ವಿಶ್ವನಾಥ ಶ್ರೀಕಂಠಯ್ಯ
ವಿಶ್ವನಾಥ ಶ್ರೀಕಂಠಯ್ಯ

ಬೆಂಗಳೂರಿನಲ್ಲಿ ಜಲ ಬಿಕ್ಕಟ್ಟು ತಪ್ಪಿಸಲು ಸಮಗ್ರ ನೀರು ನಿರ್ವಹಣೆ ಅಗತ್ಯ: ವಿಶ್ವನಾಥ ಶ್ರೀಕಂಠಯ್ಯ (ಸಂದರ್ಶನ)

ರಾಜ್ಯ ರಾಜಧಾನಿ ಬೆಂಗಳೂರು ತೀವ್ರ ನೀರಿನ ಸಮಸ್ಯೆಯಿಂದ ತತ್ತರಿಸಿದ್ದು, ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಹೆಣಗಾಡುತ್ತಿದೆ. ಬಿಕ್ಕಟ್ಟು ದೂರಾಗಿಸಲು ಮೇಕೆದಾಟು ಅಥವಾ ಬೋರ್‌ವೆಲ್‌ಗಳ ಕೊರೆಯುವುದರತ್ತ ಚಿಂತನೆ ನಡೆಸುತ್ತಿದೆ. ಆದರೆ, ಖ್ಯಾತ ಜಲ ಸಂರಕ್ಷಣಾ ತಜ್ಞ ವಿಶ್ವನಾಥ ಶ್ರೀಕಂಠಯ್ಯ ಅವರು, ನಮ್ಮಲ್ಲಿ ಸಾಕಷ್ಟು ನೀರಿದೆ ಆದರೆ, ಸಮಗ್ರ ನೀರು ನಿರ್ವಹಣೆ ಯೋಜನೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿ ಸಂದರ್ಶನದಲ್ಲಿ ರೈನ್‌ವಾಟರ್ ಕ್ಲಬ್‌ನ ಸಂಸ್ಥಾಪಕ, ಬಯೋಮ್ ಎನ್ವಿರಾನ್‌ಮೆಂಟಲ್ ಸೊಲ್ಯೂಷನ್‌ನ ನಿರ್ದೇಶಕ ಮತ್ತು ಬಯೋಮ್ ಎನ್ವಿರಾನ್‌ಮೆಂಟಲ್ ಟ್ರಸ್ಟ್‌ನ ಟ್ರಸ್ಟಿ ವಿಶ್ವನಾಥ ಶ್ರೀಕಂಠಯ್ಯ ಅವರು, ನಗರದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಕುರಿತು ಮಾತನಾಡಿದ್ದಾರೆ.

Q

ನಗರದಲ್ಲಿ ನೀರಿನ ಬಿಕ್ಕಟ್ಟು ಎಷ್ಟು ತೀವ್ರವಾಗಿದೆ?

A

1.1 ಮಿಲಿಯನ್ ಜನರು ಕಾವೇರಿ ನೀರಿನ ಸಂಪರ್ಕವನ್ನು ಹೊಂದಿದ್ದಾರೆ. ನಿಜವಾಗಿಯೂ ಹೇಳಬೇಕೆಂದರೆ ನಗರದಲ್ಲಿ ನೀರಿನ ಬಿಕ್ಕಟ್ಟು ಇಲ್ಲ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ದಿನಕ್ಕೆ 1,470 ಮಿಲಿಯನ್ ಲೀಟರ್ (MLD) ಪಂಪ್ ಮಾಡುತ್ತದೆ. ಕನಿಷ್ಠ ಶೇ.25-30 ಜನರು ತಮ್ಮ ಸ್ವಂತ ಬೋರ್‌ವೆಲ್‌ಗಳ ಮೂಲಕ ಅಥವಾ ನೀರಿನ ಟ್ಯಾಂಕರ್‌ಗಳ ಮೂಲಕ ಅಂತರ್ಜಲವನ್ನು ಅವಲಂಬಿಸಿದ್ದಾರೆ. ಇವರಲ್ಲಿ ಸೀಮಿತ ಪ್ರಮಾಣದ ಬಿಕ್ಕಟ್ಟು ಇದೆ. ನಗರದ ಹೊರವಲಯದಲ್ಲಿ ಕಳೆದ ಮೂರು ತಿಂಗಳಿನಿಂದ ಬಿಕ್ಕಟ್ಟುಗಳಿವೆ.

Q

ಬೆಂಗಳೂರು ಹೊರವಲಯದಲ್ಲು ಬಿಕ್ಕಟ್ಟಿನ ತೀವ್ರತೆ ಎಷ್ಟಿದೆ?

A

ತುಂಬಾ ತೀವ್ರವಾಗಿದೆ. ಆದರೆ, ಸಂಸ್ಕರಿಸಿದ ತ್ಯಾಜ್ಯ ನೀರು ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಹೋಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದ್ದು ಬಿಕ್ಕಟ್ಟುಗಳಿಲ್ಲವೆಂದೇ ಹೇಳಬಹುದು. ಇನ್ನು ಕೆಲವೆಡೆ ಬರ ಮತ್ತು ನೀರಿನ ಸಮಸ್ಯೆ ತೀವ್ರವಾಗಿದೆ.

Q

ಬೆಂಗಳೂರು ಕೇಪ್ ಟೌನ್ ಹಾದಿಯಲ್ಲಿ ಸಾಗುತ್ತಿದೆಯೇ?

A

ಕೇಪ್‌ಟೌನ್‌ನಲ್ಲಿ ಏನಾಯಿತು ಎಂದರೆ ನಗರಕ್ಕೆ ನೀರು ಸರಬರಾಜು ಮಾಡುವ ಜಲಾಶಯವು ಬರಿದಾಗಲು ಮತ್ತು ಬತ್ತಿ ಹೋಗಲಾರಂಭಿಸಿತು. ಆದರೆ, ಬೆಂಗಳೂರು ನಾಲ್ಕು ಜಲಾಶಯಗಳ ಮೇಲೆ ಅವಲಂಬಿತವಾಗಿದೆ. ಅವುಗಳಲ್ಲಿ ಎರಡು ಜಲಾಶಯಗಳಾದ ಕೆಆರ್ಎಸ್ ಮತ್ತು ಕಬಿನಿಯಿಂದ ನೇರವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಹೇಮಾವತಿ ಮತ್ತು ಹಾರಂಗಿಯಲ್ಲಿ ಹಿನ್ನೀರು ಬಾಕಿಯಿದೆ. ಸುಮಾರು 43 ಟಿಎಂಸಿ ಅಡಿ ನೀರು ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಹೇಳಿದೆ. ಜುಲೈವರೆಗೆ ಅಣೆಕಟ್ಟುಗಳು ಬತ್ತುವುದಿಲ್ಲ. ಬೆಂಗಳೂರಿಗೆ 10.8 ಟಿಎಂಸಿ ಅಡಿ ನೀರು ಬೇಕು. ನೀರನ್ನು ವಿವೇಚನೆಯಿಂದ ಬಳಸಿದರೆ ಜಲಾಶಯದಲ್ಲಿರು ಸಾಕಾಗುತ್ತದೆ. ನೀರನ್ನು ಸಂಪರ್ಕವಾಗಿ ಬಳಕೆ ಮಾಡಿದ್ದೇ ಆದರೆ, ಬೆಂಗಳೂರು ಕೇಪ್ ಟೌನ್ ಹಾದಿ ಹಿಡಿಯುವುದಿಲ್ಲ. ಆದರೆ, ಅಂತರ್ಜಲವನ್ನು ಅವಲಂಬಿಸಿರುವ ಭಾಗಗಳಿಗೆ ಶೀಘ್ರವಾಗಿ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ.ಈ ಪರಿಸ್ಥಿತಿಗೆ ಕಾರಣವೇನು?

Q

ಈ ಪರಿಸ್ಥಿತಿಗೆ ಕಾರಣವೇನು?

A

ನಗರದ ಪೂರ್ವ ಮತ್ತು ಆಗ್ನೇಯ ಭಾಗಗಳಲ್ಲಿ ಬಿಕ್ಕಟ್ಟು ಉಂಟಾಗಲು ಒಂದು ಕಾರಣವೆಂದರೆ ಬೆಳ್ಳಂದೂರು ಮತ್ತು ವರ್ತೂರು ನೀರು ಬರಿದಾಗಿದ್ದು. ಕಳೆದ ಐದು ವರ್ಷಗಳಿಂದ ಹೂಳು ತೆಗೆಯದಿರುವುದು, 775 ಎಂಎಲ್‌ಡಿ ಪೂರೈಸುವ ಕಾವೇರಿ 5ನೇ ಹಂತ ಒಂದು ವರ್ಷ ವಿಳಂಬವಾಗಿದೆ. ಸಕಾಲದಲ್ಲಿ ಕೆರೆಗಳ ಹೂಳು ತೆಗೆದು ಮಳೆ ಅಥವಾ ಸಂಸ್ಕರಿಸಿದ ತ್ಯಾಜ್ಯ ನೀರು ತುಂಬಿದ್ದರೆ ಬಿಕ್ಕಟ್ಟು ಉಂಟಾಗುತ್ತಿರಲಿಲ್ಲ.ಮಳೆ ನೀರು ಕೊಯ್ಲು (ಆರ್‌ಡಬ್ಲ್ಯೂಎಚ್) ಬಗ್ಗೆ ಸರ್ಕಾರ ಗಂಭೀರವಾಗಿರುತ್ತಿದ್ದರೆ ಈ ಸಮಸ್ಯೆ ಇರುತ್ತಿತ್ತಾ?

Q

ಮಳೆ ನೀರು ಕೊಯ್ಲು (RWH) ಬಗ್ಗೆ ಸರ್ಕಾರ ಗಂಭೀರವಾಗಿರುತ್ತಿದ್ದರೆ ಈ ಸಮಸ್ಯೆ ಇರುತ್ತಿತ್ತಾ?

A

ಇದು ಕೂಡ ಸಮಸ್ಯೆಯ ಒಂದು ಭಾಗವಾಗಿದೆ. ನಾಗರಿಕರು RWH ನಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ. ನಗರದಲ್ಲಿ ಸುಮಾರು 1.8 ಮಿಲಿಯನ್ RWH ರಚನೆಗಳಿವೆ, ಅವುಗಳಲ್ಲಿ ಕೆಲವು ನಿಷ್ಕ್ರಿಯವಾಗಿವೆ. ಕನಿಷ್ಠ 10 ಮಿಲಿಯನ್ ರಚನೆಗಳು ಇರಬೇಕು.

Q

ಒಳಚರಂಡಿ ಸಂಸ್ಕರಣಾ ಘಟಕಗಳು (STPs) ಎಷ್ಟು ಸಹಾಯ ಮಾಡುತ್ತವೆ?

A

BWSSB ಯ 36 STP ಗಳು ಸುಮಾರು 1,440 MLD ನೀರ ಒದಗಿಸುವ ಸಾಮರ್ಥ್ಯವನ್ನು ಹೊಂದಿದ್ದವು, ಆದರೆ 1,059 MLD ನೀರು ಮಾತ್ರ ಬರುತ್ತಿದೆ. ಇದೀಗ BWSSB STP ಗಳನ್ನು ನವೀಕರಿಸಲು 1,600 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ. ಬೆಂಗಳೂರಿಗೆ ತ್ಯಾಜ್ಯ ನೀರು ಲಭ್ಯವಾಗುವ ಕಡೆಗಳಲ್ಲಿ ಸ್ಥಳಗಳನ್ನು ಗುರ್ತಿಸಬೇಕಿದೆ. ನಮ್ಮಲ್ಲಿ ತ್ಯಾಜ್ಯನೀರಿನ ಮರುಬಳಕೆ ನೀತಿ ಇಲ್ಲ.

Q

ಬೆಂಗಳೂರಿನಲ್ಲಿ ಬಾವಿಗಳ ಸ್ಥಿತಿ ಹೇಗಿದೆ?

A

ಅನೇಕ ಬಾವಿಗಳು ನಿಷ್ಕ್ರಿಯಗೊಂಡಿವೆ. ಆದರೆ ಇರುವ ಬಾವಿಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಮಲ್ಲೇಶ್ವರಂ, ಬಸವನಗುಡಿ, ಬಸವೇಶ್ವರನಗರ ಮತ್ತು ಇತರ ಪ್ರದೇಶಗಳಲ್ಲಿನ ಸಮುದಾಯದ ಬಾವಿಗಳು ಮಳೆ ನೀರಿನಿಂದ ಮರುಪೂರಣಗೊಂಡಿವೆ. ಬೆಂಗಳೂರಿನ ಸುಮಾರು 12,000 ಹಳೆಯ ಬಾವಿಗಳಿಗೆ ಜೀವ ತುಂಬಲಾಗಿದೆ. ಕಬ್ಬನ್ ಪಾರ್ಕ್, ಲಾಲ್ ಬಾಗ್ ಹಾಗೂ ನಗರದ ಇತರೆ ಪ್ರದೇಶಗಳಲ್ಲಿ 2.5 ಇಂಗು ಗುಂಡಿಗಳನ್ನು ತೋಡಲಾಗಿದೆ. ಲಕ್ಷ ಇಂಗು ಗುಂಡಿಗಳನ್ನು ತೋಡಿದರೂ ನಗರಕ್ಕೆ ಸಾಕಾಗುವುದಿಲ್ಲ. ಇದು ಮತ್ತಷ್ಟು ಬೆಳೆಯಬೇಕಿದೆ.

Q

ಅಂತರ್ಜಲ ಮಟ್ಟ ಸುಧಾರಿಸುವಲ್ಲಿ ಇಂಗು ಗುಂಡಿಗಳಿಂದ ಉತ್ತಮ ಬೆಳವಣಿಗೆಗಳು ಕಂಡು ಬಂದಿವೆಯೇ?

A

ಇಂಗು ಗುಂಡಿಗಳಿರುವ ಕಡೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಇಂಗು ಗುಂಡಿಗಳಿಂದ ತಕ್ಷಣದ ಬೆಳವಣಿಗೆಗಳನ್ನು ನಾವು ನೋಡಬಹುದು. ಉತ್ತಮ ಫಲಿತಾಂಶಕ್ಕೆ ಸಮಯ ಬೇಕಾಗುತ್ತದೆ. ಮುಂದಿನ ವರ್ಷ ನೀರಿನ ಬಿಕ್ಕಟ್ಟು ಮರುಕಳಿಸದಂತೆ ಮಾಡಲು ಇದೀಗ ನಾವು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು?

Q

ಮುಂದಿನ ವರ್ಷ ನೀರಿನ ಬಿಕ್ಕಟ್ಟು ಮರುಕಳಿಸದಂತೆ ಮಾಡಲು ಇದೀಗ ನಾವು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು?

A

ರಾಜ್ಯದಲ್ಲಿ 36,000 ಕೆರೆಗಳು ಮತ್ತು ಟ್ಯಾಂಕ್ ಗಳಿವೆ. 2008 ರಲ್ಲಿ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಜಲ ಸಂವರ್ದನಾ ಯೋಜನಾ ಸಂಘ (JSYS) ಎಂಬ ಕಾರ್ಯಕ್ರಮವಿತ್ತು. ಇದರೊಂದಿಗೆ 3,900 ಟ್ಯಾಂಕ್‌ಗಳಿಂದ ಹೂಳು ತೆಗೆಯಲಾಯಿತು, ಜಲಾನಯನ ಪ್ರದೇಶಗಳು ಮತ್ತು ಫೀಡರ್ ಚಾನಲ್‌ಗಳನ್ನು ಸ್ವಚ್ಛಗೊಳಿಸಲಾಯಿತು ಮತ್ತು ಟ್ಯಾಂಕ್ ಬಳಕೆದಾರರ ಗುಂಪುಗಳನ್ನು ರಚಿಸಲಾಯಿತು. ಆದರೆ, ಅದು ಮರೆಯಾಗಿದೆ. ಇದೀಗ JSYS 2.0 ನ ಅವಶ್ಯಕತೆ ಇದೆ. ನಗರ ಪ್ರದೇಶಗಳಿಗೆ ಹೆಚ್ಚಿನ ಕಾರ್ಯತಂತ್ರಗಳ ಅಗತ್ಯವಿದೆ. ಅವುಗಳಲ್ಲಿ ಒಂದು ಅಂತರ್ಜಲ ಮತ್ತು ಜಲಚರಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. BWSSB ಇಲ್ಲಿಯವರೆಗೆ ಜಲ-ಭೂವಿಜ್ಞಾನಿಯನ್ನು ಹೊಂದಿಲ್ಲ. ಎಲ್ಲಾ ನಗರಗಳು ಮತ್ತು ಪಟ್ಟಣಗಳಲ್ಲಿ ಅಂತರ್ಜಲ ವಿಭಾಗಗಳನ್ನು ಸ್ಥಾಪಿಸಬೇಕು. ಅಮೃತ್ 2.0 ನಲ್ಲಿ ಲಭ್ಯವಿರುವ ಹಣವನ್ನು ಬಳಸಿಕೊಂಡು ಅಂತರ್ಜಲ ನಿರ್ವಹಣೆಯ ಯೋಜನೆಗಳನ್ನು ರೂಪಿಸಬೇಕು. ಅಂತರ್ಜಲ ಮತ್ತು ಸಂಸ್ಕರಿಸಿದ ತ್ಯಾಜ್ಯನೀರಿನ ಸರಿಯಾದ ಬಳಕೆಯಿಂದ, ಬರ-ನಿರೋಧಕ ಮತ್ತು ಹವಾಮಾನ-ನಿರೋಧಕವನ್ನು ನಾವೇ ಮಾಡಬಹುದು.

Q

ಬೆಂಗಳೂರಿನಲ್ಲಿ ಕೆರೆಗಳ ಅತಿಕ್ರಮಣ ಎಷ್ಟರ ಮಟ್ಟಿಗಿದೆ?

A

ಭಯಾನಕವಾಗಿದೆ ಎಂದೇ ಹೇಳಬಹುದು. ಕೆರೆಗಳಿಗೆ ಕಟ್ಟಡ ನಿರ್ಮಾಣದ ಅವಶೇಷಗಳನ್ನು ಸುರಿಯಲಾಗುತ್ತಿದೆ. ಕೆರೆ ಪ್ರದೇಶಗಳಿಗೆ ಮಣ್ಣು ಸುರಿಯತ್ತಿದ್ದಾರೆ. ನ್ಯಾಯಾಲಯದ ಆದೇಶಗಳ ಹೊರತಾಗಿಯೂ ಅತಿಕ್ರಮಣ ಹೆಚ್ಚಾಗುತ್ತಲೇ ಇದೆ.

Q

ಮಳೆ ಕೊರತೆಯಾಗಿದ್ದು, ಕಾವೇರಿ ಜಲಾನಯನ ಪ್ರದೇಶಕ್ಕೆ ಹಾನಿಯಾಗಿದೆ. ಇದು ಬೆಂಗಳೂರಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

A

IISc ಮತ್ತು ಇತರರ ವರದಿಗಳು ಅರಣ್ಯಗಳು ಮತ್ತು ಕಾವೇರಿ ಜಲಾನಯನದಲ್ಲಿ ನೀರಿನ ಮಟ್ಟ ಕುಸಿದಿರುವುದಾಗಿ ಹೇಳಿದೆ. ಕಾವೇರಿ ಇಲ್ಲದೆ ಬೆಂಗಳೂರು ಉಳಿಯಲು ಸಾಧ್ಯವಿಲ್ಲ. ಬೆಂಗಳೂರು ಕೇವಲ ಕೆರೆಗಳ ವ್ಯಾಮೋಹಕ್ಕೆ ಒಳಗಾಗದೆ ಕಾವೇರಿ ಜಲಾನಯನದ ಬಗ್ಗೆ ಚಿಂತಿಸಬೇಕು, ಇದು ನಗರದ ಜವಾಬ್ದಾರಿಯಾಗಿದೆ. ನಗರದಲ್ಲಿ ಈಗಲೂ ನದಿ ಜಲಾನಯನ ಸಂಸ್ಥೆ ಮತ್ತು ನಿರ್ವಹಣಾ ಯೋಜನೆ ಇಲ್ಲ.

Q

ಎತ್ತಿನಹೊಳೆ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

A

ಎತ್ತಿನಹೊಳೆ ಮತ್ತು ಮೇಕೆದಾಟು ಪರಿಸರ ದೃಷ್ಟಿಕೋನದಲ್ಲಿ ವಿನಾಶಕಾರಿ ಎಂದೇ ಹೇಳಬಹುದು. ಎತ್ತಿನಹೊಳೆಗೆ ಸರಕಾರ 20 ಸಾವಿರ ಕೋಟಿ ಬಂಡವಾಳ ಹೂಡಿದೆ, ಆದರೆ, ನಮಗೆ ಒಂದು ಹನಿ ನೀರು ಬಂದಿಲ್ಲ. ನಾವು ಸ್ಥಳೀಯ ನೀರು ಮತ್ತು ಸ್ಥಳೀಯ ರಕ್ಷಣೆಯನ್ನು ನೋಡಬೇಕಿದೆ.

Q

ಬೆಂಗಳೂರಿನ ನೀರಿನ ಸಮಸ್ಯೆಗೆ ಮೇಕೆದಟ್ಟು ಪರಿಹಾರ ಎಂದು ಸರ್ಕಾರ ಹೇಳುತ್ತಿದೆ. ಇದು ನಿಜವೇ?

A

ಸುಪ್ರೀಂ ಕೋರ್ಟ್‌ನಿಂದ ನಮಗೆ 284.75 ಟಿಎಂಸಿ ಅಡಿ ಹಂಚಿಕೆ ಮಾಡಲಾಗಿದೆ. ನಗರವು ಪ್ರಸ್ತುತ 19 ಟಿಎಂಸಿ ಅಡಿ ನೀರು ಬಳಕೆ ಮಾಡುತ್ತಿದೆ. ಹೆಚ್ಚುವರಿ 775 ಎಂಎಲ್‌ಡಿ ಬರುವುದರಿಂದ ನಾವು ಇನ್ನೂ 11 ಟಿಎಂಸಿ ಅಡಿ ತೆಗೆದುಕೊಳ್ಳಬಹುದು. ನಮ್ಮ ಉಪಮುಖ್ಯಮಂತ್ರಿಯವರು ಇನ್ನೂ 6 ಟಿಎಂಸಿ ಅಡಿ ಲಭ್ಯವಿದೆ ಎಂದು ಹೇಳುತ್ತಿದ್ದಾರೆ,. ತೊರೆಕಾಡನಹಳ್ಳಿಯಿಂದ (ಅಥವಾ ಟಿ.ಕೆ.ಹಳ್ಳಿ) ಬೆಳಿಗ್ಗೆ 6 ಗಂಟೆಗೆ ನೀರನ್ನು ಪಂಪ್ ಮಾಡಲಾಗುತ್ತದೆ. ನಂತರ 7.30 ಕ್ಕೆ ಜನರ ಮನೆ ತಲುಪುತ್ತದೆ. ಬೆಳಿಗ್ಗೆ 9 ಗಂಟೆಗೆ ಎಸ್‌ಟಿಪಿಗಳಲ್ಲಿರುತ್ತದೆ. ಬೆಳಗ್ಗೆ 11.30ಕ್ಕೆ ಕೋಲಾರದಲ್ಲಿರುತ್ತದೆ. ಕಾವೇರಿ ನೀರು ನಿಲ್ಲಲು ಬೆಂಗಳೂರು ಕೇವಲ ನಿಲ್ದಾಣವಷ್ಟೇ. ಈ ನೀರಿಗೆ ಬೆಂಗಳೂರು 600 ಎಂಎಲ್‌ಡಿ ಅಂತರ್ಜಲವನ್ನೂ ಸೇರಿಸುತ್ತದೆ, ಅದು ತ್ಯಾಜ್ಯನೀರಾಗಿರುತ್ತದೆ. ಪ್ರತಿ ಹೆಕ್ಟೇರ್‌ಗೆ 2 ಕೋಟಿ ಲೀಟರ್ ನೀರನ್ನು ಕಬ್ಬಿಗೆ ಕಳುಹಿಸಲು ನೀಡಲು ಸಂತೋಷವಾಗುತ್ತದೆಯೇ ಅಥವಾ ಕೊಳೆಗೇರಿ ನಿವಾಸಿಗಳನ್ನು ಬೆಂಬಲಿಸಲು ಇಡೀ ವರ್ಷ ನೀರು ನೀಡುವುದು ಸಂತೋಷ ತರುತ್ತದೆಯೇ ಎಂಬುದನ್ನು ನಮಗೆ ನಾವು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಕಾವೇರಿಯಲ್ಲಿ ಸಾಕಷ್ಟು ನೀರು ಇದೆ. ಅದನ್ನು ಉತ್ತಮವಾಗಿ ನಿರ್ವಹಿಸಿದರೆ, ಭವಿಷ್ಯದಲ್ಲಿ ನಮಗೆ ಯಾವುದೇ ಅಣೆಕಟ್ಟುಗಳ ಅಗತ್ಯ ಬರುವುದೇ ಇಲ್ಲ.

Q

ನೀರಿನ ಸಂರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಏನು ಮಾಡಬೇಕು?

A

ನಾವು ಶಾಲೆಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಸ್ಥಾಪಿಸಬಹುದು. ಮಕ್ಕಳಿಗೆ ಮಳೆ ಮಾಪಕ ಮತ್ತು ನೀರಿನ ಗುಣಮಟ್ಟ ಪರೀಕ್ಷಾ ಕಿಟ್ ನೀಡಿ. 6-8 ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ಸಹಾಯದಿಂದ ನೀರು ಕುಡಿಯಲು ಯೋಗ್ಯವಾಗಿದೆಯೇ ಮತ್ತು ಎಷ್ಟು ಮಳೆಯಾಗುತ್ತದೆ ಎಂಬುದನ್ನು ಪರಿಶೀಲಿಸುವುದನ್ನು ಹೇಳಿಕೊಡಬಹುದು. ಇದು ನೀರಿನ ಸಾಕ್ಷರತೆ ಮತ್ತು ಕ್ರಿಯಾತ್ಮಕತೆಗೆ ಸುಂದರವಾದ, ಸೊಗಸಾದ ಸಾಧನವಾಗಿದೆ. ಈ ಶಿಕ್ಷಣ ಕಾರ್ಯಕ್ರಮವನ್ನು ಸಾಮೂಹಿಕ ಮಟ್ಟದಲ್ಲಿ ಪ್ರಾರಂಭಿಸಬೇಕು.

Q

ಈ ರೀತಿಯ ಕಾರ್ಯಕ್ರಮವನ್ನು ಎಲ್ಲಿಯಾದರೂ ಮಾಡಲಾಗಿದೆಯೇ? ಮಾಡಿದ್ದೇ ಆದರೆ, ಅದು ಯಾವ ರೀತಿ ಕೆಲಸ ಮಾಡಿದೆ?

A

ಕೆಲವು ಶಾಲೆಗಳಲ್ಲಿ ಮಾಡಲಾಗುತ್ತಿದೆ. ಎಂಟು ವರ್ಷಗಳ ಹಿಂದೆ, ಪಾವಗಡದ ಶಾಲೆಯಲ್ಲಿನ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವುದು ಪತ್ತೆಯಾಗಿತ್ತು. ನಂತರ ಶಾಲೆಯ ಮಕ್ಕಳಿಗೆ 10 ಹಳ್ಳಿಗಳಿಂದ ಮಾದರಿಗಳನ್ನು ಸಂಗ್ರಹಿಸುವಂತೆ ತಿಳಿಸಲಾಯಿತು. ಏಕೆಂದರೆ, ಈ ಮಕ್ಕಳೆಲ್ಲರೂ ಅದೇ ಪ್ರದೇಶದಿಂದ ಬರುವವರಾಗಿದ್ದರು. ಸಂಗ್ರಹಿಸಿದ ನೀರಿನ ಮಾದರಿಗಳನ್ನು ಮ್ಯಾಪ್ ಮಾಡಿ, ಶಿಕ್ಷಕರ ಸಹಾಯದಿಂದ ಫ್ಲೋರೈಡ್ ಕುರಿತು ಪರೀಕ್ಷೆ ನಡೆಸಲಾಯಿತು. ವರದಿಯನ್ನು ಡಿಸಿಗೆ ಕಳುಹಿಸಲಾಗಿದ್ದು, ಅವರು ಸರ್ಕಾರಕ್ಕೆ ಕಳುಹಿಸಿದ್ದರು. ಆರ್‌ಒ (ರಿವರ್ಸ್ ಆಸ್ಮೋಸಿಸ್) ಸ್ಥಾವರಗಳನ್ನು ಸ್ಥಾಪಿಸಲು ಅಥವಾ ಫ್ಲೋರೈಡ್ ತಗ್ಗಿಸಲು ಏನಾದರೂ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಶಾಲಾ ಮಕ್ಕಳಿಗೆ ಶಿಕ್ಷಣ ನೀಡಿದರೆ, ಏನಾಗುತ್ತದೆ ಎಂಬುದನ್ನು ಇದು ತೋರಿಸುತ್ತದೆ.

Q

ಖಾಸಗಿ ಟ್ಯಾಂಕರ್ ಮಾಫಿಯಾ ಹೇಗಿದೆ?

A

ಖಾಸಗಿ ಟ್ಯಾಂಕರ್‌ಗಳು ರಾಜ್ಯದ ವೈಫಲ್ಯದ ನಿರ್ಮಾಣವಾಗಿದೆ. ಟ್ಯಾಂಕರ್‌ಗಳು ಇಂದು ಹಣ ಮಾಡುವ ವಿಧಾನವಾಗಿ ಹೋಗಿದೆ. ಖಾಸಗಿ ನೀರಿನ ಟ್ಯಾಂಕರ್‌ಗಳ ಬೆಲೆಯನ್ನು ನಿಯಂತ್ರಣಕ್ಕೆ ತರಬೇಕಾದರೆ ಸರ್ಕಾರವು ಖಾಸಗಿ ಟ್ಯಾಂಕರ್‌ಗಳ ಬೆಲೆಯನ್ನು ಮಿತಿಗೊಳಿಸುವ ಬದಲು ತನ್ನದೇ ಆದ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಯನ್ನು ಹೆಚ್ಚಿಸಬೇಕು.

Q

ನೀರಿನ ಒತ್ತಡವನ್ನು ಹೇಗೆ ಕಡಿಮೆ ಮಾಡಬಹುದು?

A

ಈ ಬಗ್ಗೆ ನಾವು ಹೆಚ್ಚು ಚಿಂತಿಸಬೇಕಾಗಿಲ್ಲ. ಮುಂದಿನ ಮೂರು ತಿಂಗಳಲ್ಲಿ ಕಾವೇರಿಯಿಂದ ಸುಮಾರು 2,270 ಎಂಎಲ್‌ಡಿ ನೀರು ಸಿಗಲಿದೆ. ಅಂತರ್ಜಲದಿಂದ 660 ಎಂ.ಎಲ್.ಡಿ ನೀರು ಸಿಗಲಿದೆ. ನಮ್ಮಲ್ಲಿ 500 MLD ಮಳೆನೀರು ಮತ್ತು 2,000 MLD ಸಂಸ್ಕರಿಸಿದ ತ್ಯಾಜ್ಯ ನೀರು ಸಂಗ್ರಹವಿರುತ್ತದೆ.. ಒಟ್ಟು ಸುಮಾರು 5,000 MLD ನೀರಿರಲಿದೆ. ಕನಿಷ್ಠ 40 ಮಿಲಿಯನ್ ಜನಸಂಖ್ಯೆಗೆ ಈ ನೀರು ಹೆಚ್ಚೇ ಆಗುತ್ತದೆ. ಅದನ್ನು ಚೆನ್ನಾಗಿ ನಿರ್ವಹಿಸಿದರೆ, ನಾವು ಹೆಚ್ಚು ಚಿಂತಿಸಬೇಕಾಗುವುದಿಲ್ಲ.

Q

ಟಿಜಿ ಹಳ್ಳಿ ಜಲಾಶಯದ ನೀರನ್ನು ಬಳಸಿದರೆ ಸಹಾಯವಾಗುತ್ತದೆಯೇ?

A

ಇದು ಖಂಡಿತವಾಗಿಯೂ ಕೆಲಸ ಮಾಡುತ್ತದೆ. ಈಗಾಗಲೇ 135 ಎಂಎಲ್‌ಡಿ ಎಸ್‌ಟಿಪಿ ಸ್ಥಾಪನೆಗೆ ಸಾಕಷ್ಟು ಹಣ ಹೂಡಿಕೆ ಮಾಡಲಾಗಿದೆ. ವಿ-ವ್ಯಾಲಿಯಲ್ಲಿ 150 MLD ಸ್ಥಾವರವಿದೆ. ಇಲ್ಲಿಂದ ಬರುವ ನೀರು ಅರ್ಕಾವತಿ ತುಂಬಿ ಹರಿಯಲು ಅನುವು ಮಾಡಿಕೊಟ್ಟರೆ, ಜೌಗು ಪ್ರದೇಶದಲ್ಲಿ ನೀರು ಹರಿಯುವಂತ ಮಾಡಿದರೆ, ಸಹಜ ಮಳೆ ಹಾಗೂ ಕಾವೇರಿ ನೀರಿ ಜೊತೆಗೆ ನಮಗೆ 135 ಎಂ.ಎಲ್.ಡಿ ನೀರು ಸಿಗುತ್ತದೆ. ಈ ಬಗ್ಗೆ ಸಿಂಗಾಪುರದ ಕಂಪನಿಯೊಂದು ಡಿಪಿಆರ್ ಸಿದ್ಧಪಡಿಸಿದೆ. ಅದರ ವರದಿ ನಮ್ಮ ಬಳಿ ಇದೆ. ಅದನ್ನು ಕಾರ್ಯಗತಗೊಳಿಸಬೇಕಿದೆ.

Q

BWSSB ದುರಾಡಳಿತ ಎಷ್ಟಿದೆ, ಈ ಬಗ್ಗೆ ಏಕೆ ಚರ್ಚಿಸಲಾಗುತ್ತಿದೆ. ನಗರವು ಈ ಹಂತಕ್ಕೆ ಏಕೆ ಬಂದಿತು?

A

ಸರ್ಕಾರವು BWSSB ನಲ್ಲಿ ಸತತವಾಗಿ ಹೂಡಿಕೆ ಕಡಿಮೆ ಮಾಡಿದೆ. ವಿದ್ಯಾಶಂಕರ್ ಅಧ್ಯಕ್ಷರಾಗಿದ್ದಾಗ ವಿಶ್ವಬ್ಯಾಂಕ್ ನೆರವು ಪಡೆಯಲು ಮುಂದಾಗಿದ್ದರು. 1,000 ಸಂಪರ್ಕಕ್ಕೆ ಎಷ್ಟು ಉದ್ಯೋಗಿಗಳು ಬೇಕು ಎಂಬಿತ್ಯಾದಿ ಅಧ್ಯಯನ ನಡೆಸಿ ನೇಮಕಾತಿಗೆ ಮಿತಿ ಹಾಕಿದ್ದರು. ಆದರೆ, ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದು, ಸಮಯ. ಸಮಗ್ರವಾಗಿ ಯೋಜಿಸಲು ಉತ್ತಮ ಎಂಜಿನಿಯರ್‌ಗಳು ಬೇಕಾಗಿತ್ತು. ಆದರೆ, ಬಿಡಬ್ಲ್ಯೂಎಸ್‌ಎಸ್‌ಬಿಯಲ್ಲಿ ಜಲವಿಜ್ಞಾನಿಗಳಿಲ್ಲ. ಆದ್ದರಿಂದ, BWSSB ಗೆ ಅಂತರ್ಜಲ ನಿರ್ವಹಣೆ ಅಸಾಧ್ಯವಾಯಿತು. ಇದೀಗ ಉತ್ತಮ ಮುಖ್ಯ ಅಧಿಕಾರಿಗಳನ್ನು ಹೊಂದಿರುವ ಸದೃಢ ಸಂಸ್ಥೆಯ ಅವಶ್ಯಕತೆ BWSSB ಗೆ ಇದೆ. ಆದರೆ, ಇದಕ್ಕೆ ಹಣಕಾಸಿನ ಬಲವಿಲ್ಲದಂತಾಗಿದೆ. ಹೂಡಿಕೆಗಾಗಿ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿಯನ್ನು ಅವಲಂಬಿಸಿದೆ.

Q

ಹಾಗಾದರೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು?

A

ಕೆಲವರು BWSSB ಅನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎನ್ನದೇ ಕಾವೇರಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ" ಎಂದು ಕರೆಯುತ್ತಾರೆ. ಕೆರೆಗಳು ಬಿಬಿಎಂಪಿ ವ್ಯಾಪ್ತಿಯಲ್ಲಿವೆ, ಅಂತರ್ಜಲವನ್ನು ಅಂತರ್ಜಲ ಪ್ರಾಧಿಕಾರ, ತ್ಯಾಜ್ಯ ನೀರನ್ನು ಸಣ್ಣ ನೀರಾವರಿ ಇಲಾಖೆಯಿಂದ ನಿರ್ವಹಿಸಲಾಗುತ್ತದೆ. ನಗರಕ್ಕೆ ನೀರಿನ ಒಟ್ಟು ಸಾಂಸ್ಥಿಕ ಯೋಜನೆ ಎಲ್ಲಿದೆ? ಸರ್ಕಾರ ಬಿಡಬ್ಲ್ಯೂಎಸ್‌ಎಸ್‌ಬಿಯನ್ನು ಬಲಪಡಿಸಬೇಕಾಗಿದೆ. ಅದರಂತೆ, ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಾದ ಸಾಮರ್ಥ್ಯವನ್ನು ನೀಡಬೇಕು ಎಂಬುದು ನನ್ನ ಅಭಿಪ್ರಾಯ.

Q

ಸಂಯೋಜಿತ ವ್ಯವಸ್ಥೆಯನ್ನು ಹೇಗೆ ರಚಿಸಬಹುದು ಎಂಬುದರ ಮಾಹಿತಿ ನೀಡುವಿರಾ?

A

ಅಂತರ್ಜಲ ಕೋಶವನ್ನು ರಚಿಸುವುದು ಮತ್ತು ಮಾನವ ಸಂಪನ್ಮೂಲವನ್ನು ಹೊಂದುವುದು ಅತ್ಯಂತ ತ್ವರಿತ ಮತ್ತು ಸುಲಭವಾದ ಪರಿಹಾರವಾಗಿದೆ. ಇದಕ್ಕಾಗಿ ಸರಿಯಾದ ಅಂತರ್ಜಲ ನಿರ್ವಹಣಾ ಯೋಜನೆಯನ್ನು ನಕ್ಷೆ ಮಾಡಲು ಸಮರ್ಥವಾದ ಜಲಶಾಸ್ತ್ರಜ್ಞರನ್ನು ಹೊಂದಿರಬೇಕು. ಎಲ್ಲಾ ಅಂತರ್ಜಲ ನಿಯಮಗಳನ್ನು ಅನುಸರಿಸಬೇಕು. ಎಸ್‌ಟಿಪಿಗಳ ಕಾರ್ಯನಿರ್ವಹಣೆ, ಗುಣಮಟ್ಟ ಹಾಗೂ ವಿಶ್ವಾಸಾರ್ಹತೆ ಹೊಂದಿರಬೇಕು. ಇದರ ನೀರನ್ನು ಮೊದಲು ಬೆಂಗಳೂರಿಗೆ ಮತ್ತು ನಂತರ ಇತರ ಜಿಲ್ಲೆಗಳಿಗೆ ಹೇಗೆ ಮರುಬಳಕೆ ಮಾಡಲಾಗುತ್ತದೆ ಎಂಬುದನ್ನು ತಿಳಿದಿರುವ ತಜ್ಞರನ್ನು ಹೊಂದಿರಬೇಕು. ಇದನ್ನು ಮಾಡಲು ಕೇವಲ 20 ಜನರಿದ್ದರೆ ಸಾಕು.

Q

ನೀರು ಸರಬರಾಜು ಮಾಡುವ ವೆಚ್ಚದ ಬಗ್ಗೆ ಏನು ಹೇಳುತ್ತೀರಿ?

A

ಮೂರು ವರ್ಷಗಳಿಂದ ಪ್ರಸ್ತಾವನೆ ಸರ್ಕಾರದ ಮುಂದೆ ಬಾಕಿ ಇದೆ. BWSSB ಲೆಕ್ಕಾಚಾರದಂತೆ ನಮಗೆ 1 ಕಿಲೋ ಲೀಟರ್ ನೀರನ್ನು ಪಡೆಯಲು 42 ರೂ ತೆಗೆದುಕೊಳ್ಳುತ್ತದೆ ಎಂದು ಹೇಳುತ್ತದೆ. ಆದರೆ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚ, ಬಂಡವಾಳ ವೆಚ್ಚ, ಸಾಲ ಸೇವೆ ಮತ್ತು ನಿಧಿಯನ್ನು ಸೇರಿಸಿದರೆ ಪ್ರತಿ ಕಿಲೋ ಲೀಟರ್‌ಗೆ 95 ರೂ ಆಗುತ್ತದೆ. ಒಂದು ಮನೆಯು ಮೊದಲ ಸ್ಲ್ಯಾಬ್‌ಗೆ ಪ್ರತಿ ಕಿಲೋಲೀಟರ್‌ಗೆ 7 ರೂ., ಎರಡನೆಯದಕ್ಕೆ ಕಿಲೋಲೀಟರ್‌ಗೆ 11 ರೂ. ಮತ್ತು 20,000 ಲೀಟರ್‌ಗಿಂತ ಹೆಚ್ಚಿದ್ದರೆ ತಿಂಗಳಿಗೆ 1,650 ರೂ ಕಟ್ಟಬೇಕಾಗುತ್ತದೆ. ಇದಕ್ಕೆ ಸಬ್ಸಿಡಿ ಇದೆ. ಆದರೆ, ನೀರು ಸಂಗ್ರಹಿಸಲು ಮತ್ತು ಎಸ್‌ಟಿಪಿಗಳಿಗೆ ಸಂಸ್ಕರಣೆಗಾಗಿ ಕಳುಹಿಸಿದ ವೆಚ್ಚವನ್ನು ಚರ್ಚಿಸಲಾಗಿಲ್ಲ.

Q

ಜಲಾಶಯದ ಹೂಳು ತೆಗೆಯಲು ಇರುವ ಸವಾಲುಗಳೇನು? ಕೃಷ್ಣಾ ಅಥವಾ ಕಾವೇರಿಯನ್ನು ನೋಡಿದರೆ ಹೂಳು ಶೇಖರಣೆಯಾಗಿ ಸಾಮರ್ಥ್ಯ ಕುಸಿದಿದಂತಿದೆ...

A

ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. CWC ಬಳಿಯೂ ಒಂದು ವರದಿಯಿದೆ. ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಅನ್ನು ರಚಿಸಬಹುದು. ಸ್ಲೂಸ್ ಗೇಟ್ ನಲ್ಲಿ ಎಲ್ಲೋ ಹೂಳು ತುಂಬಿದೆ. ಕೆಲವು ಜಲಾಶಯಗಳಲ್ಲಿ ಹೂಳು ತುಂಬಿದೆ. ಜಲಾಶಯಗಳಲ್ಲಿ ಈ ಹೂಳು ನಿರ್ಮೂಲನೆ ಮಾಡುವುದು ಹೇಗೆ ಎಂದು ಲೆಕ್ಕಾಚಾರ ಮಾಡುವ ಅವಶ್ಯಕತೆಯಿದೆ.

Q

ಜನರಿಗೆ ನೀರು ಕೊಡಲು ಹೆಚ್ಚಿನ ಬೋರ್‌ವೆಲ್ ಮತ್ತು ಕೊಳವೆಬಾವಿಗಳನ್ನು ಕೊರೆಯಲು ಸರ್ಕಾರ ಬಯಸಿದೆ. ಇದು ಸರಿಯಾದ ಕ್ರಮವೇ?

A

ಈ ಕ್ರಮ ಸರಿಯಲ್ಲ. ಅಂತರ್ಜಲ ಕುಸಿದಿದ್ದರೆ ನೀವು ಕೊರೆಯಿಸಿದ ಬೋರ್‌ವೆಲ್‌ನಲ್ಲಿ ನೀರು ಸಿಗುವುದಿಲ್ಲ.

Q

ಹಾಗಾದರೆ ಪರಿಸ್ಥಿತಿ ನಿರ್ವಹಿಸಲು ಮುಂದಿರುವ ದಾರಿ ಯಾವುದು?

A

ಈಗಿರುವ ಬೋರ್‌ವೆಲ್‌ಗಳಲ್ಲಿ ನೀರು ಬರುವಂತೆ ನೋಡಿಕೊಳ್ಳುವುದು. ನಗರದಲ್ಲಿ 13,000 ಬೋರ್‌ವೆಲ್‌ಗಳಿದ್ದು, ಇದರಲ್ಲಿ 6,900 ಬೋರ್‌ವೆಲ್‌ಗಳು ಬತ್ತಿವೆ ಎಂದು ಸರ್ಕಾರ ಹೇಳಿದೆ. ಖಾಸಗಿಯವರ ಕೈಯಲ್ಲಿ 5 ಲಕ್ಷ ಬೋರ್‌ವೆಲ್‌ಗಳಿವೆ. ಅವುಗಳಲ್ಲಿ ಎಷ್ಟು ಬತ್ತಿವೆ ಎಂಬುದರ ಕುರಿತು ನಾವು.ಮಾತನಾಡುತ್ತಿಲ್ಲ.

Q

ಮಳೆನೀರು ಕೊಯ್ಲನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕೇ?

A

ಹೌದು, ಪ್ರತಿಯೊಂದು ಅಪಾರ್ಟ್ಮೆಂಟ್ ಕಟ್ಟಡವು ನೀರನ್ನು ಕುಸಿಯುವಂತೆ ಮಾಡುತ್ತದೆ. ಹೀಗಾಗಿ ನಾವು ನಮ್ಮ ಕೆರೆಗಳ ಹೂಳು ತೆಗೆಯಬೇಕು. ಮಳೆ ನೀರು ತುಂಬುವಂತೆ ಮಾಡಬೇಕು.

Q

ಉತ್ತಮ ಪರಿಸ್ಥಿತಿಗೆ ನಮಗೆಷ್ಟು ಬಾರಿ ಮಳೆಯಾಗಬೇಕು?

A

ಮಳೆ ಕೊರತೆ ತುಂಬಾ ಇದೆ. ಮೊದಲ ಕೆಲವು ಮಳೆಯನ್ನು ಮಣ್ಣು ಹೀರಿಕೊಳ್ಳುತ್ತವೆ. ಇದಕ್ಕೆ 2-3 ದಿನ ನಿರಂತರ 100 ಮಿ.ಮೀ ಮಳೆಯಾಗಬೇಕು.

Q

ಅಷ್ಟು ಮಳೆಯಾದರೆ ಬೆಂಗಳೂರು ಪ್ರವಾಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ?

A

ಪ್ರವಾಹ ಪರಿಸ್ಥಿತಿ ಸ್ಥಳೀಯವಾಗಿರುತ್ತದೆ. ನೀರನ್ನು ಭೂಮಿ ಹೀರಿಕೊಳ್ಳುವುದು. ಕೆಟ್ಟ ರಸ್ತೆಗಳು ಮತ್ತು ಹಳ್ಳಗಳು ನೀರು ತುಂಬಿಕೊಳ್ಳಲು ಕಾರಣವಾಗುತ್ತವೆ, ಇದು ಪ್ರವಾಹವಲ್ಲ. ಪ್ರವಾಹಕ್ಕೆ ಪರಿಹಾರವೆಂದರೆ ಮಳೆ ನೀರು ಕೊಯ್ಲು. ಪ್ರತಿ ಚದರ ಮೀಟರ್ ಪ್ರದೇಶವು 60 ಲೀಟರ್ ನೀರನ್ನು ಸಂಗ್ರಹಿಸುತ್ತದೆ. ಹಾಗಾಗಿ ಅದನ್ನು ಅನುಸರಿಸಿದರೆ, ಯಾವುದೇ ಪ್ರವಾಹ ಪರಿಸ್ಥಿತಿ ಎದುರಾಗುವುದಿಲ್ಲ. ರಸ್ತೆಗಳ ಮೇಲಿನ ಹೆಚ್ಚುವರಿ ನೀರು ಕೆರೆಗಳಿಗೆ ಹೋಗುವಂತೆ ಮಾಡಬೇಕು. ಇದಕ್ಕೆ ಸರ್ಕಾರ ಬಂಡವಾಳ ಹೂಡಬೇಕು. ಮಳೆನೀರು ಚರಂಡಿಗೆ ಸೇರದಂತೆ ನೋಡಿಕೊಳ್ಳಬೇಕು. ಪ್ರವಾಹವನ್ನು ತಪ್ಪಿಸಲು ಒಳಚರಂಡಿ ನಿರ್ವಹಣೆಗೆ ಹೂಡಿಕೆ ಮಾಡಬೇಕಾಗಿದೆ.

Q

ಒಟ್ಟಾರೆ ನೀರಿನ ಸಮಸ್ಯೆಗೆ ನಿಮ್ಮ ಸಂದೇಶವೇನು?

A

ನೀರನ್ನು ವಿವೇಚನೆಯಿಂದ ಬಳಸಿ. ನೀರಿನ ಬಗ್ಗೆ ಜಾಗರೂಕರಾಗಿರಿ. ಇತರರೊಂದಿಗೆ ಹಂಚಿಕೊಳ್ಳಿ. ಟ್ಯಾಪ್‌ಗಳಲ್ಲಿ ಏರೇಟರ್‌ಗಳನ್ನು ಹಾಕಿ. ರಾಜ್ಯ ಜವಾಬ್ದಾರಿಯುತವಾಗಿ ನಡೆಯುವಂತೆ ಒತ್ತಾಯಿಸಿ. ಸಮಸ್ಯೆಗಳಿಗೆ ಚುನಾಯಿತ ಪ್ರತಿನಿಧಿಯನ್ನು ಹೊಣೆಗಾರರನ್ನಾಗಿ ಮಾಡಬೇಕಿದೆ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com