

ನಾವೆಲ್ಲರೂ ಹೆಮ್ಮೆಯಿಂದ ನಮ್ಮ ದೇಶವನ್ನು ಭಾರತ ಮತ್ತು ಇಂಡಿಯಾ ಎಂದು ಕರೆಯುತ್ತೇವೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಇಂಡಿಯಾ ಪದಕ್ಕೆ ಸಂಬಂಧಿಸಿದಂತೆ ಹತ್ತಾರು ರೀತಿಯ ಪೂರ್ಣ ರೂಪಗಳು ಹರಿದಾಡುತ್ತಲೇ ಇರುತ್ತವೆ. ಇದು ನಿಜವೊ ಅಥವಾ ಕೇವಲ ಕಲ್ಪನೆಯೋ ಎನ್ನುವ ಗೊಂದಲ ಬಹುತೇಕರಿಗೆ ಇದೆ. ಹಾಗಾದರೆ ವಾಸ್ತವದಲ್ಲಿ ಇಂಡಿಯಾ ಪದಕ್ಕೆ ಯಾವುದೇ ಅಧಿಕೃತ ವಿಸ್ತೃತ ರೂಪವಿದೆಯೇ? ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಇಲ್ಲಿದೆ.
INDIA ಪದದ ಫುಲ್ ಫಾರಂ ಏನು?
ನಿಜ ಹೇಳಬೇಕೆಂದರೆ, INDIA ಎಂಬ ಪದಕ್ಕೆ ಯಾವುದೇ ಅಧಿಕೃತ ಪೂರ್ಣ ರೂಪ ಇಲ್ಲ. ಹೌದು, ನಮ್ಮ ದೇಶದ ಸಂವಿಧಾನದ ಪ್ರಕಾರ ಭಾರತದ ಅಧಿಕೃತ ಹೆಸರುಗಳು ಭಾರತ ಮತ್ತು ಇಂಡಿಯಾ ಮಾತ್ರ. ಆದರೆ, ಇಂಗ್ಲಿಷ್ ಭಾಷೆಯ ಇತಿಹಾಸಕಾರರು ಮತ್ತು ಸಾರ್ವಜನಿಕರು ಇಂಡಿಯಾ ಪದಕ್ಕೆ ಅರ್ಥಪೂರ್ಣವಾದ ಕೆಲವು ಸ್ವಯಂ-ರಚಿತ ಪೂರ್ಣ ರೂಪಗಳನ್ನು ನೀಡಿದ್ದಾರೆ. ಅವುಗಳು ಇಲ್ಲಿದೆ:
INDIA ಪದದ ಜನಪ್ರಿಯ ಪೂರ್ಣ ರೂಪ: I - Independent, N - National, D - Democratic, I - International, A - Atmosphere, ಇದರ ಪೂರ್ಣ ಅರ್ಥ: "Independent National Democratic International Atmosphere" (ಸ್ವತಂತ್ರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಅಂತರರಾಷ್ಟ್ರೀಯ ವಾತಾವರಣ).
ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರದ ಕಲ್ಪನೆ: ಮತ್ತೊಂದು ಆವೃತ್ತಿಯ ಪ್ರಕಾರ, ಇಂಡಿಯಾ ಪದವನ್ನು I- Incredible, N- Nation, D- Developing, I- In, A- Asia ಅಂದರೆ ಏಷ್ಯಾ ಖಂಡದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಅದ್ಭುತ ರಾಷ್ಟ್ರ ಎಂಬುದು ಇದರ ಭಾವಾರ್ಥ. ಭಾರತವು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ರೀತಿಯನ್ನು ಬಿಂಬಿಸಲು ಇಂತಹ ವಿವರಣೆಯನ್ನು ಸೃಷ್ಟಿಸಲಾಗಿದೆ. ಆದರೆ ಇವೆರಡೂ ಜನರ ದೇಶಪ್ರೇಮ ಮತ್ತು ಕಲ್ಪನೆಯಿಂದ ಹುಟ್ಟಿಕೊಂಡಿರುವ ವಿವರಣೆಗಳೇ ಹೊರತು ಅಧಿಕೃತವಲ್ಲ.
ಹಾಗಾದ್ರೆ, ಇಂಡಿಯಾ ಎಂಬ ಹೆಸರು ಬಂದಿದ್ದು ಹೇಗೆ?
ನಿಜವಾದ ಇತಿಹಾಸದ ಪ್ರಕಾರ, ಇಂಡಿಯಾ ಎಂಬುದು ಯಾವುದೇ ಶಾರ್ಟ್ ಫಾರ್ಮ್ ಅಲ್ಲ. ಇದು ಇಂಡಸ್ ಎಂಬ ನದಿಯ ಹೆಸರಿನಿಂದ ಬಂದಿದೆ. ಪ್ರಾಚೀನ ಕಾಲದಲ್ಲಿ ಭಾರತದ ಪ್ರಮುಖ ನದಿಯಾಗಿದ್ದ ಸಿಂಧೂ ನದಿಯನ್ನು ಗ್ರೀಕರು ಮತ್ತು ರೋಮನ್ನರು 'ಇಂಡಸ್' ಎಂದು ಕರೆಯುತ್ತಿದ್ದರು. ಅದರಂತೆ, ಈ ಇಂಡಸ್ ನದಿಯ ಆಚೆಗಿನ ಭೂಪ್ರದೇಶವನ್ನು ಅವರು 'ಇಂಡಿಯಾ' ಎಂದು ಕರೆಯಲು ಪ್ರಾರಂಭಿಸಿದರು. ಅದರಲ್ಲೂ, ಬ್ರಿಟಿಷರು ಭಾರತಕ್ಕೆ ಬಂದ ನಂತರ ಈ ಹೆಸರೇ ಜಾಗತಿಕವಾಗಿ ಹೆಚ್ಚು ಪ್ರಸಿದ್ಧಿಯಾಯಿತು.
ಸಂವಿಧಾನ ಏನು ಹೇಳುತ್ತದೆ?
ನಮ್ಮ ಸಂವಿಧಾನದ ವಿಧಿ 1ರ ಮೊದಲ ಸಾಲಿನಲ್ಲಿಯೇ ದೇಶದ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ: "India, that is Bharat, shall be a Union of States" (ಇಂಡಿಯಾ, ಅಂದರೆ ಭಾರತ, ರಾಜ್ಯಗಳ ಒಂದು ಒಕ್ಕೂಟವಾಗಿರುತ್ತದೆ). ಇದರರ್ಥ ನಮ್ಮ ದೇಶಕ್ಕೆ ಸಾಂವಿಧಾನಿಕವಾಗಿ ಭಾರತ ಮತ್ತು ಇಂಡಿಯಾ ಎಂಬ ಎರಡು ಅಧಿಕೃತ ಹೆಸರುಗಳಿವೆ.