ಕ್ರೀಡೆ

ನಡಾಲ್ ಸಾಮ್ರಾಟ

ನಡಾಲ್ ಸಾಮ್ರಾಟ
Published On :

ವಿಶ್ವ ಟೆನಿಸ್‌ನಲ್ಲಿ 'ಕಿಂಗ್ ಆಫ್ ಕ್ಲೇ ಕೋರ್ಟ್‌' ಎಂಬ ಹೆಸರು ಗಳಿಸಿದವರು ಸ್ಪೇನ್‌ನ ರಾಫೆಲ್ ನಡಾಲ್. ಟೆನಿಸ್ ಕ್ಷೇತ್ರದ ಮಿನುಗು ನಕ್ಷತ್ರವಾಗಿರುವ ನಡಾಲ್‌ಗೆ ನಡಾಲೇ ಸಾಟಿ. ಪ್ರಸಕ್ತ ವರ್ಷದಲ್ಲಿ ಗೆಲುವಿನ ಅಲೆಯಲ್ಲಿ ತೇಲುತ್ತಿರುವುದನ್ನು ನೋಡಿದರೆ, ಅವರ ಪ್ರಶಸ್ತಿಯ ಹಸಿವು ಅರಿವಾಗುತ್ತದೆ.
ವಿಶ್ವ ಟೆನಿಸ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಡಾಲ್, ಇದುವರೆಗೂ 12 ಗ್ರ್ಯಾಂಡ್ ಸ್ಲ್ಯಾಮ್, 26 ಬಾರಿ ಎಟಿಪಿ ಟೂರ್ 1000 ಪ್ರಶಸ್ತಿ, ದಾಖಲೆಯ 14 ಬಾರಿ ಎಟಿಪಿ ಟೂರ್ 500 ಪ್ರಶಸ್ತಿ, 2008ರ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ 2004, 2008, 2009 ಹಾಗೂ 2011ರ ಡೇವಿಸ್ ಕಪ್ ಗೆದ್ದ ಕುದುರೆಯೂ ಹೌದು.
2010ರಲ್ಲಿ ವೃತ್ತಿ ಜೀವನದ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ 7ನೇ ಕಿರಿಯ ಆಟಗಾರ ನಡಾಲ್. ಇವರ ಮತ್ತೊಂದು ವಿಶೇಷ ಸಾಧನೆ ಎಂದರೆ 3 ವಿಭಿನ್ನ ಕೋರ್ಟ್‌ಗಳಾದ ಹಾರ್ಡ್, ಗ್ರ್ಯಾಸ್ ಮತ್ತು ಕ್ಲೇ ಕೋರ್ಟ್‌ಗಳಲ್ಲಿ ಕನಿಷ್ಠ 2 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಸಾಧನೆಯನ್ನು ಮ್ಯಾಟ್ಸ್ ವಿಲ್ಯಾಂಡರ್ ಜತೆ ಹಂಚಿಕೊಂಡಿರುವುದು.
2013ರ ಫ್ರೆಂಚ್ ಓಪನ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಸತತ 9 ವರ್ಷ ಯಾವುದಾದರೂ ಒಂದು ಗ್ರ್ಯಾಂಡ್ ಸ್ಲಾಮ್ ಗೆದ್ದ ಏಕೈಕ ಪುರುಷ ಆಟಗಾರರೂ ಹೌದು.

ಗಾಯದ ಸಮಸ್ಯೆ
2012ರ ಜುಲೈನಲ್ಲಿ ಮಂಡಿನೋವಿನಿಂದ ಗಾಯದ ಸಮಸ್ಯೆಗೆ ಸಿಲುಕಿದ ನಡಾಲ್, ರೋಜರ್ಸ್ ಕಪ್, ಸಿನ್ಸಿನಾಟಿ ಮಾಸ್ಟರ್ಸ್, ಯುಎಸ್ ಓಪನ್ ಸೇರಿದಂತೆ ಪ್ರಮುಖ ಪಂದ್ಯಾವಳಿಗಳಿಂದ ಹಿಂದೆ ಸರಿದರು. ಈ ಮೂಲಕ ರ್ಯಾಂಕಿಂಗ್‌ನಲ್ಲಿ 4ನೇ ಸ್ಥಾನಕ್ಕೆ ಕುಸಿದರು.  ನಂತರ 2013ರ ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್‌ಸ್ಲ್ಯಾಮ್ ವೇಳೆ ಹೊಟ್ಟೆ ನೋವಿನ ಕಾರಣ ಪಂದ್ಯಾವಳಿಯಿಂದ ಹಿಂದೆ ಸರಿದರು. ಈ ಮೂಲಕ ನಡಾಲ್ 6 ತಿಂಗಳಿಗೂ ಹೆಚ್ಚು ಕಾಲ ಕಣಕ್ಕಿಳಿದಿರಲಿಲ್ಲ. ಹಾಗಾಗಿ ಗಾಯದಿಂದ ಚೇತರಿಸಿಕೊಂಡ ನಂತರ ನಡಾಲ್ ಮತ್ತೆ ಲಯ ಕಂಡುಕೊಳ್ಳುವರೇ ಎಂಬ ಪ್ರಶ್ನೆ ಉದ್ಭವಿಸಿತು.

2013 ಜಯದ ಪರ್ವ
ವಿಟಿಆರ್ ಓಪನ್‌ನಲ್ಲಿ ಪಂದ್ಯಾವಳಿಯಲ್ಲಿ ರನ್ನರ್ ಅಪ್. ಬ್ರೆಜಿಲ್ ಓಪನ್‌ನಲ್ಲಿ ಚಾಂಪಿಯನ್. ಆನಂತರ ನಡಾಲ್ ಹಿಂತಿರುಗಿ ನೋಡಲೇ ಇಲ್ಲ. ಮೆಕ್ಸಿಕೋ ಎಟಿಪಿ ಟೂರ್ 500, ಬಿಎನ್‌ಪಿ ಪರಿಬಾಸ್ ಓಪನ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮೆರೆದರು.
ಕಾರ್ಲೋ ರೊಲೆಕ್ಸ್ ಮಾಸ್ಟರ್ಸ್‌ನಲ್ಲಿ ರನ್ನರ್ ಅಪ್ ಆದ ನಡಾಲ್, ನಂತರ ಬಾರ್ಸಿಲೋನಾ ಓಪನ್, ಮ್ಯಾಡ್ರಿಡ್ ಓಪನ್, ಇಟಲಿ ಎಟಿಪಿ ಟೂರ್ 1000, ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಮೂಲಕ ಮತ್ತೆ ಸತತ 4 ಪಂದ್ಯಾವಳಿಯಲ್ಲಿ ಚಾಂಪಿಯನ್ ಆದರು. ಈ ಬಾರಿಯ ಫ್ರೆಂಚ್ ಓಪನ್ ಗೆಲ್ಲುವ ಮೂಲಕ 8 ಬಾರಿ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರರಾದರು. ಗೆಲುವಿನ ಅಲೆಯಲ್ಲಿ ತೇಲುತಿದ್ದ ನಡಾಲ್, ವಿಂಬಲ್ಡನ್‌ನ ಮೊದಲ ಸುತ್ತಿನಲ್ಲಿ ನಿರ್ಗಮಿಸಿ ಅಚ್ಚರಿಯನ್ನೂ ಮೂಡಿಸಿದ್ದರು.
ನಂತರ ಇತ್ತೀಚೆಗೆ ನಡೆದ ರೋಜರ್ಸ್ ಕಪ್ ಹಾಗೂ ಸಿನ್ಸಿನಾಟಿ ಮಾಸ್ಟರ್ಸ್‌ನಲ್ಲಿ ಚಾಂಪಿಯನ್ ಆಗುವ ಮೂಲಕ ಗೆಲುವಿನ ಓಟ ಮುಂದುವರಿಸಿದ್ದಾರೆ. ಆಲ್ ದಿ ಬೆಸ್ಟ್ ನಡಾಲ್.

- ಸೋಮಶೇಖರ್ ಪಿ. ಭದ್ರಾವತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.