Royal Enfield Bullet ಬೈಕ್'ಗೆ ಪೂಜೆ, ಮದ್ಯದ ಬಾಟಲಿಯೇ ನೈವೇದ್ಯ! ಭಾರತದ ಈ ಅಪರೂಪದ ದೇವಾಲಯದ ರಹಸ್ಯ ಕೇಳಿದರೆ ಅಚ್ಚರಿಯಾಗುತ್ತೆ..!

ಇನ್ನೂ ಅಚ್ಚರಿಯ ಸಂಗತಿಯೆಂದರೆ, ಈ ದೇವಾಲಯದ ಹುಟ್ಟಿಗೆ ಕಾರಣವಾಗಿದ್ದು 1988ರಲ್ಲಿ ನಡೆದ ಒಂದು ರಸ್ತೆ ಅಪಘಾತ ಮತ್ತು ಅದನ್ನು ಸುತ್ತುವರಿದ ಜನರ ನಂಬಿಕೆ.
Bullet Baba temple, Rajasthan
ಬುಲೆಟ್ ಬಾಬಾ ದೇವಸ್ಥಾನ (ರಾಜಸ್ಥಾನ)
Updated on

ಭಾರತವು ಸಾವಿರಾರು ವರ್ಷಗಳ ಇತಿಹಾಸ, ವೈವಿಧ್ಯಮಯ ಸಂಸ್ಕೃತಿ ಮತ್ತು ಅನನ್ಯ ನಂಬಿಕೆಗಳ ನಾಡು. ದೇಶದ ಮೂಲೆಮೂಲೆಗಳಲ್ಲಿ ಇರುವ ದೇವಾಲಯಗಳು ತಮ್ಮದೇ ಆದ ಇತಿಹಾಸ ಮತ್ತು ವಿಶೇಷತೆಗಳಿಂದ ಭಕ್ತರನ್ನು ಸೆಳೆಯುತ್ತವೆ. ಆದರೆ, ರಾಜಸ್ಥಾನದಲ್ಲಿರುವ ಒಂದು ದೇವಾಲಯ ಮಾತ್ರ ಎಲ್ಲಕ್ಕಿಂತ ವಿಭಿನ್ನ.

ಇಲ್ಲಿ ಶಿವ, ವಿಷ್ಣು, ಗಣೇಶ ಅಥವಾ ದೇವಿಯ ವಿಗ್ರಹವಿಲ್ಲ. ಬದಲಿಗೆ, 350 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ವೊಂದನ್ನೇ ದೇವರಂತೆ ಪೂಜಿಸಲಾಗುತ್ತದೆ.

ಇನ್ನೂ ಅಚ್ಚರಿಯ ಸಂಗತಿಯೆಂದರೆ, ಈ ದೇವಾಲಯದ ಹುಟ್ಟಿಗೆ ಕಾರಣವಾಗಿದ್ದು 1988ರಲ್ಲಿ ನಡೆದ ಒಂದು ರಸ್ತೆ ಅಪಘಾತ ಮತ್ತು ಅದನ್ನು ಸುತ್ತುವರಿದ ಜನರ ನಂಬಿಕೆ.

ಇಂದು ಸಾವಿರಾರು ಬೈಕ್ ಸವಾರರು, ವಾಹನ ಚಾಲಕರು ಮತ್ತು ಪ್ರವಾಸಿಗರು ಸುರಕ್ಷಿತ ಪ್ರಯಾಣಕ್ಕಾಗಿ ಈ ದೇವಾಲಯಕ್ಕೆ ಭೇಟಿ ನೀಡಿ ಬುಲೆಟ್ ಬಾಬಾ ಆಶೀರ್ವಾದ ಪಡೆಯುತ್ತಾರೆ. ಹಾಗಾದರೆ, ಒಂದು ಸಾಮಾನ್ಯ ಮೋಟಾರ್‌ಸೈಕಲ್ ಹೇಗೆ ಲಕ್ಷಾಂತರ ಜನರ ಆರಾಧ್ಯದ ಸಂಕೇತವಾಯಿತು? ಅದರ ಹಿಂದಿನ ರೋಚಕ ಕಥೆ ಇಲ್ಲಿದೆ.

ರಾಜಸ್ಥಾನದ ಪಾಲಿ ಜಿಲ್ಲೆಯ ಸಮೀಪ, ಜೋಧ್‌ಪುರ ಮತ್ತು ಅಹಮದಾಬಾದ್‌ನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-62 (NH-62) ರಸ್ತೆಯ ಪಕ್ಕದಲ್ಲಿರುವ ಈ ದೇವಾಲಯ, ಪಾಲಿ ನಗರದಿಂದ ಸುಮಾರು 53 ಕಿಲೋಮೀಟರ್ ದೂರದಲ್ಲಿದೆ.

ಹೊರಗಿನಿಂದ ನೋಡಿದರೆ ಇದು ಸಾಮಾನ್ಯ ದೇವಸ್ಥಾನದಂತೆ ಕಾಣುತ್ತದೆ. ಆದರೆ, ಒಳಗೆ ಹೋದರೆ ಗಾಜಿನ ಪೆಟ್ಟಿಗೆಯಲ್ಲಿ ಅಲಂಕರಿಸಲ್ಪಟ್ಟಿರುವ ಒಂದು ಹಳೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ (ನೋಂದಣಿ ಸಂಖ್ಯೆ: RNJ 7773) ಭಕ್ತರ ಗಮನ ಸೆಳೆಯುತ್ತದೆ.

1988ರಲ್ಲಿ ರಾಜಪೂತ ಕುಟುಂಬದ ಯುವಕ ಓಂ ಸಿಂಗ್ ರಾಥೋಡ್, ಸ್ಥಳೀಯವಾಗಿ ಓಂ ಬನ್ನಾ ಎಂದೇ ಪ್ರಸಿದ್ಧರಾಗಿದ್ದವರು, ತಮ್ಮ ರಾಯಲ್ ಎನ್‌ಫೀಲ್ಡ್ ಬುಲೆಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ ವೇಳೆ ನಿಯಂತ್ರಣ ತಪ್ಪಿದ ಬೈಕ್, ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿತ್ತು. ಭೀಕರ ಅಪಘಾತದಲ್ಲಿ ಓಂ ಸಿಂಗ್ ಸ್ಥಳದಲ್ಲೇ ಮೃತಪಟ್ಟರು.

ಸಾಮಾನ್ಯವಾಗಿ ಇಂತಹ ಘಟನೆಗಳು ಕೆಲವು ದಿನಗಳಲ್ಲಿ ಜನರ ನೆನಪಿನಿಂದ ಮರೆಯಾಗುತ್ತವೆ. ಆದರೆ, ಈ ಅಪಘಾತದ ನಂತರ ನಡೆದ ಕೆಲವು ಘಟನೆಗಳು ಇಡೀ ಪ್ರದೇಶದ ಜನರನ್ನು ಆಶ್ಚರ್ಯಚಕಿತರನ್ನಾಗಿಸಿತು.

Bullet Baba temple, Rajasthan
ಡೆತ್ ವ್ಯಾಲಿಯಿಂದ ಆಫ್ರಿಕಾದ ಕಣ್ಣಿನವರೆಗೆ.. ಇಂದಿಗೂ ವಿಜ್ಞಾನಿಗಳಿಗೆ ಉತ್ತರ ಸಿಗದ ಭೂಮಿಯ ಡೆಡ್ಲಿ ಜಾಗಗಳು!

ಪೊಲೀಸ್ ಠಾಣೆಯಿಂದ ಮತ್ತೆ ಅಪಘಾತ ನಡೆದ ಸ್ಥಳಕ್ಕೇ ಬಂದ ಬೈಕ್!

ಅಪಘಾತದ ಬಳಿಕ ಪೊಲೀಸರು ಬುಲೆಟ್ ಬೈಕ್ ಅನ್ನು ವಶಪಡಿಸಿಕೊಂಡು, ಸಮೀಪದ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದರು. ಆದರೆ, ಮರುದಿನ ಬೆಳಗ್ಗೆ ಠಾಣೆಯಲ್ಲಿದ್ದ ಬೈಕ್ ಕಾಣೆಯಾಗಿತ್ತು. ಹುಡುಕಾಟ ನಡೆಸಿದಾಗ ಬೈಕ್ ಮತ್ತೆ ಅಪಘಾತ ನಡೆದ ಸ್ಥಳದಲ್ಲೇ ನಿಂತಿರುವುದು ಕಂಡುಬಂದಿತ್ತು.

ಇದನ್ನು ಸಾಮಾನ್ಯ ಘಟನೆ ಎಂದು ಭಾವಿಸಿದ ಪೊಲೀಸರು ಮತ್ತೊಮ್ಮೆ ಬೈಕ್ ಅನ್ನು ಠಾಣೆಗೆ ತಂದರು. ಈ ಬಾರಿ ಬೈಕ್‌ಗೆ ಬೀಗ ಹಾಕಿದರು. ಕೆಲವರು ಕಬ್ಬಿಣದ ಸರಪಳಿಯಿಂದ ಕಟ್ಟಿ ಪಾರ್ಕ್ ಮಾಡಲಾಗಿತ್ತು ಎಂದು ಹೇಳಿದ್ದು, ಇನ್ನೂ ಕೆಲವರು ಬೈಕ್‌ನ ಪೆಟ್ರೋಲ್‌ನ್ನೂ ಸಂಪೂರ್ಣವಾಗಿ ತೆಗೆದುಹಾಕಲಾಗಿತ್ತು. ಆದರೂ ಮರುದಿನ ಮತ್ತೆ ಬೈಕ್ ಅಪಘಾತ ನಡೆದ ಸ್ಥಳದಲ್ಲೇ ಕಾಣಿಸಿಕೊಂಡಿತು ಎಂದು ಹೇಳಿದ್ದಾರೆ. ಇಂತಹ ಘಟನೆಗಳು ಹಲವು ಬಾರಿ ನಡೆದವು ಎಂಬುದು ಸ್ಥಳೀಯ ಹೇಳುತ್ತಾರೆ.

ಜನನಂಬಿಕೆಯಿಂದ ಹುಟ್ಟಿದ ದೇವಾಲಯ

ಈ ವಿಚಿತ್ರ ಘಟನೆಗಳ ನಂತರ ಗ್ರಾಮದ ಜನರು ಇದನ್ನು ದೈವಿಕ ಶಕ್ತಿಯ ಸಂಕೇತ ಎಂದು ನಂಬಲು ಆರಂಭಿಸಿದರು. ಓಂ ಸಿಂಗ್ ರಾಥೋಡ್ ಅವರ ಆತ್ಮ ಈ ರಸ್ತೆಯಲ್ಲಿ ಸಂಚರಿಸುವವರನ್ನು ಕಾಪಾಡುತ್ತಿದೆ ಎಂಬ ನಂಬಿಕೆ ಬಲವಾಯಿತು.

ಹೀಗಾಗಿ ಅಪಘಾತ ನಡೆದ ಸ್ಥಳದಲ್ಲೇ ಒಂದು ಸಣ್ಣ ದೇವಾಲಯ ನಿರ್ಮಿಸಿ, ಆ ಬುಲೆಟ್ ಬೈಕ್ ಅನ್ನು ಅಲ್ಲೇ ಇರಿಸಲಾಯಿತು.

ಕ್ರಮೇಣ ಈ ಸ್ಥಳ 'ಬುಲೆಟ್ ಬಾಬಾ ದೇವಸ್ಥಾನ' ಅಥವಾ 'ಓಂ ಬಣ್ಣಾ ದೇವಸ್ಥಾನ' ಎಂಬ ಹೆಸರಿನಿಂದ ದೇಶಾದ್ಯಂತ ಪ್ರಸಿದ್ಧಿಯಾಯಿತು.

Bullet Baba temple, Rajasthan
ರೈಲು ನಿಲ್ದಾಣಗಳ ಹೆಸರಿನ ಕೊನೆಯಲ್ಲಿ Junction, Road, Halt ಯಾಕೆ ಇರುತ್ತವೆ?

ಇಂದಿಗೂ ಜೀವಂತವಾಗಿದೆ ಈ ನಂಬಿಕೆ

ಇಂದಿಗೂ ಸಾವಿರಾರು ಜನರು ಹೊಸ ಬೈಕ್ ಅಥವಾ ಕಾರು ಖರೀದಿಸಿದ ಬಳಿಕ ಮೊದಲ ಪ್ರಯಾಣಕ್ಕೂ ಮುನ್ನ ಇಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ.

ದೂರದ ಪ್ರಯಾಣಕ್ಕೆ ಹೊರಡುವ ಟ್ರಕ್ ಚಾಲಕರು, ಬಸ್ ಚಾಲಕರು, ಬೈಕ್ ಸವಾರರು ಹಾಗೂ ಪ್ರವಾಸಿಗರು ಸುರಕ್ಷಿತ ಪ್ರಯಾಣಕ್ಕಾಗಿ ಬುಲೆಟ್ ಬಾಬಾ ಆಶೀರ್ವಾದ ಪಡೆಯುತ್ತಾರೆ.

ಸ್ಥಳೀಯ ನಂಬಿಕೆಯ ಪ್ರಕಾರ, ಇಲ್ಲಿ ನಮಸ್ಕರಿಸದೆ ಈ ರಸ್ತೆಯಲ್ಲಿ ಪ್ರಯಾಣಿಸಿದರೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಇದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಿಲ್ಲವಾದರೂ, ಈ ನಂಬಿಕೆಯನ್ನು ಲಕ್ಷಾಂತರ ಜನರು ಗೌರವದಿಂದ ಪಾಲಿಸುತ್ತಿದ್ದಾರೆ.

ಬುಲೆಟ್ ಬೈಕ್‌ಗೆ ವಿಶೇಷ ಪೂಜೆ

ದೇವಾಲಯದಲ್ಲಿರುವ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಗಾಜಿನ ಪೆಟ್ಟಿಗೆಯಲ್ಲಿ ಸಂರಕ್ಷಿಸಲಾಗಿದೆ. ಪ್ರತಿದಿನ ಬೈಕ್‌ಗೆ ಹೂವಿನ ಹಾರಗಳನ್ನು ಹಾಕಲಾಗುತ್ತದೆ. ಕೆಂಪು ಬಟ್ಟೆಯಿಂದ ಅಲಂಕರಿಸಲಾಗುತ್ತದೆ. ಭಕ್ತರು ಬೈಕ್‌ನ ಹೆಡ್‌ಲೈಟ್‌ಗೆ ಕುಂಕುಮ ಹಾಗೂ ತಿಲಕ ಹಚ್ಚುತ್ತಾರೆ.

ಕೆಲವರು ಹೂವು, ತೆಂಗಿನಕಾಯಿ ಅರ್ಪಿಸಿದರೆ, ಮತ್ತಷ್ಟು ಭಕ್ತರು ಓಂ ಬಣ್ಣಾ ಅವರಿಗೆ ಗೌರವ ಸೂಚಕವಾಗಿ ಮದ್ಯದ ಬಾಟಲಿಗಳನ್ನು ಕಾಣಿಕೆಯಾಗಿ ಸಮರ್ಪಿಸುವ ಸಂಪ್ರದಾಯವೂ ಇಲ್ಲಿದೆ. ಇದು ಭಾರತದ ಇತರ ದೇವಾಲಯಗಳಿಗಿಂತ ಸಂಪೂರ್ಣ ಭಿನ್ನವಾದ ಆಚರಣೆಯಾಗಿದೆ.

ರಾತ್ರಿ ವೇಳೆ ಕಾಣಿಸಿಕೊಳ್ಳುವ ಬೈಕ್ ಸವಾರ?

ಸ್ಥಳೀಯರ ಪ್ರಕಾರ, ರಾತ್ರಿ ವೇಳೆ ಈ ರಸ್ತೆಯಲ್ಲಿ ಪ್ರಯಾಣಿಸುವ ಕೆಲವರು ಬುಲೆಟ್ ಬೈಕ್ ಮೇಲೆ ಒಬ್ಬ ಸವಾರ ಕಾಣಿಸಿಕೊಂಡು ಅಪಘಾತದಿಂದ ತಪ್ಪಿಸಿ ನಂತರ ಮಾಯವಾಗುವುದನ್ನು ನೋಡಿದ್ದೇವೆ ಎಂದು ಹೇಳುತ್ತಾರೆ. ಇಂತಹ ಕಥೆಗಳು ಬುಲೆಟ್ ಬಾಬಾ ಕುರಿತ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿವೆ.

ಬುಲೆಟ್ ಬಾಬಾ ದೇವಸ್ಥಾನದ ಬಗ್ಗೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಬೈಕ್ ಸ್ವತಃ ಪೊಲೀಸ್ ಠಾಣೆಯಿಂದ ಹಿಂದಿರುಗಿತು ಎಂಬುದು ಸ್ಥಳೀಯರ ನಂಬಿಕೆಯಾಗಿದ್ದು, ಇದನ್ನು ವೈಜ್ಞಾನಿಕವಾಗಿ ದೃಢೀಕರಿಸಲಾಗಿಲ್ಲ.

ಆದರೆ, ಒಂದು ರಸ್ತೆ ಅಪಘಾತದ ನೆನಪು, ಒಬ್ಬ ಯುವಕನ ಸಾವಿನ ದುಃಖ ಮತ್ತು ಸ್ಥಳೀಯರ ನಂಬಿಕೆ ಸೇರಿ ಇಂದು ಲಕ್ಷಾಂತರ ಜನರನ್ನು ಸೆಳೆಯುವ ವಿಶಿಷ್ಟ ಧಾರ್ಮಿಕ ತಾಣವನ್ನಾಗಿ ಈ ಸ್ಥಳವನ್ನು ರೂಪಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com