ಕ್ರೀಡೆ

ಕ್ರಿಮಿನಲ್ ಆಡಳಿತ

Published On :

ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತ ಮತ್ತೊಮ್ಮೆ ಬೆತ್ತಲಾಗಿ ನಿಂತಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳ ಅಧಿಕಾರದಾಹಿಗಳೇ ಇದಕ್ಕೆ ಕಾರಣರು. ಪಾಕಿಸ್ತಾನದಿಂದ ಬಂದ ಉಗ್ರರು ನಮ್ಮ ದೇಶದಲ್ಲಿ ಬಾಂಬ್ ಸ್ಫೋಟಿಸಿ ನೂರಾರು ಜನರನ್ನು ಹತ್ಯೆಗೈದಾಗಲೇ ಅವರನ್ನು ಭಯೋತ್ಪಾದಕರು ಎನ್ನುತ್ತೇವೆ. ಆದರೆ, ವಿಶ್ವದ ಪ್ರತಿಷ್ಠಿತ ಕ್ರೀಡಾಕೂಟವಾದ ಒಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಪಟುಗಳು ಕಳಪೆ ಪ್ರದರ್ಶನ ನೀಡಲು ಕಾರಣವಾಗುತ್ತಿರುವ ನಮ್ಮ ಕ್ರೀಡಾಧಿಕಾರಿಗಳನ್ನು ನಾವು ಯಾವತ್ತೂ ಅಪರಾಧಿ ದೃಷ್ಟಿಯಿಂದ ನೋಡುವುದೇ ಇಲ್ಲ. ನಮ್ಮಲ್ಲೇ ಇದ್ದು ನಮ್ಮ ತಾಯ್ನೆಲಕ್ಕೆ ಎರಡು ಬಗೆಯುವ ಇವರು ಭಯೋತ್ಪಾದಕರಿಗಿಂತ ದೊಡ್ಡ ಅಪರಾಧಿಗಳು.
ತಮ್ಮ ಅಧಿಕಾರ ದಾಹಕ್ಕೆ ನೀತಿ ನಿಯಮಗಳ ನೆಲೆಗಟ್ಟನ್ನು ಕೈಬಿಟ್ಟು ಕ್ರೀಡಾಡಳಿತ ನಡೆಸುವುದರಲ್ಲಿ ತಪ್ಪೇನಿಲ್ಲ, ಎಂಬ ವಿತಂಡ ವಾದವನ್ನು ಮಂಡಿಸುತ್ತಿರುವ ಇವರನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕುವ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲವಾಗಿದೆ.
ಇಂಥ ನಿಯಮ ಜಾರಿಗೆ ತನ್ನಿ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಲಹೆ ನೀಡಿದರೆ, ಅದಕ್ಕೆ ಕೇರ್ ಮಾಡದೇ ನಮ್ಮದೇ ನಿಯಮವನ್ನು ಜಾರಿಗೆ ತರುವ ಅಸಡ್ಡೆಯ ನಿರ್ಧಾರ ಕೈಗೊಳ್ಳುತ್ತೇವೆ. ದೋಷಾರೋಪ ಪಟ್ಟಿಯಲ್ಲಿ ಸ್ಥಾನ ಪಡೆದವರನ್ನು ಐಒಎ ಪದಾಧಿಕಾರಿಗಳ ಚುನಾವಣೆಯಿಂದ ದೂರವಿಡಿ ಎಂಬ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ನಿರ್ದೇಶನವನ್ನು ಕಡೆಗಣಿಸಿರುವುದೇ ಇದಕ್ಕೆ ಸಾಕ್ಷಿ.
ನ್ಯಾಯಾಲಯದಿಂದ 2 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಶಿಕ್ಷೆ ಅನುಭವಿಸಿದವರು ಮಾತ್ರ ಐಒಎ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ ಎಂಬ ತೀರ್ಮಾವನ್ನು ಅದು ತನ್ನ ಮಹತ್ವದ ಸಭೆಯಲ್ಲಿ ತೆಗೆದುಕೊಂಡಿದೆ. ಹಾಗಾದರೆ, ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾದವರು, 2 ವರ್ಷಕ್ಕಿಂತ ಕಡಿಮೆ ಶಿಕ್ಷೆ ಅನುಭವಿಸಿದವರು ಚುನಾವಣೆಯಲ್ಲಿ ಭಾಗವಹಿಸಬಹುದಲ್ಲವೆ? ಅಲ್ಲಿಗೆ ಕ್ರಿಮಿನಲ್‌ಗಳು ಕ್ರೀಡಾಡಳಿತ ನಡೆಸಬಹುದು ಎಂದಂತಾಯಿತು. ಈ ನಿಯಮ ಸಂವಿಧಾನಬದ್ಧವಾಗಿದೆ ಎಂದು ಐಒಎ ಹೇಳುತ್ತಿದೆ. ಆದರೆ, ದೊಡ್ಡ ಕ್ರೀಡಾಕೂಟಗಳಲ್ಲಿ ನೂರಾರು ಕೋಟಿ ರು.ಗಳನ್ನು ಗುಳುಂ ಮಾಡಿರುವ ಅಧಿಕಾರ ದಾಹಿಗಳಿಗೆ ಇದು ದಾರಿ ಮಾಡಿಕೊಡುವುದಿಲ್ಲವೇ? ಇಂಥವರಿಂದ ನಾವು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಏನು ತಾನೆ ಸಾಧಿಸಲಾದೀತೆ?

- ಮಲ್ಲಿಕಾರ್ಜುನ ಕರಿಯಪ್ಪನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.