ಪಾಲ್ ದಿ ಬೆಸ್ಟ್

ನೀನಿನ್ನು ನಡೆಯಲಾರೆ ಎಂದರು ವೈದ್ಯರು. ಹಾಗೆಂದು ಆತ ಸುಮ್ಮನಿರಲಿಲ್ಲ. ಆತ ತಿಂದ ಹೊಡೆತಕ್ಕೆ ಜಗತ್ತು ಮರುಕಪಟ್ಟಿತು. ಆದರೂ ಆತ ಮರಳಿ ಗೆಲ್ಲುವ ಸಂಕಲ್ಪ ತೊಟ್ಟ. ನಡೆದ ದುರಂತಕ್ಕೆ ದುಃಖಪಡದೆ, ಇಚ್ಛಾಶಕ್ತಿಯಿದ್ದರೆ ಹೀಗೂ ಮಾಡಲು ಸಾಧ್ಯ ಎಂದು ಸಾಧಿಸಿ ತೋರಿದಾತ ಪಾಲ್ ಸ್ಟುವರ್ಟ್.
ಹಾಕಿಪಟುವಾಗಿ ತನ್ನ ಕ್ರೀಡಾ ಜೀವನ ಪ್ರಾರಂಭಿಸಿದ ಪಾಲ್ಗೆ 2008ರಲ್ಲಿ ಆಘಾತ ಎದುರಾಗಿತ್ತು. ಫ್ರಾನ್ಸ್ನ ಲಾ ಪ್ಲೆಗ್ನಲ್ಲಿ ಸ್ಕೈಯಿಂಗ್ನಲ್ಲಿ ನಿರತನಾಗಿದ್ದಾಗ ಉಂಟಾದ ಹಿಮಪಾತ ಆತನನ್ನು ಅರೆ ಸಾವಿಗೆ ಕೊಂಡೊಯ್ದಿತ್ತು. ಗಂಟೆಗೆ 100 ಕಿ.ಮೀ. ವೇಗದಲ್ಲಿ 200 ಮೀ. ಎತ್ತರದಿಂದ ಬಿದ್ದ ಹಿಮದ ಗಡ್ಡೆ ಆತನ ಬೆನ್ನಿನ ಎಡಪಾರ್ಶ್ವವನ್ನೇ ಹೊಸಕಿ ಹಾಕಿತು. ಒಡನೆಯೇ ಆತನನ್ನು ಹೆಲಿಕಾಫ್ಟರ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮುರಿದುಹೋದ ಬೆನ್ನುಹುರಿ ಮತ್ತೆ ಸರಿಯಾಗುವ ಪರಿಸ್ಥಿತಿಯಲ್ಲಿ ಇಲ್ಲ ಎಂದ ಫ್ರಾನ್ಸ್ನ ವೈದ್ಯರು ನಮ್ಮಿಂದಾಗುವುದಿಷ್ಟೇ ಎಂದು ಭಂಗಿ ನೆಟ್ಟರು.
ತನ್ನ ತವರು ಇಂಗ್ಲೆಂಡಿಗೆ ಮರಳಿದ ಪಾಲ್ಗೆ ಅಲ್ಲೂ ನಿರಾಸೆ ಕಾದಿತ್ತು. (ಸ್ಪೈನಲ್ ಕಾರ್ಡ್ ಬೆನ್ನು ಹುರಿ) ಯಾವ ಮಟ್ಟಕ್ಕೆ ಹದಗೆಟ್ಟಿತ್ತೆಂದರೆ, ಲಂಡನ್ ಡಾಕ್ಟರ್ಗಳೂ ಆತನಿಗೆ ಆಸರೆಯಾಗಲಿಲ್ಲ. ಎಲ್ಲಾ ಪ್ರಸಿದ್ಧ ಆಸ್ಪತ್ರೆಗಳನ್ನು ಸುತ್ತಿದ. ಎಲ್ಲಾ ವೈದ್ಯರೂ ಆತನಿಗೆ ಹೇಳಿದ್ದು ಒಂದೇ. ಇದೀಗ ಕಾರ್ಬನ್ ಫೈಬರ್ ಸ್ಪ್ಲಿಂಟ್ಸ್ ಸ್ಟಿಕ್ಸ್ಗಳನ್ನು ಬಳಸದೆ ಪಾಲ್ಗೆ ಅನ್ಯ ಮಾರ್ಗವಿರಲಿಲ್ಲ. ಬೇರೆ ಯಾರೇ ಆಗಿದ್ದರೂ ಎಲ್ಲವನ್ನೂ ಕೈಚೆಲ್ಲಿ ಸುಮ್ಮನಾಗುತ್ತಿದ್ದರು. ಆದರೆ ಪಾಲ್ ತನ್ನ ಕಾಲನ್ನು ನಂಬಿದ.
ಅಂವ ಉಕ್ಕಿನ ಮನುಷ್ಯ
ಉಕ್ಕಿನ ಮನುಷ್ಯನೆನ್ನಿಸಿಕೊಳ್ಳಲು ಬೇಕಿರುವುದು ಉಕ್ಕಿನ ದೇಹವಲ್ಲ, ಉಕ್ಕಿನ ಮನಸ್ಸು ಬೇಕು ಎಂದು ತೋರಿಸಿಕೊಟ್ಟವನಾತ. ಬೆನ್ನು ಹುರಿ ಮುರಿದುಬಿದ್ದರೂ ಆತ ಎದೆಸೆಟೆದು ಮುಂದುವರಿದಿದ್ದಾನೆ ಎಂದರೆ ಅದಕ್ಕೆ ಕಾರಣ ಆತನ ಇಚ್ಛಾಶಕ್ತಿಯೇ ಹೊರತು ಮತ್ತೇನಲ್ಲ. ಬದುಕಿನಲ್ಲಿ ಬಹಳ ದೊಡ್ಡ ಹೊಡೆತ ತಿಂದ ಪಾಲ್ ಸ್ಟುವರ್ಟ್ ಬೆನ್ನು ಹುರಿ ಚಿಕಿತ್ಸೆಗೆ ನಿಧಿ ಸಂಗ್ರಹಿಸುವ ಕಾಯಕಕ್ಕೆ ಕೈ ಹಾಕುವ ಸಂಕಲ್ಪ ಮಾಡಿದ.
ಆತನ ಮಾತುಗಳನ್ನು ಆಲಿಸುತ್ತಿದ್ದರೆ ಕಣ್ಣಾಲಿಗಳು ತುಂಬುತ್ತವೆ.
'ನಾನು ಹೋದ ಎಲ್ಲಾ ಆಸ್ಪತ್ರೆಗಳಲ್ಲೂ ನನಗೆ ಒಂದೇ ಮಾತು ಹೇಳಿದರು. ನೀನಿನ್ನು ನಡೆಯಲು ಸಾಧ್ಯವಿಲ್ಲ ಎಂದು. ಆದರೆ ನಾನಿದನ್ನು ನಂಬಲು ಸಿದ್ಧನಿರಲಿಲ್ಲ. ನೀನು ನಡೆಯಬಲ್ಲೆ ಎಂದು ದೇಹದ ಪ್ರತಿಯೊಂದು ಮೂಳೆಯೂ ಹೇಳುತ್ತಿರುವಂತೆ ನನಗೆ ಭಾಸವಾಗುತ್ತಿತ್ತು. ಹೀಗಿರುವಾಗ ಯಾಕಾದರೂ ಸುಮ್ಮನಿರಲಿ. ಒಂದಿಡೀ ದಿನ ಸಮ್ಮನೇ ಆಲೋಚಿಸುತ್ತಾ ಕುಳಿತೆ. ನನ್ನ ಬದುಕಿಗೆ ಒಂದರ್ಥ ತಂದುಕೊಟ್ಟದ್ದು ಕ್ರೀಡೆ. ಆ ಕ್ರೀಡೆ ನನ್ನ ಅಸ್ತಿತ್ವದ ಪ್ರಶ್ನೆ. ಅದೇ ನನ್ನನ್ನು ಒಬ್ಬ ಮನುಷ್ಯನನ್ನಾಗಿ ಮಾಡಿದ್ದು. ಅದಿಲ್ಲದೆ ನನ್ನನ್ನು ನಾನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಹೀಗಾಗಿ ಅಥ್ಲೀಟ್ ಆಗಿ ಕಣಕ್ಕೆ ಮರಳುವುದರ ಬಗ್ಗೆ ದೃಢ ನಿರ್ಧಾರ ಮಾಡಿ ಜಿಮ್ಗೆ ಮರಳಿದೆ. ವಿಶ್ರಾಂತಿಯಿಲ್ಲದೆ ಅಭ್ಯಾಸ ನಡೆಸಿದೆ. ಆಸ್ಪತ್ರೆಯ ಉಳಿದ ರೋಗಿಗಳೊಂದಿಗೆ ಸ್ಪರ್ಧಿಸಿದೆ. ನೀನು ಇಷ್ಟು ಚೆನ್ನಾಗಿ ನಿರ್ವಹಿಸಬಲ್ಲೆ ಎಂದಾದರೆ, ನಿನಗಿಂತ ಜಾಸ್ತಿಯೇ ಚೆನ್ನಾಗಿ ನಾನು ಸಾಮರ್ಥ್ಯ ಪ್ರದರ್ಶಿಸಬಲ್ಲೆ ಎಂಬ ಆತ್ಮವಿಶ್ವಾಸ ತಂದುಕೊಂಡೆ.'
ಬಂಕಿಮ್ಶೈರ್ ಬೆನ್ನುಹುರಿ ಚಿಕಿತ್ಸೆ ಆಸ್ಪತ್ರೆಯಲ್ಲಿ ಹಲವು ತಿಂಗಳುಗಳ ಪುನಶ್ಚೇತನ ಚಿಕಿತ್ಸೆಗೊಳಗಾದ. ನಿರೀಕ್ಷೆಗೂ ವೇಗದಲ್ಲಿ ಚೇತರಿಸಿಕೊಂಡ. ವಾಕಿಂಗ್ ಸ್ಟಿಕ್ ಸಹಾಯದಿಂದಲೇ ಎಷ್ಟು ದೂರ ಬೇಕಾದರೂ ನಡೆಯಬಲ್ಲ ಸಾಮರ್ಥ್ಯ ತಂದುಕೊಂಡ ಪಾಲ್ನನ್ನು ತಾನು ಖುಷಿಯಿಂದ ಪೆಂಗ್ವಿನ್ ಎಂದು ಕರೆಯುತ್ತಾನೆ.
ಪ್ಯಾರಾಲಿಂಪಿಕ್ಸ್ಗೆ ಇಳಿದ
ಗಾಲಿಕುರ್ಚಿ ಟೆನಿಸ್ ತರಬೇತಿ ಪಡೆದ ಪಾಲ್ ಸ್ಟುವರ್ಟ್ 2012ರಲ್ಲಿ ಬ್ರಿಟಿಷ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದರು. ಅದೇ ವರ್ಷ ಸ್ವಿಮ್ಮಿಂಗ್ ಅಭ್ಯಾಸ ನಡೆಸಿದ ಆತ ಪ್ಯಾರಾಲಿಂಪಿಕ್ಸ್ಗೂ ಅರ್ಹತೆ ಗಿಟ್ಟಿಸಿಕೊಂಡ. ಇದಾದ ಬಳಿಕ ಆತನ ಸ್ನಾಯುಗಳು ಬಲಿಷ್ಠಗೊಂಡವು. ಚಲನಶಕ್ತಿ ವೃದ್ಧಿಸಿತು.
ಐರನ್ಮ್ಯಾನ್ ಟ್ರಯಥ್ನಾಲ್ ಸಾಹಸ
ಪ್ರಪಂಚದಲ್ಲಿ ಗಟ್ಟಿ ಎದೆಯುಳ್ಳ ಕ್ರೀಡಾಪಟುಗಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸಾಹಸಕ್ಕೆ ಕೈ ಹಾಕುತ್ತಾರೆ. 2.4 ಮೈಲು ಈಜು, 112 ಮೈಲು ಸೈಕಲ್ 26.2 ಮೈಲು ನಡಿಗೆ. ಕೇಳಿದರೆ ಮೈ ನಡುಗುತ್ತದೆ. ಅಂಥದ್ದರಲ್ಲಿ ಬೆನ್ನು ಹುರಿ ಮುರಿದುಕೊಂಡ ಒಬ್ಬ ವ್ಯಕ್ತಿ ಇದರಲ್ಲಿ ನಾನೂ ಭಾಗವಹಿಸುತ್ತೇನೆಂದು ಹೊರಡುವುದೆಂದರೆ... ಊಹಿಸುವುದೇ ಕಷ್ಟ. ಬೆನ್ನುಹುರಿ ಚಿಕಿತ್ಸೆಗೆ ಸಂಶೋಧನೆ ಕೈಗೊಂಡಿರುವ ಚಾರಿಟಿಗೆ 4 ಲಕ್ಷ ಡಾಲರ್ ಸಂಗ್ರಹಿಸುವ ಗುರಿಯೊಂದೇ ಪಾಲ್ ಮುಂದಿರುವುದು. ಇದು ಆತನ ಸದ್ಯದ ಗುರಿಯಷ್ಟೇ. ಇದಾದ ಬಳಿಕ ತನ್ನ ಬೆನ್ನುಹುರಿ ಮುರಿದ ಫ್ರಾನ್ಸ್ನ ಪರ್ವತಕ್ಕೆ ಮತ್ತೆ ಸವಾಲು ಒಡ್ಡುವುದು ಆತನ ಹಂಬಲವಂತೆ.
- ಗಣೇಶ್ ಪ್ರಸಾದ್ ಕುಂಬ್ಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


