

ಬೆಳಗಾವಿ: ದಶಕಗಳಿಂದಲೂ ಬೆಳಗಾವಿ ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಕೈಗಾರಿಕೆಗಳ ನಗರಿ ಎಂದು ಹೆಸರುವಾಸಿಯಾಗಿದೆ. ಈಗ, ಆ ಪಟ್ಟಿಗೆ ಮತ್ತೊಂದು ಗುರುತನ್ನು ಸೇರಿಸಲು ಸದ್ದಿಲ್ಲದೇ ತಯಾರಿ ನಡೆಸುತ್ತಿದೆ. ಹೌದು, ವಿಶ್ವ ದರ್ಜೆಯ ಸಂಗೀತವನ್ನು ಕಲ್ಪಿಸಿಕೊಂಡು, ರೆಕಾರ್ಡ್ ಮಾಡಿ, ಉತ್ಪಾದಿಸುವ 'ಸಂಗೀತ ನಗರ'ವಾಗುವುದರತ್ತ ನಮ್ಮ ಕುಂದಾನಗರಿ ಹೆಜ್ಜೆ ಇಡುತಿದೆ. ಆ ಕುರಿತ ವರದಿ ಇಲ್ಲಿದೆ:
ಈ ಸಂಗೀತ ನಗರಿಯ ರೂಪಾಂತರದ ಹಿಂದಿನ ಕೈ ಅಶೋಕ್ ಪರಾಂಜಪೆ; ಹೌದು, ತಮ್ಮ ವೃತ್ತಿಪರ ಜೀವನವನ್ನು ಚಾರ್ಟರ್ಡ್ ಅಕೌಂಟೆಂಟ್ ಆಗಿ ಹಣಕಾಸಿನ ದಾಖಲೆಗಳನ್ನು ಸಮತೋಲನಗೊಳಿಸುತ್ತಿದ್ದ ಇವರು, ತಮ್ಮ ಕೆಲಸದೊಂದಿಗೆ, ಸಂಗೀತ ಸಂಯೋಜನೆ ಮತ್ತು ಸಾಹಿತ್ಯ ರಚನೆಯ ಉತ್ಸಾಹವನ್ನು ಸದ್ದಿಲ್ಲದೆ ಪೋಷಿಸಿಕೊಂಡು ಬಂದಿದ್ದಾರೆ. ಅದರಂತೆ, ಬೆಳಗಾವಿ ಮೂಲದ ಎಸ್‌ವಿಎಎನ್ ಫಿನೆಸ್ಸೆ, ಯುಕೆಯ ಡೌನ್‌ಬಾಯ್ ಗ್ಲೋಬಲ್ / ಸೌಂಡ್ಸ್ ಇಂಕ್ ಸಹಯೋಗದೊಂದಿಗೆ ಇಂದು ಅವರ ಜೀವಮಾನದ ಕನಸಾದ "ಕಶ್ಮಾ-ಕಶ್" ಸಂಗೀತ ಲೇಬಲ್ ಮತ್ತು ಸೃಜನಶೀಲ ಪರಿಸರ ವ್ಯವಸ್ಥೆ ಪ್ರಾರಂಭವಾಗಿದೆ.
ಪರಾಂಜಪೆ ಅವರ ಪಾಲಿಗೆ ಕಶ್ಮಾ-ಕಶ್ ಕೇವಲ ಒಂದು ಸಂಗೀತ ಲೇಬಲ್ ಅಲ್ಲ. ಬದಲಿಗೆ, ಭೌಗೋಳಿಕ ಗಡಿ, ಭಾಷೆ ಮತ್ತು ಸಂಸ್ಕೃತಿಯನ್ನು ಮೀರಿ ಭಾವನೆಗಳನ್ನು ತಲುಪಿಸುವ ಸಂಗೀತದ ಶಕ್ತಿಯ ಮೇಲಿನ ಅವರ ವರ್ಷಗಳ ನಂಬಿಕೆಯ ಸಾಕಾರ ರೂಪವಾಗಿದೆ. ಹಾಗಾಗಿ, ಅವರ ಸಂಗೀತ ಸಂಯೋಜನೆಗಳು ಭಾವನೆಗಳ ಆಧಾರದ ಮೇಲೆಯೇ ರೂಪುಗೊಂಡಿದ್ದು, ಸಾಹಿತ್ಯವು ಜೀವನದ ಸಂಕೀರ್ಣತೆಗಳನ್ನು ಅಭಿವ್ಯಕ್ತಿಸುವ ಪ್ರಯತ್ನ ಮಾಡುತ್ತದೆ. ಹೀಗಾಗಿ ಪ್ರತಿಯೊಂದು ಹಾಡು ಕೇವಲ ಮನರಂಜನೆಯಾಗಿರದೆ, ಒಂದು ವಿಶಿಷ್ಟ ಅನುಭವವಾಗಿ ಮೂಡಿಬರುತ್ತದೆ.
ಮುಂದುವರೆದು, ಕಶ್ಮಾ-ಕಶ್ ಎಂಬ ಹೆಸರು ಜೀವನದ ಗೊಂದಲಗಳು ಮತ್ತು ಭಾವನಾತ್ಮಕ ತಿರುವುಗಳನ್ನು ಪ್ರತಿಬಿಂಬಿಸುತ್ತದೆ. ಇದೇ ಪರಾಂಜಪೆ ಅವರ ಸಂಗೀತ ಕಥನದ ತತ್ವವಾಗಿದೆ. ಅದರಂತೆ, ಪ್ರತಿಯೊಂದು ಹಾಡು ಒಂದು ಕಥೆಯನ್ನು ಹೇಳುವ ಉದ್ದೇಶ ಹೊಂದಿದ್ದು, ಸಾಹಿತ್ಯ, ಸಂಗೀತ ಮತ್ತು ಸಂಯೋಜನೆಗೆ ಸಮಾನ ಮಹತ್ವ ನೀಡಲಾಗಿದೆ. ಆದರೆ ಈ ಯೋಜನೆಯ ವಿಶೇಷತೆ ಕೇವಲ ಸಂಗೀತದಲ್ಲೇ ಸೀಮಿತವಾಗಿಲ್ಲ. ಈ ಸಂಗೀತದ ಪಯಣ ಆರಂಭವಾಗುತ್ತಿರುವ ಸ್ಥಳವೇ ಇದನ್ನು ವಿಭಿನ್ನವಾಗಿಸುತ್ತದೆ.
ಹೌದು, ಬೆಳಗಾವಿಯನ್ನು ಕೇವಲ ಧ್ವನಿಮುದ್ರಣದ ಕೇಂದ್ರವಾಗಿ ನೋಡುವ ಬದಲು, ವಿಶ್ವಮಟ್ಟದ ಸಂಗೀತ ಹುಟ್ಟುವ ತಾಣವನ್ನಾಗಿ ರೂಪಿಸುವ ಕನಸನ್ನು ಪರಾಂಜಪೆ ಕಂಡಿದ್ದಾರೆ. ಅದರಂತೆ, ಸಾಮಾನ್ಯ ಪದ್ಧತಿಗೆ ಭಿನ್ನವಾಗಿ, ಕಶ್ಮಾ-ಕಶ್‌ನ ಎಲ್ಲ ಹಾಡುಗಳ ಗಾಯನವನ್ನು ಸಂಪೂರ್ಣವಾಗಿ ಬೆಳಗಾವಿಯ ಎಸ್‌ವಿಎಎನ್ ಸ್ಟುಡಿಯೋದಲ್ಲೇ ಧ್ವನಿಮುದ್ರಿಸಲಾಗಿದೆ. ನಂತರ ಆ ಧ್ವನಿಮುದ್ರಣಗಳನ್ನು ಲಂಡನ್‌ಗೆ ಕಳುಹಿಸಿ, ಅಲ್ಲಿನ ಅಂತಾರಾಷ್ಟ್ರೀಯ ಖ್ಯಾತಿಯ ನಿರ್ಮಾಪಕರು ಅಂತಿಮ ಸಂಗೀತ ನೀಡಿ ಪೂರ್ಣಗೊಳಿಸಿದ್ದಾರೆ.
ಇನ್ನು, ಬೆಳಗಾವಿಯಿಂದ ಲಂಡನ್‌ವರೆಗೆ ಸಾಗಿದ ಈ ಪಯಣ ಕೇವಲ ಸಂಗೀತದ ಪ್ರಯಾಣವಲ್ಲ. ಬದಲಾಗಿ, ಸ್ಥಳೀಯ ಪ್ರತಿಭೆ ಮತ್ತು ಜಾಗತಿಕ ವೇದಿಕೆಯ ನಡುವಿನ ಅಂತರ ಕಡಿಮೆಯಾಗುತ್ತಿರುವುದರ ಸಂಕೇತವಾಗಿದೆ. ಹಾಗಾಗಿ, ಈ ಯೋಜನೆಗೆ ಅಂತಾರಾಷ್ಟ್ರೀಯ ಮಟ್ಟದ ತಂಡವೂ ಕೈಜೋಡಿಸಿದೆ. ಅದರಂತೆ, ಬ್ಯಾರಿ ವೈಟ್, ರಾಬರ್ಟ್ ಪಾಲ್ಮರ್, ಚಿಕ್, ಮೇರಿ ಜೆ. ಬ್ಲೈಜ್ ಮತ್ತು ಜೆನ್ನಿಫರ್ ಹಡ್ಸನ್ ಮೊದಲಾದ ಖ್ಯಾತ ಕಲಾವಿದರೊಂದಿಗೆ ಕೆಲಸ ಮಾಡಿರುವ ಅನುಭವಿ ಬ್ರಿಯಾನ್ ಹ್ಯಾರಿಸ್ ಈ ಯೋಜನೆಯ ಪ್ರಮುಖ ಭಾಗವಾಗಿದ್ದಾರೆ. ಅವರೊಂದಿಗೆ 18 ಮಿಲಿಯನ್‌ಗಿಂತ ಹೆಚ್ಚು ಸಂಗೀತ ರೆಕಾರ್ಡ್ ಗಳ ಮಾರಾಟ ಮಾಡಿರುವ ಖ್ಯಾತ ಬ್ರಿಟಿಷ್ ಗೀತರಚನೆಕಾರ ಹಾಗೂ ನಿರ್ಮಾಪಕ ನೈಜೆಲ್ ಲೋವಿಸ್ ಕೂಡ ಕೈಜೋಡಿಸಿದ್ದಾರೆ. ಇವರು, ಸ್ಟೀವಿ ವಂಡರ್, ಎರಿಕ್ ಕ್ಲಾಪ್ಟನ್, ಮರಾಯಾ ಕ್ಯಾರಿ, ಸೆಲಿನ್ ಡಿಯಾನ್ ಮತ್ತು ಜಾರ್ಜ್ ಬೆನ್ಸನ್ ಸೇರಿದಂತೆ ಅನೇಕ ಸಂಗೀತ ದಿಗ್ಗಜರೊಂದಿಗೆ ಅವರು ಕೆಲಸ ಮಾಡಿದ್ದಾರೆ. ಜೊತೆಗೆ, ಲಂಡನ್ ಮೂಲದ ನಿರ್ಮಾಪಕ ಮತ್ತು ಧ್ವನಿಮುದ್ರಣ ತಜ್ಞ ಫಿಲ್ ಡೇನ್ ಕೂಡ ಈ ಅಂತಾರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ.
ಏತನ್ಮಧ್ಯೆ, ಜಾಗತಿಕ ಮಟ್ಟದ ಸಹಯೋಗ ಇದ್ದರೂ, ಕಶ್ಮಾ-ಕಶ್‌ನ ಆತ್ಮ ಮಾತ್ರ ಬೆಳಗಾವಿಯದ್ದೇ. ಯಾಕಂದ್ರೆ, ಈ ಯೋಜನೆಯ ನಿರ್ಮಾಣದಲ್ಲಿ ವರ್ಷಾ ಪರಾಂಜಪೆ ಮತ್ತು ರಾಜ್ ಬೆಳಗಾಂವ್ಕರ್ ಸೇರಿದಂತೆ ಸ್ಥಳೀಯ ಪ್ರತಿಭೆಗಳು ಪ್ರಮುಖ ಪಾತ್ರವಹಿಸಿದ್ದಾರೆ. ಇನ್ನು, ಈ ಯೋಜನೆಯ ಅತ್ಯಂತ ದೂರದೃಷ್ಟಿಯ ಅಂಶವೆಂದರೆ, ಪರಾಂಜಪೆ ಕೇವಲ ಹಾಡುಗಳ ನಿರ್ಮಾಣದಲ್ಲಷ್ಟೇ ಹೂಡಿಕೆ ಮಾಡಿಲ್ಲ. ಮುಂದಿನ ತಲೆಮಾರಿನ ಕಲಾವಿದರನ್ನು ಬೆಳೆಸುವ ಮೂಲಸೌಕರ್ಯ ನಿರ್ಮಾಣಕ್ಕೂ ಒತ್ತು ನೀಡಿದ್ದಾರೆ. ಅದರಂತೆ, SVAN ಸಂಸ್ಥೆಯು ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಎರಡು ಅತ್ಯಾಧುನಿಕ ಧ್ವನಿಮುದ್ರಣ ಸ್ಟುಡಿಯೋಗಳನ್ನು ಸ್ಥಾಪಿಸಿದೆ. ಇದರಲ್ಲಿ, ವೃತ್ತಿಪರ ಅಕೌಸ್ಟಿಕ್ ವ್ಯವಸ್ಥೆ, ವಿಶ್ವಮಟ್ಟದ ಮೈಕ್ರೋಫೋನ್‌ಗಳು, ಸುಧಾರಿತ ಸಂಗೀತ ನಿರ್ಮಾಣ ಸಾಫ್ಟ್‌ವೇರ್‌ಗಳು ಮತ್ತು ಉನ್ನತ ಗುಣಮಟ್ಟದ ಮಾನಿಟರಿಂಗ್ ವ್ಯವಸ್ಥೆಗಳೊಂದಿಗೆ ಈ ಸ್ಟುಡಿಯೋಗಳು ಭಾರತದ ಪ್ರಮುಖ ಸಂಗೀತ ಕೇಂದ್ರಗಳಿಗೆ ಸರಿಸಾಟಿಯಾಗಿವೆ.
ಇದರ ಜೊತೆಗೆ ಸುಮಾರು 50 ಜನರಿಗೆ ಅವಕಾಶ ಕಲ್ಪಿಸುವ ವಿಶಿಷ್ಟ 'ಪಂಚಮ್ ಕಾರವಾನ್' ಎಂಬ ಜ್ಯಾಮ್ ರೂಮ್ ಕೂಡ ನಿರ್ಮಿಸಲಾಗಿದೆ. ಇಲ್ಲಿ ಲೈವ್ ಪ್ರದರ್ಶನಗಳು, ಗೀತರಚನೆ ಕಾರ್ಯಾಗಾರ ಮತ್ತು ವಿಶೇಷ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಬಹುದಾಗಿದೆ.
ಅದರಲ್ಲೂ, ಈ ಎಲ್ಲ ಸೌಲಭ್ಯಗಳು ಪರಾಂಜಪೆ ಅವರ ವೈಯಕ್ತಿಕ ಬಳಕೆಗೆ ಮಾತ್ರ ಸೀಮಿತವಾಗಿಲ್ಲ. ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಉದಯೋನ್ಮುಖ ಗಾಯಕರು, ಸಂಗೀತಗಾರರು, ಸಂಗೀತ ನಿರ್ದೇಶಕರು ಮತ್ತು ಬ್ಯಾಂಡ್‌ಗಳಿಗೆ ಇದು ಮುಕ್ತ ವೇದಿಕೆಯಾಗಿದೆ. ಹಾಗಾಗಿ, ಇನ್ನು ಮುಂದೆ ಉತ್ತಮ ಧ್ವನಿಮುದ್ರಣ ಸೌಲಭ್ಯಕ್ಕಾಗಿ ಯುವ ಕಲಾವಿದರು ಬೆಂಗಳೂರಿಗೆ, ಮುಂಬೈಗೆ ಅಥವಾ ಚೆನ್ನೈಗೆ ವಲಸೆ ಹೋಗುವ ಅಗತ್ಯವಿಲ್ಲ. ತಮ್ಮದೇ ಊರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸಂಗೀತವನ್ನು ಸೃಷ್ಟಿಸುವುದರ ಜೊತೆಗೆ, ಅನುಭವಿ ತಜ್ಞರ ಮಾರ್ಗದರ್ಶನ ಮತ್ತು ಜಾಗತಿಕ ಸಹಯೋಗದ ಅವಕಾಶವನ್ನೂ ಪಡೆಯಬಹುದು.
"ನಮ್ಮ ನಗರದಲ್ಲಿ ಅಪಾರ ಪ್ರತಿಭೆ ಇದೆ. ಸ್ಥಳೀಯ ಕಲಾವಿದರು ತಮ್ಮದೇ ಊರಿನಿಂದ ವಿಶ್ವಮಟ್ಟದ ಸಂಗೀತವನ್ನು ನಿರ್ಮಿಸಬೇಕು ಎಂಬ ಉದ್ದೇಶದಿಂದ ಅವರಿಗೆ ವೃತ್ತಿಪರ ಮೂಲಸೌಕರ್ಯ, ಮಾರ್ಗದರ್ಶನ ಮತ್ತು ಜಾಗತಿಕ ಸಹಯೋಗವನ್ನು ಒದಗಿಸಲು ನಾವು ಬಯಸುತ್ತೇವೆ"
ಅಶೋಕ್ ಪರಾಂಜಪೆ
ಅವರ, ಈ ಮಾತುಗಳೇ ಕಶ್ಮಾ-ಕಶ್ ಯೋಜನೆಯ ನಿಜವಾದ ಉದ್ದೇಶವನ್ನು ಸ್ಪಷ್ಟಪಡಿಸುತ್ತವೆ. ಹಾಗಾಗಿ, ಇದು ಮತ್ತೊಂದು ಸಂಗೀತ ಲೇಬಲ್ ಆರಂಭಿಸುವ ಪ್ರಯತ್ನವಲ್ಲ. ಪ್ರತಿಭೆಯನ್ನು ಬೆಳೆಸುವ, ಸೃಜನಶೀಲತೆಯನ್ನು ಉತ್ತೇಜಿಸುವ ಮತ್ತು ಅವಕಾಶಗಳನ್ನು ಸ್ಥಳೀಯವಾಗಿಯೇ ಉಳಿಸಿಕೊಂಡು ಕನಸುಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಒಂದು ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಪ್ರಯತ್ನವಾಗಿದೆ.
ಒಟ್ಟಾರೆಯಾಗಿ, ಈ ಮಹತ್ವಾಕಾಂಕ್ಷೆಯ ಸಂಗೀತ ಯೋಜನೆಯೊಂದಿಗೆ ಬೆಳಗಾವಿ ಹೊಸ ಸಾಂಸ್ಕೃತಿಕ ಗುರುತಿನತ್ತ ಹೆಜ್ಜೆಯಿಡುತ್ತಿದೆ. ಪರಾಂಜಪೆ ಅವರ ಕನಸು ಯಶಸ್ವಿಯಾದರೆ, ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಗರ ಎಂಬ ಹೆಸರಿನ ಜೊತೆಗೆ, ಮೂಲ ಸಂಗೀತಕ್ಕೆ ಹೊಸ ಧ್ವನಿ ನೀಡುವ ಮತ್ತು ಜಗತ್ತಿನಾದ್ಯಂತ ಪ್ರತಿಧ್ವನಿಸುವ ಸಂಗೀತ ನಗರವಾಗಿಯೂ ಬೆಳಗಾವಿ ಗುರುತಿಸಿಕೊಳ್ಳುವ ದಿನಗಳು ದೂರವಿಲ್ಲ.