ನು ಬಲಿಪಡೆದುಕೊಂಡಿತ್ತು. ಹಾಗಾಗಿ ಮರುಪರೀಕ್ಷೆ ಬರೆಯಬೇಕಾಗಿ ಬಂದಿತ್ತು. ಫಲಿತಾಂಶದ ಬಳಿಕ ನಾನು ನನ್ನ ಅಧ್ಯಯನವನ್ನು ಮುಂದುವರಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದಾಗ ನನ್ನ ಕುಟುಂಬ ಸದಸ್ಯರು ಅಸಹಾಯಕ ತೋರಿದ್ದರು. ವಿದ್ಯಾಭ್ಯಾಸ ಮುಂದುವರೆಸಲೇಬೇಕೆಂದು ಹಠಕ್ಕೆ ಬಿದ್ದಾಗ ನನ್ನ ಸಹೋದರಿ, ಸೋದರ ಮಾವ ಮತ್ತು ತಾಯಿ ಬೆಂಬಲ ನೀಡಿದರು.

ಈ ವಿದ್ಯಾಭ್ಯಾಸ ಮುಂದುವರೆಸುವುದಕ್ಕೂ ಮೊದಲು ನಾನು 2 ವರ್ಷ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದೆ. ನನ್ನ ಪಿಯುಸಿಗೆ ಸೇರಿದೆ. ದ್ವಿತೀಯ ಪಿಯುಸಿಯಲ್ಲಿ 2004ರಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದೆ. ಡಿಎಡ್ ಕೋರ್ಸ್ ನಲ್ಲಿ ಸರ್ಕಾರಿ ಸೀಟು ಸಿಗದ ಕಾರಣ ಮತ್ತೆ ಗೋಡಂಬಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಬೇಕಾಯಿತು. ನಂತರ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷರಾದ ಪಳ್ಳಿ ಗೋಕುಲ್ ದಾಸ್ ಅವರ ಬೆಂಬಲದೊಂದಿಗೆ, ನಾನು ಮಂಗಳೂರಿನ ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನಲ್ಲಿ ಬಿಎಸ್‌ಡಬ್ಲ್ಯೂ ಕೋರ್ಸ್‌ಗೆ ಸೇರಿಕೊಂಡೆ. ನಂತರದ ಜೀವನ ಕಷ್ಟಕರವಾಗಿತ್ತು, ಆದರೂ ಎಂದಿಗೂ ಎದೆಗುಂದಲಿಲ್ಲ ಎಂದು ಕಲಾವತಿಯವರು ಹೇಳಿದ್ದಾರೆ.

ಕೊರಗ ಸಮುದಾಯದ ಮಹಿಳೆಯರೊಂದಿಗೆ ಮಾತುಕತೆ ನಡೆಸುತ್ತಿರುವ ಕಲಾವತಿ.
ತುಳು ಭಾಷೆಯಲ್ಲಿ ಮೊಟ್ಟ ಮೊದಲ ಸಂಶೋಧನಾ ಅಧ್ಯಯನ ಪ್ರಕಟ: ಪಿಹೆಚ್ ಡಿ ಗಳಿಸಿದ ಮಂಗಳೂರಿನ ಡಾ ವಿ ಕೆ ಯಾದವ್

ಇದೂವರೆಗೆ ಕೊರಗ ಸಮುದಾಯದ ನಾಲ್ವರು ಪಿಎಚ್ ಡಿ ಪಡೆದಿದ್ದಾರೆ. ಅವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬಾಬು ಕೊರಗ ಅವರು 2011 ರಲ್ಲಿ ಡಾಕ್ಟರೇಟ್ ಪಡೆದ ಮೊದಲಿಗರಾಗಿದ್ದಾರೆ. ನಂತರ ಸಬಿತಾ ಹಾಗೂ ಅವರ ಪತಿ ದಿನಕರ ಕೆಂಜೂರ್ ಈ ವರ್ಷದ ಆರಂಭದಲ್ಲಿ ಪಿಎಚ್‌ಡಿ ಪಡೆದಿದ್ದರು. ಇದೀಗ ಕಲಾವತಿಯವರು ಸಮುದಾಯದಿಂದ ಪಿಎಚ್‌ಡಿ ಪಡೆದ ನಾಲ್ಕನೇ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಬಿಎಸ್‌ಡಬ್ಲ್ಯೂ ಕೋರ್ಸ್‌ಗೂ ಮುನ್ನ 2013 ರಲ್ಲಿ ಮೈಸೂರಿನ ಶೈಲೇಂದ್ರ ಕುಮಾರ್ ಅವರನ್ನು ವಿವಾಹವಾಗಿದ್ದೆ. ವಿವಾಹದ ಬಳಿಕ MA ಮತ್ತು PhD ಪೂರ್ಣಗೊಳಿಸಲು ಬಯಸಿದಾಗ ನನ್ನ ಪತಿ ನನಗೆ ಬೆಂಬಲ ನೀಡಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಎಂಎ ಮಾಡಿದೆ. ಬಳಿಕ ಹಂಪಿ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊ.ಕೆ.ಎಂ.ಮೇತ್ರಿ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಮಾಡಲು ಪ್ರಾರಂಭಿಸಿದ್ದೆ. ಇದೇ ವೇಳೆ ವಿವಿಧ ಸಾಮಾಜಿಕ ಸಂಸ್ಥೆಗಳೊಂದಿಗೂ ಕೆಲಸ ಮಾಡಿದ. ಇಲ್ಲಿನ ನನ್ನ ಕಠಿಣ ಶ್ರಮ ಹಾಗೂ ಶ್ರದ್ಧೆಯಿಂದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಪಡೆದ ರಾಷ್ಟ್ರೀಯ ವಿದ್ಯಾರ್ಥಿ ವೇತನದಿಂದಾಗಿ ಕಲಾವತಿಯವರು ಪಿಎಚ್‌ಡಿಯನ್ನು ಮುಂದುವರಿಸಿದ್ದರು. ಈ ವಿದ್ಯಾರ್ಥಿ ವೇತನದಿಂದಾಗಿ ಆಕೆಗೆ ಯಾವುದೇ ಆರ್ಥಿಕ ಹೊರೆಯಾಗಲಿಲ್ಲ. ಸ್ವತಃ ಬುಡಕಟ್ಟು ಮಹಿಳೆಯಾಗಿರುವುದರಿಂದ ಸಂಶೋಧನಾ ವಿಧಾನವು ಕೊರಗ ಜನರ ಜೀವನದ ಕುರಿತು ಆಳವಾಗಿ ಅಧ್ಯಯನ ಮಾಡಲು ಸಾಧ್ಯವಾಯಿತು. ಸಂಪೂರ್ಣ ಮಾಹಿತಿಯ ಆಧಾರದ ಮೇಲೆ ಸಮಗ್ರ ಪ್ರಬಂಧವನ್ನು ಪ್ರಸ್ತುತಪಡಿಸಿದರು ಎಂದು ಪ್ರೊ.ಕೆ.ಎಂ.ಮೇತ್ರಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com