ಹಿಮಾಲಯದ ಮಡಿಲಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆ ಹಾರಿಸಿದ 16ರ ಹರೆಯದ ಸಾಹಸಿ ಕನ್ಯೆ ನಿಶಾ ಶಶಿಕುಮಾರ್..!

ಎವರೆಸ್ಟ್ ಶಿಖರ ತಲುಪಿದ ಆ ಒಂದು ಫೋಟೋದ ಹಿಂದೆ ಅವರ 45 ದಿನಗಳ ಕಠಿಣ ಹೋರಾಟ, ಕಣ್ಣೀರು, ನೋವು, ಭಯ, ಆತ್ಮವಿಶ್ವಾಸ ಮತ್ತು ಅಚಲ ಸಂಕಲ್ಪದ ಕಥೆಯಿದೆ.
Nisha Sasikumar
ನಿಶಾ ಶಶಿಕುಮಾರ್
Updated on

ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಏರುವುದು ಪ್ರತಿಯೊಬ್ಬ ಪರ್ವತಾರೋಹಿಯ ಜೀವಮಾನದ ಕನಸು. ಇಂತಹ ಕಠಿಣ ಸವಾಲನ್ನು ತಮ್ಮ ಹದಿನಾರನೇ ವಯಸ್ಸಿನಲ್ಲೇ ಅತ್ಯಂತ ಯಶಸ್ವಿಯಾಗಿ ಪೂರೈಸಿ, ಜಾಗತಿಕ ಮಟ್ಟದಲ್ಲಿ ಭಾರತದ ಹಾಗೂ ಕರ್ನಾಟಕದ ಹೆಸರನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದ್ದಾರೆ ಸಾಹಸಿ ಹುಡುಗಿ ನಿಶಾ ಶಶಿಕುಮಾರ್.

ಮೇ 25, 2026 ರಂದು ನೇಪಾಳದ ಸೌತ್ ಕೋಲ್ ಮಾರ್ಗದ ಮೂಲಕ ಎವರೆಸ್ಟ್ ತಲುಪಿದ ಇವರು, ಈ ಹೆಗ್ಗುರುತನ್ನು ಸಾಧಿಸಿದ ಅತ್ಯಂತ ಕಿರಿಯ ಮಹಿಳೆ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇವರ ಅಪ್ರತಿಮ ಸಾಧನೆಯನ್ನು ಗೌರವಿಸಿ ಸನ್ಮಾನಿಸಲಾಯಿತು.

ಆದರೆ, ಎವರೆಸ್ಟ್ ಶಿಖರ ತಲುಪಿದ ಆ ಒಂದು ಫೋಟೋದ ಹಿಂದೆ ಅವರ 45 ದಿನಗಳ ಕಠಿಣ ಹೋರಾಟ, ಕಣ್ಣೀರು, ನೋವು, ಭಯ, ಆತ್ಮವಿಶ್ವಾಸ ಮತ್ತು ಅಚಲ ಸಂಕಲ್ಪದ ಕಥೆಯಿದೆ.

ನಿಶಾ ಅವರ ಎವರೆಸ್ಟ್ ಯಾತ್ರೆ ಆರಂಭದಿಂದಲೇ ಸುಲಭವಾಗಿರಲಿಲ್ಲ. ಅವರ ತಂದೆಯೂ ಈ ಸಾಹಸದಲ್ಲಿ ಜೊತೆಯಾಗಿದ್ದರು. ಆದರೆ, ಎತ್ತರದ ಪ್ರದೇಶಕ್ಕೆ ದೇಹ ಹೊಂದಿಕೊಳ್ಳುವ (Acclimatisation) ಹಂತದಲ್ಲೇ ಅವರಿಗೆ ಅಕ್ಯೂಟ್ ಮೌಂಟನ್ ಸಿಕ್ನೆಸ್ (AMS) ಕಾಣಿಸಿಕೊಂಡಿತು. ವೈದ್ಯರ ಸಲಹೆಯಂತೆ ಅವರು ತಕ್ಷಣ ಕೆಳಗಿಳಿಯಬೇಕಾಯಿತು.

Nisha Sasikumar
ನಿಶಾ ಶಶಿಕುಮಾರ್

ಆ ಕ್ಷಣ ನಿಶಾ ಅವರ ಬದುಕಿನ ಅತ್ಯಂತ ಕಠಿಣ ನಿರ್ಧಾರ ಎದುರಾಯಿತು. ಇಷ್ಟು ದಿನ ಜೊತೆಯಲ್ಲಿದ್ದ ತಂದೆಯಿಲ್ಲದೆ ಸಾಹಸ ಮುಂದುವರಿಸಬೇಕೇ? ಅಥವಾ ಕನಸನ್ನೇ ಅರ್ಧದಲ್ಲೇ ಕೈಬಿಡಬೇಕೇ? ಎಂಬ ಪ್ರಶ್ನೆ ಎದುರಾಯಿತು.

ಆದರೆ, ನಿಶಾ ಹಿಂದೆ ಸರಿಯಲಿಲ್ಲ. ಶೆರ್ಪಾ ಮಾರ್ಗದರ್ಶಕರೊಂದಿಗೆ ಮಾತ್ರ ಎವರೆಸ್ಟ್ ಏರುವ ನಿರ್ಧಾರ ಕೈಗೊಂಡರು.

"ನನಗೆ ಎವರೆಸ್ಟ್ ಏರುವುದಕ್ಕಿಂತ ತಂದೆಯಿಲ್ಲದೆ ಆ ಪಯಣ ಮುಂದುವರಿಸುವುದೇ ಹೆಚ್ಚು ಕಷ್ಟವಾಗಿತ್ತು. ತುಂಬಾ ಮಾನಸಿಕ ಒತ್ತಡ ಇತ್ತು. ಆದರೆ, ನಾನು ಈ ಪ್ರಯಾಣ ಆರಂಭಿಸಿದ್ದ ಉದ್ದೇಶ ಬೆಟ್ಟಕ್ಕಿಂತ ದೊಡ್ಡದಾಗಿತ್ತು," ಎಂದು ನಿಶಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಎವರೆಸ್ಟ್ ಏರಿಕೆ ಕೇವಲ ದೈಹಿಕ ಸಾಮರ್ಥ್ಯದ ಪರೀಕ್ಷೆಯಲ್ಲ. ಅದು ಮನಸ್ಸಿನ ಶಕ್ತಿಯನ್ನು ಪರೀಕ್ಷಿಸುವ ಹೋರಾಟ. ಪ್ರತಿಯೊಂದು ಹೆಜ್ಜೆಯೂ ಅಪಾಯದ ಅಂಚಿನಲ್ಲೇ ಇರುತ್ತದೆ. ಹವಾಮಾನ ವೈಪರೀತ್ಯದಿಂದ ಅಂತಿಮ ಶಿಖರಾರೋಹಣ ವಿಳಂಬವಾಯಿತು.

Nisha Sasikumar
Royal Enfield Bullet ಬೈಕ್'ಗೆ ಪೂಜೆ, ಮದ್ಯದ ಬಾಟಲಿಯೇ ನೈವೇದ್ಯ! ಭಾರತದ ಈ ಅಪರೂಪದ ದೇವಾಲಯದ ರಹಸ್ಯ ಕೇಳಿದರೆ ಅಚ್ಚರಿಯಾಗುತ್ತೆ..!

ಪರಿಣಾಮವಾಗಿ ನಿಶಾ ಸಮುದ್ರಮಟ್ಟದಿಂದ 8,000 ಮೀಟರ್‌ಗಿಂತ ಹೆಚ್ಚಿನ ಎತ್ತರದಲ್ಲಿರುವ "ಡೆತ್ ಝೋನ್"ನಲ್ಲಿ ಸತತ ಮೂರು ರಾತ್ರಿ ಕಳೆದರು.

ಈ ಪ್ರದೇಶವನ್ನು ಡೆತ್ ಝೋನ್ ಎಂದು ಕರೆಯುವುದಕ್ಕೆ ಕಾರಣವೇ ಅಲ್ಲಿನ ಅತ್ಯಂತ ಕಡಿಮೆ ಆಮ್ಲಜನಕದ ಪ್ರಮಾಣ. ಇಲ್ಲಿ ದೇಹದ ಪ್ರತಿಯೊಂದು ಅಂಗವೂ ನಿಧಾನವಾಗಿ ಶಕ್ತಿಯನ್ನು ಕಳೆದುಕೊಳ್ಳಲು ಆರಂಭಿಸುತ್ತದೆ. ಸಾಮಾನ್ಯವಾಗಿ ಕೆಲವೇ ಗಂಟೆಗಳ ಕಾಲ ಉಳಿಯುವುದೇ ಅಪಾಯಕಾರಿಯಾಗಿರುವ ಈ ಪ್ರದೇಶದಲ್ಲಿ ಮೂರು ರಾತ್ರಿ ಕಳೆಯುವುದು ಎಂದರೆ ಅಸಾಧಾರಣವೇ ಸರಿ. ಈ ಯಾತ್ರೆಯಲ್ಲಿ ನಿಶಾ ಮತ್ತೊಂದು ಕಠಿಣ ಸತ್ಯವನ್ನೂ ಎದುರಿಸಿದರು.

ಎವರೆಸ್ಟ್ ಮಾರ್ಗದಲ್ಲಿ ಪ್ರಾಣ ಕಳೆದುಕೊಂಡ ಹಲವಾರು ಪರ್ವತಾರೋಹಿಗಳ ಮೃತದೇಹಗಳು ಇನ್ನೂ ಅಲ್ಲೇ ಇವೆ. ಅವುಗಳನ್ನು ಕಣ್ಣಾರೆ ನೋಡುವುದು ಆಘಾತ ತಂದಿತು. ಇದಕ್ಕಿಂತಲೂ ಹೆಚ್ಚು ನೋವುಂಟುಮಾಡಿದ್ದು, ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ ಪರಿಚಯವಾಗಿದ್ದ ಇಬ್ಬರು ಪರ್ವತಾರೋಹಿಗಳು ಇದೇ ಯಾತ್ರೆಯಲ್ಲಿ ಮೃತಪಟ್ಟಿದ್ದು. ಈ ಘಟನೆಗಳು ನನ್ನ ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರಿದವು.

ಇದರ ನಡುವೆ ಫುಡ್ ಪಾಯಿಸನ್ ಸಮಸ್ಯೆಯೂ ನಿಶಾ ಅವರಿಗೆ ಎದುರಾಯಿತು. ದೇಹದ ಶಕ್ತಿ ಕುಗ್ಗುತ್ತಿತ್ತು. ನಿರಂತರ ಏರಿಕೆ, ತೀವ್ರ ಚಳಿ ಮತ್ತು ಒಂಟಿತನ ಎಲ್ಲವೂ ಸೇರಿ ಅವರು ಒಂದೊಮ್ಮೆ ಸಾಹಸವನ್ನು ಕೈಬಿಡುವ ಹಂತಕ್ಕೂ ತಲುಪಿದರು. ಅದೇ ಸಂದರ್ಭದಲ್ಲಿ ವಾಕಿ-ಟಾಕಿ ಮೂಲಕ ಸ್ನೇಹಿತರಿಂದ ಬಂದ ಒಂದು ಚಿಕ್ಕ ಸಂದೇಶ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.

"ತಿನ್ನು... ನೀರು ಕುಡಿ... ಕ್ಯಾಂಪ್-3ಗೆ ಹೋಗಿ ವಿಶ್ರಾಂತಿ ತೆಗೆದುಕೋ." ಈ ಕೆಲವೇ ಪದಗಳು ಅವರಿಗೆ ಹೊಸ ಆತ್ಮವಿಶ್ವಾಸ ನೀಡಿದವು. ದೇಹ ಆಯಾಸಗೊಂಡಿದ್ದರೂ ಮನಸ್ಸು ಮತ್ತೆ ದೃಢವಾಯಿತು.

ಮೇ 25ರಂದು ಕೊನೆಗೂ ಮೌಂಟ್ ಎವರೆಸ್ಟ್ ಶಿಖರ ಏರಿದ ನಿಶಾ

ಆ ಕ್ಷಣವನ್ನು ನೆನಪಿಸಿಕೊಳ್ಳುವ ನಿಶಾ, ನಾನು ಮೇಲಕ್ಕೆ ನೋಡಿದೆ. ನಿಜವಾಗಿಯೂ ಎವರೆಸ್ಟ್ ಶಿಖರದ ಮೇಲೆ ನಿಂತಿದ್ದೇನೆ ಎನ್ನುವುದು ಅರ್ಥವಾಗುತ್ತಿದ್ದಂತೆ ಕಣ್ಣೀರು ತಾನಾಗಿಯೇ ಹರಿಯತೊಡಗಿತು.

ಅದೃಷ್ಟವಶಾತ್ ಆ ದಿನ ಹವಾಮಾನ ಅತ್ಯಂತ ಅನುಕೂಲಕರವಾಗಿತ್ತು. ಸಾಮಾನ್ಯವಾಗಿ ಶಿಖರದಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ. ಆದರೆ, ಆ ದಿನ ಜನ ಕಡಿಮೆ ಇದ್ದ ಕಾರಣ ಸುಮಾರು 20 ನಿಮಿಷಗಳ ಕಾಲ ಹಿಮಾಲಯದ ಅದ್ಭುತ ದೃಶ್ಯವನ್ನು ಮನಸಾರೆ ಆಸ್ವಾದಿಸುವ ಅವಕಾಶ ಸಿಕ್ಕಿತು.

ಆದರೆ, ಎವರೆಸ್ಟ್ ಏರಿಕೆ ಎಂದರೆ ಶಿಖರ ತಲುಪಿದರೆ ಕಥೆ ಮುಗಿಯುವುದಿಲ್ಲ. ಅನೇಕ ಪರ್ವತಾರೋಹಿಗಳು ಇಳಿಯುವಾಗಲೇ ಪ್ರಾಣ ಕಳೆದುಕೊಳ್ಳುತ್ತಾರೆ. ಆದ್ದರಿಂದ ಶಿಖರ ತಲುಪಿದ ಬಳಿಕವೂ ಅಷ್ಟೇ ಎಚ್ಚರಿಕೆಯಿಂದ ಕೆಳಗಿಳಿಯಬೇಕಾಯಿತು.

Nisha Sasikumar
ರೈಲು ನಿಲ್ದಾಣಗಳ ಹೆಸರಿನ ಕೊನೆಯಲ್ಲಿ Junction, Road, Halt ಯಾಕೆ ಇರುತ್ತವೆ?

ಈ ಸಾಹಸ ಪಯಣ ಆರಂಭವಾಗಿದ್ದು ಹೇಗೆ..?

ನಿಶಾ ಅವರ ಸಾಹಸಪ್ರಯಾಣ ಆರಂಭವಾಗಿದ್ದು 14ನೇ ವಯಸ್ಸಿನಲ್ಲಿ. ಇಂಟರ್‌ನೆಟ್‌ನಲ್ಲಿ 'ಸೆವನ್ ಸಮ್ಮಿಟ್ಸ್ ಚಾಲೆಂಜ್' ಬಗ್ಗೆ ಓದಿದ ಬಳಿಕ ವಿಶ್ವದ ಏಳು ಖಂಡಗಳ ಅತಿ ಎತ್ತರದ ಶಿಖರಗಳನ್ನು ಏರಬೇಕೆಂಬ ಕನಸು ನಿಶಾ ಅವರಲ್ಲಿ ಹುಟ್ಟಿತು.

ಮೊದಲ ಪ್ರಯತ್ನವಾಗಿ ಅವರು ಆಫ್ರಿಕಾದ ಕಿಲಿಮಂಜಾರೋ ಶಿಖರ ಏರಲು ಹೊರಟಿದ್ದರು. ಆದರೆ, ವೈದ್ಯಕೀಯ ತುರ್ತು ಪರಿಸ್ಥಿತಿ ಹಾಗೂ ಹಿಮಬಿರುಗಾಳಿಯಿಂದ ಆ ಪ್ರಯತ್ನ ವಿಫಲವಾಯಿತು. ಬಹಳಷ್ಟು ಜನರಿಗೆ ಮೊದಲ ಸೋಲೇ ಅಂತಿಮವಾಗಿರುತ್ತದೆ. ಆದರೆ, ನಿಶಾ ಅವರಿಗೆ ಅದು ಹೊಸ ಆರಂಭವಾಯಿತು.

ಆ ಬಳಿಕ ಅವರು ಯುರೋಪಿನ ಮೌಂಟ್ ಎಲ್‌ಬ್ರಸ್, ಇಂಡೋನೇಷ್ಯಾದ ಕಾರ್ಸ್ಟೆನ್ಸ್ ಪಿರಮಿಡ್ ಹಾಗೂ ದಕ್ಷಿಣ ಅಮೆರಿಕದ ಅಕಾಂಕಾಗುವಾ ಶಿಖರಗಳನ್ನು ಯಶಸ್ವಿಯಾಗಿ ಏರಿದರು. ಈ ಅನುಭವಗಳೇ ಅವರನ್ನು ಎವರೆಸ್ಟ್ ಗೆಲುವಿನತ್ತ ಕೊಂಡೊಯ್ದವು.

ಸಾಹಸ ಮತ್ತು ಓದನ್ನು ಸಮತೋಲನಗೊಳಿಸುತ್ತಿರುವ ನಿಶಾ, ಈಗ ತಮ್ಮ ಮುಂದಿನ ಗುರಿಯತ್ತ ಗಮನ ಹರಿಸಿದ್ದಾರೆ. ಅವರ ಕನಸು 'ಸೆವನ್ ಸಮ್ಮಿಟ್ಸ್' ಸವಾಲನ್ನು ಪೂರ್ಣಗೊಳಿಸುವುದು.

ಅವರಿಗೆ ಎವರೆಸ್ಟ್ ಅಂತಿಮ ಗುರಿಯಲ್ಲ. ಅದು ದೊಡ್ಡ ಕನಸಿನತ್ತ ಸಾಗುವ ದೀರ್ಘ ಪಯಣದ ಒಂದು ಮಹತ್ವದ ಮೈಲಿಗಲ್ಲು ಮಾತ್ರ.

16ನೇ ವಯಸ್ಸಿನಲ್ಲಿ ವಿಶ್ವದ ಅತ್ಯುನ್ನತ ಶಿಖರವನ್ನು ಏರಿದ ನಿಶಾ ಶಶಿಕುಮಾರ್ ಅವರ ಸಾಧನೆ ಕೇವಲ ವೈಯಕ್ತಿಕ ಗೆಲುವಲ್ಲ. ಸಂಕಷ್ಟಗಳು ಎಷ್ಟೇ ದೊಡ್ಡದಾಗಿದ್ದರೂ ಆತ್ಮವಿಶ್ವಾಸ, ನಿರಂತರ ಪರಿಶ್ರಮ ಮತ್ತು ದೃಢ ಸಂಕಲ್ಪ ಇದ್ದರೆ ಅಸಾಧ್ಯವೆನ್ನುವುದು ಯಾವುದೂ ಇಲ್ಲ ಎಂಬ ಸಂದೇಶವನ್ನು ಇಂದಿನ ಯುವಪೀಳಿಗೆಗೆ ಸಾರುವ ಪ್ರೇರಣಾದಾಯಕ ಕಥೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com